ರಾಮನಗರ
ಹೃದಯಾಘಾತದಿಂದ ನಿಧನರಾದ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆ ಲಿಂಗಾಯತ ಸಂಪ್ರದಾಯದಂತೆ ಬುಧವಾರ ಸಂಜೆ ನೆರವೇರಿತು.
ತಾಲೂಕಿನ ಗುನ್ನೂರು ಬಳಿಯ ಫಾರ್ಮ್ ಹೌಸ್ನಲ್ಲಿ ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ದಿಲೀಪ್ ರಾಜ್ ಅಣ್ಣನ ಮಗ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ವೇಳೆ ಪಾರ್ಥಿವ ಶರೀರದ ಎದುರು ಪತ್ನಿ ವಿದ್ಯಾ, ಮಕ್ಕಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ದಿಲೀಪ್ ಜೊತೆಗಿನ ಒಡನಾಟ ನೆನೆದು ಗ್ರಾಮಸ್ಥರು ಮತ್ತು ಆಪ್ತರು ಕಣ್ಣೀರಿಟ್ಟರು.
ದಿಲೀಪ್ ರಾಜ್ ಅಂತ್ಯಕ್ರಿಯೆಯಲ್ಲಿ ಹಲವಾರು ಚಿತ್ರರಂಗದ ಸಹದ್ಯೋಗಿಗಳು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ದರು.
10 ವರ್ಷಗಳ ಹಿಂದೆ ನಟ ದಿಲೀಪ್ ರಾಜ್ ಗುನ್ನೂರು ಬಳಿ 1 ಎಕರೆ ಜಮೀನು ಖರೀದಿಸಿದ್ದರು. ಇಲ್ಲಿ ತೋಟ ನಿರ್ಮಾಣ ಮಾಡಿಕೊಂಡು ಹಳೇ ಶೈಲಿಯಲ್ಲಿ ತೊಟ್ಟಿ ಮನೆ ನಿರ್ಮಾಣ ಮಾಡಿಕೊಂಡಿದ್ದರು.
ಸಿನಿಮಾ ಮತ್ತು ಟಿವಿ ಎರಡರಲ್ಲೂ ನಟ, ನಿರ್ಮಾಪಕ ದಿಲೀಪ್ ರಾಜ್ ಗುರುತಿಸಿಕೊಂಡಿದ್ದರು. 2005ರಲ್ಲಿ ಬಿಡುಗಡೆಯಾದ ಬಾಯ್ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಮಿಲನ ಸಿನಿಮಾದಲ್ಲಿ ವಿಲನ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು. ಸುಗ್ರೀವ, ಗೆಳೆಯ, ಯೂಟರ್ನ್, ಸೇರಿದಂತೆ 28 ಚಿತ್ರಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ.
