ಬುದ್ಧ, ಬಸವರು ನಾಡಿಗೆ ಅರಿವಿನ ಬೆಳಕು ನೀಡಿದವರು : ಪ್ರೊ. ಶಿವಾನಂದ ಹೊಂಬಳ

ಅಶ್ವಿನಿ, ವಿನಯ ದಂಪತಿಗಳ ಶರಣತತ್ವದ ಸೀಮಂತ ಕಾರ್ಯಕ್ರಮ

ಗದಗ:

ಕ್ರಿ.ಪೂ. ೬ನೇ ಶತಮಾನದ ಬುದ್ಧ ಮತ್ತು ಕ್ರಿ.ಶ. ೧೨ನೇ ಶತಮಾನದ ಬಸವಣ್ಣ ಇಬ್ಬರು ಮನುಕುಲದ ಜೀವನಮಟ್ಟವನ್ನು ಸುಧಾರಿಸಿದವರು ಎಂದು ನಿವೃತ್ತ ಪ್ರಾಚಾರ್ಯ ಶಿವಾನಂದ ಹೊಂಬಳ ಅವರು ಹೇಳಿದರು.

ಬಸವದಳದ ೧೬೯೬ನೇ ಶರಣ ಸಂಗಮ ಮತ್ತು ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ‘ಬುದ್ಧ ಮತ್ತು ಬಸವಣ್ಣ ಒಂದು ಚಿಂತನೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಹಾಗೂ ಹಕಾರಿ ಬಂಧುಗಳ ಮನೆತನದ ಅಶ್ವಿನಿ ಹಾಗೂ ವಿನಯ ಎನ್.  ದಂಪತಿಗಳ ಶರಣತತ್ವದಂತೆ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ದುಃಖ ನಿವಾರಣೆಗೆ ಬುದ್ಧ ತಿಳಿಸಿದ ಸಮ್ಯಕ್ ದೃಷ್ಠಿ (ಸರಿಯಾದ ತಿಳುವಳಿಕೆ), ಸಮ್ಯಕ್ ಸಂಕಲ್ಪ (ಸರಿಯಾದ ಯೋಚನೆ) ಸಮ್ಯಕ್ ವಾಚಾ (ಸರಿಯಾದ ಮಾತು), ಸಮ್ಯಕ್ ಕರ್ಮಾಂತ (ಸರಿಯಾದ ಕೆಲಸ) ಸಮ್ಯಕ್ ಆಜೀವ (ಸರಿಯಾದ ಜೀವನೋಪಾಯ), ಸಮ್ಯಕ್ ವ್ಯಾಯಾಮ (ಸರಿಯಾದ ಪ್ರಯತ್ನ), ಸಮ್ಯಕ್ ಸ್ಮೃತಿ (ಸರಿಯಾದ ಜಾಗೃತಿ), ಸಮ್ಯಕ್ ಸಮಾಧಿ (ಸರಿಯಾದ ಏಕಾಗ್ರತೆ) ಎಂಬ ಅಷ್ಟಾಂಗ ಮಾರ್ಗಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದುಃಖವನ್ನು ನಿವಾರಣೆ ಮಾಡಬಹುದು.

ಅದೇ ರೀತಿ ಬಸವಣ್ಣ ಬರೆದ ವಚನಗಳು ಬದುಕಿನಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಮತ್ತು ಹೇಗೆ ಮೌಢ್ಯಗಳಿಂದ ಹೊರಬರುವುದೆಂಬುದನ್ನು ತಿಳಿಸಿದ್ದಾರೆ. ಈ ಇಬ್ಬರು ಮಹಾನ್ ವ್ಯಕ್ತಿಗಳು ಜಗಕೆ ಅರಿವಿನ ಬೆಳಕು ನೀಡಿದವರು ಎಂದರು.

ಗೌರಕ್ಕ ಬಡಿಗಣ್ಣನವರು ಲಿಂಗಾಯತ ಧರ್ಮದ ನಿಜಾಚರಣೆಗಳ ಬಗ್ಗೆ ಮಾತನಾಡುತ್ತಾ, ಇಂದು ವೈದಿಕತೆಯ ಮುಸುಕಿನಲ್ಲಿ ಬಸವಪ್ರಣೀತ ಲಿಂಗಾಯತ ಧರ್ಮದ ನಿಜಾಚರಣೆಗಳು ಮುಚ್ಚಿಹೋಗಿದ್ದವು. ಆದರೆ ಬಸವಪರ ಸಂಘಟನೆಗಳ ನಿರಂತರ ಪ್ರಯತ್ನದಿಂದ ಜನರಿಗೆ ಲಿಂಗಾಯತರ ನಿಜದ ಆಚರಣೆಗಳು ಗುರಿ ಮುಟ್ಟುತ್ತಿವೆ.

ವೈದಿಕರ ಸಂಸ್ಕಾರದ ಆಚರಣೆಗೂ ಲಿಂಗಾಯತರ ಸಂಸ್ಕಾರ ನಡೆಸುವಿಕೆಗೂ ಬಹುದೊಡ್ಡ ವ್ಯತ್ಯಾಸವಿದೆ. ವೈದಿಕರಲ್ಲಿ ಸತ್ತವರ ಮನೆ ಸೂತಕದ ಮನೆಯಾಗಿದ್ದರೆ, ಲಿಂಗಾಯತರ ಪ್ರಕಾರ ಅದು ದೈವ ಲೀಲೆ. ವೇಳೆ ನೋಡುವುದು, ಒಳ್ಳೆಯ ಘಳಿಗೆ, ಕೆಟ್ಟ ಘಳಿಗೆ, ಕರ್ಮ ಕಳೆಯುವುದು ಇವೆಲ್ಲ ಸಂಪ್ರದಾಯ ವೈದಿಕರದಾಗಿದ್ದರೆ, ಲಿಂಗಾಯತ ಧರ್ಮದಲ್ಲಿ ಎಲ್ಲ ವೇಳೆಯೂ ಶುಭ ವೇಳೆಯೇ ಆಗಿರುತ್ತದೆ. ಆದ್ದರಿಂದ ಲಿಂಗಾಯತ ಸಮಾಜ ಎಚ್ಚೆತ್ತುಕೊಂಡು ನಮ್ಮ ನಿಜಾಚರಣೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯನ್ನು ಗೌರಕ್ಕನವರು ಒತ್ತಿ ಹೇಳಿದರು.

ಕಾರ್ಯಕ್ರಮದಲ್ಲಿ ಅಶ್ವಿನಿ ಅವರಿಗೆ ಲಿಂಗಾಯತ ಧರ್ಮಾನುಸಾರದ ಸಂಸ್ಕಾರ ನೀಡಲಾಯಿತು.

ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಸವದಳದ ಶರಣ, ಶರಣೆಯರು ಪ್ರಾರ್ಥಿಸಿದರು. ಮಂಜುಳಾ ಹಾಸಿಲಕರ ಕಾರ್ಯಕ್ರಮ ನಿರೂಪಿಸಿದರು. ಹಕಾರಿ ಗುರುಗಳು ಸ್ವಾಗತಿಸಿದರು. ಶರಣು ಸಮರ್ಪಣೆಯನ್ನು ಪ್ರಕಾಶ ಅಸುಂಡಿ ನೆರವೇರಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *