ಸಾಣೇಹಳ್ಳಿ :
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಹಾಗೂ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಪ್ರಕಟಣೆ ನೀಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿ. ಸುಧಾಕರ ಅವರು ಶಾಸಕರಾಗಿದ್ದ ಕಾಲದಿಂದಲೂ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸಾಣೇಹಳ್ಳಿ ಮಠದಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಎಷ್ಟೇ ಒತ್ತಡವಿದ್ದರೂ ಫೋನ್ ಕರೆಗೆ ತಕ್ಷಣ ಸ್ಪಂದಿಸುತ್ತಿದ್ದ ಅವರ ಗುಣ ಅಪರೂಪದ್ದು. ಅವರು ಒಬ್ಬ ಸಾತ್ವಿಕ ಮನೋಭಾವದ ರಾಜಕಾರಣಿಯಾಗಿದ್ದರು.

ಕಳೆದ ವರ್ಷದ ನಾಟಕೋತ್ಸವದಲ್ಲಿ ಭಾಗವಹಿಸಿ ಅವರು ಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದ್ದರು. ‘ಮಾತು ಕಡಿಮೆ, ಕೆಲಸ ಜಾಸ್ತಿ’ ಎಂಬ ತತ್ವಕ್ಕೆ ಅವರು ಅನ್ವರ್ಥವಾಗಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ.
“ಸುಧಾಕರ ಅವರು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅಗತ್ಯವಿತ್ತು. ಕಳೆದ ತಿಂಗಳು ಅವರು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯದ ಬಗ್ಗೆ ವಿಚಾರಿಸಲಾಗಿತ್ತು. ಆದರೆ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರ ನಿಧನದಿಂದ ಸಮಾಜಕ್ಕೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ,” ಎಂದು ಪಂಡಿತಾರಾಧ್ಯ ಶ್ರೀಗಳು ವಿಷಾದಿಸಿದ್ದಾರೆ.
“ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ಕರುಣಿಸಲಿ” ಎಂದು ಶ್ರೀಗಳು ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.
