ಮಕ್ಕಳ ಕಲ್ಯಾಣ ಸಮಿತಿಯಿಂದ ಸ್ವಾಮೀಜಿ ಹೇಳಿಕೆ ದಾಖಲು
ದಾವಣಗೆರೆ
ಹರಿಹರ ಪಂಚಮಸಾಲಿ ಪೀಠದ ಉಚ್ಚಾಟಿತ ವಚನಾನಂದ ಸ್ವಾಮೀಜಿ ವಿರುದ್ಧ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮೂವರು ಮಕ್ಕಳು ದೂರು ನೀಡಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ದೂರು ನೀಡಿದ 3 ಮಕ್ಕಳನ್ನು ಪ್ರತ್ಯೇಕವಾಗಿ ಕೌನ್ಸೆಲಿಂಗ್ ನಡೆಸಿದ್ದಾರೆ.
ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ನೇತೃತ್ವದ ತಂಡ ಹರಿಹರ ತಾಲೂಕಿನ ಹನಗವಾಡಿ ಸಮೀಪದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ದೂರು ಕೊಟ್ಟಿರುವ ಮೂವರೂ ಮಕ್ಕಳು ಮಠದಲ್ಲಿ ಮಲಗುವ ಜಾಗ, ಓದುತ್ತಿದ್ದ ಸ್ಥಳ, ಕೊಠಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ನಂತರ ಸಮಿತಿಯ ಸದಸ್ಯರು, ವಚನಾನಂದ ಸ್ವಾಮೀಜಿಯನ್ನು ದೂರಿನಲ್ಲಿರುವ ಆರೋಪದ ಕುರಿತು ಸುಮಾರು ಹೊತ್ತು ವಿಚಾರಣೆ ಮಾಡಿದ್ದಾರೆ.
ವರದಿ ಬಳಿಕ ಪೊಲೀಸ್ ವಿಚಾರಣೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿದೆ ಮೂವರು ಮಕ್ಕಳು ಲಿಖಿತ ದೂರು ನೀಡಿದ ನಂತರ ವಚನಾನಂದ ಸ್ವಾಮೀಜಿ ಹೇಳಿಕೆ ದಾಖಲಿಸಿದ್ದೇವೆ.
ಮಕ್ಕಳ ಕೌನ್ಸೆಲಿಂಗ್ ನಡೆಯುತ್ತಿದ್ದು, ಕೌನ್ಸೆಲಿಂಗ್ ವರದಿ ಬಂದ ನಂತರ ಪೊಲೀಸರಿಗೆ ಅದನ್ನು ನೀಡುತ್ತೇವೆ. ನಂತರ ಪೊಲೀಸರು ವಿಚಾರಣೆ ಕೈಗೊಳ್ಳುತ್ತಾರೆ ಎಂದರು.
ನಾವು ದೇವರ ದಾರಿಯಲ್ಲಿ ನಡೆಯುವ ಸಾಧಕರು
ತಮ್ಮ ಮೇಲಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ವಚನಾನಂದ ಸ್ವಾಮೀಜಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಆಗುತ್ತಿರುವುದು ಒಳ್ಳೆಯದಕ್ಕೆ ಎಂದಿದ್ದರು. ಹಾಗೆಯೇ ಬಸವಣ್ಣನವರು ಬಾರದು ಬಪ್ಪದು ಬಪ್ಪದು ತಪ್ಪದು ಎಂದು ಹೇಳಿದ್ದಾರೆ. ನಾವು ಸಾಧಕರು ನಾವು ದೇವರಲ್ಲ, ದೇವರ ದಾರಿಯಲ್ಲಿ ನಡೆಯುವವರು ಅದರಂತೆ ಆಗುವುದೆಲ್ಲ ಒಳ್ಳೆಯದೇ ಆಗಲಿದೆ. ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧವಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಬಂದು ಪರಿಶೀಲಿಸಿದ್ದಾರೆ. ಅವರಿಗೆ ತಿಳಿಸಬೇಕಾದ ಮಾಹಿತಿ ತಿಳಿಸಲಾಗಿದೆ. ಕಾಲವೇ ಎಲ್ಲವನ್ನೂ ಉತ್ತರಿಸಲಿದೆ ಎಂದರು.
