ಸುರಪುರ
ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಇದೆ 18ರಂದು ಮನುವಾದಿಗಳ ಪ್ರಮಾಣ ಪಡೆದ ಕೆಲವು ಮಠಾಧೀಶರು ಹಿಂದೂ ಸಮಾವೇಶ ಮಾಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದದ್ದು ನೋಡಿದೆ.
ಬಸವವಾದ ಮತ್ತು ಮನುವಾದದ ನಡುವೆ ತೀವ್ರ ಸಂಘರ್ಷ ನಡಿತಿರುವುದು ಸ್ಪಷ್ಟವಾಗಿದೆ. ಈಗಾಗಲೇ ಈ ಸಮಾವೇಶಕ್ಕೆ ದಲಿತಪರ ಸಂಘಟನೆಗಳು, ಎಡಪಂಥೀಯ, ಪ್ರಗತಿಪರ ಚಿಂತಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಎಲ್ಲಾ ಸಾಮೂಹಿಕ ಸಂಘಟನೆಗಳ ಮುಖಾಂತರ ಮಾನ್ಯ ಶರಣಬಸಪ್ಪಗೌಡ ದರ್ಶನಪುರ್ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಏಕತೆ ಸಮಗ್ರತೆಗೆ ಭಾರಿ ಅಪಾಯವಿರುವ ಈ ಸಂದರ್ಭದಲ್ಲಿ ಜ್ಯಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿದು ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಕಟ್ಟಿ ಸರ್ವಧರ್ಮ ಸಮನ್ವಯತೆಯ ತಾತ್ವಿಕ ನೆಲೆ ಗಟ್ಟಿಗೊಳಿಸಿದ ಹಾಗೂ ಕಾಯಕವೇ ಕೈಲಾಸ ಎನ್ನುವ ಸಿದ್ಧಾಂತವನ್ನು ಇಡೀ ಜಗತ್ತಿಗೆ ಸಾರಿದ ಬಸವಣ್ಣನವರ ಹೆಸರಿನಲ್ಲಿ ಮಲವಾದದ ಮನುವಾದದ ಪೂರ್ವಾಗ್ರಹ ಪೀಡಿತ ಕೆಲವೇ ಕೆಲವು ಲಿಂಗಾಯತ ಮಠಾಧೀಶರು ಬಸವಣ್ಣನವರಿಗೆ ಜನಿವಾರ ತೊಡಿಸಲು ಸಿದ್ಧತೆ ನಡೆಸಿದ್ದಾರೆ.
ಲಿಂಗಾಯತ ಮಠಗಳಲ್ಲಿ ವರ್ಗಬೇಧಗಳಿಲ್ಲ, ಜಾತಿ, ಲಿಂಗಭೇದಗಳಿಲ್ಲ. ದಯವೇ ಧರ್ಮದ ಮೂಲವಾಗಿರುವ ಬಸವಾದಿ ಶರಣರ ಕಾಯಕವೇ ಕೈಲಾಸ ಸಿದ್ಧಾಂತದ ತಳಹದಿಯ ಮೇಲೆ ವೈದಿಕರ ಪಾಪ ಪುಣ್ಯಗಳಂತಹ ಮನುಷ್ಯವಿರೋಧಿ ಮನುವಾದದ ಹುಸಿ ಸಿದ್ಧಾಂತಗಳ ವಿರುದ್ಧ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಸಮಾಜ ವ್ಯವಸ್ಥೆಯೊಂದನ್ನು ಬಸವಾದಿ ಶರಣರು ಕನ್ನಡದ ನೆಲದಲ್ಲಿ ಸ್ಥಾಪಿಸಿದ್ದಾರೆ.
ವಿಚಾರ ಕ್ರಾಂತಿಗೆ ಮೊದಲ ಮನ್ನಣೆಯನ್ನಿತ್ತ ರಾಷ್ಟ್ರಕವಿ, ನಾಡೋಜ ಕುವೆಂಪು ಅವರು “ಮನುಜಮತ, ವಿಶ್ವಪಥ, ಸರ್ವೋದಯ ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಸೂತ್ರಗಳೊಂದಿಗೆ, ಮನುಷ್ಯ ಜಾತಿ ತಾನೊಂದೇ ವಲಂ ಸಂಪೂರ್ಣ ಸ್ವೀಕಾರ, ವರ್ಣಾಶ್ರಮ ಧರ್ಮದ ಧಿಕ್ಕಾರ, ಜಾತಿ ಪದ್ಧತಿಯ ನಿರ್ಮೂಲನೆ, ವಿಶ್ವಮಾನವ ನಿರ್ಮಾಣ, ಸ್ವಮತಿಯೊಪ್ಪುವ ಮತವನ್ನು ಸ್ವೀಕರಿಸುವ
ಸ್ವಾತಂತ್ರ” ಎಂಬ ತಮ್ಮ ಕೊನೆಯ ಧ್ಯೆಯವಾಕ್ಯಗಳೊಂದಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ವಿವಿಧತೆಯಲ್ಲಿ ಏಕತೆ ಬೆಸೆದುಕೊಂಡಿರುವ ಶರಣರ ನಾಡು ಕರುನಾಡು ಶಾಂತಿಯ ತೋಟದಲ್ಲಿ ನೆಮ್ಮದಿಯಾಗಿ ಬಿಡದ ಕೋಮುವಾದಿಗಳ ಗುಂಪಿಗೆ ಇವತ್ತು ಮಠಾಧೀಶರು ಸೇರಿಕೊಂಡಿದ್ದಾರೆ.
ರಾಷ್ಟ್ರೀಯ ಏಕತೆಗೆ ಮತ್ತು ಸಮಗ್ರತೆಗೆ ತೀವ್ರ ಬೆದರಿಕೆ ಒಡ್ಡುತ್ತಿರುವ ಸಂಕಷ್ಟದ ಸಮಯದಲ್ಲಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬಸವಣ್ಣನವರ ಹೆಸರಿನಲ್ಲಿ ಮನುವಾದಿಗಳು ಲಿಂಗಾಯತ ಮಠಾಧೀಶರ ಮುಖಾಂತರ ಹಿಂದೂ ಸಮಾವೇಶ ನಡೆಸುತ್ತಿರುವುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು.
ವೈದಿಕರ ಶ್ರೇಣಿಕೃತ ಜಾತಿವ್ಯವಸ್ಥೆ, ಗುರುಕುಲ ಪದ್ಧತಿ, ಅಸ್ಪೃಶ್ಯತೆ ವರ್ಣವ್ಯವಸ್ಥೆ ಪದ್ಧತಿ, ಸಂಪ್ರದಾಯಗಳು, ಗುರುಕುಲ ಪದ್ಧತಿ ವಿರುದ್ಧ ಸಮಷ್ಟಿ ವ್ಯವಸ್ಥೆಯೊಂದನ್ನು ರೂಪಿಸಲು ಬಸವಾದಿ ಶರಣರು ಸ್ಥಾಪಿತ ವ್ಯವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಡಿದ್ದಾರೆ.
ಕತ್ತರಿಸಿದಷ್ಟೂ ಚಿಗುರೊಡೆಯುವ ಜಾತಿ ವ್ಯವಸ್ಥೆಯ ಪುರೋಹಿತಶಾಹಿ ಪೋಷಕ ಶಕ್ತಿಗಳಿಗೆ ಕೆಲವು ಮಠಾಧೀಶರು ಸೇರಿ ಶಹಪುರ ಪಟ್ಟಣದಲ್ಲಿ ನಡೆಸುತ್ತಿರುವ ಹಿಂದೂ ಸಮಾವೇಶಕ್ಕೆ ನಮ್ಮ ಧಿಕ್ಕಾರವಿರಲಿ.
