ಮರಿಯಾಲ ಮಠದಲ್ಲಿ ಮೇ 15ರಿಂದ ಮೂರು ದಿನಗಳ ಶರಣತತ್ವ ಕಮ್ಮಟ

ಬಸವ ಮೀಡಿಯಾ
ಬಸವ ಮೀಡಿಯಾ

ಕಮ್ಮಟಕ್ಕೆ ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ

ಚಾಮರಾಜನಗರ

ಮರಿಯಾಲದ ಮಹಾಂತ ಮಂಟಪದಲ್ಲಿ ಮೂರು ದಿನಗಳ ಶರಣತತ್ವ ಕಮ್ಮಟ ಇದೇ ಮೇ 15ರಿಂದ 17ರವರೆಗೆ ನಡೆಯಲಿದೆ.

ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್, ಬಸವ ಬಳಗ ದಾವಣಗೆರೆ, ಮರಿಯಾಲ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಹಾಗೂ ಚಾಮರಾಜನಗರ ಬಸವಪರ ಸಂಘಟನೆಗಳ ಸಹಯೋಗದಲ್ಲಿ ’21ನೇ ಶರಣತತ್ವ ಕಮ್ಮಟ’ ನಡೆಯಲಿದೆ ಎಂದು ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಬಸವ ಮೀಡಿಯಾಕ್ಕೆ ತಿಳಿಸಿದರು.

ಪ್ರತಿದಿನ ಬೆಳಿಗ್ಗೆ 6ರಿಂದ 9ರ ವರೆಗೆ ಬಸವಭಕ್ತರ ಪಥಸಂಚಲನ ನಂತರ ಶಿವಯೋಗ ಪ್ರಾತ್ಯಕ್ಷಿಕೆ ಇರುತ್ತದೆ.

ಲಿಂಗಾಯತ ಧರ್ಮದ ಮೂಲತತ್ವಗಳನ್ನು ತಿಳಿಸುವ, ಪ್ರಸಾರ ಮಾಡುವ ಉದ್ಧೇಶದಿಂದ ಕಮ್ಮಟ ಹಮ್ಮಿಕೊಳ್ಳಲಾಗಿದೆ.

ಕಮ್ಮಟದಲ್ಲಿ ಷಟಸ್ಥಲ, ಗುರು-ಲಿಂಗ-ಜಂಗಮ, ವಿಭೂತಿ-ರುದ್ರಾಕ್ಷಿ, ಪಾದೋದಕ-ಪ್ರಸಾದ, ಮಂತ್ರ, ಪಂಚಾಚಾರ ಮತ್ತಿತರ ವಿಷಯಗಳ ಪ್ರವೇಶ ಪಾಠಗಳಿರುತ್ತವೆ.

ಅನುಭಾವಿಗಳು, ಪೂಜ್ಯರು ಅನುಭಾವ ನಡೆಸಿಕೊಡುತ್ತಾರೆ. ಈ ಭಾಗದ ಎಲ್ಲ ಸ್ವಾಮೀಜಿಗಳಿಗೆ ಭಾಗವಹಿಸಲು ಈಗಾಗಲೇ ಆಹ್ವಾನ ಕೊಟ್ಟಿದ್ದೇವೆ, ಅವರೆಲ್ಲ ಬರುತ್ತಾರೆ. ಸಾರ್ವಜನಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಇರುತ್ತವೆ.

ಕಮ್ಮಟದಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರಬಹುದೆಂಬ ನಿರೀಕ್ಷೆ ಇದೆ. ನಾಡಿನ ಎಲ್ಲ ಭಾಗ, ಜಿಲ್ಲೆಗಳಿಂದ ಬಸವಧರ್ಮಿಯರು ಬರುತ್ತಾರೆ.

ದೂರದ ಪ್ರದೇಶಗಳಿಂದ ಬರುವ ಜನರಿಗೆ ವಸತಿ ವ್ಯವಸ್ಥೆಯನ್ನು ನಮ್ಮ ಮಠದಲ್ಲಿ ಮಾಡಲಾಗುತ್ತದೆ. ಹೊರಗಿನಿಂದ ಬಂದವರಿಗೆ ಮಾತ್ರ ವಸತಿ ವ್ಯವಸ್ಥೆ ಇರುತ್ತದೆ. ಅಕ್ಕಪಕ್ಕದ ಊರು, ಗ್ರಾಮಗಳಿಂದ ಬಂದವರು ಸಂಜೆ ತಮ್ಮ ಊರುಗಳಿಗೆ ತೆರಳಿ ಬೆಳಿಗ್ಗೆ ಬೇಗ ಬಂದು ಕಮ್ಮಟಕ್ಕೆ ಸೇರಿಕೊಳ್ಳುತ್ತಾರೆ. ಅಕ್ಕಪಕ್ಕದವರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ, ಅವರೆಲ್ಲ ಸಹಕರಿಸಬೇಕು ಎಂದರು.

ಎಲ್ಲರಿಗೂ ಪ್ರಸಾದ ದಾಸೋಹ ವ್ಯವಸ್ಥೆ ಇರುತ್ತದೆ. ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ನವರು ದಾಸೋಹ ವ್ಯವಸ್ಥೆಯನ್ನು ವಹಿಸಿಕೊಂಡಿದ್ದಾರೆ.

ಇಂಥ ಕಮ್ಮಟ ಈ ಮೊದಲು ನಮ್ಮಲ್ಲಿ ನಡೆದಿಲ್ಲ. ಇದೇ ಮೊದಲ ಬಾರಿ ಮೂರು ದಿನದ ಕಮ್ಮಟ ನಡೆಯುತ್ತಿದೆ. ನಾವು ವರ್ಷದಲ್ಲಿ ಒಂದು ಅಥವಾ ಎರಡು ಸಾರಿ ದಿನದಮಟ್ಟದ ಶಿಬಿರ ನಡೆಸುತ್ತಿದ್ದೆವು.

ನಾವು ವಚನ ಪಾಠಶಾಲೆ ಆ ಮುಖಾಂತರ ಮಕ್ಕಳಿಗೆ ವಚನದ ಅರಿವು, ಎಲ್ಲರಿಗೂ ಲಿಂಗದೀಕ್ಷೆ, ಲಿಂಗಪೂಜೆ ಕಾರ್ಯಕ್ರಮ ಮುಖಾಂತರ ಶರಣ ಧರ್ಮ ಪ್ರಸಾರ ಮಾಡುತ್ತಿದ್ದೆವು. ಈಗ ಈ ಕಮ್ಮಟ ಮಾಡುತ್ತಿದ್ದೇವೆ. ಎಲ್ಲಾ ಬಸವಪರ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿವೆ ಎಂದು ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *