ಬಾಗಲಕೋಟೆಯಲ್ಲಿ ನೆಲ ಕಚ್ಚಿದ ಹಿಂದುತ್ವ, ಉಮೇಶ್ ಮೇಟಿ ಅವರಿಗೆ ದಾಖಲೆ ಗೆಲುವು

ಬಸವ ಮೀಡಿಯಾ
ಬಸವ ಮೀಡಿಯಾ

ಬಾಗಲಕೋಟೆ

ಮಾಧ್ಯಮಗಳಲ್ಲಿ ಆರೆಸ್ಸೆಸ್, ಹಿಂದುತ್ವದ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗುವ ಬಾಗಲಕೋಟೆಯ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅನಿರೀಕ್ಷಿತ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಒಟ್ಟು 97,941 ಮತಗಳು ಲಭಿಸಿದರೆ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ 76,075 ಮತಗಳು ದೊರೆತಿವೆ. ಈ ಮೂಲಕ ಉಮೇಶ್ ಮೇಟಿ ಅವರು 21,866 ಮತಗಳ ಅಂತರದಲ್ಲಿ ಸ್ಪಷ್ಟ ಮುನ್ನಡೆಯೊಂದಿಗೆ ಗೆಲುವು ಸಾಧಿಸಿದ್ದಾರೆ.

2023ರ ಚುನಾವಣೆಯಲ್ಲಿ ಉಮೇಶ್ ಮೇಟಿ ಅವರ ತಂದೆ ಚರಂತಿಮಠ ಅವರನ್ನು 5,878 ಮತಗಳ ಅಂತರದಿಂದ ಸೋಲಿಸಿದ್ದರು. ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.

ಮತ ಎಣಿಕೆ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭಗೊಂಡಿದ್ದು, ಆರಂಭಿಕ ಸುತ್ತುಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ಪ್ರತಿ ಸುತ್ತಿನ ಫಲಿತಾಂಶ ಹೊರಬರುವಂತೆ ಮುನ್ನಡೆ ಹೆಚ್ಚುತ್ತಾ ಹೋಗಿದ್ದು, ಕೊನೆಗೆ ಭರ್ಜರಿ ಅಂತರದಲ್ಲಿ ಗೆಲುವು ಖಚಿತಗೊಂಡಿತು.

ಫಲಿತಾಂಶ ಹೊರಬಂದ ನಂತರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ, ಸಂಭ್ರಮಾಚರಣೆ ನಡೆಸಿದರು.

ಗೆಲುವಿನ ಬಳಿಕ ಮಾತನಾಡಿದ ಉಮೇಶ್ ಮೇಟಿ ಅವರು “ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲಾ ಮತದಾರರಿಗೆ ಧನ್ಯವಾದಗಳು ತಿಳಿಸುತ್ತೇನೆ. ಈ ಗೆಲುವು ನನ್ನ ವೈಯಕ್ತಿಕ ಸಾಧನೆಯಲ್ಲ, ಇಡೀ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಗ್ಯಾರಂಟಿ ಸರಕಾರದ ಗೆಲುವಾಗಿದೆ” ಎಂದು ಹೇಳಿದರು.

ಹಿಂದುತ್ವ, ಆರ್‌ಎಸ್‌ಎಸ್‌ನಿಂದ ಸಾಂಸ್ಥಿಕ ಬೆಂಬಲ ಮತ್ತು ಚರಂತಿಮಠ ಅವರ ಅನುಭವವನ್ನು ನಂಬಿದ್ದ ಬಿಜೆಪಿಗೆ ಹಿನ್ನಡೆಯಾಗಲು ಹಲವಾರು ಕಾರಣಗಳು ಗೋಚರಿಸುತ್ತಿವೆ.

ಅನುಕಂಪದ ಅಲೆ

ಮಾಜಿ ಸಚಿವ ಎಚ್‌ವೈ ಮೇಟಿ ಅವರು ಬಾಗಲಕೋಟೆ ರಾಜಕಾರಣದಲ್ಲಿ ದಶಕಗಳ ಕಾಲ ಪ್ರಭಾವ ಹೊಂದಿದ್ದ ನಾಯಕ. ಅವರ ಸರಳತೆ ಹಾಗೂ ಜನಪ್ರಿಯತೆ ಉಮೇಶ್‌ ಮೇಟಿ ಅವರ ಪರವಾಗಿ ಸಹಾನುಭೂತಿ ಮತಗಳು ಬೀಳುವಂತೆ ಮಾಡಿದವು.

ಒಂದಾದ ಕಾಂಗ್ರೆಸ್

ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಕಾಂಗ್ರೆಸ್‌ ಸಚಿವರು ಮತ್ತು ಪ್ರಭಾವಿ ನಾಯಕರನ್ನು ಪ್ರಚಾರಕ್ಕೆ ಇಳಿಸಿತ್ತು.

ತಮ್ಮ ಆಪ್ತ ಎಚ್‌ವೈ ಮೇಟಿಯವರ ಪುತ್ರನನ್ನು ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲೇಬೇಕು ಎಂದು ಸಿದ್ದರಾಮಯ್ಯ ಪಣತೊಟ್ಟಿದ್ದರು. ಒಂದು ವಾರ ಬಾಗಲಕೋಟೆಯಲ್ಲಿಯೇ ಇದ್ದು ಪ್ರಚಾರ ನಡೆಸಿದ್ದರು.

ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಗೃಹ ಸಚಿವರಾದ ಜಿ. ಪರಮೇಶ್ವರ್ ಸೇರಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹಾಗೂ ಶಾಸಕರು, ಸಚಿವರು, ಸಿಎಂ ಪುತ್ರ ಯತೀಂದ್ರ ಆಗಮಿಸಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಿದ್ದರು.

ಸಚಿವರಾದ ಸತೀಶ ಜಾರಕಿಹೊಳಿ, ಆರ್‌.ಬಿ. ತಿಮ್ಮಾಪುರ ವಿವಿಧ ಸಮುದಾಯಗಳಲ್ಲಿ ಬೆಂಬಲವನ್ನು ಕ್ರೋಢೀಕರಿಸಲು ಕೆಲಸ ಮಾಡಿದರು.

ಟಿಕೆಟ್‌ ಹಂಚಿಕೆ, ಚುನಾವಣಾ ಪ್ರಚಾರ ತಂತ್ರ, ಸಂಪನ್ಮೂಲ ವಿತರಣೆ, ನಾಯಕರ ನಡುವಿನ ಅಸಮಾಧಾನ ತಿಳಿಗೊಳಿಸುವ ಹೊಣೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ವಹಿಸಲಾಗಿತ್ತು. ಎರಡು ತಿಂಗಳ ದುಡಿದ ಜಾರಕಿಹೊಳಿ ಇಡೀ ಚುನಾವಣೆಯನ್ನು ನಿಭಾಯಿಸಿದರು.

ಜೊತೆಗೆ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಇತರ ನಾಯಕರನ್ನು ಸಮಾಧಾನಪಡಿಸುವಲ್ಲಿ ಪಕ್ಷದ ಹೈಕಮಾಂಡ್ ಯಶಸ್ವಿಯಾಯಿತು. ಪಕ್ಷದ ಒಳಗೆ ಯಾವುದೇ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಳ್ಳದಂತೆ ನೋಡಿಕೊಂಡಿದ್ದು, ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಪ್ರೇರಣೆಯಾಯಿತು.

ಚುನಾವಣಾ ಪೂರ್ವದಲ್ಲಿ ಮೇಟಿ ಕುಟುಂಬದೊಳಗೆ ಕೆಲವು ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳಿದ್ದವು. ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್.ವೈ. ಮೇಟಿ ಅವರ 4 ಮಕ್ಕಳೆಲ್ಲರೂ ಒಂದಾಗಿ ಪ್ರಚಾರದ ಕಣಕ್ಕಿಳಿದರು.

ಮುಸ್ಲಿಂ ಮತಗಳು

ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತಗಳ ಬಳಿಕ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ವೀರಣ್ಣ ಚರಂತಿಮಠ ಅವರು ನನಗೆ ಮುಸ್ಲಿಂ ವೋಟು ಬೇಡ ಎಂದು ಘೋಷಣೆ ಮಾಡಿದ್ದರು.

ಟಿಕೆಟ್ ಘೋಷಣೆಯಾದ ನಂತರ ಚರಂತಿಮಠ ಬಾಗಲಕೋಟೆಯಲ್ಲಿ ನನ್ನ ಗೆಲುವಲ್ಲ. ಬಿಜೆಪಿ, ಹಿಂದುತ್ವದ ಗೆಲುವಾಗಬೇಕು ಎಂದು ಹೇಳಿದ್ದರು.

ಲಿಂಗಾಯತ ಹೊರತುಪಡಿಸಿ ಇತರೆ ಸಮುದಾಯಗಳನ್ನು ಓಲೈಕೆ ಮಾಡುವಲ್ಲಿ ವೀರಣ್ಣ ಮುಂದಾಗಲಿಲ್ಲ ಎನ್ನಲಾಗಿದೆ.

ಮಹಿಳಾ ಮತದಾರರು

ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅತಿ ದೊಡ್ಡ ಬಲವಾಗಿದ್ದು ಮಹಿಳಾ ಮತದಾರರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ‘ಗೃಹಲಕ್ಷ್ಮಿ’ ಮತ್ತು ‘ಶಕ್ತಿ’ ಯೋಜನೆಗಳು ಮಹಿಳಾ ಮತದಾರರನ್ನು ಕಾಂಗ್ರೆಸ್‌ ಪರವಾಗಿ ನಿಲ್ಲುವಂತೆ ಮಾಡಿದೆ. ಮಹಿಳಾ ಮತಗಳ ಧ್ರುವೀಕರಣವೇ ಉಮೇಶ್‌ ಮೇಟಿ ಅವರ ಗೆಲುವಿನ ಅಂತರವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಈ ಬಾರಿ ಮಹಿಳೆಯರೇ ಹೆಚ್ಚಿನ ಮತ ಚಲಾಯಿಸಿದ್ದರು.

ಬಿಜೆಪಿಯಲ್ಲಿನ ಸಮಸ್ಯೆಗಳು

ವಿಧಾನ ಪರಿಷತ್ ಸದಸ್ಯರಾದ ಪಿ ಹೆಚ್ ಪೂಜಾರ ಹಾಗೂ ಮಾಜಿ ಸಚಿವರಾದ ಮುರುಗೇಶ ನಿರಾಣಿ ಅವರು ಅಭ್ಯರ್ಥಿ ವೀರಣ್ಣ ಚರಂತಿಮಠ ಅವರೊಡನೆ ವೈಮನಸ್ಸನ್ನು ಬಗೆಹರಿಸಲು ಪ್ರಯತ್ನ ಮಾಡಲಾಗಿತ್ತು.

ಆದರೆ ದಾಖಲಾದ ಮತಗಳನ್ನು ನೋಡಿದಾಗ ಈ ಸಮಸ್ಯೆ ಶಮನವಾದ ಲಕ್ಷಣಗಳು ಕಂಡು ಬಂದಿಲ್ಲ. ಒಗ್ಗಟ್ಟಿನ ಮಂತ್ರ ವೇದಿಕೆಗಷ್ಟೇ ಸೀಮಿತವಾಯಿತೇ ಎಂಬುದು ಕಾರ್ಯಕರ್ತರ ಪ್ರಶ್ನೆಯಾಗಿದೆ.

ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆ ದುರ್ಬಲವಾದ್ದದ್ದು ಗೊತ್ತಿದ್ದು, ಸಬಲಗೊಳಿಸಲು ಪ್ರಯತ್ನಗಳು ನಡೆಯದ ಕಾರಣ ಸೋಲು ಎದುರಿಸಬೇಕಾಯಿತು ಎನ್ನುತ್ತಾರೆ ಬಿಜೆಪಿ ಮುಖಂಡರು.

ಅಭ್ಯರ್ಥಿ ವೀರಣ್ಣ ಚರಂತಿಮಠರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಕಾಂಗ್ರೆಸ್‌ ಸೇರ್ಪಡೆಯೂ ಪರಿಣಾಮ ಬೀರಿದೆ.

ಯತ್ನಾಳರನ್ನು ಕರೆಸಬೇಕು ಎಂದು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಒತ್ತಡ ಹೇರಲಾಗಿತ್ತು. ನಂತರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಯತ್ನಾಳರಿಂದ ಪಕ್ಷದಲ್ಲಿನ ಬಿರುಕು ಹೆಚ್ಚಾಯಿತು ಎನ್ನಲಾಗಿದೆ.

ಚುನಾವಣೆ ವೇಳೆ ಯತ್ನಾಳ, ‘ಚರಂತಿಮಠರ ಗೆಲುವಿನ ನಂತರ ಉಳಿದ ನಾಯಕರೇ ನನ್ನ ಸೇರ್ಪಡೆ ಬಗ್ಗೆ ನಾಯಕರ ಎದುರು ಮಾತನಾಡುವರು’ ಎಂದಿದ್ದರು. ಮತ್ತೆ ಪಕ್ಷಕ್ಕೆ ಮರಳುವ ಮಾರ್ಗ ಈಗ ಮತ್ತಷ್ಟು ಕಠಿಣವಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
3 Comments
  • ಹಿಂದೂ ಎಂದು ವೀರಶೈವರ್ ವಾದ ಲಿಂಗಾಯತ ಎನ್ನುವ ಹೆಸರಿಗೆ ಹಿಂದೂ ಸೇರಿಸಿ ದಾರಿ ತಪ್ಪಿಸಿದವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಲಿಂಗಾಯತ ಜನರು ಈ ಜಯ ದವಣಗೇರಿ ಜಯ ಲಿಂಗಾಯತ ಜಯ ಎಂದು ಹೇಳು 👏🏻💐ಶರಣು 🙏🏻🙏🏻

  • ಕೋಮುವಾದಿ ಅಸದ್ ಉದ್ದಿನ ಓವೈಸಿ
    ಹೆಜ್ಜೆ ಇಟ್ಟಲ್ಲಿ ಬಿಜೆಪಿ ಗೆಲವು ಖಚಿತ.

    ಹಿಂದುವಾದಿ ಕಣ ಗೆಡಿ ಸ್ವಾಮಿ, ಯತ್ನಾಳ ಗೌಡ ಹೆಜ್ಜೆ ಇಟ್ಟಲ್ಲಿ
    ಲಿಂಗಾಯತರ ವೋಟು, ಕಾಂಗ್ರೆಸ್ ಗೆ ಖಚಿತ

  • ಮೇಟಿಯವರಿಗೆ ಬಹುತೇಕ ಕುಂಕುಮದಾರಿಗಳು ಮತ ಹಾಕಿಲ್ಲ,ಅಷ್ಟಾದರೂ ಇವರಿಗೆ ಕುಂಕುಮದ ಹುಚ್ಚೇಕೆ.ಹೀಗಾಗಿಯೇ ಕಾಂಗ್ರೆಸ್ ಪಕ್ಷ ಬೇರೆ ಕಡೆ ಸೋಲುತ್ತಿದೆ.ಇವರು ಕುಂಕುಮದ ಬದಲಿಗೆ ಭಂಡಾರ ವಿಭೂತಿ ಧರಿಸಬೇಕಿತ್ತು.

Leave a Reply

Your email address will not be published. Required fields are marked *