‘ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ’ ಉಪನ್ಯಾಸ ಸರಣಿ
ವಿಜಯನಗರ :
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಶ್ರೀ ಕೊಟ್ಟೂರೇಶ್ವರ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ 893ನೇ ಬಸವ ಜಯಂತಿ ಪ್ರಯುಕ್ತ “ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ”ವಿಷಯ ಕುರಿತು ವಿಶೇಷ ಉಪನ್ಯಾಸ ನಡೆಯಿತು.

ಕೊಟ್ಟೂರಿನ ಕೊಟ್ರೇಶ್ವರ ಪದವಿ ಕಾಲೇಜಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಡಾ. ಕೆ. ರವೀಂದ್ರನಾಥ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ರಾಷ್ಟ್ರಾದ್ಯಂತ ಅನೇಕ ದಾರ್ಶನಿಕರ ಜಯಂತಿಗಳು ನಡೆಯುತ್ತವೆ. ಈ ಜಯಂತಿಗಳನ್ನು ಅರ್ಥಗರ್ಭಿತವಾಗಿ ಮಾಡಬೇಕು ಎನ್ನುವ ಕಾರಣಕ್ಕಾಗಿ ವಿಜಯನಗರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಬೇಕು, ಆದ್ದರಿಂದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ 12ನೇ ಶತಮಾನದ ಬಸವಾದಿ ಶರಣರ ತತ್ವ ಸಿದ್ಧಾಂತಗಳು ಇಂದು ಜಾಗತಿಕ ಮನ್ನಣೆ ಗಳಿಸುತ್ತಿವೆ. ಇತ್ತೀಚಿಗೆ ಏಪ್ರಿಲ್ 20ರ ಬಸವ ಜಯಂತಿ ದಿನವನ್ನು ಅಮೆರಿಕ ದೇಶದ ಕಾನ್ಸೆಸ್ ರಾಜ್ಯದಲ್ಲಿ ‘ಬಸವ ದಿನ’ ಎಂದು ಘೋಷಣೆ ಮಾಡಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇವು ನಮ್ಮ ಅಸ್ಮಿತೆಯಾಗಿವೆ. ಈ ತತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಅರಿತು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಬಸನಗೌಡ ಅವರು ಮಾತನಾಡಿದರು.
ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಎಸ್. ಎಸ್. ಪಾಟೀಲ ಅವರು ಈ ನಾಡಿನಲ್ಲಿ ಆಳ್ವಿಕೆ ಮಾಡಿದ ಅನೇಕ ರಾಜ ಮನೆತನಗಳು ಬೆವರು ಸುರಿಸಿದ ಶೋಷಿತ ವರ್ಗವನ್ನು ಸಮಾಜದಲ್ಲಿ ಅತ್ಯಂತ ಕೀಳಾಗಿ ಕಾಣುತ್ತಿದ್ದರು. ಅಂತಹ ಸಂದರ್ಭದಲ್ಲಿ ಸ್ತ್ರೀ-ಪುರುಷ ಮೇಲು-ಕೀಳು, ಶ್ರೀಮಂತ-ಬಡವ ಎನ್ನದೆ ಎಲ್ಲರನ್ನೂ ಒಂದುಗೂಡಿಸಲು ಪ್ರಯತ್ನಿಸಿದವರು ಶರಣರು. ಪ್ರಮುಖವಾಗಿ ದುಡಿಯುವ ವರ್ಗಕ್ಕೆ ಕಾಯಕದಲ್ಲಿ ಶ್ರೇಷ್ಠತೆ ಕನಿಷ್ಠತೆ ಎನ್ನದೇ ಯಾವುದೇ ಕಾಯಕವಿರಲಿ ಸತ್ಯ ಶುದ್ಧವಾದ ಕಾಯಕ ಎಲ್ಲರೂ ಮಾಡಲೇಬೇಕು. ಆ ಕಾಯಕದಲ್ಲಿ ನಾವು ದೇವರನ್ನ ಕಾಣುವಂತಾಗಬೇಕು ಎಂದು ಪ್ರತಿಪಾದಿಸಿ, ಹಲವು ಸ್ಥಾವರ ದೇವರುಗಳನ್ನು ಪೂಜಿಸುವುದರ ಬದಲಾಗಿ ಇಷ್ಟಲಿಂಗವನ್ನು ಪ್ರತಿಪಾದಿಸಿದವರು , ಇದರ ಜೊತೆಗೆ ದಾಸೋಹ ಪರಿಕಲ್ಪನೆಯನ್ನು ಹುಟ್ಟು ಹಾಕಿದವರು, ಬಸವಣ್ಣನವರಾಗಿದ್ದಾರೆ.

ಈ ಕಾರಣಕ್ಕಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಾರೆ. ಭವಿಷ್ಯತ್ತಿನ ವಿದ್ಯಾರ್ಥಿಗಳಾದ ನೀವುಗಳು ವಚನಗಳನ್ನು ಹೆಚ್ಚು ಅಧ್ಯಯನ ಮಾಡಿ ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ನೀವುಗಳು ಸಾಂಸ್ಕೃತಿಕ ನಾಯಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಎಸ್. ಬಸವರಾಜ ಮಾವಿನಹಳ್ಳಿ ಅವರು ವಂದನೆಗಳನ್ನು ಸಲ್ಲಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ವಿಜಯನಗರ ಘಟಕದ ಹಿರಿಯ ಉಪಾಧ್ಯಕ್ಷರಾದ ಎಸ್. ರಾಜೇಂದ್ರಪ್ರಸಾದ, ಕಾರ್ಯದರ್ಶಿಗಳಾದ ಅಕ್ಕಿ ಮಲ್ಲಿಕಾರ್ಜುನ, ಡಾ. ಬಿ. ಸತೀಶಗೌಡ, ಸದಸ್ಯರಾದ ಅಂಗಡಿ ಪಂಪಾಪತಿ, ಹೊಂಬಣ್ಣನವರ ಷಣ್ಮುಖ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾದ ದೇವರಮನೆ ಕರಿಯಪ್ಪ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಕಾಮಶೆಟ್ಟಿ ಕೊಟ್ರೇಶ, ಭದ್ರವಾಡಿ ಚಂದ್ರಶೇಖರ, ಪ್ರಾಧ್ಯಾಪಕರಾದ ಪೃಥ್ವಿರಾಜ ಇತರರು ಉಪಸ್ಥಿತರಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
