ಕೆ.ಆರ್. ನಗರ: ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ನಿಜಾಚರಣೆ ‘ಗುರುಪ್ರವೇಶ’

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಇಂದಿನ ಕಾಲಘಟ್ಟದಲ್ಲಿ ಗೃಹಪ್ರವೇಶ ಎಂದರೆ ಹೋಮ-ಹವನ, ಆಹಾರ ಪದಾರ್ಥಗಳ ಅಪವ್ಯಯವೇ ಎನ್ನುವಂತಾಗಿರುವಾಗ, ಅದಕ್ಕೆ ವ್ಯತಿರಿಕ್ತವಾಗಿ ಕೆ.ಆರ್. ನಗರದ ಬಸವೇಶ್ವರ ಬ್ಲಾಕ್‌ನಲ್ಲಿ ಶರಣ ತತ್ವದಡಿ ಅತ್ಯಂತ ಸರಳ ಹಾಗೂ ವೈಚಾರಿಕ “ಗುರುಪ್ರವೇಶ” ಜರುಗಿತು.

ಮಹದೇವಮ್ಮ ಯಡಿಯೂರಪ್ಪ ಕುಟುಂಬದವರಾದ ಶಿಕ್ಷಕ ಪಿ.ವೈ. ಕಾಂತರಾಜು ಹಾಗೂ ಮಂಜುಳಾ ಅವರ ನೂತನ ನಿವಾಸದ ಪ್ರವೇಶವು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್‌ನ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ದಂಪತಿಗಳ ನೇತೃತ್ವದಲ್ಲಿ ಶರಣರ ವಚನಗಳ ಆಧಾರಿತವಾಗಿ ಬಸವತತ್ವದಲ್ಲಿ ಸಂಪೂರ್ಣ ವೈಚಾರಿಕವಾಗಿ ನಡೆಯಿತು.

ಮನೆಯ ಮುಂಭಾಗ ಷಟಸ್ಥಲ ಧ್ವಜಾರೋಹಣ ಮಾಡಿ ಎಲ್ಲರೂ ಸಾಮೂಹಿಕವಾಗಿ ಶರಣ ಧರ್ಮದ ಧ್ವಜಗೀತೆ ಹಾಡಲಾಯಿತು. ಜಗಜ್ಯೋತಿ ಬಸವಣ್ಣನವರು ಹಾಗೂ ಯಡಿಯೂರು ಸಿದ್ಧಲಿಂಗೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ನಂತರ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಬಸವ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮನೆಗೆ ಮಂಗಲ ಪ್ರವೇಶ ಮಾಡಲಾಯಿತು.

ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಅನೇಕರು ಹಣ ಇಲ್ಲದಿದ್ದರೂ ಭಯದಿಂದ ಅನೇಕ ಪೂಜೆಗಳನ್ನು ಮಾಡಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಅರಿತು ‘ದಯೆಯೇ ಧರ್ಮದ ಮೂಲ’ ಎಂಬ ತತ್ವದಡಿ ಕರ್ನಾಟಕ, ತಮಿಳುನಾಡು ಮುಂತಾದ ಕಡೆ 100 ಕ್ಕೂ ಹೆಚ್ಚು ವಚನ ಮಾಂಗಲ್ಯ, ಗುರುಪ್ರವೇಶ ಮಾಡಿಸಿ ಅವರಿಗೆ ವೈಚಾರಿಕ ಚಿಂತನೆ ಉಂಟುಮಾಡಲಾಗುತ್ತಿದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, 12ನೇ ಶತಮಾನಕ್ಕೆ ಮೊದಲು ಸ್ತ್ರೀ ಯಾವುದೇ ಧಾರ್ಮಿಕ ಕಾರ್ಯಕ್ಕೆ ಅನರ್ಹಳು ಎಂದು ಬಿಂಬಿಸಲಾಗಿತ್ತು. ಬಸವಣ್ಣನವರು ತಮ್ಮ ಸಹೋದರಿ ನಾಗಲಾಂಬಿಕೆಯವರಿಗೆ ಇಷ್ಟಲಿಂಗದೀಕ್ಷೆ ನೀಡುವುದರ ಮೂಲಕ ಹೆಣ್ಣು ಕೂಡಾ ಧಾರ್ಮಿಕ ಸ್ವಾತಂತ್ರ್ಯ ಪಡೆಯಲು ಕಾರಣರಾದರು. ಶರಣ ಧರ್ಮದಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಪ್ರತಿಯೊಬ್ಬರೂ ಇಷ್ಟಲಿಂಗ ಧರಿಸಿ ವೈಚಾರಿಕತೆಗೆ ನಾಂದಿ ಹಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಮನೆಯ ಯಜಮಾನ ಪಿ.ವೈ. ಕಾಂತರಾಜು ಅವರು, “ಬಸವತತ್ವದಿಂದ ಪ್ರೇರಣೆಗೊಂಡು ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಹೋಮ-ಹವನಗಳಿಂದ ಪರಿಸರ ನಾಶವಾಗುತ್ತಿದೆ ಮತ್ತು ಆಹಾರ ಪದಾರ್ಥಗಳನ್ನು ಹೊರಗೆ ಚೆಲ್ಲುವುದರಿಂದ ಅನ್ನದ ಅಪಮಾನವಾಗುತ್ತಿದೆ. ಇವುಗಳನ್ನು ನಿಯಂತ್ರಿಸಿ ಸಮಾಜಕ್ಕೆ ಒಂದು ಹೊಸ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಯಾವುದೇ ಹೋಮಗಳಿಲ್ಲದೆ ಈ ಗುರುಪ್ರವೇಶ ನಡೆಸುತ್ತಿದ್ದೇವೆ” ಎಂದರು.

ಶರಣ ಧರ್ಮದ ಷಟಸ್ಥಲ ಧ್ವಜಾರೋಹಣವನ್ನು ಶರಣು ವಿಶ್ವವಚನ ಫೌಂಡೇಷನ್‌ನ ಜಿಲ್ಲಾಧ್ಯಕ್ಷ ಅನಿಲಕುಮಾರ ವಾಜಂತ್ರಿ ಮತ್ತು ಹೊಸಪೇಟೆಯ ಬಸವಪೀಠದ ಅಧ್ಯಕ್ಷ ‘ಬಸವ ಕಿರಣ’ ಅವರು ನೆರವೇರಿಸಿಕೊಟ್ಟರು.

ಅನಿಲಕುಮಾರ್‌ ವಾಜಂತ್ರಿ ಮಾತನಾಡಿ, ಬಸವತತ್ವ ಗುರುಪ್ರವೇಶ ಇಂದಿನ ಸಮಾಜಕ್ಕೆ ಅಗತ್ಯವಿದ್ದು, ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಂಧಶ್ರದ್ಧೆಯನ್ನು ಬಿಟ್ಟು ಶರಣರ ವಚನ ಸ್ತುತಿಸಿ ಮನೆಯನ್ನು ಮಹಾಮನೆ ಮಾಡುವ ಹಾದಿಯಲ್ಲಿ ನಡೆಯುವುದು ಅಭಿನಂದನೀಯ” ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಫೌಂಡೇಷನ್‌ನ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಎಸ್.ಎಂ.ಪಿ. ಫೌಂಡೇಷನ್‌ ಅಧ್ಯಕ್ಷ ಶಿವಪ್ರಕಾಶ್‌ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *