ಕುಷ್ಟಗಿಯಲ್ಲಿ ಬಸವ ಭವನ ಅಭಿವೃದ್ಧಿ ಅನುದಾನಕ್ಕೆ ಶಾಸಕರಿಗೆ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಕುಷ್ಟಗಿ :

ಪಟ್ಟಣದ ಬಸವ ಭವನದ ಅಭಿವೃದ್ಧಿಗಾಗಿ 25 ಲಕ್ಷ ರೂಪಾಯಿ ಅನುದಾನ ಹಾಗೂ ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಬಸವಪರ ಸಂಘಟನೆಗಳು ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದವು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಗಳ ಪ್ರಮುಖರು, ಕುಷ್ಟಗಿ ಪಟ್ಟಣದ ಹೃದಯ ಭಾಗದಲ್ಲಿ ಬಸವ ಭವನ ನಿರ್ಮಾಣಗೊಂಡು ಏಳು ವರ್ಷಗಳು ಕಳೆದಿವೆ. ಈ ಭವನದಲ್ಲಿ ಅನೇಕ ಸಾರ್ವಜನಿಕ ಹಾಗೂ ಬಸವ ಸಂಘಟನೆಯ ಕಾರ್ಯಕ್ರಮಗಳು ನಡೆಯಲು ಅನುಕೂಲವಾಗಿದೆ. ಬಸವ ಭವನದ ಕಾಂಪೌಂಡ್ ಗೋಡೆಯನ್ನು ಪುರಸಭೆಯವರು ಚರಂಡಿ ಮತ್ತು ರಸ್ತೆ ನಿರ್ಮಾಣದ ಸಮಯದಲ್ಲಿ ಕೆಡವಿ ಹಾಕಿದ್ದಾರೆ.

ಮೂರು ವರ್ಷ ಕಳೆದರೂ ಕಾಂಪೌಂಡ್ ಗೋಡೆ ನಿರ್ಮಾಣಗೊಂಡಿಲ್ಲ. ಹಂದಿ, ನಾಯಿ, ದನಗಳು ಹೊಕ್ಕು ಬಸವ ಭವನದ ಆವರಣವನ್ನು ಕೊಳಚೆ ಮಾಡುವುದಲ್ಲದೆ, ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿ ನಾವು ತಾತ್ಕಾಲಿಕ ತಂತಿಬೇಲಿ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ಬಸವ ಭವನದಲ್ಲಿ ಸುಮಾರು 2500 ಪುಸ್ತಕಗಳ ಬಸವಾದಿ ಶರಣರ ಭಂಡಾರವಿದೆ. ಈ ಗ್ರಂಥಾಲಯಕ್ಕಾಗಿ ಎರಡು ಕೋಣೆಗಳನ್ನು ಬಸವ ಭವನದ ಪೂರ್ವದ ಮೂಲೆಯಲ್ಲಿ ನಿರ್ಮಿಸಿಕೊಟ್ಟರೆ ಸಾರ್ವಜನಿಕರಿಗೆ ಗ್ರಂಥಾಲಯದ ಉಪಯೋಗವಾಗುತ್ತದೆ.

ಭವನದ ಸುತ್ತಮುತ್ತ ಮಳೆಗಾಲದಲ್ಲಿ ಕಸ ಬೆಳೆದು ತೊಂದರೆಯಾಗುತ್ತದೆ. ಆದ್ದರಿಂದ ಅದಕ್ಕೆ ನೆಲಹಾಸು ನಿರ್ಮಿಸಬೇಕಾಗಿದೆ.

ಭವನದಲ್ಲಿ ಸಭೆ, ಸಮಾರಂಭ ನಡೆದಾಗ ಶೌಚಾಲಯಗಳ ಅವಶ್ಯಕತೆವ ಇರುತ್ತದೆ. ಅವುಗಳನ್ನೂ ನಿರ್ಮಿಸುವುದು ಅವಶ್ಯವಿದ್ದು, ಈ ಎಲ್ಲ ಕೆಲಸ-ಕಾರ್ಯಗಳಿಗಾಗಿ ಸುಮಾರು ₹ 25 ಲಕ್ಷ ವೆಚ್ಚವಾಗುತ್ತಿದ್ದು, ಅನುದಾನ ನೀಡುವ ಮೂಲಕ ಬಸವ ಭವನದ ಅಭಿವೃದ್ಧಿಗೊಳಿಸಬೇಕು ಎಂದು ಮನವಿಪತ್ರದಲ್ಲಿ ನಿವೇದಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ, ಬಸವ ಭವನದ ಅಭಿವೃದ್ಧಿಗೆ ಅನುದಾನ ನೀಡುವ ಜತೆಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಬಸವ ಸಮಿತಿಯ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್ಲ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ, ಕಳಕಪ್ಪ ರೆಡ್ಡೇರ, ಮಹಾದೇವಪ್ಪ ಮಹಾಲಿಂಗಪುರ, ಶಂಕರಗೌಡ ಪಾಟೀಲ, ಶಿವಾಜಿ ಪಾಟೀಲ, ರಾಮನಗೌಡ ಪಾಟೀಲ, ಶಿವಲಿಂಗಪ್ರಭು ಸುಂಕದ, ಶರಣಪ್ಪ ಜೀಗೇರಿ, ಶಿವಾಜಿ ಹಡಪದ, ಗೌರಮ್ಮ ಕುಡತಿನಿ, ಗಿರಿಜಾ ನಾಗೋಡ, ಗಿರಿಜಾ ಮಾಲಿಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *