ಡಲ್ಲಾಸ್ (ಅಮೇರಿಕ)
ಗದುಗಿನ ಬಿ.ವಿ. ಕಾಮಣ್ಣವರ ಪುತ್ರಿ ಸುವರ್ಣ ಕಾಮಣ್ಣವರ ದಂಪತಿಗಳ ಹೊಸ ಮನೆಯ ಗುರುಪ್ರವೇಶ ಬಸವ ಜಯಂತಿ ಅಂಗವಾಗಿ, ಅಮೆರಿಕದ ಟೆಕ್ಸಾಸ್ ರಾಜ್ಯದ ಸೌತ್ ಲೇಕ್ ನಲ್ಲಿ ನೆರವೇರಿತು.

ಬಸವ ತತ್ವದಂತೆ ನಡೆದ ಗುರುಪ್ರವೇಶವನ್ನು ‘ಓಂ ಶ್ರೀ ಗುರು ಬಸವ ಲಿಂಗಾಯ ನಮಃ’ ಮಂತ್ರದೊಂದಿಗೆ ಅಮೆರಿಕದ ಬಸವ ಡಿವೈನ್ ಸೆಂಟರ್ ನ ರೂಪಕ ಮಹಾಲಿಂಗಯ್ಯ ಅವರು ನೆರವೇರಿಸಿದರು. ನಂತರ ಗುರುಬಸವ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ ಸುಮಾರು 100ಕ್ಕೂ ಹೆಚ್ಚು ಬಸವ ಭಕ್ತರು ಭಾಗವಹಿಸಿ, ಗುರುಪ್ರವೇಶದ ಜೊತೆ ಬಸವ ಜಯಂತಿಯನ್ನೂ ಆಚರಿಸಿದರು.

ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ಗುರು ಬಸವಣ್ಣನವರ ಭಾವಚಿತ್ರ, ವಿಭೂತಿ, ರುದ್ರಾಕ್ಷಿ, ವಚನ ಪುಸ್ತಕ ಉಡುಗೊರೆಯಾಗಿ ನೀಡಲಾಯಿತು.

ಮಾತಾಜಿಯವರು ರಚಿಸಿದ ‘ ಓಂ ಗುರು ಬಸವ ಪ್ರಭು’ಗೀತೆ ಮತ್ತು ವಚನ ಪಠಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ಗದುಗಿನಿಂದ ವಿಶೇಷ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳನ್ನು ತರಿಸಿ ಪ್ರಸಾದ ದಾಸೋಹ ಮಾಡಲಾಗಿತ್ತು.

ಅಮೆರಿಕದ ಟೆಕ್ಸಸ್ ರಾಜ್ಯದ ಡಲ್ಲಾಸ್ ನ ಹಿಂದೂ ಮಂದಿರದಲ್ಲಿ ವಿಶೇಷವಾಗಿ ಬಸವ ಜಯಂತಿ ಆಚರಿಸಲಾಯಿತು. ರೂಪಕ ಮಹಾಲಿಂಗಯ್ಯ ಅವರು ಗುರುಬಸವ ಪೂಜೆ ನೆರವೇರಿಸಿಕೊಟ್ಟರು. ನೂರಾರು ಬಸವ ಭಕ್ತರು ಭಾಗಿಯಾಗಿದ್ದು ವಿಶೇಷವಾಗಿತ್ತು.

