ದಕ್ಷಿಣದಲ್ಲಿ ಬಿಜೆಪಿಗೆ ನೆಲೆ ನೀಡಿದ ಬಿಎಸ್‌ವೈ ‘ಅಭಿಮಾನೋತ್ಸವ’

ಬಸವ ಮೀಡಿಯಾ
ಬಸವ ಮೀಡಿಯಾ

ತಂದೆಗೆ ತೋರಿದ ಪ್ರೀತಿ ನನಗೂ ಕೊಡಿ: ವಿಜಯೇಂದ್ರ

ಚಿತ್ರದುರ್ಗ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಚುನಾವಣಾ ರಾಜಕೀಯದಲ್ಲಿ 50 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಿಎಸ್‌ವೈ ಅಭಿಮಾನೋತ್ಸವ’ವು 2028ರ ವಿಧಾನಸಭೆ ಚುನಾವಣೆಗೆ ಕಹಳೆಯನ್ನೂ ಮೊಳಗಿಸಿತು.

ಕೇಸರಿ ಪತಾಕೆಗಳು ನಗರದುದ್ದಕ್ಕೂ ರಾರಾಜಿಸಿದ್ದರೆ, ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಎಲ್ಲಾ ಸಮುದಾಯಗಳ ಸ್ವಾಮೀಜಿಗಳು ನಗರದ ಮಾದಾರ ಚನ್ನಯ್ಯ ಮೈದಾನದಲ್ಲಿ ಕಾವಿಯ ಬಣ್ಣವನ್ನು ತುಂಬಿಸಿದರೆ,

‘ಬಿಎಸ್‌ವೈ ಬಿಎಸ್‌ವೈ’ ಘೋಷಣೆಗಳು ಚಿತ್ರದುರ್ಗದ ಕೋಟೆಯಲ್ಲಿ ಅನುರಣಿಸುತ್ತಲೇ ಇದ್ದವು. ಯಡಿಯೂರಪ್ಪ ಅಭಿಮಾನಿಗಳು ನಾಡಿನ ನಾಲ್ಕೂ ದಿಕ್ಕಿನಿಂದ ಪ್ರವಾಹದಂತೆ ಬಂದಿದ್ದರು.

ಕರುನಾಡ ಜನತೆಗೆ ಋಣಿ

ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ‘ಐವತ್ತು ವರ್ಷಗಳಿಂದ ನಾಡಿನ ಜನರ ಸೇವೆಗೆ ಜೀವನ ಸಮರ್ಪಣೆ ಮಾಡಿಕೊಂಡು ಬಂದಿದ್ದೇನೆ. ಅಭಿಮಾನೋತ್ಸವದ ಸಾಗರದಲ್ಲಿ ಜನರು ನನ್ನನ್ನು ತೇಲಿಸಿಬಿಟ್ಟಿದ್ದಾರೆ’ ಎಂದು ಹೇಳಿದರು.

ಹೋರಾಟದ ಮತ್ತು ಸಂಘಟನೆಯನ್ನು ನಾನು ತಪಸ್ಸು ಎಂದು ಸ್ವೀಕರಿಸಿದವನು. ನನಗೆ ಆರೆಸೆಸ್ಸ್ ಸಂಸ್ಕಾರ ನೀಡಿತು. ಅಧಿಕಾರಕ್ಕಾಗಿ ಎಂದು ಹೋರಾಟ ಮಾಡಲಿಲ್ಲ. ಮುಖ್ಯಮಂತ್ರಿ ಹುದ್ದೆಯನ್ನು ಕನಸಿನಲ್ಲೂ ಕಂಡಿರಲಿಲ್ಲ. ಪುರಸಭೆಯ ಹುದ್ದೆಯಿಂದ, ವಿಪಕ್ಷ ನಾಯಕ, ಮುಂದೆ ಮುಖ್ಯಮಂತ್ರಿಯಾದೆ. ಇದನ್ನೆಲ್ಲ ನಾಡಿನ ಜನರೇ ಬಯಸಿದ್ದರು. ನನ್ನ ರಾಜಕೀಯ ಜೀವನದ ಐವತ್ತು ವರ್ಷಗಳ ಪಯಣ ಸಾರ್ಥಕವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಭಿಮಾನೋತ್ಸವಕ್ಕೆ ರಾಜ್ಯದ ವಿವಿಧ ಮಠಾಧೀಶರು, ಸ್ವಾಮೀಜಿಗಳು ಬಂದಿದ್ದಾರೆ. ಇದು ಒಬ್ಬ ವ್ಯಕ್ತಿಯ ಸಂಭ್ರಮ ಅಲ್ಲ. ಶಿಕಾರಿಪುರದಿಂದ ವಿಧಾನಸೌಧದ ಮೆಟ್ಟಿಲುಗಳ ವರೆಗೆ ನನ್ನ ರಾಜಕೀಯ ಪ್ರಯಾಣವನ್ನು ವಿಶ್ರಾಂತಿ ಇಲ್ಲದ ಕಾರ್ಯಕರ್ತರು ರೂಪಿಸಿದರು. ಅವರೇ ನನಗೆ ಶಕ್ತಿ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಜೀವನದ ಪರ್ವದಿನ. ನಿಮ್ಮ ಅಭಿಮಾನದಲ್ಲಿ ತೇಲಿಸಿದ ನನ್ನ ಪ್ರೀತಿಯ ಕರುನಾಡ ಜನತೆಗೆ ಋಣಿಯಾಗಿದ್ದೇನೆ ಎಂದು ಅವರು ಹೇಳಿದರು.

ನಾನು ಇಲ್ಲಿ ಕೇವಲ ರಾಜಕಾರಣಿಯಾಗಿ ನಿಂತಿಲ್ಲ, ಬದಲಿಗೆ ನಿಮ್ಮ ಮನೆ ಮಗನಾಗಿ ನಿಂತಿದ್ದೇನೆ. ವೀರ ಮದಕರಿ ನಾಯಕ, ಒನಕೆ ಓಬವ್ವನ ನಾಡು ಚಿತ್ರದುರ್ಗ, ಶರಣರು ನಡೆದಾಡುವ ತಪೋವನ ಇದು. ಇಲ್ಲಿ ಅಭಿಮಾನೋತ್ಸವ ಆಯೋಜಿಸಿರುವುದು ಅತೀವ ಖುಷಿ ನೀಡಿದೆ ಎಂದ ಅವರು, ನಾಡಿನ ಮೂಲೆ ಮೂಲೆಯಿಂದ ಹರಿದು ಬಂದಿರುವ ಅಭಿಮಾನದ ಸಾಗರದ ಮಧ್ಯೆ ನಿಂತಿರುವ ನನಗೆ ಅಕ್ಷರಶಃ ಮಾತು ಬರುತ್ತಿಲ್ಲ. ಐವತ್ತು ವರ್ಷದ ರಾಜಕೀಯ ಜೀವನವನ್ನು ನಿಮ್ಮೊಂದಿಗೆ ಕಳೆದ ನನ್ನನ್ನು ಈ ಸಾಗರದಲ್ಲಿ ತೋಯಿಸಿ ಸಡಗರ ಪಡುತ್ತಿರುವುದಕ್ಕೆ ನಿಮಗೆ ಋಣಿಯಾಗಿದ್ದೇನೆ ಎಂದು ಅವರು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಕಾರ್ಯ ಒತ್ತಡ ಇದ್ದರೂ ಇಲ್ಲಿಗೆ ಬಂದಿದ್ದಾರೆ. ದುರ್ಗದ ನೆಲದಲ್ಲಿ ಮದಕರಿ ನಾಯಕನಂತೆ ಅವರು ಕಂಗೊಳಿಸುತ್ತಿದ್ದಾರೆ. ಬಂಗಾಳದ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪ್ರಧಾನಿ ಮೋದಿ ಅವರೊಂದಿಗೆ ಹೆಗಲು ಕೊಟ್ಟು ಅಮಿತ್ ಶಾ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಬಂಗಾಳದಲ್ಲಿ ಜಯ ಸಿಕ್ಕಿದೆ. ಮೋದಿಗೆ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.

ತಂದೆ ಪ್ರೀತಿ ನನಗೂ ಕೊಡಿ

ರಾಜಕೀಯವಾಗಿ ಅಂಬೆಗಾಲಿಡುತ್ತಿದ್ದೇನೆ. ತಂದೆಯಂತೆಯೇ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕೊಡಿ. ಅವರಂತೆಯೇ ಪ್ರೀತಿ ತೋರಿ, ವಿಶ್ವಾಸ ಇಡಿ. ನಿಮ್ಮೆಲ್ಲರ ವಿಶ್ವಾಸಗಳನ್ನು ಉಳಿಸಿಕೊಳ್ಳುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಿಎಸ್‌ವೈ ಅಭಿಮಾನೋತ್ಸವದಲ್ಲಿ ಅವರು ಮಾತನಾಡಿದ ಅವರು, ‘ರಾಜಕೀಯ ಕಾರಣಕ್ಕೆ, ವೈಯಕ್ತಿಕ ವರ್ಚಸ್ಸಿಗಾಗಿ ಬಿಎಸ್‌ವೈ ಅಭಿಮಾನೋತ್ಸವ ಆಚರಣೆ ಮಾಡುತ್ತಿಲ್ಲ. 50 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಪರಿಶ್ರಮ, ಹೋರಾಟಕ್ಕೆ ಹಾಗೂ ತ್ಯಾಗಕ್ಕೆ ಇನ್ನೊಂದು ಹೆಸರೇ ಯಡಿಯೂರಪ್ಪ. ಬಡವರ ಬಂಧುವಾಗಿರುವ ಅವರನ್ನು ಅಭಿನಂದಿಸಲು ಈ ಉತ್ಸವ ಆಚರಿಸಲಾಗುತ್ತಿದೆ’ ಎಂದರು.

‘ಅಧಿಕಾರ ಇರಲಿ, ಇಲ್ಲದಿರಲಿ ಯಡಿಯೂರಪ್ಪ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ರಾಜಕೀಯ ಷಡ್ಯಂತ್ರಗಳಿಗೆ ಮಣಿಯಲಿಲ್ಲ. ಸವಾಲುಗಳಿಗೆ ಬೆನ್ನು ತೋರಿ ಎಂದೂ ಓಡಿ ಹೋಗಲಿಲ್ಲ. ಗಟ್ಟಿಯಾಗಿ ನಿಂತು ಎಲ್ಲವನ್ನೂ ಎದುರಿಸಿದರು. ಪ್ರತ್ಯೇಕ ರೈತ ಬಜೆಟ್‌ ಮಂಡಿಸುವ ಮೂಲಕ ದೇಶದಲ್ಲಿ ಹೊಸ ದಾಖಲೆಯನ್ನೇ ಬರೆದರು. ಪ್ರಾಮಾಣಿಕವಾಗಿ ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದರು ಎಂದರು.

‘ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ವಿಜಯದ ಫಲಿತಾಂಶ ಸಿಗುವ ವಿಶ್ವಾಸವಿದೆ. ಇದೇ ಉತ್ಸಾಹ, ಒಗ್ಗಟ್ಟು ಉಳಿಸಿಕೊಳ್ಳಬೇಕು. ಪಕ್ಷ ಸಂಘಟನೆ ಗಟ್ಟಿಯಾಗಬೇಕು’ ಎಂದು ಹೇಳಿದರು.

ದಕ್ಷಿಣದಲ್ಲಿ ಬಿಜೆಪಿಗೆ ನೆಲೆ ನೀಡಿದರು

ದಕ್ಷಿಣದಲ್ಲಿ ಬಿಜೆಪಿ ನೆಲೆಯೂರುವಂತೆ ಮಾಡಿದ್ದೇ ಬಿಎಸ್ ಯಡಿಯೂರಪ್ಪ ಎಂದು ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಕರ್ನಾಟಕದಲ್ಲಿ ವಿವಿಧ ಪಂಗಡಗಳ ಮಠಾಧೀಶರನ್ನು ಒಟ್ಟುಗೂಡಿಸುವಲ್ಲಿ ಯಡಿಯೂರಪ್ಪ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತ ಮಾತೆಯನ್ನು ಪವಿತ್ರವೆಂದು ಪರಿಗಣಿಸುವ ಮತ್ತು ಅವಳಿಗೆ ಭಕ್ತಿಯಿಂದ ತಮ್ಮ ಜೀವನವನ್ನು ಸಮರ್ಪಿಸುವ ಈ ದೇಶದ ಎಲ್ಲರಿಗೂ ಇಂದು ಒಂದು ಶ್ರೇಷ್ಠ ದಿನ.

ಯಡಿಯೂರಪ್ಪ ಅವರ ವ್ಯಕ್ತಿತ್ವದಿಂದಾಗಿ, ಇಂದು ನಮ್ಮ ಮುಂದೆ ಎಲ್ಲಾ ಧರ್ಮಗಳು ಮತ್ತು ಪಂಗಡಗಳ ಸ್ವಾಮೀಜಿಗಳು ವೇದಿಕೆಯನ್ನು ಅಲಂಕರಿಸಿದ್ದಾರೆ ಎಂದು ಹೇಳಿದರು.

ದಕ್ಷಿಣದಲ್ಲಿ ಬಿಜೆಪಿ ಎಂದಿಗೂ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಯಡಿಯೂರಪ್ಪ ಮೊದಲ ಉಪಮುಖ್ಯಮಂತ್ರಿ ಮತ್ತು ನಂತರ ಮುಖ್ಯಮಂತ್ರಿಯಾಗುವ ಮೂಲಕ ಆ ಕಲ್ಪನೆ ತಪ್ಪು ಎಂದು ಸಾಬೀತುಪಡಿಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಾಗಿಲು ತೆರೆದವರೇ ಯಡಿಯೂರಪ್ಪ ಎಂದು ಅಮಿತ್ ಶಾ ಹೇಳಿದರು. ಲಿಂಗಾಯತರು, ಒಬಿಸಿಗಳು, ದಲಿತರು, ಗೌಡರು ಮತ್ತು ಇತರ ಸಮುದಾಯಗಳ ನಡುವೆ ಸಾಮರಸ್ಯವನ್ನು ಉತ್ತೇಜಿಸಲು ಯಡಿಯೂರಪ್ಪ ಕೆಲಸ ಮಾಡಿದ್ದಾರೆ.

ನಾನು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮದಕರಿ ನಾಯಕ ಅವರ ಗೌರವಾರ್ಥವಾಗಿ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಮಾತನಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಕೇಂದ್ರದಲ್ಲಿದ್ದಾರೆ ನಾವು ಖಂಡಿತವಾಗಿಯೂ ಈ ಸ್ಮಾರಕವನ್ನು ಇಲ್ಲಿಯೇ ನಿರ್ಮಿಸುತ್ತೇವೆ ಎಂದು ಹೇಳಿದರು.

ಮೋದಿ ಸಂದೇಶ

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ವಿಶೇಷ ಸಂದೇಶವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವೇದಿಕೆಯ ಮೇಲೆ ಓದಿ ತಿಳಿಸಿದರು.

ಬಿ. ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಪಯಣ ದೇಶದಾದ್ಯಂತ ಇರುವ ಕಾರ್ಯಕರ್ತರಿಗೆ ಪ್ರೇರಣೆ ಪಡೆಯುವ ಅವಕಾಶವೂ ಹೌದು.

ಅವರನ್ನು ನಾನು ಸಂಘರ್ಷ ಮತ್ತು ಯಶಸ್ಸಿನ ಎರಡೂ ಸಂದರ್ಭದಲ್ಲಿ ನೋಡಿದ್ದೇನೆ. ಪ್ರತಿ ಸಂದರ್ಭದಲ್ಲೂ ಒಂದು ವಿಷಯ ಸ್ಥಿರವಾಗಿತ್ತು, ಅದೇನೆಂದರೆ ಕರ್ನಾಟಕದ ಜನತೆಗೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಅವರ ಅಚಲ ಬದ್ಧತೆ.

ಬಿಜೆಪಿ ಕೇವಲ ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ ಎಂಬ ಆರೋಪಗಳಿದ್ದ ಸಂದರ್ಭದಲ್ಲಿ ಬಿ. ಎಸ್. ಯಡಿಯೂರಪ್ಪನವರು ತಮ್ಮ ಅಮೋಘ ನಾಯಕತ್ವದ ಮೂಲಕ ಬಿಜೆಪಿ ಇಡೀ ಭಾರತಕ್ಕೆ ಸೇರಿದ ಪಕ್ಷ ಎಂಬುದನ್ನು ಸಾಬೀತು ಮಾಡಿ ತೋರಿಸಿದರು. ಅವರು ಕರ್ನಾಟಕದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಿ ಹೊರಹೊಮ್ಮಿದರು.

ಅತ್ಯುನ್ನತ ಹುದ್ದೆ ಅಲಂಕರಿಸಿದರು ಕೂಡಾ ಅವರು ಸಾಮಾನ್ಯ ಕಾರ್ಯಕರ್ತರಿಂದ ಮತ್ತು ಜನರಿಂದ ಅಂತರ ಕಾಯ್ದು ಕೊಳ್ಳಲಿಲ್ಲ. 50 ವರ್ಷಗಳ ಸಾರ್ವಜನಿಕ ಸೇವೆಯ ಈ ಅಪೂರ್ವ ಮೈಲುಗಲ್ಲಿನ ಸಂದರ್ಭದಲ್ಲಿ ಶ್ರೀ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ ಮತ್ತು ಶುಭ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *