ಷಣ್ಮುಖ ಶಿವಯೋಗಿಗಳ ವಿಜೃಂಭಣೆಯ ರಥೋತ್ಸವ, ವಚನ ಪಲ್ಲಕ್ಕಿ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಜೇವರ್ಗಿ :

ಸ್ಥಳೀಯ ಶರಣರು, 17ನೇ ಶತಮಾನದ ಶ್ರೇಷ್ಠ ವಚನಕಾರರಾದ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ವಿರಕ್ತಮಠದ ಟ್ರಸ್ಟ್ ಕಮಿಟಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಠದ ಆವರಣದಲ್ಲಿ ಏಪ್ರೀಲ್ 23 ರಿಂದ ಬಸವಬೆಳವಿಯ ಪೂಜ್ಯ ಶರಣಬಸವ ಸ್ವಾಮೀಜಿ ಅವರಿಂದ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮ ನಡೆಯಿತು.

ಬುಧವಾರ ಪ್ರವಚನ ಮಹಾಮಂಗಲಗೊಂಡು, ನಂತರ ಲಘು ಉಚ್ಚಾಯ ಉತ್ಸವ ನಡೆಯಿತು. ಗುರುವಾರ ಬೆಳಿಗ್ಗೆ 6 ಗಂಟೆಗೆ ಷಣ್ಮುಖ ಶಿವಯೋಗಿಗಳ ಕರ್ತೃ ಗದ್ದುಗೆಗೆ ಬಸಯ್ಯಸ್ವಾಮಿ ಹಿರೇಮಠ ಅವರಿಂದ ವಚನಾಭಿಷೇಕ, ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಶ್ರೀಮಠದಿಂದ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಆರಂಭಗೊಂಡು, ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮಧ್ಯಾಹ್ನ 3 ಗಂಟೆಗೆ ಶ್ರೀಮಠಕ್ಕೆ ಬಂದು ತಲುಪಿತು.

ಸಂಜೆ 6.30ಕ್ಕೆ ಪುರವಂತರ ಸೇವೆಯ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಷಣ್ಮುಖ ಶಿವಯೋಗಿಗಳಿಗೆ ಜಯವಾಗಲಿ, ಬಸವಾದಿ ಶರಣರಿಗೆ ಜಯವಾಗಲಿ ಎಂಬ ಜಯಘೋಷಗಳೊಂದಿಗೆ ಸಂಭ್ರಮ ಸಡಗರದಿಂದ ಭಕ್ತರು ರಥ ಎಳೆದರು.

ರಥದ ಮೇಲೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತರು ತಮ್ಮ ಹರಕೆ ತೀರಿಸಿದರು. ಜಾತ್ರೆಯ ನಿಮಿತ್ತ ಬಂದ ಭಕ್ತರಿಗೆ ಮಠದ ಆವರಣದಲ್ಲಿ ಅನ್ನಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸಾಹು ಸೀರಿ, ಉಪಾಧ್ಯಕ್ಷ ಸೋಮಣ್ಣ ಕಲ್ಲಾ, ಷಣ್ಮುಖಪ್ಪಗೌಡ ಹಿರೇಗೌಡ, ಸಂಗನಗೌಡ ಪಾಟೀಲ ಗುಳ್ಳಾಳ, ಬಸವ ಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಷಣ್ಮುಖಪ್ಪ ಸಾಹು ಗೋಗಿ, ಷಣ್ಮುಖಪ್ಪಗೌಡ ಮಾಲಿಪಾಟೀಲ, ನೀಲಕಂಠ ಅವಂಟಿ, ರವಿ ಕೋಳಕೂರ, ದಯಾನಂದ ದೇವರಮನಿ, ಮಲ್ಲಿಕಾರ್ಜುನ ಪಾಟೀಲ ಬಿರಾಳ, ಈರಣ್ಣ ಬನ್ನೆಟ್ಟಿ, ಸಿದ್ದಣ್ಣಗೌಡ ಹಳಿಮನಿ, ಶಿವಾನಂದ ಮಠಪತಿ, ಅಖಂಡು ಶಿವಣ್ಣಿ, ವಿಶ್ವನಾಥ ಇಮ್ಮಣ್ಣಿ, ದಂಡಪ್ಪಗೌಡ ಪೊಲೀಸಪಾಟೀಲ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ರವಿ ಕೋಳಕೂರ, ಶಿವಕುಮಾರ ಕಲ್ಲಾ, ಅನೀಲ ರಾಂಪೂರ, ಈರಣ್ಣ ಭೂತಪೂರ, ಜಗದೀಶ ವಿಶ್ವಕರ್ಮ, ನಾಗರಾಜ ಬುಟ್ನಾಳ, ಸುರೇಶ ಹಳ್ಳಿ, ರಾಜೇಶ್ವರಿ ಪಾಟೀಲ, ಶ್ರೀದೇವಿ ಕಲ್ಲಾ, ವಿಜಯಲಕ್ಷ್ಮಿ ಪಾಟೀಲ, ರಾಜೇಶ್ವರಿ ಹಿರೇಗೌಡರ, ಸಾವಿತ್ರಿ ಹಳ್ಳಿ, ಕಾವೇರಿ ಪಾಟೀಲ, ಚಂದ್ರು ಸೀರಿ ಸೇರಿದಂತೆ ಸಹಸ್ರಾರು ಭಕ್ತ ಸಮುದಾಯ ಉಪಸ್ಥಿತರಿದ್ದರು.

ಸಿಪಿಐ ರಾಜೇಸಾಬ ನದಾಫ್, ಪಿಎಸ್ಐ ಗಜಾನನ ಬಿರಾದಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *