ಬಸವತತ್ವ ದರ್ಶನ: ಲಿಂಗಾಯತ ಧರ್ಮದ ಪಂಚಾಚಾರಗಳು

ಶರಣು ಶಿಣ್ಣೂರ್
ಶರಣು ಶಿಣ್ಣೂರ್

(ಕಲಬುರ್ಗಿಯಲ್ಲಿ ನಡೆಯುತ್ತಿರುವ  893ನೇ ಬಸವ ಜಯಂತಿ ಅಂಗವಾಗಿ ‘ಬಸವತತ್ವ ದರ್ಶನ ಪ್ರವಚನ’ ಮುಖ್ಯಾಂಶಗಳು)

ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ, ಅತ್ತಿವೇರಿ

ಸ್ಥಳ: ಬಸವ ಮಂಟಪ, ಮಾಕಾ ಲೇಔಟ್‌, ಕಲಬುರಗಿ

ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ

15 ಏಪ್ರಿಲ್ 2026

ಇಂದಿನ ಪ್ರವಚನದಲ್ಲಿ ಮಾತಾಜಿ ಬಸವತತ್ವದ ಆಳವಾದ ಅರ್ಥವನ್ನು ಸ್ಪಷ್ಟವಾಗಿ ವಿವರಿಸಿದರು.

ಪ್ರವಚನದಲ್ಲಿ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳ ತಾತ್ವಿಕ ಮಹತ್ವವನ್ನು ವಿಶ್ಲೇಷಿಸಿದ ಮಾತಾಜಿಯವರು, ಪಂಚಾಚಾರಗಳಲ್ಲಿ ಪ್ರಮುಖವಾದ ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರಗಳ ಜೀವನಮುಖಿ ಅರ್ಥವನ್ನು ಉದಾಹರಣೆಗಳೊಂದಿಗೆ ವಿವರಿಸಿದರು. “ಏಕದೇವೋಪಾಸನೆಗೆ ನಿಷ್ಠರಾಗಿರುವುದೇ ಲಿಂಗಾಚಾರ” ಎಂದು ತಿಳಿಸಿದ ಅವರು, ಇಷ್ಟಲಿಂಗದ ಮೇಲೆ ಅಚಲವಾದ ಭಕ್ತಿಯೇ ವ್ಯಕ್ತಿಯನ್ನು ಆತ್ಮಶಾಂತಿಯತ್ತ ಕರೆದೊಯ್ಯುತ್ತದೆ ಎಂದರು.

ಸದಾಚಾರದ ಕುರಿತು ಮಾತನಾಡಿದ ಅವರು, “ಕಳಬೇಡ, ಕೊಲಬೇಡ, ಮುನಿಯಬೇಡ” ಎಂಬ ಬಸವಣ್ಣನವರ ಸಂದೇಶವೇ ಅಂತರಂಗ ಮತ್ತು ಬಹಿರಂಗ ಶುದ್ಧಿಯ ಮೂಲ ಎಂದು ಹೇಳಿದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಉಲ್ಲೇಖಿಸಿ, ಪ್ರಾಮಾಣಿಕವಾಗಿ, ಪ್ರೀತಿಯಿಂದ ಮಾಡುವ ಕೆಲಸವೇ ನಿಜವಾದ ಕಾಯಕ ಎಂದು ವಿವರಿಸಿದರು. ಕಾಯಕದಲ್ಲಿ ಯಾವುದೇ ಮೇಲು-ಕೀಳು ಇಲ್ಲ, ಮೋಸ-ವಂಚನೆ ಇಲ್ಲದ ಜೀವನವೇ ಶರಣರ ಮಾರ್ಗ ಎಂದು ಯುವಜನತೆಗೆ ಸ್ಪಷ್ಟ ಸಂದೇಶ ನೀಡಿದರು.

ಶಿವಾಚಾರದ ಅರ್ಥವನ್ನು ವಿವರಿಸುತ್ತಾ, ಲಿಂಗದೀಕ್ಷೆಯಾದ ನಂತರ ಜಾತಿ-ಮತ ಭೇದವಿಲ್ಲದೆ ಪ್ರತಿಯೊಬ್ಬನಲ್ಲಿಯೂ ಶಿವತತ್ವವನ್ನು ಕಾಣಬೇಕೆಂದು ಹೇಳಿದರು. ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿ, ಸಾಮಾಜಿಕ ಸಮಾನತೆಯೇ ಶಿವಾಚಾರದ ಹೃದಯವಾಗಿದೆ ಎಂದು ಹೇಳಿದರು. ಶೋಷಿತರಿಗೆ ಘನತೆಯ ಬದುಕು ನೀಡಿದ ಬಸವಣ್ಣನವರ ತತ್ವವೇ ನಿಜವಾದ ಮಾನವೀಯ ಧರ್ಮ ಎಂದರು.

ಗಣಾಚಾರದ ಕುರಿತು ಮಾತನಾಡಿದ ಅವರು, ಸಮಾಜದ ಹಿತಕ್ಕಾಗಿ ತಾತ್ವಿಕ ಹೋರಾಟಕ್ಕೆ ಸಿದ್ಧರಾಗಿರುವುದೇ ಗಣಾಚಾರ. ಅನ್ಯಾಯದ ವಿರುದ್ಧ ಧೈರ್ಯದಿಂದ ನಿಲ್ಲುವುದು, ವಿನಯ ಮತ್ತು ವೀರತೆಯನ್ನು ಸಮನ್ವಯಗೊಳಿಸುವುದು ಶರಣರ ಜೀವನ ಪಾಠ ಎಂದು ತಿಳಿಸಿದರು. ವ್ಯಕ್ತಿಗಿಂತ ಸಮಾಜದ ಹಿತ ಮುಖ್ಯ ಎಂಬ ಸಂದೇಶವನ್ನು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಕ್ತರು ಮತ್ತು ಸಾರ್ವಜನಿಕರು ಬಸವತತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಕೈಗೊಂಡರು. ಕಾರ್ಯಕ್ರಮವು ಭಕ್ತಿಭಾವ ಮತ್ತು ತಾತ್ವಿಕ ಚಿಂತನೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.