ಗದಗ :
೧೨ನೇ ಶತಮಾನದ ಪೂರ್ವದಲ್ಲಿ ರೇವಣಸಿದ್ಧರು ಚಾರಿತ್ರಿಕ ಶರಣರು. ಇವರು ಸೊನ್ನಲಿಗೆ ಸಿದ್ದರಾಮರ ತಂದೆ-ತಾಯಿಗಳಿಗೆ ಆಶೀರ್ವದಿಸಿದ್ದರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ೨೭೯೫ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜನಪದ ಸಾಹಿತ್ಯ ಎಲ್ಲ ಸಾಹಿತ್ಯದ ತಾಯಿಬೇರು. ಜನಪದರು ತಮ್ಮ ಅನುಭವಗಳನ್ನು ಮತ್ತು ವರ್ತಮಾನದ ಚರಿತ್ರೆಯನ್ನು ಜನಪದದ ವಿವಿಧ ಮಾಧ್ಯಮಗಳ ಮೂಲಕ ರಾಗಬದ್ಧವಾಗಿ ಹಾಡುತ್ತಾರೆ. ಈ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾಡುಗಳ ಮೂಲಕ ರವಾನಿಸಿ ಚರಿತ್ರೆಯನ್ನು ಉಳಿಸಿದ ರಾಯಭಾರಿಗಳು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಆಶೀರ್ವದಿಸಿ ಇಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಸೌಲಭ್ಯಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಡೊಳ್ಳಿನ ಹಾಡುಗಳಲ್ಲಿ ಶರಣರ ಚರಿತ್ರೆ ಎಂಬ ವಿಷಯದ ಕುರಿತು ಮಾತನಾಡಿದ ಗಜೇಂದ್ರಗಡದ ಕಾಲೇಜಿನ ಕನ್ನಡ ಉಪನ್ಯಾಸಕರಾದ ಕರಿಯಪ್ಪ ಕೊಡವಳ್ಳಿ ಅವರು, ಶರಣರ ಆದರ್ಶದ ಬದುಕನ್ನು ಹಾಲುಮತದ ಜನಾಂಗದವರು ತಮ್ಮ ಜನಪದ ಡೊಳ್ಳಿನ ಹಾಡುಗಳ ಮೂಲಕ ಕಟ್ಟಿಕೊಟ್ಟರು. ಶರಣರ ಚರಿತ್ರೆಗಳು ಜನಪದರ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಕಾರಣವಾದವು ಎಂದರು.
ಡೊಳ್ಳಿನ ಹಾಡುಗಳಲ್ಲಿರುವ ಶರಣರ ಚರಿತ್ರೆಯ ಹಾಡುಗಳನ್ನು ಕುರ್ತಕೋಟಿಯ ಶ್ರೀ ಬೀರೇಶ್ವರ ಡೊಳ್ಳಿನ ಮೇಳದ ತಂಡದ ಸದಸ್ಯರು ಪ್ರಸ್ತುತಪಡಿಸಿದರು.

ಎಂ. ಎ. ಮ್ಯೂಸಿಕ್ ವೋಕಲ್‌ನಲ್ಲಿ ಕವಿವಿ ಸಂಗೀತ ಸ್ನಾತಕೋತ್ತರ ಅಧ್ಯಯನ ಮಾಡಿ ಎರಡು ಚಿನ್ನದ ಪದಕ ಪಡೆದ ಗುರುನಾಥ ಸುತಾರ ಅವರ ಪುತ್ರನಾದ ಪ್ರಸಾದ ಸುತಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ೨೦೨೫-೨೬ನೆಯ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರ ಪ್ರವೀಣಕುಮಾರ ಸೊಬಗಿನ, ದ್ವಿತೀಯ ಸ್ಥಾನ ಪಡೆದ ಕುಮಾರಿ ಸಂಧ್ಯಾ ಲಮಾಣಿ, ತೃತೀಯ ಸ್ಥಾನ ಪಡೆದ ಸುಷ್ಮಾ ನಾಯಕ ಮತ್ತು ರೇವಂತರೆಡ್ಡಿ ಮುಂಡರಗಿ ಅವರನ್ನು ಅಭಿನಂದಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಸನ್ಮಾನೋತ್ತರವಾಗಿ ಮಾತನಾಡಿದರು. ವಚನ ಸಂಗೀತವನ್ನು ಪ್ರಸಾದ ಗುರುನಾಥ ಸುತಾರ, ಧರ್ಮಗ್ರಂಥ ಪಠಣವನ್ನು ಅನುಶ್ರೀ ಅಗ್ಗದ, ವಚನ ಚಿಂತನವನ್ನು ಪ್ರೇಮ ಆರ್. ಓದಿಸೋಮಠ ಅವರು ನೆರವೇರಿಸಿದರು. ದಾಸೋಹ ಸೇವೆಯನ್ನು ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ ಪ್ರಭು ಮೆಡಿಕಲ್, ಗದಗ ಇವರ ನೆರವೇರಿಸಿದರು.
ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ.ಉಮೇಶ ಪುರದ, ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ನರಾದ ಡಾ.ರಮೇಶ ಕಲ್ಲನಗೌಡರ ಮಾಡಿದರು. ಶಿವಾನುಭವದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ದರಾಮೇಶ ಪಟ್ಟೇದ, ಸಹಕಾರದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್.ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಎಸ್. ಅಂಗಡಿ ಹಾಗೂ ಭಕ್ತರು ಉಪಸ್ಥಿತರಿದ್ದರು.
