ಬೆಂಗಳೂರು :
ಬಸವಕಲ್ಯಾಣದಲ್ಲಿ 770 ಅಮರಗಣಂಗಳ ಆಧಾರಸ್ತಂಭದ ಮೇಲೆ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪದಲ್ಲಿ ವೈಜ್ಞಾನಿಕ ತಳಹದಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಕಲ್ಪನೆಯನ್ನೂ ಅಳವಡಿಸಲಾಗಿದೆ, ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಶುಕ್ರವಾರ ಮಹಾನಗರದ ಪುರಭವನ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ರಾಷ್ಟ್ರೀಯ ಮಹಿಳಾ ಘಟಕ ಮತ್ತು ಯುವ ಘಟಕದ ಪದಾಧಿಕಾರಿಗಳ ಸೇವಾ ದೀಕ್ಷಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಅನುಭವ ಮಂಟಪದಲ್ಲಿ ಶರಣ ಗ್ರಾಮ ನಿರ್ಮಾಣ ಮಾಡುತ್ತಿದ್ದು, ಶರಣರು ಮಾಡುತ್ತಿದ್ದ ಕಾಯಕಕ್ಕೆ ಆಧುನಿಕ ಸ್ಪರ್ಶ ನೀಡಿ, ಆಧುನಿಕ ಸಲಕರಣೆ ಬಳಸಿ ಆ ವೃತ್ತಿ ಮಾಡುವುದು ಹೇಗೆ ಎಂಬ ಕಾರ್ಯಾಗಾರ ನಡೆಸಲು ಸಿದ್ಧತೆ ನಡೆದಿದೆ. ಮುಂದಿನ ಬಸವ ಜಯಂತಿ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ, ಆಧುನಿಕ ಅನುಭವ ಮಂಟಪ ಲೋಕಾರ್ಪಣೆ ಮಾಡಲಾಗುವುದು ಎಂದರು.

ಅಣುಶಕ್ತಿಗಿಂತಲೂ ಮಿಗಿಲಾದದ್ದು ಯುವಶಕ್ತಿ, ಅವರು ಮನಸ್ಸು ಮಾಡಿದರೆ ನವಸಮಾಜದ ನಿರ್ಮಾಣ ಮಾಡಬಹುದು. ಹೀಗಾಗಿ ಯುವಜನರು ದುಶ್ಚಟ, ದುರ್ಗುಣಗಳಿಂದ ಮುಕ್ತಗೊಂಡು, ಆ ಅದ್ಭುತ ಶಕ್ತಿಯನ್ನು ಸುಂದರ ಸಮಾಜದ ನಿರ್ಮಾಣಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಇಂದು ಯುವಜನರು ರೀಲ್ಸ್ಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಮದ್ಯ, ಧೂಮಪಾನ, ಮಾದಕದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ಇವರನ್ನು ಸರಿದಾರಿಗೆ ತರುವ ಕಾರ್ಯವನ್ನು ಮಹಾಸಭಾದ ಯುವಘಟಕ ಮತ್ತು ಮಹಿಳಾ ಘಟಕಗಳು ಮಾಡಲಿ ಎಂದರು.
ಬಸವಾದಿ ಶರಣರ ಕ್ರಾಂತಿಯ ಸಮಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿತ್ತು. ಅಕ್ಕಮಹಾದೇವಿ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ನೀಲಾಂಬಿಕೆ ಮೂದಲಾದ 33 ಶರಣೆಯರು ಅನುಭವ ಮಂಟಪದಲ್ಲಿ ಸಮಾನವಾಗಿ ಚರ್ಚಿಸುತ್ತಿದ್ದರು. ಇಂದು ನಮ್ಮ ಮಹಾಸಭಾದ ಮಹಿಳಾ ಘಟಕವು ಕೇವಲ ಒಂದು ಸಂಘಟನೆಯಲ್ಲ, ಅದು ನಮ್ಮ ಸಮಾಜದ ಸಂಸ್ಕಾರದ ತಳಹದಿ ಆಗಬೇಕು ಎಂದೂ ಅವರು ಉಲ್ಲೇಖಿಸಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಮಾತನಾಡಿ, ಲಿಂಗೈಕ್ಯ ಭೀಮಣ್ಣ ಖಂಡ್ರೆ ಅವರು ಅಧ್ಯಕ್ಷರಾಗಿದ್ದಾಗ, ವಿಧಾನಸಭೆ ಚುನಾವಣೆ ಹತ್ತಿರದಲ್ಲಿತ್ತು. ಆಗ ಅವರು ಬೀದರ, ಧಾರವಾಡ, ಗದಗ, ಬೆಳಗಾವಿ, ತುಮಕೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ಪಕ್ಷಾತೀತವಾಗಿ ಸಮಾಜವನ್ನು ಒಗ್ಗೂಡಿಸಿದರು. ಆಗ ನಡೆದ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಶಾಸಕರು ದೊಡ್ಡ ಸಂಖ್ಯೆಯಲ್ಲಿ ಗೆದ್ದು ಬಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೂತನ ಘಟಕದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಸಚಿವರಾದ ಶರಣಪ್ರಕಾಶ ಪಾಟೀಲ, ಶರಣಬಸಪ್ಪ ದರ್ಶನಾಪೂರ, ಮಾಜಿ ಸಚಿವೆ ರಾಣಿ ಸತೀಶ, ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ, ಯುವ ಘಟಕದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ, ವಿಜಯಾನಂದ ಕಾಶಪ್ಪನವರ ಮತ್ತಿತರರಿದ್ದರು.
ಮಹಿಳಾ ಮತ್ತು ಯುವ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
