“ಸರ್ವಸಮುದಾಯದ ಪ್ರತಿನಿಧಿ ಬಸವೇಶ್ವರರು ಸರ್ವಕಾಲಕ್ಕೂ ಪ್ರಸ್ತುತರು”

ಬಸವ ಮೀಡಿಯಾ
ಬಸವ ಮೀಡಿಯಾ

ಡಾ. ವೀರಣ್ಣ ರಾಜೂರ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ

ಧಾರವಾಡ :            

ಬಸವೇಶ್ವರರು ಎಲ್ಲಾ ಸಮುದಾಯಗಳ ಸರ್ವ-ಸಮ್ಮತವಾದ ಪ್ರತಿನಿಧಿಯಾಗಿ ಎಲ್ಲಾ ಕಾಲದಲ್ಲಿ ಪ್ರಸ್ತುತರಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.

ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯ ಶ್ರೀ ಬಸವೇಶ್ವರ ಪೀಠವು ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

12ನೇ ಶತಮಾನದಿಂದ 21 ನೇ ಶತಮಾನದವರೆಗೆ ಬಸವೇಶ್ವರರು ಒಂದು ಚೈತನ್ಯದ ಮೂಲಕ ಒಂದು ಆಶಾಕಿರಣವಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಬಸವೇಶ್ವರರು ಎಲ್ಲಾ ಸಮುದಾಯಗಳ ಸರ್ವಸಮ್ಮತರಾಗಿ ಇಂದಿಗೂ ಪ್ರಸ್ತುತರಾಗಿದ್ದಾರೆ.

ಸಮಾಜದಲ್ಲಿರುವ ಅನೇಕ ಕಂದಾಚಾರ, ತಾರತಮ್ಯ ಮತ್ತು ಪುರೋಹಿತಶಾಹಿ ಶೋಷಣೆ ವಿರುದ್ಧ ಹೋರಾಡಿ ಸಮಸಮಾಜಕ್ಕೆ ನಾಂದಿ ಹಾಡಿದರು. ವಚನ ಪರಂಪರೆಯಿಂದ ‌ಕನ್ನಡ ಸಾಹಿತ್ಯ ವಿಶೇಷತೆ ಪಡೆದಿದೆ. ಸುಮಾರು 250 ಜನರು ಸಮಾಜದ ಕೆಳಸ್ತರದ ವಚನಕಾರರು ವಚನ ಸಾಹಿತ್ಯವನ್ನು ಬೆಳೆಸಿದರು.

ಬಸವೇಶ್ವರ ಜಯಂತಿ ಕೇವಲ ಆಚರಣೆ ಆಗಬಾರದು. ಬಸವೇಶ್ವರ ಅವರ ವಚನ ತತ್ವಗಳನ್ನು ಅಳವಡಿಸಿ ಕೊಳ್ಳಬೇಕು. ಬಸವೇಶ್ವರರು ಕೇಳಸ್ತರದ ಕಾಯಕ ಜೀವಿಗಳ ಧ್ವನಿಯಾಗಿ ನಿಂತರು ಎಂದರು.

ಬಸವೇಶ್ವರರು ವಚನ ಸಾಹಿತ್ಯದ ಚಳುವಳಿ ಮೂಲಕ ವರ್ಣಾಶ್ರಮ ಪರಿಕಲ್ಪನೆಯನ್ನು ತೊಡೆದು ಹಾಕಲು ‌ಪ್ರಯತ್ನಿಸಿದರು. ಸಮಾಜದಲ್ಲಿ ಸಾಮರಸ್ಯವನ್ನು ಹುಟ್ಟುಹಾಕಲು ಅಂದಿನ ಶರಣರು, ವಚನಕಾರರ ಪಾತ್ರ ಬಹಳ ಇದೆ ಎಂದರು. ವಚನ ಚಳುವಳಿಯ ಮೂಲಕ ಶ್ರೇಣೀಕೃತ ಸಮಾಜವನ್ನು ತೊಡೆದುಹಾಕುವುದು ವಚನ ಚಳುವಳಿಯ ಮುಖ್ಯ ಉದ್ದೇಶವಾಗಿತ್ತು ಎಂದರು.

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ,  ಬಸವೇಶ್ವರರು ಸಾಮಾಜಿಕ ವಿಷಯಗಳ ಮೂಲಕ ಇಂದಿಗೂ ಪ್ರಸ್ತುತರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠದಲ್ಲಿ ನಡೆಯುವ ಚಟುವಟಿಕೆಗಳು, ದಾಸೋಹ ಪರಂಪರೆಯ ಮ‌ೂಲಕ ನಡೆಯುತ್ತಿರುವದು ವಿಶೇಷ ಎಂದರು.

ಬಸವಣ್ಣನವರ ತತ್ವಗಳು ಕೇವಲ ಹೇಳುವದು ಆಗಬಾರದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಸೂಕ್ತ ಎಂದರು. ಬಸವಣ್ಣನವರು ಒಬ್ಬ ಆರ್ಥಿಕ ತಜ್ಞನಾಗಿ, ವೈದ್ಯನಾಗಿ, ಸಾಮಾಜಿಕ ಚಿಂತಕನಾಗಿ, ಒಬ್ಬ ಉತ್ತಮ ಆಡಳಿತಗಾರನಾಗಿ ಇಂದಿಗೂ ಪ್ರಸ್ತುತತೆಯನ್ನು ಹೊಂದಿದ್ದಾರೆ ಎಂದರು.

ಬಸವಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಮಾತನಾಡಿ, ಬಸವೇಶ್ವರ ಅವರ ಜಯಂತಿಗಳು ಡಿಜೆ ಮ‌ೂಲಕ ಆಚರಿಸಿದರೆ ಅರ್ಥವನ್ನು ಕಳೆದುಕೊಳ್ಳುತ್ತವೆ ಎಂದು ಅವರು, ಬಸವಶ್ರೀ ಪ್ರಶಸ್ತಿ ನನಗೆ ಬಯಸಿ ಬಂದ ಭಾಗ್ಯ. ಕರ್ನಾಟಕ ವಿಶ್ವವಿದ್ಯಾಲಯದ ಅರಿವೇ ಗುರು ಮತ್ತು ಬಸವಶ್ರೀ ಪ್ರಶಸ್ತಿಗಳು ದೊರಕಿರುವುದು ನಾನು ನಿಜಕ್ಕೂ ಭಾಗ್ಯವಂತ. ನನ್ನ ಬದುಕನ್ನು ರೂಪಿಸಿದ ಡಾ.ಎಂ.ಎಂ. ಕಲಬುರ್ಗಿ ಮತ್ತು ಡಾ. ಆರ್.ಸಿ. ಹಿರೇಮಠ ಹಾಗೂ ಶಿವಾನಂದ ಪ್ರಾಧ್ಯಾಪಕರಿಗೆ ನಾನು ಚಿರ ಋಣಿಯಾಗಿದ್ದಾನೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಧಾರವಾಡದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಬಸವೇಶ್ವರರು ಸಕಲ ಜ್ಞಾನವನ್ನು ಹೊಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯದವರು ಬಸವಶ್ರೀ ಪ್ರಶಸ್ತಿ ‌ನೀಡುತ್ತಿರುವದು ಸಂತಸದ ಸಂಗತಿ ಆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿಗಳಾದ ಪ್ರೊ.ಎ.ಎಂ. ಖಾನ್ ಮಾತನಾಡಿ, ಬಸವೇಶ್ವರರ ತತ್ವಗಳ ಆಧಾರದ ಮೇಲೆ ಸಮಾಜಮುಖಿಯಾಗಿ ಕೆಲಸ‌ ಮಾಡಲು ಪಣತೊಡುವ ಅವಶ್ಯಕತೆ ಇದೆ. ಬಸವೇಶ್ವರ ಪೀಠವು ಬಸವಣ್ಣನವರ ವಿಚಾರಧಾರೆಯ ಚಟುವಟಿಕೆಗಳು ವಿಶ್ವವಿದ್ಯಾಲಯದ ಆಚೆಗೂ ನಡೆಯಬೇಕು ಎಂದರು.

ಬಸವಶ್ರೀ ಪ್ರಶಸ್ತಿ :

ಈ ಸಂದರ್ಭದಲ್ಲಿ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅವರ ಶೈಕ್ಷಣಿಕ-ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಪರಿಗಣಿಸಿ 2026ರ ‘ಬಸವಶ್ರೀ’ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು.

ವಿಡಿಯೋ ಅಲ್ಬಮ್‌ ಬಿಡುಗಡೆ:

ಈ ಸಂದರ್ಭದಲ್ಲಿ ಪ್ರೊ. ನಿಜಲಿಂಗಪ್ಪ ‌ಮಟ್ಟಿಹಾಳ ಅವರ ಬಸವೇಶ್ವರರ ಕುರಿತು ಸ್ವ-ರಚನೆಯ ವಿಡಿಯೋ ಹಾಡುಗಳನ್ನು ಪ್ರದರ್ಶಿಸುವ ಮೂಲಕ ವಿಡಿಯೋ ಅಲ್ಬಮ್‌ ಬಿಡುಗಡೆಯಾಯಿತು.

ಕಾರ್ಯಕ್ರಮದಲ್ಲಿ ಕವಿವಿ ಪ್ರಭಾರ ಕುಲಸಚಿವರಾದ ಪ್ರೊ.ಎ.ಎಚ್. ಅಗಡಿ, ಶ್ರೀ ಬಸವೇಶ್ವರ ಪೀಠದ ಸಂಯೋಜಕ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ.ಸಿ.ಎಂ. ಕುಂದಗೋಳ, ಸಿಂಡಿಕೇಟ್ ಸದಸ್ಯರಾದ ರಾಬರ್ಟ್‌ ದದ್ದಾಪೂರಿ, ಶ್ಯಾಮ ಮಲ್ಲನಗೌಡರ, ಮಹೇಶ ಹುಲ್ಲನ್ನವರ,  ಡಾ. ರುದ್ರೇಶ‌ ಮೇಟಿ, ಡಾ. ಈರಣ್ಣ ಇಂಜನಗೇರಿ, ಸೇರಿದಂತೆ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
1 Comment

Leave a Reply

Your email address will not be published. Required fields are marked *