‘ಕರ್ನಾಟಕ ತಮಿಳುನಾಡಿಗೆ ಬಸವ ತತ್ವದ ಸೇತುವೆಯಾಗಿದ್ದ ಬಸವರಾಜ ಸ್ವಾಮೀಜಿ’

ಬಿ. ಚನ್ನಪ್ಪ
ಬಿ. ಚನ್ನಪ್ಪ

ಊಟಿ

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೇತಿಪಾಲಾಡ ಗ್ರಾಮದಲ್ಲಿ ಬಸವ ಜಯಂತಿ ಹಾಗೂ ಪಾಲಾಡಿನ ಶ್ರೀ ಬಸವರಾಜ ಮಹಾಸ್ವಾಮಿಗಳ ಜಯಂತೋತ್ಸವ ಎಪ್ರೀಲ್ 26 ನಡೆಯಿತು.

ಬಸವ ಭಕ್ತರಾದ ರಾಮದಾಸ್ ಅವರಿಂದ ಭಕ್ತಿಯ ವಚನ ಭಜನೆ, ನರ್ತನ ನಡೆಯಿತು. ಇವರ ಭಜನೆ ರೂಪಕ ರಾಷ್ಟ್ರಾದ್ಯಂತ ಇರುವ ಬಸವ ಭಕ್ತರ ಮನೆ ಮಾತಾಗಿದೆ.

ನಂತರ ಮಾತನಾಡಿ ಅವರು ಚಾಮರಾಜನಗರ ಮಠದ ಲಿಂಗೈಕ್ಯ ಬಸವರಾಜ ಮಹಾಸ್ವಾಮಿಗಳು ಬಸವ ಭಕ್ತಿಯ ಪ್ರತೀಕವಾಗಿದ್ದರು. ಆಂಧ್ರಪ್ರದೇಶ, ಚಿತ್ರದುರ್ಗ, ಚಾಮರಾಜನಗರ, ಮೈಸೂರು ಭಾಗಗಳಲ್ಲೂ ಪ್ರಭಾವ ಹೊಂದಿರುವುದಲ್ಲದೆ ಕೊನೆಗೆ ತಮಿಳುನಾಡಿನ ಪಾಲಡವನ್ನು ತಮ್ಮ ನಿಜನೆಲೆಯನ್ನ ಮಾಡಿಕೊಂಡಿರುವುದು ಒಂದು ಪವಾಡವೇ ಸರಿ. ಈ ಭಾಗದಲ್ಲಿ ಪ್ರತಿ ಮನೆಯಲ್ಲೂ ಬಸವತತ್ವ, ಬಸವ ಭಕ್ತಿ ಬೆಳೆಯಲು ಬಸವರಾಜ ಮಹಾಸ್ವಾಮಿಗಳೇ ಕಾರಣವೆಂದು ಹೇಳಿದರು.

ಪ್ರತಿಯೊಬ್ಬರೂ ಇಷ್ಟಲಿಂಗ ಧಾರಣೆ, ವಿಭೂತಿ ಧರಿಸಬೇಕೆಂದು ಹಾಗೂ ಈ ಭಾಗದ ಬಸವಭಕ್ತರು ತಮ್ಮ ಮಕ್ಕಳಿಗೆ ವಚನ ಭಜನೆಯನ್ನು ಕಲಿಸಬೇಕೆಂದರು.

ಮರೆಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತಾನಾಡಿ, ಶರಣತತ್ವವು ದೇಹವನ್ನೆ ದೇವಾಲಯ ಮಾಡಿಕೊಳ್ಳುವ ತತ್ವವಾಗಿದೆ. ಇದು ಸರಳವಾದ ಆನಂದದ ತತ್ವ ಚಿಂತನೆಯಾಗಿರುವ ಕಾರಣ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು. ನಿಜ ಶರಣರಾಗಿ ಬದುಕಿದ ಬಸವರಾಜ ಮಹಾಸ್ವಾಮಿಗಳು ಕರ್ನಾಟಕ ತಮಿಳುನಾಡಿನಲ್ಲಿ ಬಸವ ತತ್ವ ಬೆಳೆಯಲು ಸೇತುವೆಯಾಗಿಸಿದ್ದಾರೆ ಎಂದರು.

ಮೂಡುಗೂರು ಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಬಸವಣ್ಣನವರು ಕಲಿಸಿದ ಗುರು ಲಿಂಗ ಜಂಗಮ ಸೇವೆಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದರು.

ಕರ್ನಾಟಕದ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದ ಹಳ್ಳದ ಮಠದ ಶ್ರೀಗಳು ಆಶೀರ್ವಚನ ನೀಡಿದರು. ರಾವಂದೂರು ಮೋಕ್ಷಪತಿ ಸ್ವಾಮೀಜಿ ಅವರು ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಶ್ರೀಗಳು ಮತ್ತು ಕೊಯಂಬತ್ತೂರು ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಠದ ಕಾರ್ಯದರ್ಶಿ ರಮೇಶ್ ಬಾಬು ಅವರಿಂದ ಭಕ್ತಿ ಪೂರ್ವಕ ಸ್ವಾಗತ ನಡೆಯಿತು. ಈ ಮಠದ ಅದ್ಯಕ್ಷ ಬಸವರಾಜು, ಕೋಶಾಧ್ಯಕ್ಷ ಚಂದ್ರಣ್ಣ, ಹಿರಿಯ ಭಕ್ತರಾದ ಉದಯಕುಮಾರ, ರಾಮದಾಸ, ಲೋಗು, ಶರವಣ, ಕಲ್ಯಾಣಮೂರ್ತಿ, ನವನೀತ, ರಂಜಿತ, ಇವರುಗಳ ಸಹಕಾರ ಈ ಮಠಕ್ಕೆ ಅಪಾರವಾಗಿದೆ.

ಹಿರಿಯ ತಾಯಂದಿರಾದ ಗಂಗಮ್ಮ, ಪುಷ್ಪ, ಇತರರು ಇಲ್ಲಿನ ಸ್ವಚ್ಛ ಕಾರ್ಯ ಹಾಗೂ ಪ್ರಸಾದ ಮಾಡುವ ಕಾರ್ಯಗಳಲ್ಲಿ ಸದಾ ಮುಂದಿರುವುದು ಅವರ  ಬಸವ ಭಕ್ತಿಗೆ ಕಾರಣವಾಗಿದೆ. ಕಾಟೇರಿ, ಹೋರನಹಳ್ಳಿ, ದೊಡ್ಡಹಣ್ಣಿ, ಸೋಗತ್ತರೆ, ಸಕಲಟ್ಟಿ, ತೂರಹಟ್ಟಿ, ನಡುವಟ್ಟಿ ಮತ್ತು ಅಕ್ಕಪಕ್ಕದ ಗ್ರಾಮಗಳಿಂದ ಈ ಮಠಕ್ಕೆ ಅಪಾರ ಭಕ್ತರಿದ್ದಾರೆ, ಎಂದರು.

ಚಪ್ಪಲಿ ಜೋಡಿಸುವ ಸೇವೆ

ಬಸವ ಭಕ್ತರಾದ ನಿವೃತ್ತ ಪ್ರಾಂಶುಪಾಲ ಬಾಲಕುಮಾರ ಹಾಗೂ ಇತರರು ಮಠಕ್ಕೆ ಬಂದವರ ಚಪ್ಪಲಿ ಜೋಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಎಲ್ಲರ ಶ್ರದ್ದೆ ಭಕ್ತಿಯನ್ನು ಹೆಚ್ಚಿಸಿತು.

ನಂಜನಗೂಡು ತಾಲ್ಲೂಕಿನ ದಾಸನೂರು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಸನತಕುಮಾರ್ ಅವರು ಕೂಡಾ ಪ್ರತಿವರ್ಷ ಇಲ್ಲಿಗೆ ಬಂದು ಚಪ್ಪಲಿ ಜೋಡಿಸುವ ಕಾಯಕದಲ್ಲಿ ನಿರತರಾಗುತ್ತಾರೆ.

ಸುರೇಶ ಬಾಬು, ಮಾದೇಶ, ರಘು, ಸೋಮೇಶ ಬಾಬು, ಪರಮೇಶ, ಕುಮಾರ, ಕಾರ್ತಿಕ, ಸಂಗಮೇಶ, ಕಾರ್ತಿಕ್ ಬಸವ, ಸೇಂದಿಲ್, ಇವರುಗಳ ಬಸವ ಭಕ್ತಿಯ ಸ್ವಯಂ ಸೇವೆ ಯುವ ಸಮುದಾಯಕ್ಕೆ ಮಾದರಿಯಾಗಿದೆ.

ಈ ಕಾರ್ಯಕ್ರಮಕ್ಕೆ ಆಂದ್ರಪದ್ರೇಶ, ಚಿತ್ರದುರ್ಗ, ಚಾಮರಾಜನಗರ, ನಂಜನಗೂಡು, ಮೈಸೂರು, ಗುಂಡ್ಲುಪೇಟೆ ಭಾಗಗಳಿಂದ ಆಗಮಿಸಿದ್ದರು.

ಈ ಮಠಕ್ಕೆ ಜಮೀನು ನೀಡಿರುವ ಲಿಂಗೈಕ್ಯ ಕೆ.ಎನ್ ಚನ್ನಯ್ಯನವರ ವಂಶಸ್ಥ ಪ್ರಾಂಶುಪಾಲರಾಗಿರುವ ಗಂಗಾಧರ ಅವರು ಹಾಜರಿದ್ದರು.

ಉಪನ್ಯಾಸಕರದ ಸನತಕುಮಾರ ಅವರು ತಮ್ಮ ಅನುಭಾವ ಹಂಚಿಕೊಂಡರು.

ಸುಮಾರು 500ಕ್ಕೂ ಅಧಿಕ ಬಸವ ಭಕ್ತರು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆ ಮುರುಗೇಶ ಅವರಿಂದ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment
  • ಕಾಟೇರಿಯ ಬಸವ ಭಕ್ತರು ಉತ್ತಮ ಕಾರ್ಯಕ್ರಮಗಳನ್ನ ಪ್ರತಿ ವರ್ಷ ಮಾಡುತ್ತಿರುವುದು ಸಂತೋಷತರುತ್ತದೆ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು