ಬಸವ ಜಯಂತಿ ಆರಂಭಿಸಿದ ಕರ್ನಾಟಕದ ಗಾಂಧಿ

ಮುದ್ದೇಬಿಹಾಳ

ರಾಷ್ಟ್ರಕವಿ ಕುವೆಂಪು ಅವರು “ಕರ್ನಾಟದ ಮಹಾತ್ಮ” ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ ಎಂದೂ ಕರೆಯಲಾಯಿತು. ಅವರೇ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆಯನ್ನು ಜಾರಿಗೆ ತಂದ ರೂವಾರಿ. ಅವರು ಹೆಸರು ಹರ್ಡೇಕರ ಮಂಜಪ್ಪ.

ಹುಟ್ಟಿದ್ದು ಫೆಬ್ರವರಿ ೧೮,೧೮೮೬ರಂದು ಶಿರಸಿಯ ಬನವಾಸಿಯಲ್ಲಿ. ತಂದೆ ಮಧುಕೇಶ್ವರಪ್ಪ ಶ್ರೇಷ್ಠ ಸಮಾಜ ಸುಧಾರಕ, ತಾಯಿ ಮಧುಕೇಶ್ವರ ದೇವಸ್ಥಾನದ ಕಸ ಗೂಡಿಸುವ ಕಾಯಕದಲ್ಲಿ ನಿರತಳಾಗಿದ್ದಳು. ಅಣ್ಣ ಮಧುಲಿಂಗಪ್ಪ, ಮೂಲತಃ ಲಿಂಗಾಯತ ಸಮಾಜದವರು. ಮಂಜಪ್ಪನವರು ಕ್ರಿ.ಶ. ೧೯೦೩ ರಲ್ಲಿ ಮುಲ್ಕೀ ಪರೀಕ್ಷೆ ತೇರ್ಗಡೆಯಾದರು. ೧೯೦೫ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕವಾದಾಗ ಅವರಿಗೆ ಮಾಸಿಕ ವೇತನ ಕೇವಲ ಏಳು ರೂ. ಮಾತ್ರ.

ಅಂತೇಯೆ ಬಾಲಗಂಗಾಧರ ತಿಲಕರ ಸ್ವಾತಂತ್ರ್ಯ ಚಳುವಳಿಯ ಪ್ರೇರಣೆಯಿಂದ ಹರ್ಡೇಕರ ಮಂಜಪ್ಪನವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ೧೯೦೬ರಲ್ಲಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ತಿಲಕರ ಕೃಪೆಯಿಂದಾಗಿ ಅದೇ ವರ್ಷ ಸಪ್ಟಂಬರ್ ೨ರಂದು “ಧರ್ನುಧಾರಿ” ವಾರ ಪತ್ರಿಕೆ ಆರಂಭಮಾಡಿದರು.

ಲಿಂಗಾಯತ ಧರ್ಮದ ಒಳ ಪಂಗಡಗಳ ಕಿತ್ತಾಟಕ್ಕೆ ಬೇಸತ್ತು, ಅಪಮಾನಗೊಂಡ ಮಂಜಪ್ಪನವರು ವಿವಾಹವೆ ಬೇಡವೆಂದು ನಿರ್ಧರಸಿದರು. ತಮ್ಮ ಸಮಾಜ ಸೇವೆಗೆ ವಿವಾಹ ಅಡ್ಡಿಯಾಗುತ್ತದೆ ಎಂದೂ ಭಾವಸಿ, ೧೯೧೦ ರಲ್ಲಿ ತಮ್ಮ ೨೫ನೆ ವಯಸ್ಸಿನಿಂದ ಜೀವನ ಪರ್ಯಂತರ ಬ್ರಹ್ಮಚಾರಿಯಾಗಿ ಉಳಿಯಲು ದೃಢ ನಿರ್ಧಾರ ಹೊಂದಿದರು. ಅವಾಗಿನಿಂದ ಅವರ ಆಹಾರ ಸಂಸ್ಕೃತಿಯಲ್ಲಿ ಪರಿವರ್ತನೆಯಾಯಿತು. ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ತ್ಯಜಿಸಿದರು. ಕೇವಲ ಸಪ್ಪೆ ಆಹಾರ ಸೇವನೆಗೆ ವಗ್ಗಿಕೊಂಡರು.

೧೯೧೧ರಿಂದ “ಶ್ರಾವಣ ಮಾಸದ ಉಪನ್ಯಾಸ ಮಾಲೆಯ” ಕಾರ್ಯಕ್ರಮ ಆರಂಭಿಸಿದರು. ಇದೇ ಸಂದರ್ಭದಲ್ಲಿ ಅಥಣಿ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದು ಪಾವನರಾದರು. ಶರಣ ಧರ್ಮದ ಪ್ರತಿಪಾದಕರಾದರು.

ಬಸವ ಜಯಂತಿ ಹಿನ್ನಲೆ:

ದಾವಣಗೇರೆ ವಿರಕ್ತ ಮಠವು ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿತ್ತು. ತಮ್ಮ ತಾಯಿ ತೀರಿ ಹೋದ ಬಳಿಕ, ಬ್ರಹ್ಮಚಾರಿಗಳಾಗಿದ್ದ ಹರ್ಡೇಕರ ಮಂಜಪ್ಪನವರು ಆ ಮಠದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದರು. ಆ ಮಠದಲ್ಲಿದ್ದು ಶರಣ ಧರ್ಮ ಪಾಲಿಸಲು ಹಾಗೂ ಬಸವ ತತ್ವ ಆಚರಣೆಯಲ್ಲಿ ತೊಡಗಿದ್ದರು.

ಪಾಲ್ಕುರಿಕೆ ಸೋಮನಾಥರ ತೆಲುಗಿನ ಬಸವ ಪುರಾಣವನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಭೀಮಕವಿಯ ಪುರಾವೆ ಆಧರಿಸಿ, ಹರ್ಡೇಕರ ಮಂಜಪ್ಪನವರು ಅಂದಿನ ಖ್ಯಾತ ಜ್ಯೋತಿಷಿಗಳಾದ ಕರಿಬಸವಶಾಸ್ತ್ರೀ ಸೇರಿದಂತೆ ಅನೇಕರಿಗೆ ಪತ್ರ ಬರೆದು ಬಸವಣ್ಣನವರ ಜನ್ಮ ಜಾತಕ ಹಾಗೂ ನಿಖರವಾದ ಜನ್ಮ ದಿನ ಗುರುತಿಸಲು ಕೇಳಿಕೊಂಡಿದ್ದರು.

ಭೀಮಕವಿಯ ಬಸವ ಪುರಾಣದ ಷಟ್ಪದಿಯ ಆಧಾರದ ಮೇಲೆ ಬಸವಣ್ಣನವರು ಆನಂದನಾಮ ಸಂವತ್ಸರದಲ್ಲಿ ಚಾಂದ್ರಮಾನ ವೈಶಾಖ ಮಾಸ,ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದರು. ಅಂದು ಅಕ್ಷಯ ತೃತಿಯ ಇತ್ತು ಎಂದು ಜ್ಯೋತಿಷಿಗಳಿಂದ ಕಂಡುಕೊಂಡರು.

ಹೀಗಾಗಿ ಮಾರ್ಚ ೩೦, ೧೧೩೪ ಬಸವಣ್ಣ ಹುಟ್ಟಿದ ವರ್ಷವೆಂದು ಪರಿಗಣಿಸಲಾಯಿತು. ಅದಕ್ಕೆಂದು ಚಿತ್ರದುರ್ಗ ಬೃಹನ್ಮಠದ ಅಂದಿನ ಜಗದ್ಗುರುಗಳಾದ ಜಯದೇವ ಮಹಾಸ್ವಾಮಿಗಳಿಂದ ಪ್ರಥಮ ಬಸವ ಜಯಂತಿ ಆಚರಣೆಗೆ ಅನುಮತಿ ಪಡೆದರು.

ಅದರ ಇನ್ನೊಂದು ಶಾಖಾ ಮಠವಾಗಿದ್ದ ಧಾರವಾಡದ ಮುರುಘಾ ಮಠದ ಅಂದಿನ ಪೀಠಾದಿಪತಿಗಳಾಗಿದ್ದ ಮೃತ್ಯುಂಜಯ ಸ್ವಾಮಿಗಳ ಉಪದೇಶ ಹಾಗೂ ಮಾರ್ಗದರ್ಶನದಂತೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿ ಆಚರಣೆಯನ್ನು ಸಾರ್ವಜನಿಕವಾಗಿ ಜಾರಿಗೊಳಿಸಿದರು.

ಕ್ರಿ. ಶ.೧೯೧೩ರಿಂದ ಜಾಗತಿಕ ಮಟ್ಟದಲ್ಲಿ ಪ್ರಥಮ ಬಸವ ಜಯಂತಿ ಕಾರ್ಯಕ್ರಮ ಆರಂಭಿಸಿದ ಕೀರ್ತೀ ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ.

ಎಲ್ಲೆಲ್ಲಿ ಬಸವ ಜಯಂತಿ ಆಚರಣೆ?

ಪ್ರಸಕ್ತ ವರ್ಷ ಆಚರಣೆ ಮಾಡುತ್ತಿರುವುದು ೮೯೩ನೆ ಬಸವ ಜಯಂತಿ. ಈಗ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೇಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಹಾಗೂ ನವದೆಹಲಿ ರಾಜ್ಯಗಳಲ್ಲಿ ಬಸವ ಭಕ್ತರು ಅಪಾರ ಶ್ರದ್ಧೆಯಿಂದ ಬಸವ ಜಯಂತಿ ಆಚರಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಲಂಡನ್ ನಗರದ ಥೇಮ್ಸ್ ನದಿಯ ತೀರದಲ್ಲಿ, ಲ್ಯಾಂಬೆತ್ ನಗರದಲ್ಲಿ ಹಾಗೂ ಜರ್ಮನಿ ದೇಶದ ಎರ್‌ಲಾಂಗ್‌ನಲ್ಲಿ, ಯುಎ, ದುಬೈನಲ್ಲೂ ಬಸವ ಜಯಂತಿ ಆಚರಣೆಗೆ ಬಂದಿದೆ.

ಹೇಗೆ ಆಚರಣೆ?

ಭಾವಚಿತ್ರ ಮೆರವಣಿಗೆ, ಪುತ್ಥಳಿಗೆ ಮಲಾರ್ಪಣೆ, ವಚನ ಗಾಯನ, ನೃತ್ಯ ರೂಪಕ ಪ್ರದರ್ಶನ, ಪ್ರಸಾದ ವಿನಿಯೋಗ, ವಚನ ಸಾಹಿತ್ಯ ವಿತರಣೆ, ತೊಟ್ಟಿಲೋತ್ಸವ, ಮಕ್ಕಳಿಗೆ ನಾಮಕರಣ ಉತ್ಸವ, ಸಾಧಕರಿಗೆ ಸನ್ಮಾನ, ವಚನಗಳ ಕುರಿತು ಪ್ರಬಂಧ ಸ್ಪರ್ದೆ, ಉಪನ್ಯಾಸ ಗೋಷ್ಠಿ, ಅನುಭಾವಗಳು, ನಾಟಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಿದ್ದಾರೆ.

ಮಂಜಪ್ಪನವರ ಸಾರ್ಥಕ ಬದುಕು:

ಕ್ರಿ.ಶ. ೧೯೧೯ರಲ್ಲಿ ಗಾಂಧೀಜಿ ಆತ್ಮ ಚರಿತ್ರೆ ಪ್ರಥಮ ಬಾರಿಗೆ ಕನ್ನಡದಲ್ಲಿ ಪ್ರಕಟಗೊಳಿಸಿದರು. ಅದರಿಂದ ಗಾಂಧೀಜಿಗೆ ಆಪ್ತ ಒಡನಾಡಿಗಳಾದ್ರು. ೧೯೨೩ರಲ್ಲಿ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ಸತ್ಯಾಗ್ರಹಿ ಆಶ್ರಮ ನಿರ್ಮಿಸಿಕೊಂಡು ಅಲ್ಲಿಯೇ ನೆಲೆಸಲು ಆರಂಭಿಸಿದರು.

ಆ ಪರಿಸರದ ಪ್ರಭಾವದಿಂದ ೧೯೨೪ರಲ್ಲಿ “ಸತ್ಯಾಗ್ರಹಿ ಬಸವಣ್ಣ” ಎಂಬ ಹಿಂದಿ ಭಾಷೆಯಲ್ಲಿ ಸಂಶೋಧನಾತ್ಮಕ ಗ್ರಂಥ ಪ್ರಕಟಿಸಿದರು. ಅದನ್ನು ಮಹಾತ್ಮ ಗಾಂಧೀಜಿಗೆ ಕೊಟ್ಟು ಓದಲು ಹೇಳಿ, ಬಸವಣ್ಣನವರ ವ್ಯಕ್ತಿತ್ವವನ್ನು ಪರಿಚಯಿಸಿದರು. ಹಾಗೂ ಬಸವಣ್ಣನವರ ಚಳುವಳಿಯ ಮಾದರಿಯನ್ನು ಗಾಂಧಿಜಿಗೆ ಮನವರಿಕೆ ಮಾಡಿಕೊಟ್ಟರು. ಅದೇ ವರ್ಷ ಬಸವೇಶ್ವರ ಸೇವಾದಳವನ್ನೂ ಸ್ಥಾಪಿಸಿದರು.

೧೯೨೫ರಲ್ಲಿ ಬಂಥನಾಳದ ಶ್ರೀಸಂಗನಬಸವ ಮಹಾಸ್ವಾಮಿಯೊಂದಿಗೆ ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಹಳ್ಳಿಗಳಲ್ಲಿ ಸಂಚಾರ ಕೈಗೊಂಡರು. ಅವರೊಂದಿಗೆ ದುಶ್ಚಟಗಳ ನಿರ್ಮೂಲನೆಗಾಗಿ ದೇಶೀ ಚಳುವಳಿ ಹುಟ್ಟು ಹಾಕಿದರು. ೧೯೨೬ರಲ್ಲಿ “ಬಸವ ಬೋಧಾಮೃತ” ಎಂಬ ಗ್ರಂಥ ಪ್ರಕಟಿಸಿದರು. ೧೯೨೭ರಲ್ಲಿ ಕಲ್ಬುರ್ಗಿಯಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿ ಕೃಷ್ಣಾ ನದಿಯ ತೀರ ಪ್ರದೇಶವಾದ ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಅನುಮತಿ ಪಡೆದರು.

೧೯೨೮ರಲ್ಲಿ “ಖಾದಿ ವಿಜಯ” ಎಂಬ ಪತ್ರಿಕೆ ಆರಂಭಿಸಿದರು. ೧೯೩೦ ರಲ್ಲಿ “ಉಧ್ಯೋಗ” ಎಂಬ ಮತ್ತೊಂದು ಮಾಸ ಪತ್ರಿಕೆ ಆರಂಭಗೊಳಿಸಿದರು. ೧೯೩೧ರಂದ “ಶರಣ ಸಂದೇಶ” ಎಂಬ ನೂತನ ವಾರ ಪತ್ರಿಕೆ ಪ್ರಕಟಿಸಲು ಆರಂಭ ಮಾಡಿದರು. ೧೯೩೩ ರಲ್ಲಿ “ಬಸವ ಸಂದೇಶ”ದ ಚಿಕ್ಕ ಚಿಕ್ಕ ಪುಸ್ತಕಗಳ ೫೦ ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿದರು.

೧೯೩೫ರಲ್ಲಿ ಮಹಿಳಾ ಜಾಗೃತಿಗಾಗಿ ಅಕ್ಕ ಮಹಾದೇವಿ ಜಯಂತಿಯನ್ನು ಆಚರಣೆಗೆ ತಂದರು. ೧೯೩೬ರಲ್ಲಿ ಅವರ ಆತ್ಮ ಚರಿತ್ರೆಯಾದ “ಕಳೆದ ೩೦ ವರ್ಷಗಳ ನನ್ನ ಕಾಣಿಕೆ” ಎಂಬ ಕೃತಿ ಪ್ರಕಟಿಸಿದರು.

೧೯೪೨ರಲ್ಲಿ ಯುದ್ಧದ ಪರಿಣಾಮವಾಗಿ ಮುದ್ರಣ ಕಾಗದದ ಅಭಾವ ಎದಿರಾಗಿತ್ತು. ಅವಾಗ ಎದೆಗುಂದದೆ ಕೈ ಕಾಗದ ತಯ್ಯಾರಿಸಿ “ಶರಣ ಸಂದೇಶ” ಪತ್ರಿಕೆಯ ಪ್ರಕಟಣೆಯನ್ನು ನಿರಂತರವಾಗಿ ಮುಂದುವರೆಸಿದರು. ೧೯೪೫ರಲ್ಲಿ ಪ್ರಗತಿ ಗ್ರಂಥಮಾಲೆ ಯೋಜನೆ ಹಮ್ಮಿಕೊಂಡಿದ್ದರು.

ನಂತರ ತಮ್ಮ ೬೦ನೇ ಜನ್ಮ ದಿನದ ಉತ್ಸವ ಸಂದರ್ಭದಲ್ಲಿ “ಪ್ರಗತಿ ಗ್ರಂಥ ಪ್ರಚಾರ ಸಮಿತಿ” ಎಂಬ ಪುಸ್ತಕ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ವಿಧಿಯ ಆಟದಿಂದ ಆ ಯೋಜನೆ ಅಪೂರ್ಣವಾಗಿ ಉಳಿಯಿತು. ಅದಕ್ಕಾಗಿ ಸಂಗ್ರಹಿಸಿದ ನಿಧಿಯನು ಮುದ್ದೇಬಿಹಾಳದ ಚನ್ನವೀರಪ್ಪ ಮೋಟಗಿ ಅವರಿಗೆ ಹಸ್ತಾಂತರಿಸಿದ್ದರು. ಮೋಟಗಿಯವರು ಆ ನಿಧಿಯನ್ನು ತಮ್ಮ ಪುತ್ರರಾದ ವಿಶ್ವನಾಥ ಚನ್ನವೀರಪ್ಪ ಮೋಟಗಿ ಅವರಿಗೆ ವಹಿಸಿ ನಿಧನರಾದರು.

ಬೆಳಗಾವಿಯಲ್ಲಿ ವಕೀಲರಾಗಿದ್ದ ವಿಶ್ವನಾಥರು, ಆ ಹಣವನ್ನು ಠೇವಣಿಯಾಗಿಟ್ಟು ಒಂದು ಲಕ್ಷ ರೂ.ಗಳವರೆಗೆ ಹೆಚ್ಚಿಸಿದ್ದರು. ನಂತರ ಬ.ಗಂ ತುರುಮರಿ ವರಿಗೆ ಒಪ್ಪಿಸಿ ಪ್ರಗತಿ ಗ್ರಂಥ ಪ್ರಚಾರ ಸಂಸ್ಥೆಯ ಮೂಲಕ ಮಂಜಪ್ಪನವರ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದರು ಎಂಬ ದಾಖಲೆ ಲಭ್ಯವಾಗಿವೆ.

೧೯೪೭ ಜನವರಿ ೩ರಂದು ತಮ್ಮ ೬೦ನೆ ವಯಸ್ಸಿನಲ್ಲಿ ಶ್ರೀಮಾನ್ ಹರ್ಡೇಕರ ಮಂಜಪ್ಪನವರು ಲಿಂಗದಲ್ಲಿ ಆತ್ಮವನ್ನು ಐಕ್ಯಗೊಳಿಸಿ, ಶರೀರದಿಂದ ಬಯಲಾದರು.

ಅವರ ಕೊನೆಯ ಸಂದೇಶ, “ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರರಾಗಿರಿ ಎಂದಿತ್ತು. ಅದೇ ವರ್ಷ ಭಾರತಕ್ಕೆ ಸ್ವಾಂತ್ರತ್ಯ ದಕ್ಕಿತ್ತು. ಅವರ ಸಧನೆ ಹಾಗೂ ವ್ಯಕ್ತಿತ್ವದ ಕುರಿತು ಕುವೆಂಪು, ಬೇಂದ್ರೆ, ಫ.ಗು. ಹಳಕಟ್ಟಿ, ಆಲೂರು ವೆಂಕಟರಾಯರು, ಎಸ್.ಆರ್.ಕಂಠಿ, ಸಿದ್ದಯ್ಯ ಪುರಾಣಿಕರು ತುಂಬು ಹೃದಯದಿಂದ ಕೊಂಡಾಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *