ಹೊಸಪೇಟೆ :
ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ತಾರತಮ್ಯ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಆದರೆ ಇಂದಿಗೂ ಜಾತಿಯ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದು ಅತ್ಯಂತ ವಿಷಾದಕರ ಎಂದರು.
ಸ್ಥಳೀಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಬಸವಲಿಂಗ ಸ್ವಾಮೀಜಿ ಅವರು ಇತ್ತೀಚಿಗೆ 893ನೇ ಬಸವ ಜಯಂತಿ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.

ದಲಿತರನ್ನು ಮುಟ್ಟುವ ಧೈರ್ಯ ಬಸವಣ್ಣನವರಿಗೇ ಇತ್ತು ಎಂದು ವಚನಕಾರ ನಾಗಿದೇವರು ಹೇಳಿದ್ದಾರೆ ಎಂದು ಉಲ್ಲೇಖಿಸಿ, ಆ ಕಾಲದಲ್ಲೇ ಬಸವಣ್ಣನವರು ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದರು. ಇಂತಹ ಮಹಾನ್ ನಾಯಕನ ಆದರ್ಶಗಳು ಸಮಾಜಕ್ಕೆ ಪ್ರೇರಣೆಯಾಗಬೇಕಿತ್ತು, ಆದರೆ ಇನ್ನೂ ಜಾತಿ ಹೆಸರಿನ ತಾರತಮ್ಯ ನಡೆಯುತ್ತಿರುವುದು ಸರಿಯಲ್ಲ ಎಂದರು.
ಬಸವಣ್ಣನವರು ಕೇವಲ ವೀರಶೈವ-ಲಿಂಗಾಯತ ಸಮುದಾಯದ ನಾಯಕರಲ್ಲ, ಅವರು ಇಡೀ ಮನುಕುಲಕ್ಕೆ ಸೇರಿದ ಮಹಾನ್ ಚಿಂತಕರು ಎಂದು ಹೇಳಿದರು. ಜೊತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರೂ ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಕವಿತಾ ಎಸ್. ಮನ್ನಿಕೇರಿ ಅವರು, “ಕಾಯಕವೇ ಕೈಲಾಸ”ಎಂಬ ಸಂದೇಶವನ್ನು ಬಸವಣ್ಣನವರು ಸಮಾಜಕ್ಕೆ ನೀಡಿದ್ದಾರೆ. ಜನರು ಅದನ್ನು ಅರ್ಥಮಾಡಿಕೊಂಡು ತಮ್ಮ ಜೀವನ ಮತ್ತು ಸಮಾಜವನ್ನು ಸುಧಾರಿಸಬೇಕು ಎಂದರು.
ಇದೇ ವೇಳೆ ಬೆಳಿಗ್ಗೆ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.

ಕೊಟ್ಟೂರಿನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಉದ್ಯಮಿ ಅಂಗಡಿ ಪಂಪಾಪತಿ ಅವರು, ಬಸವಣ್ಣನವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್. ಜಾಹ್ನವಿ, ಇ. ಬಾಲಕೃಷ್ಣಪ್ಪ, ಜಿ. ಮಂಜುನಾಥ್, ಉಪ ವಿಭಾಗಧಿಕಾರಿ ಪಿ. ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ. ಮಳ್ಳಪ್ಪಗೌಡ, ಎಚ್.ಎನ್.ಎಫ್. ಮೊಹಮ್ಮದ್ ಇಮಾಮ್ ನಿಯಾಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದೇ ವೇಳೆ ಮುಖಂಡರಾದ ಕೆ.ಬಿ. ಶ್ರೀನಿವಾಸ ರೆಡ್ಡಿ, ಗೊಗ್ಗ ಚನ್ನಬಸವರಾಜ, ಅಯ್ಯಾಳಿ ತಿಮ್ಮಪ್ಪ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
