(893ನೇ ಬಸವ ಜಯಂತಿ ಅಂಗವಾಗಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ‘ಬಸವತತ್ವ ದರ್ಶನ ಪ್ರವಚನ’ದ ಮುಖ್ಯಾಂಶಗಳು)
ಕಲಬುರ್ಗಿ :
ಪ್ರವಚನಕಾರರು: ಪೂಜ್ಯ ಬಸವೇಶ್ವರಿ ಮಾತಾಜಿ, ಬಸವಧಾಮ, ಅತ್ತಿವೇರಿ
ಸ್ಥಳ: ಬಸವ ಮಂಟಪ, ಮಾಕಾ ಲೇಔಟ್, ಕಲಬುರಗಿ
ಆಯೋಜನೆ: ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ
16 ಏಪ್ರಿಲ್ 2026
ಇಂದಿನ ಪ್ರವಚನದಲ್ಲಿ ಮಾತಾಜಿಯವರು ಶರಣರು ಜೀವಿಸಿದ ಆಧ್ಯಾತ್ಮಿಕ ಸಾಧನೆಯ ಕೇಂದ್ರಬಿಂದು ಆಗಿರುವ ಷಟಸ್ಥಲ ತತ್ವವನ್ನು ಅತ್ಯಂತ ಸ್ಪಷ್ಟವಾಗಿ ಸಾಮಾನ್ಯರಿಗೆ ಸರಳವಾಗಿ ತಿಳಿಯುವಂತೆ ವಿವರಿಸಿದರು.
ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಆರು ಸ್ಥಲಗಳ ಮೂಲಕ ಮಾನವ ಜೀವನವು ಹೇಗೆ ಪರಮಾತ್ಮನೊಂದಿಗೆ ಏಕೀಭವಿಸುತ್ತದೆ ಎಂಬುದನ್ನು ಕ್ರಮಬದ್ಧವಾಗಿ ವಿವರಿಸಿದರು.
ಭಕ್ತ ಸ್ಥಲದ ಕುರಿತು ಮಾತನಾಡುತ್ತಾ, “ಭವಿಯ ಸಂಘ ಮಾಡುವವನು ಭಕ್ತನಲ್ಲ; ಸತ್ಸಂಗದಲ್ಲಿ ಇರುವವನೇ ನಿಜವಾದ ಭಕ್ತ”ಎನ್ನುತ್ತಾ ಬಸವಣ್ಣನವರ “ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ, ಮೃದು ವಚನವೇ ಸಕಲ ಜಪ ತಪ, ಸದುವಿನಯವೇ ಸದಾಶಿವನ ಒಲುಮೆ”ಎಂಬ ವಚನ ಸೂಕ್ತಿಯನ್ನು ಉಲ್ಲೇಖಿಸಿ, ಭಕ್ತಿಯ ಅಂತರಂಗದ ಮಹತ್ವವನ್ನು ವಿವರಿಸಿದರು.
ವ್ಯಾಪಾರಿ ಭಕ್ತಿ, ಭಯಭೀತಿ ಭಕ್ತಿ, ಕಂದಾಚಾರ, ಶುಷ್ಕಾಚಾರದ ಭಕ್ತಿ, ಢಂಬಾಚಾರದ ಭಕ್ತಿ ಹಾಗೂ ಮೂಢ ಭಕ್ತಿ ಮುಂತಾದ ಉಪಯೋಗವಿಲ್ಲದ ಭಕ್ತಿಯ ವಿಧಗಳನ್ನು ರೂಪಕಗಳೊಂದಿಗೆ ವಿವರಿಸುತ್ತಾ ಅವುಗಳು ಮಾನವನನ್ನು ಮೇಲಕ್ಕೆತ್ತುವುದಿಲ್ಲ; ಸದಾಚಾರ ಮತ್ತು ಸದ್ಭಕ್ತಿ ಮಾತ್ರ ಜೀವನಕ್ಕೆ ಸಾರ್ಥಕತೆ ನೀಡುತ್ತವೆ ಎಂದು ಸ್ಪಷ್ಟಪಡಿಸಿದರು.
ಮಹೇಶ ಸ್ಥಲದಲ್ಲಿ ಭಕ್ತನು ಎಲ್ಲಾ ಭೇದಭಾವಗಳನ್ನು ತೊರೆದು, ಅಹಂಕಾರವನ್ನು ತ್ಯಜಿಸಿ, ಸಮಾನತೆಯ ಜೀವನವನ್ನು ನಡೆಸುತ್ತಾನೆ. “ಬಾಗಿದ ತಲೆ, ಮುಗಿದ ಕೈ”ಎಂಬ ವಿನಯದ ಸ್ಥಿತಿಯಲ್ಲಿರುವವನೇ ಮಹೇಶ ಸ್ಥಲವನ್ನು ಸಾಧಿಸುತ್ತಾನೆ ಎಂದರು.
ಮುಂದೆ ಪ್ರಸಾದಿ ಸ್ಥಲದ ಕುರಿತು ಮಾತನಾಡುತ್ತಾ, ಅವಧೂತ ಮನೋಭಾವವನ್ನು ಹೊಂದಿದ ವ್ಯಕ್ತಿ ಎಲ್ಲವನ್ನೂ ದೇವರ ಪ್ರಸಾದವೆಂದು ಭಾವಿಸಿ, ತ್ಯಾಗಭಾವದಿಂದ ಸ್ವೀಕರಿಸುತ್ತಾನೆ ಎಂದರು. “ಸತ್ಯ ಶುದ್ಧ ಕಾಯಕದಿಂದ ಮಾಡುವುದು ಪ್ರಸಾದ; ಇಲ್ಲದಿದ್ದರೆ ಅದು ಕೂಳು”ಎಂದು ಶರಣರು ಹೇಳಿದ್ದಾರೆ. ಈ ಹಂತದಲ್ಲಿ ಜೀವನದ ಪ್ರತಿಯೊಂದು ಕ್ರಿಯೆಯೂ ದೇವರಿಗೆ ಅರ್ಪಿತವಾಗುತ್ತದೆ.
ಪ್ರಾಣಲಿಂಗಿ ಸ್ಥಲದಲ್ಲಿ ವ್ಯಕ್ತಿಯು ಎಲ್ಲಾ ಬಾಹ್ಯ ಆಚರಣೆಗಳನ್ನು ಬಂಧನಗಳನ್ನು ಮೀರಿ, ಅಂತರಂಗದ ಆರಾಧನೆಗೆ ಪ್ರವೇಶಿಸುತ್ತಾನೆ. ಇಷ್ಟಲಿಂಗ ಸಾಧನೆಯ ಮೂಲಕ ಸರ್ವರಲ್ಲೂ ಪರಮಾತ್ಮನನ್ನು ಕಂಡುಕೊಳ್ಳುವ ಸ್ಥಿತಿಗೆ ಏರುತ್ತಾನೆ. ಇದು ಆಧ್ಯಾತ್ಮಿಕ ಸಾಧನೆಯ ಉನ್ನತ ಸ್ಥಿತಿಯ ಹಂತವಾಗಿದೆ.
ಶರಣ ಸ್ಥಲದಲ್ಲಿ ವ್ಯಕ್ತಿಯು ಸಂಪೂರ್ಣವಾಗಿ ಪರಮಾತ್ಮನಿಗೆ ಶರಣಾಗುತ್ತಾನೆ. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಎಲ್ಲವೂ ದೇವರ ಇಚ್ಛೆ ಎಂಬ ದೃಢ ನಂಬಿಕೆಯನ್ನು ಹೊಂದಿ ಎಲ್ಲವನ್ನೂ ದೇವನಿಗೆ ಅರ್ಪಿಸುತ್ತಾನೆ. “ನಂದು ಅಂದರೆ ದುಃಖ, ನನ್ನದಲ್ಲ ಎಂದರೆ ಸುಖ” ಎಂಬ ತತ್ತ್ವವನ್ನು ಉದಾಹರಣೆಗಳೊಂದಿಗೆ ವಿವರಿಸಿ, ಅಹಂಕಾರದ ತ್ಯಾಗವೇ ಶರಣತ್ವದ ಮೂಲ ಎಂದು ಹೇಳಿದರು.

ಕೊನೆಯದಾಗಿ ಐಕ್ಯ ಸ್ಥಲವು ಶಿವ ಮತ್ತು ಜೀವಾತ್ಮನ ಏಕೀಕರಣದ ಸ್ಥಿತಿಯಾಗಿದೆ. ಈ ಹಂತದಲ್ಲಿ ವ್ಯಕ್ತಿ ನಿಷ್ಕಲ್ಮಶ, ನಿರ್ವಿಕಾರ ಮನೋಭಾವವನ್ನು ಪಡೆದು ದೇವತತ್ವವನ್ನು ಹೊಂದುತ್ತಾನೆ. ಅರಿಷಡ್ವರ್ಗಗಳು, ಅಷ್ಟಮದಗಳು ಮುಂತಾದ ದುರ್ಗುಣಗಳನ್ನು ತೊರೆದು, ಪರಿಪೂರ್ಣತೆ ಹೊಂದುತ್ತಾನೆ. ಇದು “ಆಗ ತಾನೇ ಜನಿಸಿದ ಶಿಶುವಿನ ನಿರ್ಮಲ ಸ್ಥಿತಿ”ಯಂತೆ ಸಮರಸತೆಯ ಸ್ಥಿತಿ ಎಂದು ವಿವರಿಸಿದರು.
ಬಸವಣ್ಣನವರು ನೀಡಿದ ಈ ಶರಣ ತತ್ವಗಳು ಎಲ್ಲರಿಗೂ ಜೀವನದ ಸಾರ್ಥಕತೆ ತಲುಪಿಸುವ ಮಾರ್ಗವೆಂದು ತಿಳಿಸಿದರು. ಆದರೆ ಈ ಸಮಾನತೆ, ಜ್ಞಾನ ಮತ್ತು ಅನುಭಾವಾಧಾರಿತ ತತ್ವಗಳನ್ನು ಕೆಲವು ಪುರೋಹಿತ ವರ್ಗಗಳು ಒಪ್ಪಿಕೊಳ್ಳದೇ, ಬಾಹ್ಯ ಆಚರಣೆಗಳ ಮತ್ತು ಮೂಢನಂಬಿಕೆಗಳ ಮೂಲಕ ಜನರನ್ನು ಅಜ್ಞಾನದಲ್ಲಿಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತಾ, ಇಂಥವರಿಂದ ತೀವ್ರವಾಗಿ ಎಚ್ಚರವಾಗಿ ಇರುವಂತೆ ಸೂಚಸಿದರು. ಅರಿವಿನಿಂದ ಬದುಕುತ್ತಾ ಮುಕ್ತಿ ಪಡೆಯುವ ಪ್ರಾಮುಖ್ಯತೆಯ ಬಗ್ಗೆ ಮತ್ತು ಅದರ ಮಹತ್ವವನ್ನು ತಿಳಿಸಿದರು.

ಕೊನೆಯಲ್ಲಿ, ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳನ್ನು ಜೀವನದ ಸಾಧನ ಪಥವನ್ನಾಗಿ ಮಾಡಿಕೊಂಡು ಬದುಕುವಂತೆ ಎಲ್ಲರನ್ನು ಪ್ರೇರೇಪಿಸಿದರು. ಗಾಢವಾದ ಆಧ್ಯಾತ್ಮಿಕ ತತ್ವಗಳನ್ನು ಅತ್ಯಂತ ಸರಳವಾಗಿ ಸಾಮಾನ್ಯ ಜನತೆಗೆ ತಲುಪಿಸಿದ ಈ ಪ್ರವಚನವು ಎಲ್ಲರಲ್ಲೂ ಜಾಗೃತಿ ಮೂಡಿಸಿತು.
