ಬಸವಣ್ಣನವರು ಒಬ್ಬ ಮನೋವಿಜ್ಞಾನಿ : ಡಾ. ಗುರುಮಹಾಂತ ಅಪ್ಪಗಳು
ಸಿಂಧನೂರು :
ಬಸವಾದಿ ಶರಣರು ನಮಗೆ ಒಂದು ಪರಿಪೂರ್ಣವಾದ ಹಾಗೂ ವೈಜ್ಞಾನಿಕವಾದ ಧರ್ಮವನ್ನು ಕೊಟ್ಟಿದ್ದಾರೆ. ಬಸವಣ್ಣನವರು ಒಬ್ಬ ಮನೋವಿಜ್ಞಾನಿಯಾಗಿದ್ದರು ಎಂದು ಇಳಕಲ್ಲ ಮಹಾಂತಮಠದ ಡಾ. ಗುರುಮಹಾಂತ ಅಪ್ಪಗಳು ಹೇಳಿದರು.
ಸಮೀಪದ ಕುರಕುಂದ ಗ್ರಾಮದ ನವಲಿ ಹಾಗೂ ಪಗಡದಿನ್ನಿ ಕುಟುಂಬದವರು ಹಮ್ಮಿಕೊಂಡಿದ್ದ ಗರ್ಭಲಿಂಗ ಸಂಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು.

ಮನುಷ್ಯ ಎಲ್ಲಾ ಪ್ರಾಣಿಗಳಿಗಿಂತಲೂ ವಿಶಿಷ್ಟ. ಮನುಷ್ಯ ಸಂಸ್ಕಾರ ಪಡೆದುಕೊಳ್ಳುವುದರಿಂದ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಟತೆ ಸಾಧಿಸಿದ್ದಾನೆ.
ಮಗುವಿಗೆ ಸಂಸ್ಕಾರವನ್ನು ತಾಯಿಯ ಗರ್ಭದಲ್ಲಿರುವಾಗಲೇ ಕೊಡಬೇಕು. ತಾಯಿಯ ಗರ್ಭದಲ್ಲಿನ ಶಿಶುವಿಗೆ ಗ್ರಹಣಶಕ್ತಿ ಬಹಳ ಇರುತ್ತದೆ. ತಾಯಿಯ ಮನಸ್ಸಿಗೂ ಗರ್ಭದಲ್ಲಿರುವ ಮಗುವಿನ ಮನಸ್ಸಿಗೂ ನೇರವಾದ ಸಂಬಂಧವಿರುತ್ತದೆ.
ತಾಯಿ ಯೋಚಿಸುವ, ಚಿಂತಿಸುವ ಮತ್ತು ಆಲೋಚನೆ ಮಾಡುವ ಕ್ರಿಯೆಯು ಮಗುವಿನ ಮೇಲೆ ಪ್ರಭಾವ ಬೀರುತ್ತದೆ. ಆದರಿಂದ ತಾಯಿಯಾದವಳು ಯೋಚಿಸುವಾಗ ಮತ್ತು ಚಿಂತಿಸುವಾಗ ಬಹಳ ಜಾಗರೂಕರಾಗಿರಬೇಕು.

ವಿಶ್ವಗುರು ಬಸವಣ್ಣನವರು ಅಕ್ಕನಾಗಮ್ಮ ತಾಯಿ ಚನ್ನಬಸವಣ್ಣನವರನ್ನು ಗರ್ಭದಲ್ಲಿ ಇರಿಸಿಕೊಂಡಿದ್ದಾಗಲೇ ಲಿಂಗ ಸಂಸ್ಕಾರ ನೀಡಿದರು. ತಾಯಿಗೆ ಲಿಂಗ ಸಂಸ್ಕಾರ ಮಾಡುವುದರಿಂದ ಗರ್ಭದಲ್ಲಿರುವ ಮಗುವಿನ ಮೇಲೆ ಯಾವ ರೀತಿಯ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದಿದ್ದರು.
ಅಕ್ಕನಾಗಮ್ಮ ಗರ್ಭಧರಿಸಿದಾಗ ಶರಣರ ವಿಚಾರಗಳನ್ನು ಹಾಗೂ ಬಸವಣ್ಣನವರು ಹೇಳಿಕೊಡುತ್ತಿದ್ದ ತತ್ವಜ್ಞಾನವನ್ನು ಆಲಿಸುತ್ತಿದ್ದರು. ಅದು ಚನ್ನಬಸವಣ್ಣ ಅವರ ಮೇಲೆ ಗಾಢವಾದ ಪ್ರಭಾವ ಬೀರಿತು. ಅವರು ಅತೀ ಚಿಕ್ಕವಯಸ್ಸಿನಲ್ಲಿಯೇ ಅನುಭವ ಮಂಟಪದ ಎರಡನೇ ಪೀಠಾಧಿಪತಿಗಳಾಗಿ ಅವಿರಳಜ್ಞಾನಿ ಷಟಸ್ಥಲ ಚಕ್ರವರ್ತಿ ಎಂದು ಕರೆಸಿಕೊಂಡರು. ತಾಯಿಯ ಮೂಲಕ ಮಗುವಿಗೆ ಲಿಂಗಜ್ಞಾನ ಹೋಗುತ್ತದೆ ಎನ್ನುವುದನ್ನು ನಾವಿಲ್ಲಿ ತಿಳಿಯಬೇಕು.
ತಾಯಿ ಎಂದರೆ ಮಗುವಿನ ಶಿಲ್ಪಿ. ಗರ್ಭವತಿ ತಾಯಿಗೆ ಮನೆಯ ಹಿರಿಯರು ಕುಟುಂಬದ ಸದಸ್ಯರು ವಿಶೇಷವಾದ ಪ್ರೀತಿಯನ್ನು ತೋರಿಸಬೇಕು. ಆಕೆಗೆ ಸರಿಯಾದ ಸಮಯಕ್ಕೆ ಒಳ್ಳೆಯ ಪೌಷ್ಟಿಕ ಆಹಾರದ ಹಣ್ಣು, ತರಕಾರಿ ಕೊಡಬೇಕು. ಹೀಗೆ ಆಕೆಯನ್ನ ನೋಡಿಕೊಂಡಿದ್ದೇ ಆದರೆ ಸಂಸ್ಕಾರಯುತ ಮಗು ನಮ್ಮದಾಗುತ್ತದೆ.
ಇದೇ ಸಂದರ್ಭದಲ್ಲಿ ಲಿಂಗೈಕ್ಯ ವೀರಭದ್ರಪ್ಪ ಕುರುಕುಂದ ಅವರನ್ನು ಸ್ಮರಿಸಿಕೊಳ್ಳುತ್ತಾ, ಅವರ ಬಸವತತ್ವದ ಕಾರ್ಯ ಹಾಗೂ ಬಸವ ಸಂಸ್ಕೃತಿ ಆಚರಣೆಗಳನ್ನು ಸ್ವಾಮೀಜಿ ಸ್ಮರಿಸಿದರು.

ಬಸವಕಲ್ಯಾಣದ ಪೂಜ್ಯ ಸತ್ಯಕ್ಕ ತಾಯಿ ಅವರು ಮಾತನಾಡುತ್ತಾ, ಭೂಮಿಯಲ್ಲಿ ಸಂಸ್ಕಾರ ಹೊಂದಿದ ವ್ಯಕ್ತಿ ಮತ್ತು ಸಂಸ್ಕಾರದ ವಸ್ತುಗಳಿಗೆ ವಿಶೇಷವಾದ ಗೌರವ ಇದೆ. ಸಗಣಿ ಸಂಸ್ಕಾರ ಹೊಂದಿ ವಿಭೂತಿಯಾಗುತ್ತದೆ ಹಾಗೆ ಮನುಷ್ಯ ಸಂಸ್ಕಾರ ಹೊಂದಿದರೆ ದೇವನಾಗುತ್ತಾನೆ. ಮಗು ಜನಿಸಿದ ಮೇಲೆ ಒಳ್ಳೆಯ ಶಿಕ್ಷಣ ಕೊಟ್ಟು ಅವನನ್ನು ಸಂಸ್ಕಾರವಂತನಾಗಿ ಮಾಡುತ್ತೇವೆ ಎಂಬ ಕಲ್ಪನೆ ತಪ್ಪು. ಅದಕ್ಕೆ ಬದಲಾಗಿ ಮಗು ತಾಯಿಯ ಗರ್ಭದಲ್ಲಿದ್ದಾಗಲೇ ಸಂಸ್ಕಾರವನ್ನು ಕೊಡುವುದಕ್ಕೆ ಪ್ರಾರಂಭಿಸಬೇಕು. ಅದಕ್ಕಾಗಿ ನಮ್ಮ ಶರಣರು ಗರ್ಭಲಿಂಗ ಸಂಸ್ಕಾರವನ್ನು ಕಂಡುಹಿಡಿದರು.
ಲಿಂಗಾಯತ ಮನೆತನಗಳಲ್ಲಿ ಆಗಾಗ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಭಕ್ತರ ಮನೆಯ ಅಂಗಳವೇ ವಾರಣಾಸಿ, ಭಕ್ತರ ಮನೆಗಳೆ ಮಠಗಳಾಗಬೇಕು. ಶರಣರ ಅನುಭಾವದ ನುಡಿಗಳಿಂದ ತನು ಮನ ಭಾವ ಶುದ್ಧವಾಗುತ್ತದೆ ಇದರಿಂದ ಒಳ್ಳೆಯ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ನುಡಿದರು.
ಪ್ರಾಸ್ತಾವಿಕವಾಗಿ ಬಸವಲಿಂಗಪ್ಪ ಬಾದರ್ಲಿ ಮಾತನಾಡುತ್ತಾ, ವ್ಯಕ್ತಿತ್ವ ಎಂದರೆ ಅದು ಕೇವಲ ದೇಹಕ್ಕೆ ಸಂಬಂಧಪಟ್ಟದ್ದು ಮಾತ್ರ ಅಲ್ಲ ಜೊತೆಗೆ ಮನಸ್ಸಿಗೂ ಸಂಬಂಧ ಪಟ್ಟದ್ದು. ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.
ಆರೋಗ್ಯಪೂರ್ಣ ದೇಹ ಮತ್ತು ಆರೋಗ್ಯಪೂರ್ಣ ಮನಸ್ಸು ಇವೆರಡು ತಾಯಿಯ ಗರ್ಭದಿಂದಲೇ ಮಗುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ತಾಯಿಯಾಗಲಿರುವ ಹೆಣ್ಣು ಮಗಳು ಸದಾ ಸಂತೋಷದಿಂದ ಮತ್ತು ಒತ್ತಡರಹಿತವಾಗಿರಬೇಕು.

ಬಸವಣ್ಣನವರು ಹೇಳುವಂತೆ ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ ಬೆಳೆಯಲು ಬಿಡುವುದಿಲ್ಲ. ಅವಗುಣವೆಂಬ ಕಸವನ್ನು ಕಿತ್ತು ಸುಳಿದಗೆದು ಬೆಳೆ ಬೆಳೆಯಬೇಕು ಎಂದು ನುಡಿದರು.
ಕಾರ್ಯಕ್ರಮದ ವಚನಮೂರ್ತಿಗಳಾಗಿ ತಿಮ್ಮನಗೌಡ ಚಿಲ್ಕರಾಗಿ ಹಾಗೂ ಚಂದ್ರೇಗೌಡ ಅವರು ಕಾರ್ಯ ನಿರ್ವಹಿಸಿದರು.

ವೇದಿಕೆಯಲ್ಲಿ ನಾಗಭೂಷಣ ನವಲಿ, ಈರಮ್ಮ ಪಗಡದಿನ್ನಿ, ಬಸವರಾಜಪ್ಪ ಕೋಳಿಹಾಳ ಭಾಗವಹಿಸಿದ್ದರು. ಕುಮಾರಿ ಗೌತಮಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ನೂರಾರು ಬಸವ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಳೆಗಟ್ಟಿದರು.
