ಮಹಾಂತ ಶಿವಯೋಗಿಗಳ ನಾಲ್ಕು ದಿನಗಳ 8ನೇ ಶರಣೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಇಳಕಲ್ಲ :

ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ. ಮಹಾಂತ ಶಿವಯೋಗಿಗಳ ೮ನೇ ಶರಣೋತ್ಸವ ಮೇ ೧೬ರಿಂದ ೧೯ರವರೆಗೆ ನಡೆಯಲಿದೆ.

ಶಿವಯೋಗಿಗಳ ಸ್ಮರಣೋತ್ಸವದಲ್ಲಿ ಮಹಾಂತ ಜೋಳಿಗೆ ನಡೆಸುವ ಜತೆಗೆ ಲಿಂಗಾಂಗಯೋಗದ ಪ್ರಾತ್ಯಕ್ಷಿಕೆಯನ್ನು ತೋರ್ಪಡಿಸುವುದೇ ಶರಣೋತ್ಸವದ ಸದುದ್ದೇಶವು ಇದೆಯೆಂದು ಪೂಜ್ಯ ಗುರುಮಹಾಂತ ಶ್ರೀಗಳು ಹೇಳಿದರು.

ಅವರು ಶ್ರೀಮಠದ ದಾಸೋಹ ಭವನದಲ್ಲಿ ಈಚೆಗೆ ನಡೆದ ಸರ್ವಧರ್ಮ ಸಮಾಜ ಬಾಂಧವರ ಹಾಗೂ ಶ್ರೀಮಠದ ಸಕಲ ಸದ್ಭಕ್ತರ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಸಮಾಜ ಸುಧಾರಣೆಗಾಗಿ ಡಾ. ಮಹಾಂತ ಶಿವಯೋಗಿಗಳು ಸುಮಾರು ೫ ದಶಕಗಳುದ್ದಕ್ಕೂ ಮಾಡಿದ ಶರಣ ಸಿದ್ಧಾಂತ ವಿದ್ಯಾಪೀಠದಡಿ ಮಾಡಿದ ಸತ್ಕಾರ್ಯಗಳನ್ನು ೩ ದಿನಗಳ ಕಾಲ ಶ್ರೀಗಳ ಸ್ಮರಣೆಯಲ್ಲಿ ನಡೆಸಬೇಕಿದೆ.

ಮೇ. ೧೬ ರಂದು ಶಿಬಿರದ ಉದ್ಘಾಟನೆ, ೧೭ ಹಾಗೂ ೧೮ ರಂದು ಬೆಳಗಿನ ಜಾವ ೬ ಗಂಟೆಯಿಂದ ೭ ಗಂಟೆಯವರೆಗೆ ಪ್ರಭಾತ ಸಂಚಲನ, ಬೆಳಗ್ಗೆ ೭-೩೦ ರಿಂದ ೯ ಗಂಟೆಯವರೆಗೆ ೩ ದಿನಗಳ ಕಾಲ ಇಷ್ಟಲಿಂಗ ಯೋಗ, ಅದರ ಕ್ರಮ, ಇಷ್ಟಲಿಂಗದ ವೈಜ್ಞಾನಿಕತೆ ಕುರಿತ ಪ್ರಾತ್ಯಕ್ಷಿಕೆ ನಡೆಯಲಿದೆ.

ಬೆಳಗ್ಗೆ ೯-೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ೩ ಪಾಠಗಳು, ನಂತರ ಪ್ರಸಾದ ವ್ಯವಸ್ಥೆ, ಸಂಜೆ ೬ ಗಂಟೆಗೆ ಪ್ರತಿದಿನ ಒಂದು ವಿಷಯದ ಮೇಲೆ ಬಹಿರಂಗ ಚರ್ಚೆ, ನಂತರ ಸಂಜೆ ಜಗದ್ಗುರುಗಳ ಸಾನಿಧ್ಯದಲ್ಲಿ ಉಪನ್ಯಾಸ ನಂತರ ಆಶೀರ್ವಚನ ಜರುಗಲಿದೆ.

ಮೇ. ೧೯ರಂದು ಪೂಜ್ಯ ಮಹಾಂತ ಶಿವಯೋಗಿಗಳ ಸ್ಮರಣೆ ಹಾಗೂ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಒಟ್ಟಾರೆ ಲಿಂಗಾಯತ ಧರ್ಮದ ತತ್ವಗಳನ್ನು ತಿಳಿದುಕೊಳ್ಳುವುದೇ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಸುಮಾರು ೧೦ ವರ್ಷಗಳಿಗೊಮ್ಮೆ ದೊರೆಯುವ ಇಂತಹ ಶಿಬಿರದ ೩ ದಿನಗಳನ್ನೂ ಭಕ್ತಾದಿಗಳು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಹಿರಿಯರಾದ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಜಿ.ಪಿ. ಪಾಟೀಲ, ಲಕ್ಷ್ಮಣ ಗುರಂ, ಎಂ.ವಿ. ಪಾಟೀಲ, ಕಿರಣ ಬಿಜ್ಜಳ, ಗುರಣ್ಣ ಮರಟದ, ಡಾ.ಎಸ್.ವಿ. ಪಾಟೀಲ, ಕೋಪಿ ಕಠಾರೆ, ಡಾ. ಅರುಣಾ ಅಕ್ಕಿ, ಸಿ.ಸಿ. ಚಂದ್ರಾಪಟ್ಟಣ, ಎಲ್.ಬಿ. ಅರಸಿದ್ದಿ, ವಿಶ್ವನಾಥ ಪಾಟೀಲ ಮತ್ತಿತರರು ಮಾತನಾಡಿದರು. ಸಂಗಣ್ಣ ಗದ್ದಿ ನಿರೂಪಿಸಿ ಶರಣು ಸಮರ್ಪಿಸಿದರು.

೭ ದಿನ ೮ ಗ್ರಾಮಗಳಲ್ಲಿ ಮಹಾಂತ ಜೋಳಿಗೆ ಸಂಚಾರ:

ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ. ಮಹಾಂತ ಶಿವಯೋಗಿಗಳವರ ೮ನೇ ಪುಣ್ಯಸ್ಮರಣೆಯ ನೆನಹಿನಲ್ಲಿ ಸಮೀಪದ ೮ ಗ್ರಾಮಗಳಲ್ಲಿ ಮಹಾಂತ ಜೋಳಿಗೆ ನಡೆಸುವ ಕಾರ್ಯ ಮೇ. ೧೦ ರಿಂದ ಆರಂಭಗೊಳಿಸಲಾಗುವದು ಎಂದು ಪೂಜ್ಯ ಗುರುಮಹಾಂತ ಶ್ರೀಗಳು ತಿಳಿಸಿದರು.

ಗುರುವಾರ ಸಂಜೆ ಶ್ರೀಮಠದ ಶಿವಾನುಭವ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಎರಡನೇ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

ಶರಣ ಸಿದ್ಧಾಂತ ವಿದ್ಯಾಪೀಠದ ಅಡಿಯಲ್ಲಿ ಗೊರಬಾಳ, ವಜ್ಜಲ, ತುಂಬ, ಚಿನ್ನಾಪೂರ ಎಸ್.ಟಿ., ಚಿಕ್ಕಶಿಂಗನಗುತ್ತಿ, ಚಿಕ್ಕಕೊಡಗಲಿ, ಇಂಗಳಗಿ ಗ್ರಾಮಗಳಲ್ಲಿ ಹಮ್ಮಿಕೊಂಡ ಮಹಾಂತ ಜೋಳಿಗೆ ಪ್ರತಿ ಗ್ರಾಮದಲ್ಲೂ ಸಂಜೆ ೫ ಗಂಟೆಯಿಂದ ನಡೆಸಲಾಗುವದು ಎಂದು ಹೇಳಿದರು.

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ ಮಾತನಾಡಿ, ಶ್ರೀಮಠದಿಂದ ಸಂಜೆ ೪-೩೦ಕ್ಕೆ ಗ್ರಾಮಗಳಿಗೆ ಶಾಲಾ ಬಸ್ ವ್ಯವಸ್ಥೆಯ ಮೂಲಕ ಮಹಾಂತ ಜೋಳಿಗೆ ಪ್ರಯಾಣ ಆರಂಭಿಸಲಾಗುವದು.

ಭವಿಷ್ಯತ್ತಿನ ಬದುಕನ್ನೇ ಹಾಳು ಮಾಡುವ ದುಶ್ಚಟ, ದುರ್ಗುಣಗಳನ್ನು ಹಿಡಿದು ಸಂಚರಿಸುವ ಮಹಾಂತ ಜೋಳಿಗೆಗೆ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ತಮಗೆ ಪರಿಚಿತರಲ್ಲಿರುವ ದುಶ್ಚಟ ಬಿಡಿಸುವ ಕಾರ್ಯಕ್ಕೆ ಕೈಜೋಡಿಸಿ, ಮಹಾಂತ ಜೋಳಿಗೆ ಬಲಪಡಿಸಿ ಎಂದರು.

೧೭ರಿಂದ ೧೯ರ ವರೆಗೆ ೩ ದಿನಗಳ ಕಾಲ ಬೆಳಗಿನ ಜಾವ ನಿಗದಿಪಡಿಸಿದ ಮಾರ್ಗದಲ್ಲಿ ಪ್ರಭಾತ ಸಂಚಲನದ ಜಾಗೃತಿ ಜಾಥಾ ಸಹ ನಡೆಯಲಿದ್ದು ಸಕಲ ಸದ್ಭಕ್ತರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

ಮಹಿಳಾ ಸಂಘಟನೆ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *