ಓಚಿರಾ :
ಆಲಪ್ಪುಳ ಬಳಿಯ ಓಚಿರಾದ ಶ್ರೀ ಪರಬ್ರಹ್ಮ ಆಡಿಟೋರಿಯಂದಲ್ಲಿ ಅದ್ಧೂರಿಯಾಗಿ ರಾಜ್ಯಮಟ್ಟದ ಬಸವ ಜಯಂತಿ ಸಮಾರಂಭ ಇತ್ತೀಚಿಗೆ ನಡೆಯಿತು.
ಸಮಾರಂಭವನ್ನು ಕರ್ನಾಟಕ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು.

ಅವರು ಮಾತನಾಡುತ್ತ, ಬಸವೇಶ್ವರ ಅವರ ದರ್ಶನಗಳು ಕಾಲಾತೀತವಾಗಿವೆ. ಇಂದಿನ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಪರಿಶ್ರಮ ಮತ್ತು ಹಂಚಿಕೆಯ ಸಂದೇಶವನ್ನು ನೀಡುವ ಕಾಯಕ-ದಾಸೋಹ ಪರಿಚಯಿಸಿದ ಅವರ ಸಿದ್ಧಾಂತ ಯಾವಾಗಲೂ ಪ್ರಸ್ತುತವಾಗಿರುತ್ತವೆ.
ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲು ಜಗತ್ತಿನಲ್ಲಿ ಪರಿಚಯಿಸಲಾಯಿತು ಎಂದು ಖಂಡ್ರೆ ಹೇಳಿದರು.
ಡಾ. ಕೆ. ಪ್ರಸನ್ನಕುಮಾರ ಅವರು ಖಂಡ್ರೆ ಅವರು ಭಾಷಣವನ್ನು ಮಲಯಾಳಂ ಭಾಷೆಗೆ ಅನುವಾದಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಅಡ್ವ. ಬಿನು ಕೆ. ಶಂಕರ ಉದ್ಘಾಟಿಸಿ ಮಾತನಾಡಿದರು.
ಮಹಾಸಭಾದ ಮಹಿಳಾ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಜಾತಿ-ಲಿಂಗ ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಾಣದ ತತ್ವ, ಸಂದೇಶಗಳನ್ನು ಬಸವಣ್ಣನವರು ನೀಡಿದ್ದಾರೆ.
ನಮ್ಮ ವೀರಶೈವ ಲಿಂಗಾಯತ ಧರ್ಮದ ಸಂಘಟನೆಯನ್ನು ಬಲಪಡಿಸುವುದು ಮತ್ತು ನಮ್ಮ ಮುಂದಿನ ಪೀಳಿಗೆಗೆ ಬಸವಾದಿ ಶರಣರ ಸಂಸ್ಕಾರ ಹಾಗೂ ವಚನ ಸಾಹಿತ್ಯದ ಮೌಲ್ಯಗಳನ್ನು ತಿಳಿಸಿ, ಅವನ್ನು ಉಳಿಸಿ-ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಶಾಸಕ ಸಿ.ಆರ್. ಮಹೇಶ, ಮಾಜಿ ಡಿಜಿಪಿ ಸೆಂಕುಮಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಹೇಂದ್ರನ್, ಡಾ. ಪುನಲೂರು ಸೋಮರಾಜನ್, ತಮಿಳುನಾಡು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಾಲಾಜಿ ಲೋಕನಾಥನ್, ಯೂತ್ ಮೂವ್‌ಮೆಂಟ್ ಅಖಿಲ ಭಾರತ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಶ್ರೀಕುಮಾರ, ಬಿಜೆಪಿ ವಕ್ತಾರ ವಿ.ಎಸ್. ಜಿತಿಂದೇವ್ ಸಹ ಮಾತನಾಡಿದರು.

ಸಮಾರಂಭದಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಬಂಧುಗಳು ಭಾಗವಹಿಸಿದ್ದರು. ಅನೇಕ ಗಣ್ಯರು, ಶಾಸಕರು, ರಾಜಕೀಯ, ಸಾಮಾಜಿಕ ಸಂಘಟನೆಗಳ ಮುಖಂಡರು ವೇದಿಕೆ ಮೇಲಿದ್ದರು.

‘ಬಸವ ರತ್ನ’, ‘ಬಸವ ಭೂಷಣ’, ‘ಬಸವ ಶ್ರೀ’ ಮೂರು ಪ್ರಮುಖ ಪ್ರಶಸ್ತಿಗಳನ್ನು ಕ್ರಮವಾಗಿ ಡಾ. ಪುನಲೂರು ಸೋಮರಾಜನ್, ಡಾ. ಕೆ. ಪ್ರಸನ್ನಕುಮಾರ, ಕಮಲಮ್ಮ ನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮೈಸೂರಿನ ಬರಹಗಾರ ಎಲ್. ಶಿವಲಿಂಗಪ್ಪ ಬರೆದಿರುವ, ಉಪನ್ಯಾಸಕಿ ನಿರ್ಮಲ ಎಂ.ಪಿ. ಅವರು ಮಲಯಾಳಂ ಭಾಷೆಗೆ ಅನುವಾದಿಸಿರುವ, ಸಾಹಿತಿ ಕೆ. ಪ್ರಸನ್ನಕುಮಾರ ಅವರು ಮುನ್ನುಡಿ ಬರೆದಿರುವ “ಕಾರುಣ್ಯ ನಿಧಿ ಬಸವಣ್ಣ” ಪುಸ್ತಕವನ್ನು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ ಅವರು ಬಿಡುಗಡೆ ಮಾಡಿದರು.
