ಬೆಳಗಾವಿ :
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ನಾಗನೂರು ರುದ್ರಾಕ್ಷಿ ಮಠದ ಸಹಯೋಗದೊಂದಿಗೆ ರವಿವಾರ ರುದ್ರಾಕ್ಷಿಮಠದ ಉಚಿತ ಪ್ರಸಾದ ನಿಲಯದಲ್ಲಿ ಮಾಸಿಕ ಸಾಮೂಹಿಕ ಇಷ್ಟಲಿಂಗ ದೀಕ್ಷೆ ಹಾಗೂ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯಿತು.
ನಾಗನೂರು ರುದ್ರಾಕ್ಷಿಮಠದ ಪೀಠಾದಿಪತಿಗಳಾದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಇಷ್ಟಲಿಂಗ ದೀಕ್ಷೆ ನೀಡಿದರು.

ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಭಾವದ ನುಡಿಗಳನ್ನಾಡಿದ ಜೆ.ಎನ್. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಖ್ಯಾತ ವೈದ್ಯ ಡಾ. ಅವಿನಾಶ ಕವಿ ಮಾತನಾಡಿ, ೧೨ನೇ ಶತಮಾನದ ಶಿವಶರಣರ ಕ್ರಾಂತಿಯಲ್ಲಿ ಇಷ್ಟಲಿಂಗ ಶಿವಯೋಗವು ಕೇವಲ ಒಂದು ಧಾರ್ಮಿಕ ಕ್ರಿಯೆಯಾಗಿರದೆ, ಆತ್ಮೋದ್ಧಾರ ಮತ್ತು ಸಾಮಾಜಿಕ ಸಮಾನತೆಯ ಪ್ರಬಲ ಅಸ್ತ್ರವಾಗಿತ್ತು.
ಬಸವಣ್ಣನವರು ಸ್ಥಾವರಲಿಂಗದ ಅಂಧಶ್ರದ್ಧೆ ಮತ್ತು ಶೋಷಣೆಯನ್ನು ವಿರೋಧಿಸಿ, ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೈವಿಕತೆಯನ್ನು ಸಾಮಾನ್ಯ ಜನರ ಹಸ್ತಕ್ಕೆ ತಂದಿಟ್ಟರು. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ಪವಿತ್ರನೆಂದು ಭಾವಿಸುವಂತೆ ಮಾಡಿದರು.

ಬಸವಣ್ಣನವರ ದೃಷ್ಟಿಯಲ್ಲಿ ಇಷ್ಟಲಿಂಗ ಶಿವಯೋಗವು ‘ದೇಹವೇ ದೇಗುಲ’ ಎಂಬ ತತ್ವದ ಸಾಕಾರರೂಪವಾಗಿದ್ದು, ಇದು ಕಾಯಕ ಮತ್ತು ದಾಸೋಹದ ಮೂಲಕ ಲೌಕಿಕ ಜೀವನವನ್ನು ಪವಿತ್ರಗೊಳಿಸುವ ದಾರಿಯಾಗಿತ್ತು ಎಂದರು.

ಮುಂದುವರೆದು ಮಾತನಾಡಿದ ಅವರು ಇಷ್ಟಲಿಂಗವು ಕೇವಲ ಬಾಹ್ಯ ಕುರುಹಲ್ಲ; ಅದು ಆಂತರಿಕ ‘ಅರಿವಿನ’ ಸಂಕೇತ. ಸಾಧಕನು ಬಾಹ್ಯ ಇಷ್ಟಲಿಂಗ ಪೂಜೆಯಿಂದ ಆಂತರಿಕ ಪ್ರಾಣಲಿಂಗ ಮತ್ತು ಅಂತಿಮವಾಗಿ ಪರಮ ಸತ್ಯವಾದ ಭಾವಲಿಂಗದೆಡೆಗೆ ಸಾಗಬೇಕೆಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಕೇಂದ್ರದ ಯೋಜನಾಧಿಕಾರಿ ರಾಜಶೇಖರ ಪಾಟೀಲ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು. ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ, ನಗರ ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಮುರುಗೇಶ ಬಾಳಿ ಹಾಗೂ ಪ್ರಸಾದ ನಿಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಶರಣರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
