‘ಶಿಸ್ತಿನ ಜೊತೆ ತಾಯಿ ಪ್ರೀತಿ ಧಾರೆಯೆರೆದ ಶಿವಕುಮಾರ ಸ್ವಾಮೀಜಿ’

ಸಾಣೇಹಳ್ಳಿ

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ‌ ನಡೆದ ಬಸವ ಜಯಂತಿ ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 112 ನೆಯ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಕೇವಲ ಒಬ್ಬ ಧರ್ಮಗುರುಗಳಾಗಿರದೆ, ಸಮಾಜಕ್ಕೆ ತಾಯಿಯ ಪ್ರೀತಿ ಮತ್ತು ಕಟ್ಟುನಿಟ್ಟಿನ ಶಿಸ್ತನ್ನು ಧಾರೆ ಎರೆದ ಮಹಾನ್ ಚೇತನವಾಗಿದ್ದರು.

ಬಸವಣ್ಣನವರು ನುಡಿದಂತೆ ನಡೆದರೆ, ಶ್ರೀ ಶಿವಕುಮಾರ ಸ್ವಾಮೀಜಿಯವರು ಇಪ್ಪತ್ತೊಂದನೇ ಶತಮಾನದಲ್ಲಿ ಆ ತತ್ವಗಳನ್ನು ನಡೆದು ತೋರಿಸಿದವರು.

ಹಿರಿಯ ಜಗದ್ಗುರುಗಳವರ ವ್ಯಕ್ತಿತ್ವ ತಾಯಿಯ ಹೃದಯವನ್ನು ಹೊಂದಿತ್ತು. ಮಗು ತಪ್ಪು ಮಾಡಿದಾಗ ತಾಯಿ ಅದನ್ನು ತಿದ್ದಿ, ಮತ್ತೆ ಪ್ರೀತಿಯಿಂದ ಅಪ್ಪಿಕೊಳ್ಳುವಂತೆ, ಜಗದ್ಗುರುಗಳವರು ಶಿಷ್ಯರ ತಪ್ಪುಗಳನ್ನು ತಿದ್ದುವಲ್ಲಿ ಕೆಲವೊಮ್ಮೆ ನಿಷ್ಠುರವಾಗಿದ್ದರೂ, ಅದರ ಹಿಂದೆ ಸಮಾಜದ ಹಿತ ಮತ್ತು ಅತೀವವಾದ ಪ್ರೀತಿ ಅಡಗಿರುತ್ತಿತ್ತು.

ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ತಮ್ಮ ಗುರುಗಳಾದ ಹತ್ತೊಂಬತ್ತನೇ ಜಗದ್ಗುರು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಗಳ ಮೇಲೆ ಅಪಾರ ಭಕ್ತಿ ಇತ್ತು. ತಾವು ಯಾವುದೇ ಹೊಸ ಪುಸ್ತಕ ಕೊಂಡರೂ ಅದರ ಮೊದಲ ಪುಟದಲ್ಲಿ ತಮ್ಮ ಗುರುಗಳ ಸ್ಮರಣಾರ್ಥವಾಗಿ ಶ್ಲೋಕವನ್ನು ಬರೆಯುತ್ತಿದ್ದರು.

ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಆರ್ಥಿಕ ಮುಗ್ಗಟ್ಟು ಎದುರಾದಾಗಲೂ, ಅಲ್ಲಿನ ಗೌರಿನಾಥ ಪಾಠಕ್ ಎಂಬ ಗುರುಗಳ ಸಹಾಯದಿಂದ ಸಂಸ್ಕೃತದಲ್ಲಿ ಅಪ್ರತಿಮ ಪಾಂಡಿತ್ಯವನ್ನು ಗಳಿಸಿದ್ದರು.

ಒಮ್ಮೆ ಕಾಶಿ ಪ್ರವಾಸದ ಸಂದರ್ಭದಲ್ಲಿ, ಜಗದ್ಗುರುಗಳ ಪೀಠದಲ್ಲಿದ್ದರೂ ಸಹ ತಮಗೆ ಪಾಠ ಮಾಡಿದ ವೃದ್ಧ ಗುರುಗಳನ್ನು ಕಂಡ ತಕ್ಷಣ ಜನರೆಲ್ಲರ ಮುಂದೆ ದೀರ್ಘದಂಡ ನಮಸ್ಕಾರ ಮಾಡುವ ಮೂಲಕ ತಮ್ಮ ನಮ್ರತೆ ಮತ್ತು ಗುರುಭಕ್ತಿಯನ್ನು ಮೆರೆದಿದ್ದರು. “ಈ ಗುರುಗಳು ಅಂದು ನನಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ, ನಾನು ಇಂದು ಈ ಪೀಠಕ್ಕೆ ಬರುತ್ತಿರಲಿಲ್ಲ” ಎಂದು ಹೇಳುವ ಮೂಲಕ ಗುರು ಶಿಷ್ಯ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದಿದ್ದರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ ದಾವಣಗೆರೆಯ ನಿವೃತ್ತ ಪ್ರಾಚಾರ್ಯ ನಾ. ಲೋಕೇಶ್ ಒಡೆಯರು ಮಾತನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಸಂತರ ಪಾತ್ರ ಅತ್ಯಂತ ದೊಡ್ಡದು. ಅದರಲ್ಲೂ ಸಿರಿಗೆರೆಯ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಸರ್ವಜನಾಂಗದ ಅಭ್ಯುದಯಕ್ಕಾಗಿ ಶ್ರಮಿಸಿದ ಮಹಾನ್ ಚೇತನ.

ಶಿವಕುಮಾರ ಶ್ರೀಗಳ ದೃಷ್ಟಿಕೋನ ಕೇವಲ ರಥೋತ್ಸವ ಅಥವಾ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿಲ್ಲ. ಬದಲಾಗಿ, “ಜನರು ಬಯಸುವುದನ್ನು ಕೊಡುವವನು ನಿಜವಾದ ನಾಯಕನಲ್ಲ, ಜನರಿಗೆ ಅಗತ್ಯವಿರುವುದನ್ನು ನೀಡಿ ದಾರಿ ತೋರಿಸುವವನೇ ನಿಜವಾದ ನಾಯಕ” ಎಂಬ ತತ್ವಕ್ಕೆ ಪೂಜ್ಯರು ಅನ್ವರ್ಥವಾಗಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ (1946) ಸಿರಿಗೆರೆಯಲ್ಲಿ ಪ್ರೌಢಶಾಲೆಯನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಜ್ಞಾನದ ದೀವಿಗೆ ಹಚ್ಚಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಶ್ರೀಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಹಾಗೂ ರಾಜಕೀಯವಾಗಿ ಮಾರ್ಗದರ್ಶನ ನೀಡಿದವರು. ರಾಜಕೀಯ ಮುತ್ಸದ್ದಿಗಳಿಗೂ ಅಂದಿನ ಕಾಲದಲ್ಲಿ ಸಲಹೆ-ಸೂಚನೆಗಳು ದಾರಿದೀಪವಾಗಿದ್ದವು.

ಶ್ರೀಗಳು ಕಳಬೇಡ, ಕೊಲಬೇಡ ಎಂಬ ಬಸವಣ್ಣನವರ ವಚನಗಳನ್ನು ಕೇವಲ ಮಾತಿನಲ್ಲಿ ಹೇಳದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾದವರು. ಅವರ ಜೀವನ ಚರಿತ್ರೆಯನ್ನು ಸಾಹಿತ್ಯದ ವಿವಿಧ ರೂಪಗಳಲ್ಲಿ ತರಲಾಗಿದ್ದು, ಪಿ.ಎಚ್.ಡಿ ಸಂಶೋಧನೆಗಳಿಗೂ ಅವರು ವಸ್ತುವಾಗಿದ್ದಾರೆ.

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರನ್ನು “ಕಲ್ಯಾಣದ ಜ್ಯೋತಿ, ಸಿರಿಗೆರೆಯ ಪ್ರಣತಿ” ಎಂದು ಕರೆಯಲಾಗಿದ್ದು, ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾದ ಅವರದು ನಿಸ್ವಾರ್ಥ ಸೇವೆ.

ಶಿವಕುಮಾರ ಶಿವಾಚಾರ್ಯ ಶ್ರೀಗಳು 1940ರಲ್ಲಿ ಬಸವ ಜಯಂತಿಯಂದೇ ಅಧಿಕೃತವಾಗಿ ಮಠದ ಅಧಿಕಾರ ವಹಿಸಿಕೊಂಡಿದ್ದರು. ಅವರು 12ನೇ ಶತಮಾನದ ಬಸವಣ್ಣನವರ ಜಾತಿರಹಿತ ಸಮಾಜದ ಕನಸನ್ನು ನನಸು ಮಾಡಲು ಅವಿರತ ಶ್ರಮಿಸಿದರು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಎಂದೂ ಜಾತಿ-ಮತದ ಭೇದ ಇರಲಿಲ್ಲ ಎಂಬುದು ವಿಶೇಷ.

“ನಿಜವಾದ ವಿದ್ಯಾವಂತ ಎಂದೂ ನಿರುದ್ಯೋಗಿಯಾಗುವುದಿಲ್ಲ” ಎಂಬ ತತ್ವವನ್ನು ನಂಬಿದ್ದ ಶ್ರೀಗಳು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಇಂದು ಕರ್ನಾಟಕದ ಸುಮಾರು 14 ಜಿಲ್ಲೆಗಳಲ್ಲಿ 230ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವ ಮೂಲಕ ಜನರನ್ನು ಸುಶಿಕ್ಷಿತರನ್ನಾಗಿ ಮಾಡಿದ್ದಾರೆ. ಕೇವಲ ಪದವಿ ಶಿಕ್ಷಣ ಮಾತ್ರವಲ್ಲದೆ, ಔದ್ಯೋಗಿಕ, ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣಕ್ಕೆ ಅವರು ಮೊದಲ ಆದ್ಯತೆ ನೀಡಿದ್ದರು.

ಶ್ರೀಗಳು ಪ್ರತಿಪಾದಿಸಿದ ಪ್ರಮುಖ ಸೂತ್ರಗಳೆಂದರೆ ‘ಕಾಯಕ’, ‘ಕಾಲ’ ಮತ್ತು ‘ಕಾಸು’. ಸಮಯದ ಮಹತ್ವ ಮತ್ತು ದುಡಿಮೆಯ ಗೌರವವನ್ನು ಯಾರು ಪಾಲಿಸುತ್ತಾರೋ ಅವರು ಜೀವನದಲ್ಲಿ ಸೋಲಲು ಸಾಧ್ಯವಿಲ್ಲ ಎಂದು ಶ್ರೀಗಳು ಸದಾ ಸಾರುತ್ತಿದ್ದರು. ಮಠದ ಪ್ರಸಾದ ನಿಲಯಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹವನ್ನು ನೀಡಿದರು.

ಪೂಜ್ಯ ಶ್ರೀಗಳು ಕೇವಲ ಧಾರ್ಮಿಕ ಗುರುಗಳಾಗಿರದೆ, ಕಲಾ ಪೋಷಕರೂ ಆಗಿದ್ದರು. ಅವರೇ ಸ್ವತಃ ನಾಟಕಗಳನ್ನು ರಚಿಸಿ, ರಂಗಭೂಮಿಯ ಮೂಲಕ ಬಸವಾದಿ ಶರಣರ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು. ‘ಮರಣವೇ ಮಹಾನವಮಿ’, ‘ಶರಣ ಸತಿ ಲಿಂಗ ಪತಿ’ ಅಂತಹ ನಾಟಕಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಶ್ರೀಗಳು ನಮ್ಮೊಂದಿಗಿಲ್ಲದಿದ್ದರೂ, ಅವರು ಬಿಟ್ಟುಹೋದ ಸಂದೇಶಗಳು ಮತ್ತು ಅವರ ಮಾರ್ಗದರ್ಶನ ಸಮಾಜಕ್ಕೆ ಸದಾ ಹಿತಕಾರಿಯಾಗಿದೆ. ಅಂತಹ ಮಹಾನ್ ಸಂತರ ಜಯಂತಿಯನ್ನು ಆಚರಿಸುವುದು ಎಂದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದೇ ಆಗಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಚಂದ್ರಶೇಖರ ತಾಳ್ಯ ಮಾತಮಾಡಿ; ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರುಣೆ ಮತ್ತು ಮಾರ್ಗದರ್ಶನದಿಂದಲೇ ನಾನು ಇಂದು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು” ಎಂದು ಭಾವುಕರಾಗಿ ನುಡಿದರು.

“ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಮಠದಿಂದ ಎರಡನೇ ಬಾರಿ ಸನ್ಮಾನಿಸಲಾಗಿತ್ತು. ಆಗ ಪೂಜ್ಯ ಶ್ರೀಗಳು ತಮಗೇ ಪ್ರಶಸ್ತಿ ಬಂದಿದೆಯೇನೋ ಎಂಬಂತೆ ಸಂಭ್ರಮಿಸಿ ನನ್ನನ್ನು ಹರಸಿದ್ದರು. ಈಗ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಬಂದಾಗಲೂ ಶ್ರೀಮಠದ ಪರಂಪರೆಯಂತೆ ಅಷ್ಟೇ ಪ್ರೀತಿಯಿಂದ ಸನ್ಮಾನಿಸುತ್ತಿರುವುದು ನನ್ನ ಸೌಭಾಗ್ಯ” ಎಂದರು.

“ವಿದ್ಯಾರ್ಥಿ ದೆಸೆಯಲ್ಲಿ ನಾವು ಸಮಾಜವನ್ನು ಬದಲಿಸಬೇಕೆಂಬ ಬಂಡಾಯದ ಮನಸ್ಥಿತಿಯವರಾಗಿದ್ದೆವು. ಒಮ್ಮೆ ‘ಪ್ರಪಂಚ’ ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಓದಿದ ಶ್ರೀಗಳು, ನನ್ನನ್ನು ಕರೆಸಿ ‘ಬೇಷ್’ ಎಂದು ಬೆನ್ನು ತಟ್ಟಿದ್ದರು. ಒಬ್ಬ ಸಾಮಾನ್ಯ ವಿದ್ಯಾರ್ಥಿಯ ಸಣ್ಣ ಬರಹವನ್ನೂ ಗುರುತಿಸಿ ಪ್ರೋತ್ಸಾಹಿಸುವ ಅಪ್ರತಿಮ ಗುಣ ಅವರದ್ದಾಗಿತ್ತು.

“ನಾನು ಮೈಸೂರಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದಾಗ, ಮುಂದೆ ಏನು ಮಾಡಬೇಕೆಂದು ತಿಳಿಯದ ಸಂದರ್ಭದಲ್ಲಿ ಶ್ರೀಗಳೇ ನನಗೆ ಮಠದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು. ನಂತರ ಪತ್ರ ಬರೆದು ನನ್ನನ್ನು ಕರೆಸಿಕೊಂಡು, ತರ್ಕಶಾಸ್ತ್ರ (Logic) ವಿಷಯ ಇಲ್ಲದಿದ್ದರೂ ಹೊಸದಾಗಿ ಆ ವಿಷಯವನ್ನು ಪರಿಚಯಿಸಿ ನನಗೆ ಶಿಕ್ಷಕ ವೃತ್ತಿ ನೀಡಿದರು. ಅಂದು ಅವರು ನೀಡಿದ ಆಸರೆಯೇ ಇಂದು ನನ್ನ ಸಾಹಿತ್ಯ ಕೃಷಿಗೆ ಅಡಿಪಾಯವಾಯಿತು” ಎಂದು ಕೃತಜ್ಞತೆ ಸಲ್ಲಿಸಿದರು.

“ಜಗದ್ಗುರುಗಳು ಕೇವಲ ಧಾರ್ಮಿಕ ಮುಖಂಡರಾಗಿರದೆ, ಕಲಾಪ್ರೇಮಿಗಳು, ರಾಜಕೀಯ ಚಿಂತಕರು ಹಾಗೂ ಶಿಕ್ಷಣ ತಜ್ಞರಾಗಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎಂಬುದು ಅವರ ಪರಮ ಧ್ಯೇಯವಾಗಿತ್ತು,” ಎಂದರು.

ಜಗದ್ಗುರುಗಳು ಅನೇಕ ಹೈಸ್ಕೂಲು, ಕಾಲೇಜು ಹಾಗೂ ಹಾಸ್ಟೆಲ್‌ಗಳನ್ನು ಸ್ಥಾಪಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ಬಸವಣ್ಣನವರ ತತ್ವದಂತೆ ಅಕ್ಷರ ದಾಸೋಹಕ್ಕೆ ಅವರು ನೀಡಿದ ಒತ್ತು ಅವಿಸ್ಮರಣೀಯ.

ಹಿರಿಯ ಜಗದ್ಗುರುಗಳು ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು. ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಜನಸಾಮಾನ್ಯರ ಜೊತೆ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸುವಷ್ಟು ವಿನಯವಂತರಾಗಿದ್ದರು.

60 ವರ್ಷ ತುಂಬಿದ ಕೂಡಲೇ ಅಧಿಕಾರದಿಂದ ನಿವೃತ್ತಿ ಪಡೆದ ಅವರ ನಿರ್ಧಾರ ಅವರ ನಿಸ್ವಾರ್ಥ ಗುಣಕ್ಕೆ ಸಾಕ್ಷಿ. ಅಧಿಕಾರವಿದ್ದಾಗ ಸುತ್ತುವರಿಯುವ ಜನರಿಗಿಂತ, ಅಧಿಕಾರವಿಲ್ಲದಿದ್ದಾಗಲೂ ಅವರ ಮೇಲೆ ಪ್ರೀತಿ ಇಟ್ಟು ಬರುವವರೇ ನಿಜವಾದ ಭಕ್ತರು ಎಂದು ಅವರು ನಂಬಿದ್ದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ಜ್ಯೋತಿ, ದಾಕ್ಷಾಯಿಣಿ, ನಾಗರಾಜ ಹಾಗೂ ಶರಣ್ ವಚನಗೀತೆಗಳನ್ನು ಹಾಡಿದರು. ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಜೀವನಾಧಾರಿತ ‘ಮಹಾಬೆಳಗು’ ನಾಟಕ ಅಭಿನಯಿಸಲ್ಪಟ್ಟಿತು.

ಶಿಬಿರಾರ್ಥಿಗಳಿಂದ ವಚನ ನೃತ್ಯ ಪ್ರದರ್ಶನ ನಡೆಯಿತು. ಶ್ರೀ ಶಿವಕುಮಾರ ಸ್ವಾಮೀಜಿಯವರ ರಥೋತ್ಸವ ಪ್ರಮುಖ ಬೀದಿಯಲ್ಲಿ‌ ನಡೆಯಿತು. ಸಾಣೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು. ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳಿಯ ಸಲಹಾ ಸಮಿತಿಯ ಅಧ್ಯಕ್ಷರಾದ ಎ.ಸಿ. ಚಂದ್ರಪ್ಪ ಸ್ವಾಗತಿಸಿದರೆ, ಸಂಧ್ಯಾ ಪಿ.ಎಲ್. ನಿರೂಪಿಸಿ ವಂದಿಸಿದರು. ವೇದಿಕೆಯ ಮೇಲೆ ಮಾಗನೂರು ಚಂದ್ರಶೇಖರ ಗೌಡ್ರು ಹಾಗೂ ನಿವೃತ್ತ ಸಿಇಓ ಪ್ರಭುದೇವ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *