ವೈದಿಕ ಧರ್ಮ ವಿರೋಧಿಸುವ ನಗೆಯ ಮಾರಿತಂದೆಗಳ ವಚನಗಳು

ದಾವಣಗೆರೆ

ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ ‘ಬಸವ ಶೈವದಲ್ಲಿ ಹಿಂದುತ್ವ’ ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ.

ಸಂಘ ಪರಿವಾರ ಕನ್ನೇರಿ ಸ್ವಾಮಿ ಮೂಲಕ ನಡೆಸುತ್ತಿರುವ ಕಾರ್ಯಕ್ರಮಗಳಲ್ಲಿ ಈ ಪುಸ್ತಕ ಬಿಡುಗಡೆಯಾಗುತ್ತಿದೆ.

ಇದಕ್ಕೆ ಪ್ರತಿಯಾಗಿ ಬಸವ ತತ್ವ ಚಿಂತಕ ವಿಶ್ವೇಶ್ವರಯ್ಯ ಬಿ. ಎಂ. ವೈದಿಕತೆಯನ್ನು ನಿರಾಕರಿಸುವ ಹಲವಾರು ಶರಣರ ವಚನಗಳನ್ನು ಆಯ್ಕೆ ಮಾಡಿದ್ದಾರೆ.

ಇಂದು ಸನಾತನ ಧರ್ಮವನ್ನು ಸಾರಾಸಗಟಾಗಿ ನಿರಾಕರಿಸುವ ನಗೆಯ ಮಾರಿತಂದೆಗಳ ಕೆಲವು ವಚನಗಳು:

ವೇದ ಶಾಸ್ತ್ರ ಪುರಾಣ ಆಗಮ ಇವುಗಳೆಲ್ಲ ಐಹಿಕ ಬದುಕಿನ ಹಂಗಿನಲ್ಲಿ ಇರುವವು. ಇವುಗಳನ್ನು ಪಾಲಿಸುವವರಲ್ಲಿ ಗೊಂದಲವಿದೆ.

ವೇದ ಯೋನಿಯ ಹಂಗು.
ಶಾಸ್ತ್ರ ಯೋನಿಯ ಹಂಗು.
ಪುರಾಣ ಯೋನಿಯ ಹಂಗು.
ಆಗಮ ಯೋನಿಯ ಹಂಗು.
ನಾದದಿಂದ ಉದಿಸಿದವು ಶ್ರೋತ್ರದ ಹಂಗು.
ಹೇಳುವುದು ವೆಜ್ಜ, ಕೇಳುವುದು ವೆಜ್ಜ,
ತಾ ಹಿಂದೆ ಬಂದುದು ವೆಜ್ಜ,
ಈಗ ನಿಂದು ಮಾಡುವುದು ವೆಜ್ಜ.
ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ
ಬಿದ್ದವರಿಗೆ ನಿರ್ಧರವಿಲ್ಲ
ಆತುರವೈರಿ ಮಾರೇಶ್ವರಾ.

ಸನಾತನ ಧರ್ಮದಲ್ಲಿ ಸಂಸ್ಕೃತ ಪವಿತ್ರ ಭಾಷೆ. ಆದರೆ ಬೇಟೆಗಾರ ಮೋಸ ಮಾಡಿ ಪಕ್ಷಿಗಳನ್ನು ಹಿಡಿಯುವಂತೆ ಸಾಮಾನ್ಯ ಜನರನ್ನು ಮರಳು ಮಾಡಲು ಪುರೋಹಿತರು ಸಂಸ್ಕೃತ ಬಳಸುತ್ತಾರೆ. ಮೀನಿಗೆ ಹುಲ್ಲು ಹಾಕಿದಂತೆ ಸಾಮಾನ್ಯರಿಗೆ ಸಂಸ್ಕೃತ ಭಾಸವಾಗುತ್ತದೆ.

ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ;
ವಾಗದ್ವೈತವ ಕಲಿತು
ಸಂಸ್ಕ್ರತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ.
ಆತುರವೈರಿ ಮಾರೇಶ್ವರಾ.

ವೈದಿಕ ಪೂಜೆಗಳಿಗೆ ಅರ್ಥವಿಲ್ಲ, ಅವು ಜನರನ್ನು ಗುಲಾಮರನ್ನಾಗಿಸುವ ಸಾಧನ

ಉದಯದ ಪೂಜೆ ಬ್ರಹ್ಮನ ತೊಡಕು.
ಮಧ್ಯಾಹ್ನದ ಪೂಜೆ ವಿಷ್ಣುವಿನ ತೊಡಕು.
ಬೈಗಿನ ಪೂಜೆ ರುದ್ರನ ತೊಡಕು.
ಕೃತ್ಯದ ಪೂಜೆ ಮಿಥ್ಯದ ಜಪ.
ಇವು ಮರ್ತ್ಯರ ಸಿಕ್ಕಿಸುವ ಬಲೆ,
ಆತುರವೈರಿ ಮಾರೇಶ್ವರಾ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು