ಸಾಣೇಹಳ್ಳಿ:
ಅಂಡಮಾನ್ ನ ರಾಜಧಾನಿ ವಿಜಯಪುರಂನ ಮನ್ಷಾ ರೀಜೆನ್ಸಿ ಫೋರ್ಟ್ ಬ್ಲೇರ್ ನಲ್ಲಿ ಶುಕ್ರವಾರ 2026ರ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಡೆ ಮತ್ತು ನುಡಿ ಒಂದಾದಾಗ ಮಾತ್ರ ಧರ್ಮ ಸಾರ್ಥಕವಾಗುತ್ತದೆ. ನಮ್ಮ ಆಚರಣೆಗಳು ಕೇವಲ ಸಾಂಕೇತಿಕವಾಗದೆ, ಅವುಗಳಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಒಳಗೊಂಡಿರಬೇಕು.
ಪೂಜೆ-ಪುನಸ್ಕಾರಗಳಿಗಿಂತ ಮನುಷ್ಯನ ಮನಃಸ್ಥಿತಿ ಮುಖ್ಯ. ಪರರ ಸುಖ-ದುಃಖಗಳನ್ನು ನಮ್ಮದೆಂದು ಭಾವಿಸುವ ಗುಣವೇ ನಿಜವಾದ ಧರ್ಮ. ಮನಸ್ಸು ಅರಳಿದಾಗ ಮಾತ್ರ ಮಾಡುವ ಪೂಜೆಗೆ ಫಲ ಸಿಗುತ್ತದೆ, ಕೆರಳಿದ ಮನಸ್ಸಿನಿಂದ ಮಾಡುವ ಯಾವುದೇ ಆಚರಣೆ ವ್ಯರ್ಥ ಎಂದರು.
ವಿನಯ್ ಗುರೂಜಿ ಅವರ ವಿಚಾರಗಳನ್ನು ಪ್ರಸ್ತಾಪಿಸುತ್ತಾ, “ನಮಸ್ಕಾರ ಮಾಡುವುದು ಕೇವಲ ಗೌರವ ಸೂಚಕವಲ್ಲ, ಅದು ಅಹಂಕಾರವನ್ನು ಕಳೆದುಕೊಳ್ಳುವ ಮಾರ್ಗ. ಬಸವಣ್ಣನವರು ತನ್ನನ್ನು ತಾನು ‘ಎನಗಿಂತ ಕಿರಿಯರಿಲ್ಲ’ ಎಂದು ಕರೆದುಕೊಳ್ಳುವ ಮೂಲಕ ಸಮಾಜದ ಮುಂದೆ ದೊಡ್ಡವರಾದರು. ಜಗತ್ತಿನ ಪ್ರತಿಯೊಬ್ಬ ಮನುಷ್ಯ ಪ್ರತಿಯೊಂದು ಜೀವರಾಶಿಯಲ್ಲಿಯೂ ಭಗವಂತನನ್ನು ಕಾಣುವ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು.
ಧರ್ಮದ ಹೆಸರಿನಲ್ಲಿ ನಡೆಯುವ ಅನಾಹುತಗಳು ಮತ್ತು ಮೌಢ್ಯದ ಕುರಿತು ಮಾತನಾಡಿದ ಶ್ರೀಗಳು ಬಸವಣ್ಣನವರು ಪ್ರತಿಭಟಿಸಿದ್ದು ಧರ್ಮವನ್ನಲ್ಲ, ಬದಲಿಗೆ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆ ಮತ್ತು ಭಯ ಹುಟ್ಟಿಸುವ ತಂತ್ರಗಳನ್ನು. ಸಕಲ ಜೀವಾತ್ಮರ ಲೇಸನ್ನು ಬಯಸುವುದೇ ಎಲ್ಲ ಧರ್ಮಗಳ ಮೂಲ ಉದ್ದೇಶವಾಗಬೇಕು.
“ವಚನಗಳು ಕೇವಲ ಸಾಹಿತ್ಯವಲ್ಲ, ಅವು ಅನುಭವದ ಸಾಕಾರ ರೂಪ. ವಚನಗಳನ್ನು ಒಮ್ಮೆ ಓದಿದರೆ ಸಾಲದು, ಅವುಗಳ ಪೂರ್ಣ ಭಾವ ಬದುಕಿನ ಭಾಗವಾಗಬೇಕು.
ಬಸವಣ್ಣನವರು ವೇದ-ಉಪನಿಷತ್ತುಗಳನ್ನು ಓದಿದ್ದಿರಬಹುದು, ಆದರೆ ನುಲಿಯ ಚಂದಯ್ಯ, ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ ಹಾಗೂ ಸೂಳೆ ಸಂಕವ್ವೆಯವರಂತಹ ಶರಣರು ಯಾವುದೇ ಅಕ್ಷರ ಜ್ಞಾನವಿಲ್ಲದಿದ್ದರೂ ತಮ್ಮ ಅನುಭವದ ಶ್ರೀಮಂತಿಕೆಯಿಂದ ವಿಶ್ವವನ್ನೇ ಬೆರಗುಗೊಳಿಸುವ ವಚನಗಳನ್ನು ರಚಿಸಿದರು.
ಶರಣರ ತತ್ವಗಳು ಜನರ ಮನಸ್ಸನ್ನು ಮುಟ್ಟುವಷ್ಟು ಸರಳವಾಗಿವೆ. ಬುದ್ಧನು ಪಾಲಿ ಭಾಷೆಯಲ್ಲಿ ಬೋಧಿಸಿದಂತೆ, ಬಸವಾದಿ ಶರಣರು ಸಾಮಾನ್ಯ ಜನರ ಭಾಷೆಯಲ್ಲಿ ಸತ್ಯವನ್ನು ಸಾರಿದ್ದರಿಂದಲೇ ಅವು ಇಂದಿಗೂ ಪ್ರಸ್ತುತವಾಗಿವೆ.
“ನೀನೊಲಿದರೆ ಕೊರಡು ಕೊನರುವುದಯ್ಯಾ…” ಎಂಬ ಬಸವಣ್ಣನವರ ವಚನವನ್ನು ಕೇವಲ ಪವಾಡದ ರೂಪದಲ್ಲಿ ನೋಡದೆ, ಮನುಷ್ಯನಲ್ಲಿ ಆಗುವ ಆಂತರಿಕ ಬದಲಾವಣೆಯಾಗಿ ನೋಡಬೇಕು. ಜ್ಞಾನೋದಯವಾದಾಗ ಮನುಷ್ಯನ ವ್ಯಕ್ತಿತ್ವವೇ ಪರಿವರ್ತನೆಗೊಳ್ಳುತ್ತದೆ.
“ಸತ್ಯಕ್ಕೆ ಹಲವು ಮುಖಗಳಿವೆ. ವಚನಗಳ ಅಪವ್ಯಾಖ್ಯಾನ ಮಾಡದೆ ಅವುಗಳ ಆಳಕ್ಕೆ ಇಳಿಯುವ ಅಗತ್ಯವಿದೆ.
ಬಸವಣ್ಣನವರ ‘ಮುಗಿದ ಕೈ, ಬಾಗಿದ ತಲೆ’ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿನಯ ಮತ್ತು ವಿವೇಕ ವ್ಯಕ್ತಿಯ ಚಾರಿತ್ರ್ಯವನ್ನು ಎತ್ತರಿಸುತ್ತವೆ. ವಿನಯ್ ಗುರೂಜಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರೂ, ಯಾವುದೇ ಅಹಂಕಾರವಿಲ್ಲದೆ ಅವಧೂತ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ವೇದ, ಉಪನಿಷತ್ತು, ಭಗವದ್ಗೀತೆ ಮತ್ತು ಇಂದಿನ ಇಂಗ್ಲಿಷ್ ಸಾಹಿತ್ಯದ ಕುರಿತು ಅವರಿಗಿರುವ ಜ್ಞಾನ ಅನನ್ಯವಾದುದು ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ವಿನಯ್ ಗುರೂಜಿ; ಆಧುನಿಕ ಜಗತ್ತಿನ ಗೊಂದಲಗಳಿಗೆ ಬಸವತತ್ವ ಮತ್ತು ಭಗವದ್ಗೀತೆಯ ಚಿಂತನೆಗಳು ಸಂಜೀವಿನಿಯಿದ್ದಂತೆ.
“ಬುದ್ಧಿವಂತಿಕೆಗಿಂತ ಮುಗ್ಧತೆ ಜೀವನಕ್ಕೆ ಹೆಚ್ಚು ಹತ್ತಿರವಾದುದು. ಜ್ಞಾನವಿದ್ದು ಅಹಂಕಾರ ಬೆಳೆಸಿಕೊಳ್ಳುವ ವ್ಯಕ್ತಿ ‘ಅಂಧಕಾಸುರ’ನಾಗುತ್ತಾನೆ. ಆದರೆ ಅದೇ ಜ್ಞಾನದೊಂದಿಗೆ ಮಗುವಿನಂತಹ ಮುಗ್ಧತೆಯನ್ನು ಬೆಳೆಸಿಕೊಂಡರೆ ಅದು ನಿಜವಾದ ಅಧ್ಯಾತ್ಮಿಕನಾಗುವನು.

“ಧರ್ಮ ಎನ್ನುವುದು ವಾಸ್ತವದ ಹಾದಿಯಷ್ಟೇ ಹೊರತು ಅದುವೇ ವಾಸ್ತವವಲ್ಲ. ಪ್ರತಿಯೊಬ್ಬರ ಒಳಗೆ ಚೈತನ್ಯವಿದೆ, ಅದನ್ನೇ ಬಸವಣ್ಣನವರು ‘ಬಯಲು’ ಎಂದು ಕರೆದಿದ್ದಾರೆ. ಧರ್ಮ ಯಾವುದೇ ಇರಲಿ, ಅದಕ್ಕಿಂತ ಮೊದಲು ಮಾನವೀಯತೆ ಮುಖ್ಯ.
ಬಸವಣ್ಣನವರ ಅನುಭವ ಮಂಟಪ ಕೇವಲ ಚರ್ಚೆಯ ವೇದಿಕೆಯಲ್ಲ, ಅದು ಅನುಭವಗಳ ಸಾಗರ.
“ಸನ್ಯಾಸ ಎಂದರೆ ಕೇವಲ ಕಾಷಾಯ ವಸ್ತ್ರವಲ್ಲ, ಅದು ಅಹಂಕಾರವನ್ನು ಗುರುವಿನ ಪಾದದಡಿಯಲ್ಲಿ ಇಡುವುದು. ನನ್ನದು-ನಿನ್ನದು ಎಂಬ ಭೇದ ಭಾವ ಅಳಿದಾಗ ಮಾತ್ರ ಅಹಂ ಬ್ರಹ್ಮಾಸ್ಮಿ ಎಂಬ ಸತ್ಯದರ್ಶನವಾಗುತ್ತದೆ. ದೇಶದಲ್ಲಿ ಇಂದು ನಡೆಯುತ್ತಿರುವ ಕಲಹಗಳಿಗೆ ಅಹಂಕಾರವೇ ಮೂಲ ಕಾರಣ. ಪ್ರೀತಿ ಮತ್ತು ಸೌಹಾರ್ದತೆಯಿಂದ ಮಾತ್ರ ಶಾಂತಿ ಸಾಧ್ಯ”.
“ಜಾತಿ, ಧರ್ಮಗಳ ಬೇಲಿಯ ಆಚೆಗೆ ನಿಂತು ಮನುಷ್ಯನಾಗುವ ಗುಣ ಬೆಳೆಸಿಕೊಳ್ಳುವುದೇ ನಿಜವಾದ ಧರ್ಮ. ಬಸವ ತತ್ವವು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅದು ಇಡೀ ಜಗತ್ತಿಗೆ ಬೆಳಕಾಗುವಂತಹ ಸಾರ್ವತ್ರಿಕ ಜ್ಞಾನ”.
ಅಂತಹ ಜ್ಞಾನ ಭಂಡಾರ ಹೊಂದಿದವರು ಪಂಡಿತಾರಾಧ್ಯ ಶ್ರೀಗಳು. ಅವರ ಕ್ರಾಂತಿಯ ನಡಿಗೆಯಲ್ಲಿ ಪಾಲ್ಗೊಂಡವರಲ್ಲಿ ನಾನೂ ಒಬ್ಬ.
ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಪಂಗಡಕ್ಕೆ ಸೇರಿದವನಲ್ಲ. ನಮ್ಮದೊಂದೇ ಪಕ್ಷ, ಅದು ‘ಮನುಷ್ಯನಾಗುವ ಪಕ್ಷ’. ಪಿತೃಪಕ್ಷದ ಸಮಯದಲ್ಲಿ ಶ್ರದ್ಧೆಯಿಲ್ಲದೆ ಮಾಡುವ ಪೂಜೆಗಿಂತ, ತಂದೆ-ತಾಯಿ ಜೀವಂತವಿದ್ದಾಗ ಅವರನ್ನು ಗೌರವಿಸುವುದು ನಿಜವಾದ ಶ್ರಾದ್ಧ.
ಬಸವಣ್ಣನವರು ನೀಡಿದ ಇಷ್ಟಲಿಂಗದ ಕಲ್ಪನೆಯು ನಿರಾಕಾರ ಮತ್ತು ಪೂರ್ಣತೆಯ ಸಂಕೇತವಾಗಿದೆ. ಜ್ಞಾನ ಮತ್ತು ಅಮೃತದ ಸಂಗಮವೇ ಬಸವತತ್ವ.
“ಬಸವಣ್ಣನವರು ನಮಗೆ ಮೃತ್ಯುವನ್ನು ಗೆಲ್ಲುವ ವಿದ್ಯೆಯನ್ನು ಹೇಳಿಕೊಟ್ಟಿದ್ದಾರೆ. ಇಷ್ಟಲಿಂಗ ಪೂಜೆಯು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅದು ಅರಿವಿನ ಯಜ್ಞ ಮತ್ತು ವೈಜ್ಞಾನಿಕ ಪ್ರಕ್ರಿಯೆ. “ಬಸವಣ್ಣ ಎಂದರೆ ಪೂರ್ಣತ್ವದ ಹಾದಿ. ಇಷ್ಟಲಿಂಗ ಪೂಜೆ ಮತ್ತು ದಾಸೋಹ ಭಾವನೆಯನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಯಾವುದೇ ಗ್ರಂಥವನ್ನು ಬುದ್ಧಿಯಿಂದ ಓದಿದರೆ ಅದು ಕೇವಲ ಲೆಕ್ಕಾಚಾರವಾಗುತ್ತದೆ, ಆದರೆ ಹೃದಯದಿಂದ ಓದಿದರೆ ಅದು ಅರಿವಾಗುತ್ತದೆ ಎಂದರು.
ಬಂಗಾರಮುಖಿಯ ಮಾರುತಿ ಗುರೂಜಿ ಮಾತಮಾಡಿ; ಧರ್ಮ ಎನ್ನುವುದು ಕೇವಲ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತವಾದುದಲ್ಲ, ಅದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗ ಮತ್ತು ಕರ್ತವ್ಯ ನಿಷ್ಠೆಯ ಸಂಕೇತ.
“ಯಾವುದು ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸುತ್ತದೆಯೋ, ಯಾವುದು ಸಮಾಜಕ್ಕೆ ಹಿತವನ್ನು ನೀಡುತ್ತದೆಯೋ ಅದೇ ನಿಜವಾದ ಧರ್ಮ. ಧರ್ಮದ ಹೆಸರಿನಲ್ಲಿ ಪರಸ್ಪರ ಜಗಳವಾಡುವುದು ಅಥವಾ ಸಮಾಜವನ್ನು ಒಡೆಯುವುದು ಧರ್ಮವಲ್ಲ. ಜಗಜ್ಯೋತಿ ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾದವು. ಅವರು ಕೇವಲ ಉಪದೇಶ ಮಾಡಲಿಲ್ಲ, ತಾವು ನುಡಿದಂತೆ ನಡೆದರು. ನಡೆದಂತೆ ನುಡಿದರು.
ತಂದೆಗೆ ಪಿತೃಧರ್ಮ, ಮಗನಿಗೆ ಪುತ್ರಧರ್ಮ, ಪತ್ನಿಗೆ ಪತ್ನಿಧರ್ಮ – ಹೀಗೆ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿಗಳೇ ಧರ್ಮವಾಗಿದೆ. ನಮಗೆ ಯಾವುದು ಹಿತವೋ ಅದು ಇತರರಿಗೂ ಹಿತವಾಗಿರಬೇಕು ಎಂಬ ಮನೋಭಾವ ನಮ್ಮದಾಗಬೇಕು ಎಂದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಸಂಬಂಧಗಳು ಕೇವಲ ಔಪಚಾರಿಕವಾಗುತ್ತಿವೆ. ಇದನ್ನು ತಡೆಗಟ್ಟಲು ಬಸವಣ್ಣನವರ ವಚನಗಳ ಸಾರವನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
“ಹೃದಯವನ್ನು ಮುಟ್ಟುವವನೇ ನಿಜವಾದ ಗುರು”. ಸಾಮಾನ್ಯ ಶಿಕ್ಷಕ ಬುದ್ಧಿಗೆ ವಿಷಯಗಳನ್ನು ತಲುಪಿಸಿದರೆ, ಬಸವಣ್ಣನವರಂತಹ ಮಹಾಪುರುಷರು ನೇರವಾಗಿ ಮನುಷ್ಯನ ಅಂತರಾತ್ಮವನ್ನು ಜಾಗೃತಗೊಳಿಸುತ್ತಾರೆ. ಅವರ ವಚನಗಳು ಇಂದಿಗೂ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿರುವುದು.
“ನೂರು ಜನರಲ್ಲಿ ಒಬ್ಬ ಶೂರ ಸಿಗಬಹುದು, ಸಾವಿರದಲ್ಲಿ ಒಬ್ಬ ಪಂಡಿತ ಸಿಗಬಹುದು, ಆದರೆ ಹತ್ತು ಸಾವಿರ ಜನರಲ್ಲಿ ಒಬ್ಬ ವಾಗ್ಮಿ ಅಥವಾ ಸತ್ಯವನ್ನು ಸಾರುವವನು ಸಿಗುವುದು ಕಷ್ಟ” ಧರ್ಮದ ಸ್ಥಾಪನೆ ಮತ್ತು ಜೀವನ ಮೌಲ್ಯಗಳ ಬೋಧನೆಯಲ್ಲಿ ಬಸವಣ್ಣನವರ ಪಾತ್ರ ಅನನ್ಯವಾದುದು.
ಜ್ಞಾನವನ್ನು ಬೆಣ್ಣೆ ಮತ್ತು ತುಪ್ಪ ಇದ್ದಂತೆ “ಜ್ಞಾನವು ಕೇವಲ ತಿಳುವಳಿಕೆಯಲ್ಲ, ಅದು ಅನುಭವದ ಮಥನವಾಗಿರಬೇಕು. ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿದಂತೆ, ನಮ್ಮ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಮಟ್ಟಕ್ಕೆ ಏರಬೇಕು”
ಬುದ್ಧ, ಬಸವ ಮತ್ತು ಅಕ್ಕಮಹಾದೇವಿಯವರ ಪರಂಪರೆಯನ್ನು ಸ್ಮರಿಸುತ್ತಾ, ಪರ ವಿರೋಧಗಳ ನಡುವೆಯೂ ಸತ್ಯವನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಬಸವಣ್ಣನವರ ವಚನಗಳು ಹೃದಯದ ಭಾಷೆಯಾಗಿದ್ದು, ಜನಸಾಮಾನ್ಯರಿಗೆ ಸುಲಭವಾಗಿ ತಲುಪುತ್ತವೆ. ಸ್ವಧರ್ಮದ ಆಚರಣೆ ಮತ್ತು ಇತರರ ತತ್ವಗಳನ್ನು ಗೌರವಿಸುವುದು ಅತ್ಯಗತ್ಯ ಎಂದರು.
“ದೇಹವೇ ದೇಗುಲ” ವಿಷಯ ಕುರಿತಂತೆ ಮಾತನಾಡಿದ ಶರಣ ಚಿಂತಕ ಚಟ್ನಳ್ಳಿ ಮಹೇಶ್; ಜಗತ್ತಿನ ಇತಿಹಾಸದಲ್ಲಿ ಬಸವಣ್ಣನವರ ಪ್ರತಿ ಹೆಜ್ಜೆಯೂ ಒಂದು ಕ್ರಾಂತಿ. ಬುದ್ಧ, ಆರ್ಕಿಮಿಡಿಸ್, ನ್ಯೂಟನ್ ಮತ್ತು ಗಾಂಧೀಜಿಯವರ ಜೀವನದ ಪ್ರಮುಖ ಕ್ಷಣಗಳಂತೆ, ಬಸವಣ್ಣನವರು ಅನುಭವ ಮಂಟಪದ ಮೂಲಕ ತಂದ ಸಾಮಾಜಿಕ ಬದಲಾವಣೆಯ ಕ್ಷಣಗಳು ಇಂದಿಗೂ ಸಾರ್ವಕಾಲಿಕ.
“ವಚನ ಸಾಹಿತ್ಯದಲ್ಲಿ ಎಲ್ಲವೂ ಇದೆ. ಸ್ತ್ರೀ ಸಮಾನತೆ, ಕಾಯಕ ದಾಸೋಹ, ಪರಿಸರ ಪ್ರೇಮ ಮತ್ತು ಅಹಂಕಾರ ನಿರಸನದ ದಾರಿಗಳನ್ನು ಶರಣರು ಅಂದೇ ತೋರಿಸಿಕೊಟ್ಟಿದ್ದಾರೆ. ಇಂದಿನ 21ನೇ ಶತಮಾನದಲ್ಲಿ ನಾವು ಕೌಶಲ್ಯಾಧಾರಿತ ತರಬೇತಿ ಬಗ್ಗೆ ಮಾತನಾಡುತ್ತೇವೆ. ಆದರೆ, 12ನೇ ಶತಮಾನದಲ್ಲೇ ಬಸವಣ್ಣನವರು ಒಬ್ಬ ‘ಸೋಷಿಯಲ್ ಇಂಜಿನಿಯರ್’ ಆಗಿ ಸಮಾಜವನ್ನು ತಿದ್ದುವ ಅದ್ಭುತ ಕೌಶಲ್ಯವನ್ನು ಅಳವಡಿಸಿಕೊಂಡಿದ್ದರು,” ಬಸವಣ್ಣನವರು ಎಲ್ಲರನ್ನೂ ಹಿರಿಯರನ್ನಾಗಿಸಿ ತನ್ನನ್ನು ತಾನು ಕಿರಿಯನೆಂದು ಕರೆದುಕೊಂಡ ವಿನಯವಂತಿಕೆಯನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳಬೇಕು.

“ಮಣ್ಣ ಬಿಟ್ಟು ಮಡಕೆಯಿಲ್ಲ, ತನ್ನ ಬಿಟ್ಟು ದೇವರಿಲ್ಲ” ಎಂಬ ಜನಪದರ ನುಡಿಯಂತೆ, ಮನುಷ್ಯ ತನ್ನ ದೇಹವನ್ನೇ ದೇವಾಲಯವಾಗಿಸಿಕೊಂಡು ಬದುಕಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.
ಬಸವಣ್ಣನವರು ಅಂದೇ ಹೇಳಿದಂತೆ “ಎನ್ನ ಕಾಲೇ ಕಂಬ, ದೇಹವೇ ದೇಗುಲ” ಎನ್ನುವ ವಚನವು ಕೇವಲ ಸಾಹಿತ್ಯವಲ್ಲ, ಅದೊಂದು ಜೀವನ ದರ್ಶನ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಂಡರೆ ಇಡೀ ಜಗತ್ತೇ ಶುದ್ಧವಾಗುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ವಚನಕಾರರು ಅಂದೇ ಸಾರಿದ್ದರು ಎಂದರು.
ಮನುಷ್ಯನ ಅರಿವು ಮತ್ತು ನಡವಳಿಕೆಗಳು ತಿದ್ದಲ್ಪಟ್ಟಾಗ ಮಾತ್ರ ಶಾಂತಿ ನೆಮ್ಮದಿ ಸಾಧ್ಯ. ದೇಹವನ್ನು ಕೇವಲ ಭೌತಿಕ ವಸ್ತುವಾಗಿ ನೋಡದೆ, ಅದನ್ನು ದೇವನ ನೆಲೆಬೀಡಾದ ‘ದೇವಾಲಯ’ವನ್ನಾಗಿ ಪರಿವರ್ತಿಸುವುದೇ ಶರಣರ ಜೀವನ ದರ್ಶನದ ಮೂಲೋದ್ಧೇಶ.
ಬಸವಣ್ಣನವರು ಹೇಳಿದಂತೆ, ಇಂದ್ರಿಯಗಳೆಂಬ ಹಸುಗಳು ಹೊಲಕ್ಕೆ ನುಗ್ಗದಂತೆ ‘ಸಮತೆ’ ಮತ್ತು ‘ಸೈರಣೆ’ ಎಂಬ ಬೇಲಿಯನ್ನು ಹಾಕಿಕೊಳ್ಳಬೇಕು. ಅಸಹನೆಯೇ ಇಂದು ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅನಾಹುತಗಳಿಗೆ ಮೂಲ ಕಾರಣವಾಗಿದೆ.
ಅರಿವಿನ ಬಗ್ಗೆ ಉಪನ್ಯಾಸ ನೀಡಿದ ಕಾವ್ಯಶ್ರೀ ಮಹಾಂಗಾವಕರ್ ; ಆಧುನಿಕ ತಂತ್ರಜ್ಞಾನದ ಯುಗದಲ್ಲಿ ನಮಗೆ ಜಡ ವಸ್ತುಗಳ ಬಳಕೆಯ ಬಗ್ಗೆ ಇರುವ ಕಾಳಜಿ ನಮ್ಮ ಸ್ವಂತ ಅರಿವಿನ ಬಗ್ಗೆ ಇಲ್ಲದಿರುವುದು ವಿಷಾದನೀಯ ಎಂದು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ‘ಅರಿವು’ ಎಂಬ ವಿಷಯದ ಕುರಿತು ಮಾತನಾಡಿದ ಉಪನ್ಯಾಸಕರು, ಶರಣರ ವಚನ ಸಾಹಿತ್ಯದಲ್ಲಿನ ‘ಅರಿವು’ ಎನ್ನುವುದು ಕೇವಲ ಜ್ಞಾನವಲ್ಲ, ಅದು ಬದುಕಿನ ಪರಮೋಚ್ಚ ಪ್ರಜ್ಞೆ.
ನಾವು ಟಿವಿ, ಫ್ರಿಡ್ಜ್, ಲ್ಯಾಪ್ಟಾಪ್ ಕೊಂಡಾಗ ಅವುಗಳನ್ನು ಹೇಗೆ ಬಳಸಬೇಕು ಎಂಬ ಕೈಪಿಡಿಯನ್ನು ಅತ್ಯಂತ ಜಾಗರೂಕತೆಯಿಂದ ಓದುತ್ತೇವೆ. ವಸ್ತು ಹಾಳಾಗಬಾರದು ಎಂಬ ಕಾಳಜಿ ನಮಗಿದೆ. ಆದರೆ, ಜೀವಂತವಾಗಿರುವ ಈ ದೇಹ ಮತ್ತು ಜೀವನದ ಉದ್ದೇಶವೇನು? ನಾವು ಯಾರು? ಎಂಬ ಅರಿವಿನ ಬಗ್ಗೆ ನಮಗೆ ಕಾಳಜಿಯೇ ಇಲ್ಲದಂತಾಗಿದೆ.
12ನೇ ಶತಮಾನದಲ್ಲಿ ಬಸವಾದಿ ಶರಣರು ಅರಿವಿನ ಪ್ರಜ್ಞೆಯೊಂದಿಗೆ ಸಮಾಜದಲ್ಲಿ ಬದಲಾವಣೆ ತಂದರು. ಅವರು ನುಡಿದಂತೆ ನಡೆದರು. ಅವರ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲ ತತ್ವಗಳು ಕೇವಲ ಆಚರಣೆಗಳಾಗದೆ, ದೈನಂದಿನ ಬದುಕಿನ ಭಾಗವಾಗಬೇಕು.
ಇಂದಿನ 21ನೇ ಶತಮಾನದಲ್ಲಿ ಶರಣರ ತತ್ವಗಳನ್ನು ಕೇವಲ ಓದಿಗೆ ಸೀಮಿತಗೊಳಿಸದೆ, ಅಂತರಂಗದ ಜಾಗೃತಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಅರಿವು ಎಂಬುದು ಆಕರ್ಷಕ ವಿಷಯವಾಗಿದ್ದರೂ, ಅದನ್ನು ಗ್ರಹಿಕೆಗೆ ತಂದುಕೊಳ್ಳುವುದು ಇಂದಿನ ಧಾವಂತದ ಬದುಕಿನಲ್ಲಿ ಕಷ್ಟಕರವಾಗುತ್ತಿದೆ.
“ಅರಿದೊಡೆ ಶರಣ, ಮರೆದೊಡೆ ಮಾನವ” ಎಂಬಂತೆ, ಮನುಷ್ಯ ತನ್ನ ಅರಿವಿನ ಮೂಲಕ ದೈವತ್ವಕ್ಕೇರಲು ಸಾಧ್ಯ. ಬಾಹ್ಯ ಪ್ರಪಂಚದ ಅರಿವಿನ ಜೊತೆಗೆ ಅಂತರಂಗದ ಅರಿವನ್ನು ಬೆಳೆಸಿಕೊಂಡಾಗ ಮಾತ್ರ ಶರಣರ ವಿಚಾರಧಾರೆಗಳಿಗೆ ನಿಜವಾದ ಅರ್ಥ ಸಿಗುತ್ತದೆ.
ಶೂನ್ಯ ಸಂಪಾದನೆಯ ಬಗ್ಗೆ ನಿವೃತ್ತ ಪ್ರಾಚಾರ್ಯ ಸಿದ್ದು ಯಾಪಲಪರವಿ ಮಾತನಾಡಿ; ವೈದಿಕ ಮತ್ತು ಅವೈದಿಕ ಸಿದ್ಧಾಂತಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಸಮಾಜಕ್ಕೆ ಹಾನಿಕಾರಕವಲ್ಲದ, ಜಾತಿ-ವರ್ಣಾಶ್ರಮದ ಹೆಸರಿನಲ್ಲಿ ಶೋಷಣೆ ಮಾಡದ ಪ್ರತಿಯೊಬ್ಬ ವ್ಯಕ್ತಿಯೂ ಗೌರವಕ್ಕೆ ಅರ್ಹ.
“ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ” ಎನ್ನುವ ತತ್ವದಡಿ ನಾವು ಬದುಕಬೇಕಿದೆ. ಬಸವಣ್ಣನವರೇ ಸ್ವತಃ ಬ್ರಾಹ್ಮಣ ಕುಲದಲ್ಲಿ ಹುಟ್ಟಿ ನಂತರ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಹೀಗಿರುವಾಗ ಸಿದ್ಧಾಂತಗಳ ಹೆಸರಿನಲ್ಲಿ ಕೇವಲ ಬೈಗುಳ ಅಥವಾ ವಿರೋಧ ಮಾಡುವುದು ಪ್ರಗತಿಪರತೆಯಲ್ಲ. ಜೀವನದಲ್ಲಿ ಎಲ್ಲವನ್ನೂ ಸಮಪಾಲು, ಸಮಬಾಳಿನ ದೃಷ್ಟಿಯಿಂದ ನೋಡಬೇಕು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿ. ಬಿ. ಪಾಟೀಲ, “ಬಸವಣ್ಣನವರ ತತ್ವಗಳು ವಿಶ್ವಮಾನ್ಯವಾಗಿದ್ದು, ಅವುಗಳನ್ನು ಭಾಷಣ ಅಥವಾ ಮಾತಿನ ಸರಕಾಗಿಸಿಕೊಳ್ಳದೆ ನಮ್ಮ ದೈನಂದಿನ ಜೀವನದಲ್ಲಿ ಅನುಷ್ಠಾನಕ್ಕೆ ತಂದಾಗ ಮಾತ್ರ ಬಸವ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ.
ಬಸವಣ್ಣನವರನ್ನು ‘ಕಾರ್ತಿಕದ ಕಾರ್ಗತ್ತಲಲ್ಲಿ ಆಕಾಶದೀಪವಾಗಿ ಬಂದವರು’ ಎಂದು ಕುವೆಂಪು ಅವರು ವರ್ಣಿಸಿರುವುದನ್ನು ಸ್ಮರಿಸಿದ ಪಾಟೀಲರು, ಅಂದಿನ ಕಾಲದ ವೈದಿಕ ಶಾಹಿ, ಮೂಢನಂಬಿಕೆ ಹಾಗೂ ಶೋಷಣೆಯ ಕಾರ್ಗತ್ತಲನ್ನು ಕಳೆಯಲು ಬಸವಣ್ಣನವರು ಬೆಳಕಾದರು. ಬಸವಣ್ಣನವರು ನೀಡಿದ ಸಮಾನತೆ, ಲಿಂಗಭೇದವಿಲ್ಲದ ಸಮಾಜ, ಕಾಯಕ ಮತ್ತು ದಾಸೋಹ ತತ್ವಗಳನ್ನು ನಾವು ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಸಪ್ತಶೀಲಗಳಾದ ‘ಕಳಬೇಡ, ಕೊಲಬೇಡ…’ ಎಂಬ ತತ್ವಗಳನ್ನು ಶೇ.100 ರಷ್ಟು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದೇ ನಾವು ಅವರಿಗೆ ಸಲ್ಲಿಸುವ ಗೌರವ,” ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ-ಟಿಪ್ಪಣಿಗಳು ಬರುವುದು ಸಹಜ. ಆದರೆ, ಸತ್ಯ ಮತ್ತು ಜ್ಞಾನದ ಹಾದಿಯಲ್ಲಿ ನಡೆಯುವಾಗ ಇವುಗಳಿಗೆ ಅಂಜಬಾರದು. ವಿಶ್ವವಿದ್ಯಾಲಯದ ಪದವಿಗಿಂತ ಜೀವನದ ಅನುಭವಗಳೇ ದೊಡ್ಡ ಪಾಠಗಳು. ಪ್ರತಿಯೊಂದು ಧರ್ಮ ಮತ್ತು ಸಿದ್ಧಾಂತವು ತನ್ನದೇ ಆದ ಹಂತಗಳನ್ನು ದಾಟಿ ಬಂದಿರುತ್ತದೆ.
“ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳಾದ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರು ಭಾರತೀಯ ಪರಂಪರೆಯ ವೇದಾಂತ ಹಾಗೂ ದರ್ಶನಗಳನ್ನು ಅತ್ಯಂತ ಆಳವಾಗಿ ಅರಿತು, ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಮಾನವತಾವಾದಿಗಳು,
ಬಸವಣ್ಣನವರ ಮುಖ್ಯ ತಕರಾರು ಇದ್ದದ್ದೇ ಸ್ತ್ರೀ-ಪುರುಷರ ನಡುವಿನ ತಾರತಮ್ಯದ ವಿರುದ್ಧ. “ನಮ್ಮ ಅಕ್ಕನಿಗೆ ಇಲ್ಲದ ಸಂಸ್ಕಾರ ನನಗೂ ಬೇಡ” ಎನ್ನುವ ಮೂಲಕ ಅವರು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದರು. ವರ್ಣಾಶ್ರಮ ಧರ್ಮದ ಹೆಸರಿನಲ್ಲಿ ಶೂದ್ರರ ಶೋಷಣೆಯನ್ನು ತಪ್ಪಿಸಲು ಲಿಂಗಾಯತ ಧರ್ಮದ ಉದಯವಾಯಿತು.
ವಚನಕಾರರು ವೇದಗಳನ್ನು ವಿರೋಧಿಸಲಿಲ್ಲ, ಬದಲಾಗಿ ವೇದಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ವಿರೋಧಿಸಿದರು. ಅಪ್ಪಟ ಭಕ್ತಿಯ ಮೂಲದಿಂದ ಬಂದ ಬಸವಣ್ಣನವರನ್ನು ಕೇವಲ ಒಬ್ಬ ‘ಸೆಕ್ಯುಲರ್ ಲೀಡರ್’ ಆಗಿ ಮಾತ್ರ ನೋಡದೆ, ಅವರ ಆಧ್ಯಾತ್ಮಿಕ ಆಳವನ್ನು ಅರಿಯಬೇಕಾದ ಅಗತ್ಯವಿದೆ.
ಇಂದಿನ ಕಾಲದಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ ಹೆಣ್ಣು ಮಕ್ಕಳ ಶೋಷಣೆ ಮಾಡುತ್ತಿರುವ ನಕಲಿ ಬಾಬಾಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಧರ್ಮವು ಅಫೀಮಿನಂತೆ ಸಮಾಜವನ್ನು ಹಾಳುಮಾಡಬಾರದು, ಬದಲಾಗಿ ಅದು ಮನುಷ್ಯನನ್ನು ಪ್ರಗತಿಯತ್ತ ಕೊಂಡೊಯ್ಯಬೇಕು.
ವಚನ ಸಾಹಿತ್ಯವು ಕೇವಲ ಸಾಹಿತ್ಯವಲ್ಲ, ಅದು ಮನುಷ್ಯನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶಕ್ತಿಶಾಲಿ ಮಾರ್ಗವಾಗಿದೆ.

ಅಲ್ಲಮಪ್ರಭುಗಳ ಮತ್ತು ಬಸವಣ್ಣನವರ ತತ್ವಗಳನ್ನು ನೆನಪಿಸಿದ ಗಣ್ಯರು”ದೇಹವೇ ದೇಗುಲ” ಎಂಬ ಪರಿಕಲ್ಪನೆಯು ಕೇವಲ ದೇವಸ್ಥಾನದ ಸಂಸ್ಕೃತಿಯ ಟೀಕೆಯಲ್ಲ, ಬದಲಿಗೆ ಮನುಷ್ಯನ ದೇಹ ಮತ್ತು ಚೈತನ್ಯದ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ದಾರಿಯಾಗಿದೆ ಎಂದರು.
ಪ್ರತಿಯೊಂದು ಆಧ್ಯಾತ್ಮಿಕ ವಿಚಾರವನ್ನು ಅಲ್ಲಮನ ವಚನಗಳೊಂದಿಗೆ ಬೆಸೆಯಬಹುದು ಎಂದು ಹೇಳಿದರು. ವಿಘಟನೆಗಿಂತ ಸಮನ್ವಯತೆಯೇ ಮುಖ್ಯ.
ಜೀವನದ ಅಧ್ಯಯನವು ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಬೇಕು. ಸಂಕಷ್ಟದ ಸಮಯದಲ್ಲೂ ಶೂನ್ಯ ಮತ್ತು ಬಯಲನ್ನು ಮೀರಿದ ಅರಿವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಾವು ಎಷ್ಟೋ ಬಾರಿ ಅರಿವಿದ್ದೂ ಅರಿವಿಲ್ಲದವರಂತೆ ವರ್ತಿಸುತ್ತೇವೆ. ಈ ಸ್ಥಿತಿಯಿಂದ ಹೊರಬರಲು ದಾರ್ಶನಿಕರ ಮಾರ್ಗದರ್ಶನ ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಬಿ.ಆರ್. ಪೋಲಿಸಪಾಟೀಲ : ಬಸವ ಧರ್ಮವು ಯಾವುದೇ ಒಂದು ಜಾತಿಗೆ ಸೀಮಿತವಾದುದಲ್ಲ, ಅದು ಜಗತ್ತಿಗೆ ತೆರೆದ ಒಂದು ವಿಶಾಲ ಬಯಲು ಎಂದರು. ತಮ್ಮ ಲಾವಣಿಯ ಮೂಲಕ ಬಸವಣ್ಣನವರ ಕ್ರಾಂತಿಕಾರಿ ವ್ಯಕ್ತಿತ್ವ ಮತ್ತು ಕಲ್ಯಾಣದ ವೈಭವವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು.
ಬಸವ ಧರ್ಮದ ಮೂಲ ಅಡಿಪಾಯವೇ ‘ನಡೆ ಮತ್ತು ನುಡಿ’ಯ ಸಮನ್ವಯ. ಬಸವಣ್ಣನವರು ತಮ್ಮ ಬದುಕಿನಲ್ಲಿ ಯಾವುದನ್ನು ನುಡಿದರೋ ಅದನ್ನೇ ನಡೆದು ತೋರಿಸಿದರು. ಈ ವಿಚಾರದಲ್ಲಿ ಕಿಂಚಿತ್ತೂ ವ್ಯತ್ಯಾಸವಾದರೆ ಅದು ಧರ್ಮ ಎನಿಸಿಕೊಳ್ಳುವುದಿಲ್ಲ.
‘ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎನ್ನುವ ತತ್ವದಡಿ ನಾವು ಬದುಕಬೇಕು. ಈ ನೆಲದ ಎಲ್ಲರೂ ನಮ್ಮವರೇ ಎಂಬ ಭಾವನೆ ಮೂಡಬೇಕು.
ಧರ್ಮದ ನಿಜವಾದ ಅರ್ಥ: ಧರ್ಮವು ಯಾವುದನ್ನೂ ಧ್ವಂಸ ಮಾಡುವುದಿಲ್ಲ, ಬದಲಾಗಿ ಸೃಷ್ಟಿಸುತ್ತದೆ. ನಮ್ಮ ಕೈಗೆ ಸಿಕ್ಕ ಸಮಾಜವನ್ನು ಕೆಡದಂತೆ ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಉತ್ತಮವಾಗಿ ಹಸ್ತಾಂತರಿಸುವುದೇ ನಿಜವಾದ ಧರ್ಮ ಎಂದರು.
ಪ್ರಾಸ್ತಾವಿಕವಾಗಿ ಮಾತಮಾಡಿದ ಅಶೋಕ ಮಳಗಲಿ, “ಕಾಯಕವೇ ಕೈಲಾಸ ಎಂಬ ತತ್ವದಡಿ ದುಡಿದುಣ್ಣುವ ಸಂಸ್ಕಾರ ನೀಡಿದ ಬಸವಣ್ಣನವರ ವಿಚಾರಧಾರೆಗಳು ಕೇವಲ ಒಂದು ಜಾತಿಗೆ ಸೀಮಿತವಲ್ಲ, ಅವು ಇಡೀ ಜಗತ್ತಿಗೆ ಬೆಳಕಾಗುವ ದಿವ್ಯ ಶಕ್ತಿಯಾಗಿವೆ,” ಬಸವಣ್ಣನವರ ವಿಚಾರಧಾರೆಗಳನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು.
“ನಾವು ಸೇವಿಸುವ ಪ್ರತಿಯೊಂದು ತುತ್ತಿನ ಹಿಂದೆ ನಮ್ಮ ಪ್ರಾಮಾಣಿಕ ಕಾಯಕವಿರಬೇಕು. ಯಾರನ್ನೂ ವಂಚಿಸದೆ, ಕಷ್ಟಪಟ್ಟು ಸಂಪಾದಿಸಿದ ಅನ್ನವನ್ನು ಉಣ್ಣುವಾಗ ನಮ್ಮ ಆತ್ಮಸಾಕ್ಷಿ ನಮಗೆ ಉತ್ತರ ನೀಡುವಂತಿರಬೇಕು. ಅಂತಹ ನೈತಿಕತೆಯನ್ನು ಶರಣರ ತತ್ವಗಳು ನಮಗೆ ಕಲಿಸಿಕೊಟ್ಟಿದೆ.
ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್.ಎಂ. ಸುರೇಶ ಅವರು ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಗಡಿ ದಾಟಿ, ಬೇರೆ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ಕನ್ನಡ ಮತ್ತು ಬಸವ ತತ್ವದ ಬಗ್ಗೆ ಅರಿವಿಲ್ಲದ ಜನರಿಗೂ ಬಸವಣ್ಣನವರ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ವಿಷಯ.
ಸಮುದ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುವಂತೆ, ಬಸವಣ್ಣನವರ ತತ್ವ ಸಿದ್ಧಾಂತಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸನ್ನು ತಟ್ಟಬೇಕು. ಅನ್ಯ ಭಾಷಿಕರಿಗೂ ವಚನ ಸಾಹಿತ್ಯದ ಸಾರವನ್ನು ತಿಳಿಸುವ ಮೂಲಕ ಪ್ರತಿಷ್ಠಾನವು ಒಂದು ಸಾಂಸ್ಕೃತಿಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಾರ್ಥಿಸಿದರು
ರಾಮಚಂದ್ರ ಹಡಪ, ಶೋಭಾ ಶಿವಳ್ಳಿ ವಚನದ ಮೂಲಕ ಪ್ರಾರ್ಥಿಸಿದರು. ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಸುರೇಶ್ ಸ್ವಾಗತಿಸಿದರೆ, ತೇಜಸ್ವಿನಿ ನಿರೂಪಿಸಿದರು. ಸ್ಪರ್ಷ ವಚನ ವಂದನೆ ಮಾಡಿದರು.
