ಕನ್ನೇರಿ ಸ್ವಾಮಿ ಹಿಂದೂ ಸಮಾವೇಶ ವಿರುದ್ಧ ಯಾದಗಿರಿಯಲ್ಲಿ ಪ್ರತಿಭಟನೆ, ಸಿಎಂಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

“ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ಅವರ ಮೂಲ ತತ್ವಗಳಿಗೆ ವಿರುದ್ಧವಾಗಿದೆ”

ಯಾದಗಿರಿ

ಜಿಲ್ಲೆಯ ಶಹಾಪುರದಲ್ಲಿ ಮೇ 19ರಂದು ನಡೆಯಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಮುಖಂಡರು ಮಾತನಾಡಿ, “ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಗೊಂದಲ ಉಂಟುಮಾಡುವ ಜೊತೆಗೆ, ವಿಭಿನ್ನ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಉದ್ವಿಗ್ನತೆ ಹೆಚ್ಚಿಸುವ ಆತಂಕವಿದೆ,” ಎಂದು ಅಭಿಪ್ರಾಯಪಟ್ಟರು.

“ಇದು ಶರಣರ ಪರಂಪರೆಯ ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವರ ಚಿಂತನೆಗಳನ್ನು ವಿಕೃತಗೊಳಿಸುವ ಅಪಾಯವಿದೆ,” ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ “ಬಸವಾದಿ ಶರಣರ ಹೆಸರಿನಲ್ಲಿ ‘ಹಿಂದೂ ಸಮಾವೇಶ’ ಆಯೋಜನೆ ಮಾಡುತ್ತಿರುವುದು ಅವರ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು, ಇದರಿಂದ ಶರಣರ ಚಿಂತನೆಗಳನ್ನು ತಪ್ಪಾಗಿ ಪ್ರತಿಪಾದಿಸುವ ಸಾಧ್ಯತೆ ಇದೆ” ಎಂದು ತಿಳಿಸಲಾಗಿದೆ.

“ಬಸವಾದಿ ಶರಣರ ತತ್ವಗಳನ್ನು ನಿರ್ದಿಷ್ಟ ರಾಜಕೀಯ ಅಥವಾ ಧಾರ್ಮಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ,” ಎಂಬ ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ.

“ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮುಖ್ಯ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ, ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಅಥವಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

“ರಾಜ್ಯ ಸರ್ಕಾರವು ಜಗಜ್ಯೋತಿ ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಅವರ ತತ್ವಗಳು ಮತ್ತು ಆದರ್ಶಗಳ ಗೌರವವನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ,” ಎಂದು ಸಂಘಟನೆ ತಿಳಿಸಿದೆ.

ಬಸವಣ್ಣನವರ ಸಂದೇಶಗಳು ಸಮಾನತೆ ಮತ್ತು ಮಾನವೀಯತೆ ಆಧಾರಿತವಾಗಿದ್ದು, ಅವುಗಳನ್ನು ಯಾವುದೇ ರೀತಿಯ ಸಂಕುಚಿತ ಚೌಕಟ್ಟಿನಲ್ಲಿ ಬಂಧಿಸಬಾರದು’ ಎಂದು ಮನವಿ ಮೂಲಕ ಎಚ್ಚರಿಕೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೌಹಾರ್ದ ಕರ್ನಾಟಕವು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ, ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಕೆ. ನೀಲಾ, ಡಾ. ಮೀನಾಕ್ಷಿ ಬಾಳಿ, ಪ್ರೊ. ಆರ್‌. ಕೆ. ಹುಡಗಿ, ಚನ್ನಪ್ಪ ಆನೇಗುಂದಿ, ಮರೆಪ್ಪ ಚಟ್ಟೇಕರ್, ಜಾಗತಿಕ ಲಿಂಗಾಯತ ಮಹಾಸಭಾದ ಆರ್. ಜೆ. ಶಟಕಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಶಿವಣ್ಣ ಇಜೇರಿ, ಬಸವರಾಜ ಕೋಣಿನ, ಮಲ್ಲು ಬಳಿಚಕ್ರ, ಬಸಲಿಂಗಮ್ಮ ನಾಟೇಕರ್, ಮಲ್ಲಪ್ಪ ಹೊಸಕೇರಿ, ಅನಿತಾ ಹಿರೇಮಠ, ಎಸ್.ಎಮ್. ಸಾಗರ, ತಮ್ಮಣ್ಣ ಜಹಾಗಿರದಾರ, ಭೀಮಣ್ಣ, ಗಿರಿಯಪ್ಪಗೌಡ ಬಾಣತಿಹಾಳ ಸೇರಿದಂತೆ ಇನ್ನಿತರರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
1 Comment
  • ನಿಮ್ಮ ನಿಲುವಿಗೆ ನನ್ನ ಒಲವು ನಿಮ್ಮ ಜಯ ನಮ್ಮ ಜಯ. ಜಯ ಬಸವ 🙏🏻ಶರಣು 👏🏻👏🏻

Leave a Reply

Your email address will not be published. Required fields are marked *