ಮಠದದಲ್ಲಷ್ಟೇ ಅಲ್ಲ, ಹೊಲದಲ್ಲೂ ದುಡಿಯುವ ಅಪರೂಪದ ಸ್ವಾಮೀಜಿ

ಶಿವಾನಂದ ತಗಡೂರು
ಶಿವಾನಂದ ತಗಡೂರು

ಪೂಜ್ಯ ಬಸವಲಿಂಗ ಸ್ವಾಮೀಜಿ ಅವರ ಹೃದಯದಲ್ಲಿ ಬಸವತತ್ವದ ಬೆಳಕು, ಕೈಯಲ್ಲಿ ಕಾಯಕದ ಗುರುತು

ಬೆಂಗಳೂರು

ಚಿತ್ರದುರ್ಗ ಜಿಲ್ಲೆಯ ಆಂಧ್ರ ಗಡಿ ಭಾಗದಲ್ಲಿರುವ ಮೊಳಕಾಲ್ಮೂರು ತಾಲೂಕಿಗೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ತಾಲೂಕು ಪತ್ರಕರ್ತರ ಭವನದ ಉದ್ಘಾಟನೆಗೆ ಬರಲೇಬೇಕು ಎಂದು ಅಲ್ಲಿನ ಪತ್ರಕರ್ತರು ಪದೇಪದೇ ಪ್ರೀತಿಯಿಂದ ಒತ್ತಾಯಿಸುತ್ತಿದ್ದರು. ಅವರ ಪ್ರೀತಿಯ ಆಹ್ವಾನಕ್ಕೆ ಒಪ್ಪಿ ಮೊಳಕಾಲ್ಮೂರಿಗೆ ತೆರಳಿದ್ದೆ. ಪತ್ರಕರ್ತರ ಸಂಘದವರು ಶ್ರಮಪಟ್ಟು ನಿರ್ಮಿಸಿದ್ದ ಸುಸಜ್ಜಿತ ಭವನವನ್ನು ಉದ್ಘಾಟಿಸಿದ ಸಂತೋಷವೂ ನನ್ನದಾಯಿತು.

ಆದರೆ, ಆ ಭೇಟಿಯಲ್ಲಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದು ಕೇವಲ ಭವನದ ಉದ್ಘಾಟನೆಯಲ್ಲ. ಅಲ್ಲಿ ಭೇಟಿಯಾದ ಒಬ್ಬ ಅಪರೂಪದ ಸ್ವಾಮೀಜಿಯ ಬದುಕು!

ಅವರೇ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾಮಠದ ಬಸವಲಿಂಗ ಸ್ವಾಮೀಜಿ.

ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲೇ ಸ್ವಾಮೀಜಿ ವೇದಿಕೆಗೆ ಬಂದಿದ್ದರು. ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಿಯೇ ಇದ್ದರು. ನಂತರ ತಾವೇ ಕಾರು ಚಾಲನೆ ಮಾಡಿಕೊಂಡು ಹೊರಟರು. ಅವರ ಸರಳತೆ, ಸಹಜ ನಡವಳಿಕೆ ಮತ್ತು ಸ್ವಾವಲಂಬನೆಯ ಬದುಕು ನನ್ನ ಗಮನ ಸೆಳೆದಿತ್ತು.

ಆದರೆ, ವೇದಿಕೆಯಲ್ಲಿ ಅವರ ಕೈಗಳನ್ನು ನೋಡಿದಾಗ ಅಚ್ಚರಿಯಾಯಿತು.

ಸಾಮಾನ್ಯವಾಗಿ ಸ್ವಾಮೀಜಿಗಳ ಕೈಗಳು ನುಣುಪಾಗಿರುತ್ತವೆ ಎಂಬ ಕಲ್ಪನೆ ನಮ್ಮಲ್ಲಿರುತ್ತದೆ. ಆದರೆ ಬಸವಲಿಂಗ ಸ್ವಾಮೀಜಿಯವರ ಕೈಗಳು ಮಾತ್ರ ಕಾಯಕದ ಕಥೆ ಹೇಳುತ್ತಿದ್ದವು. ಶ್ರಮದ ಗುರುತುಗಳು ಅವುಗಳಲ್ಲಿ ಎದ್ದು ಕಾಣುತ್ತಿದ್ದವು.

ಕುತೂಹಲ ತಡೆಯಲಾಗದೆ, “ಸ್ವಾಮೀಜಿ, ನಿಮ್ಮ ಕೈಗಳು ಇಷ್ಟೊಂದು ಒರಟಾಗಿವೆಯಲ್ಲಾ… ಏಕೆ?” ಎಂದು ಕೇಳಿದೆ.

ನಾನು ಕೇಳಿದ ಆ ಒಂದು ಪ್ರಶ್ನೆಗೆ ಉತ್ತರಿಸುತ್ತಾ ಹೋದಂತೆ, ಅವರ ಬದುಕಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳತೊಡಗಿದವು. ಆಗ ಅರಿವಾಗಿದ್ದು, ಆ ಕೈಗಳ ಒರಟುತನ ಕೇವಲ ದೈಹಿಕ ಶ್ರಮದ ಗುರುತಲ್ಲ; ಅದು ಅವರು ನಂಬಿದ ತತ್ವದ ಪ್ರತಿಬಿಂಬವೂ ಹೌದು ಎಂಬುದು.

ಈ ಬಸವಲಿಂಗ ಸ್ವಾಮೀಜಿ ಎಲ್ಲರಂತಲ್ಲ

ಬೆಳಿಗ್ಗೆ ಎದ್ದು ಹಸುಗಳ ಹಾಲು ಕರೆಯುತ್ತಾರೆ. ಅಡುಗೆ ಮಾಡುತ್ತಾರೆ. ಮಠಕ್ಕೆ ಬರುವ ಭಕ್ತರಿಗೆ ತಾವೇ ಊಟ ಬಡಿಸುತ್ತಾರೆ. ಹೊಲದಲ್ಲಿ ದುಡಿಯುತ್ತಾರೆ. ಕೃಷಿ ಕೆಲಸಗಳ ಬಗ್ಗೆ ಅವರಿಗೆ ಗೊತ್ತಿಲ್ಲದ ಸಂಗತಿಗಳೇ ಇಲ್ಲ ಎನ್ನಬಹುದು. ಅಪ್ಪಟ ರೈತನಂತೆ ದುಡಿಯುತ್ತಲೇ ಮಠವನ್ನು ಕಟ್ಟಿದ್ದಾರೆ, ಬೆಳೆಸಿದ್ದಾರೆ.

ಮಠ ಎಂದರೆ ಕೇವಲ ಧಾರ್ಮಿಕ ವಿಧಿವಿಧಾನಗಳು ನಡೆಯುವ ಜಾಗವಲ್ಲ; ಅದು ದುಡಿಮೆಯ ಘನತೆಯನ್ನು ಸಾರುವ ನೆಲವೂ ಆಗಬಹುದು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ.

ಅವರ ಬದುಕಿನ ಒಂದು ಪ್ರಸಂಗವಂತೂ ನನ್ನ ಮನಸ್ಸಿನಲ್ಲಿ ಗಾಢವಾಗಿ ಉಳಿಯಿತು.

ಕೆಲವೊಮ್ಮೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯಾರಾದರೂ ಬಂದು, “ಸ್ವಾಮೀಜಿ ಎಲ್ಲಿದ್ದಾರೆ?” ಎಂದು ಕೇಳುತ್ತಾರಂತೆ. ಆಗ ಅವರು, “ಮಠದ ಆವರಣದಲ್ಲಿ ಕುಳಿತುಕೊಳ್ಳಿ”ಎಂದು ಹೇಳಿ, ಒಳಗೆ ಹೋಗಿ ಖಾವಿ ಧರಿಸಿಕೊಂಡು ಹೊರಬರುತ್ತಾರೆ. ಆಗಲೇ ಬಂದವರಿಗೆ ಗೊತ್ತಾಗುವುದು, ಹೊಲದಲ್ಲಿ ದುಡಿಯುತ್ತಿದ್ದ ವ್ಯಕ್ತಿಯೇ ಮಠದ ಸ್ವಾಮೀಜಿ ಎಂಬುದು!

ಎಂಥ ಅದ್ಭುತವಾದ ಸರಳತೆ ಇದು!

ಹೊಲದಲ್ಲಿದ್ದಾಗ ರೈತ, ಮಠದಲ್ಲಿದ್ದಾಗ ಸ್ವಾಮೀಜಿ. ಕೆಲಸ ಮಾಡುವಾಗ ಕಾಯಕಯೋಗಿ, ಭಕ್ತರ ನಡುವೆ ಇದ್ದಾಗ ಧರ್ಮದ ಮಾರ್ಗದರ್ಶಕ. ವೇಷಕ್ಕಿಂತ ವ್ಯಕ್ತಿತ್ವ ದೊಡ್ಡದು, ಅಧಿಕಾರಕ್ಕಿಂತ ಕಾಯಕ ದೊಡ್ಡದು ಎಂಬ ಸಂದೇಶವನ್ನು ಅವರು ಮಾತಿನಲ್ಲಿ ಹೇಳುವುದಕ್ಕಿಂತ ತಮ್ಮ ಬದುಕಿನಲ್ಲಿಯೇ ತೋರಿಸಿಕೊಡುತ್ತಿದ್ದಾರೆ.

ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವಕ್ಕೆ ಇದಕ್ಕಿಂತ ಜೀವಂತ ಉದಾಹರಣೆ ಬೇಕೇ?

ಬಸವಲಿಂಗ ಸ್ವಾಮೀಜಿಯವರ ಬದುಕಿನ ಹಿನ್ನೆಲೆಯೂ ಅಷ್ಟೇ ಅರ್ಥಪೂರ್ಣವಾಗಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಾಲು ಗ್ರಾಮದ ದಲಿತ ಯುವಕನಾಗಿದ್ದ ಅವರಿಗೆ ಲಿಂಗದೀಕ್ಷೆ ನೀಡಿದವರು ಇಳಕಲ್‌ನ ಲಿಂಗೈಕ್ಯ ಡಾ. ಮಹಾಂತ ಸ್ವಾಮೀಜಿ. ಬಳಿಕ ಅವರನ್ನು ಸಿದ್ದಯ್ಯನಕೋಟೆ ಶಾಖಾ ಮಠಕ್ಕೆ ಕಳುಹಿಸಲಾಯಿತು. 1994ರಿಂದ ಮೊಳಕಾಲ್ಮೂರು ಭಾಗದಲ್ಲಿ ಮಠವನ್ನು ಶ್ರಮದ ನೆಲೆಯನ್ನಾಗಿಸಿಕೊಂಡು, ಹಂತಹಂತವಾಗಿ ಅದರ ವಿಸ್ತರಣೆ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಇಂದು ಆ ಮಠ ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿದಿಲ್ಲ. ಶಾಲಾ ಮಕ್ಕಳಿಗೂ ಆಶ್ರಯ ನೀಡುತ್ತಿದೆ. ಒಂದೊಂದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಗಡಿ ಭಾಗದ ಜನರ ಬದುಕಿನಲ್ಲಿ ಭರವಸೆಯ ಬೆಳಕಾಗುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ.

ಪ್ರತಿ ವರ್ಷ ಗಡಿ ಭಾಗದ ಉತ್ಸವವನ್ನು ಮಠದಲ್ಲಿಯೇ ಆಯೋಜಿಸುತ್ತಾರೆ. ಹಳ್ಳಿಹಳ್ಳಿಗಳಿಗೆ ಜೋಳಿಗೆ ಹಾಕಿಕೊಂಡು ಹೋಗಿ ಜನರಲ್ಲಿರುವ ದುಶ್ಚಟಗಳನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿ ಆರೋಗ್ಯಕರ ಬದಲಾವಣೆ ತರಬೇಕು, ಜನರು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಕಾಳಜಿಯಿಂದ ಹತ್ತಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ದೊಡ್ಡದೊಡ್ಡ ಮಾತುಗಳನ್ನಾಡುವವರ ನಡುವೆ, ಧರ್ಮದ ನಿಜವಾದ ಅರ್ಥವನ್ನು ತಮ್ಮ ಕಾಯಕದ ಮೂಲಕ ತೋರಿಸಿಕೊಡುವ ಇಂಥವರು ನಿಜಕ್ಕೂ ಅಪರೂಪ.

ಬಸವತತ್ವ ಎಂದರೆ ಕೇವಲ ಭಾಷಣಗಳಲ್ಲಿ ಬಸವಣ್ಣನವರನ್ನು ಸ್ಮರಿಸುವುದಲ್ಲ. ಜಾತಿ, ಮೇಲು-ಕೀಳು ಎಂಬ ಭೇದಗಳನ್ನು ಮೀರಿದ ಮಾನವೀಯತೆ, ದುಡಿಮೆಯ ಗೌರವ, ಸರಳ ಜೀವನ ಮತ್ತು ಸಮಾಜದ ಬಗೆಗಿನ ಕಾಳಜಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಬಸವಲಿಂಗ ಸ್ವಾಮೀಜಿಯವರ ಬದುಕಿನಲ್ಲಿ ಈ ಮೌಲ್ಯಗಳೆಲ್ಲವೂ ಸಹಜವಾಗಿ ಬೆರೆತುಹೋಗಿವೆ.

ಇತ್ತೀಚೆಗೆ ಚಿತ್ರದುರ್ಗದ ಪತ್ರಕರ್ತ ಸ್ನೇಹಿತರೊಂದಿಗೆ ಅವರ ಮಠಕ್ಕೆ ಭೇಟಿ ನೀಡಿದಾಗ, ಅವರ ಬದುಕಿನ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಅವರ ಸರಳ ಬದುಕು, ಅವಿರತ ಶ್ರಮ ಮತ್ತು ಸಮಾಜದ ಬಗೆಗಿನ ಕಾಳಜಿ ನನ್ನನ್ನು ಇನ್ನಷ್ಟು ಆಳವಾಗಿ ತಟ್ಟಿದವು.

ಅಲ್ಲಿಂದ ಮರಳುವಾಗ ಮನಸ್ಸಿನಲ್ಲಿ ಒಂದು ಭಾವ ಮೂಡಿತ್ತು. ಸಮಾಜಕ್ಕೆ ಇಂಥವರ ಅಗತ್ಯವಿದೆ. ಧರ್ಮವನ್ನು ಕಾಯಕದೊಂದಿಗೆ ಬೆಸೆಯುವ, ಭಕ್ತಿಯನ್ನು ಮಾನವೀಯತೆಯೊಂದಿಗೆ ಜೋಡಿಸುವ, ಮಠವನ್ನು ಸಮಾಜದ ಅಭಿವೃದ್ಧಿಯ ಕೇಂದ್ರವನ್ನಾಗಿಸುವ ಬಸವಲಿಂಗ ಸ್ವಾಮೀಜಿಯವರಂಥವರ ಸಂಖ್ಯೆ ಹೆಚ್ಚಾಗಬೇಕು.

ಸ್ವಾಮೀಜಿಯವರ ಕೈಗಳನ್ನು ನೋಡಿದಾಗ ಮೊದಲು ಅಚ್ಚರಿಯಾಗಿತ್ತು. ಆದರೆ ಅವರ ಬದುಕನ್ನು ಅರಿತ ಮೇಲೆ ಆ ಕೈಗಳ ಬಗ್ಗೆ ಅಪಾರ ಗೌರವ ಮೂಡಿತು.

ಆ ಕೈಗಳು ಕೇವಲ ದುಡಿಮೆಯ ಕೈಗಳಲ್ಲ; ಅವು ಸೇವೆಯ ಕೈಗಳು. ಆ ಒರಟುತನ ಕೇವಲ ಶ್ರಮದ ಗುರುತಲ್ಲ; ಅದು ಸಮಾಜದ ಮೇಲಿನ ಕಾಳಜಿಯ ಸಂಕೇತ.

ಖಾವಿಯ ಘನತೆ ಅದರ ಬಣ್ಣದಲ್ಲಿಲ್ಲ, ಅದನ್ನು ಧರಿಸಿದವರ ಬದುಕಿನಲ್ಲಿದೆ. ಮಠದ ಹಿರಿಮೆ ಅದರ ಕಟ್ಟಡದಲ್ಲಿಲ್ಲ, ಅಲ್ಲಿಂದ ಸಮಾಜಕ್ಕೆ ಹರಿಯುವ ಬೆಳಕಿನಲ್ಲಿದೆ.

ಮೊಳಕಾಲ್ಮೂರಿನ ಬಸವಲಿಂಗ ಸ್ವಾಮೀಜಿಯವರ ಬದುಕು ನನಗೆ ಮತ್ತೆ ನೆನಪಿಸಿದ್ದು ಇದೇ ಸತ್ಯವನ್ನು.

ಕಾಯಕದಲ್ಲಿ ಕೈಲಾಸವನ್ನು ಕಾಣುವ, ಸೇವೆಯಲ್ಲಿ ಶಿವನನ್ನು ಕಾಣುವ ಇಂಥ ಅಪರೂಪದ ಜೀವಗಳು ನಮ್ಮ ಸಮಾಜದ ನಿಜವಾದ ಆಸ್ತಿ.

ಅವರ ಕಾಯಕಕ್ಕೆ ನನ್ನದೊಂದು ಹೃದಯಪೂರ್ವಕ ನಮನ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *

ರಾಜ್ಯಾಧ್ಯಕ್ಷ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು