ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ
ಬೆಂಗಳೂರು
ಯುರೋಪಿನ ಬಸವ ಸಮಿತಿಯು ಜರ್ಮನಿಯ ಎರ್ಲಾಂಗೆನ್ ನಗರದಲ್ಲಿ ಮೇ 16ರಂದು ‘ಬಸವ ಜಯಂತಿ’ ಆಯೋಜಿಸಿದೆ.
ಸಮಾವೇಶದಲ್ಲಿ ಯುರೋಪಿನ ನೂರಾರು ಬಸವಾಭಿಮಾನಿಗಳು ಹಾಗೂ ಕನ್ನಡಿಗರು ಭಾಗವಹಿಸಲಿದ್ದಾರೆ.
ವಿದೇಶದ ನೆಲದಲ್ಲಿ ಬಸವಣ್ಣನವರ ತತ್ವ, ಸಮಾನತೆ, ಕಾಯಕ ಹಾಗೂ ದಾಸೋಹದ ಸಂದೇಶವನ್ನು ಪಸರಿಸುವ ಸದುದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವ ಸಮಿತಿ ಸದಸ್ಯ ಶಶಿಕಾಂತ ಗುಡ್ಡದಮಠ ತಿಳಿಸಿದ್ದಾರೆ.
ಜರ್ಮನಿಯ ಭಾರತೀಯ ರಾಯಭಾರಿ ಅಜಿತ್ ವಿನಾಯಕ್ ಗುಪ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಚಿಕ್ಕಮಗಳೂರಿನ ಬಸವತತ್ವ ಪೀಠ ಹಾಗೂ ಶಿವಮೊಗ್ಗದ ಬಸವಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಎರ್ಲಾಂಗೆನ್ ಉಪ ಮೇಯರ್ ಇವಾ ಲಿನ್ಸಾರ್ಟ್, ದಕ್ಷಿಣ ಏಷ್ಯಾ ಅಧ್ಯಯನಗಳ ಖ್ಯಾತ ಪ್ರಾಧ್ಯಾಪಕ ಪ್ರೊ.ಡಾ.ರಾಬರ್ಟ್ ಝೆನ್ದಬೋಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಹೋದ ವರ್ಷ ಜರ್ಮನಿಯ ಇದೇ ನಗರದಲ್ಲಿ ಬಸವ ಸಮಿತಿ ಬಸವ ಜಯಂತಿಯನ್ನುಆಚರಿಸಲು ಆರಂಭಿಸಿತ್ತು. ಸುಮಾರು 150 ಬಸವಾಭಿಮಾನಿಗಳು ವಿವಿಧ ದೇಶಗಳಿಂದ ಬಂದು ಭಾಗವಹಿಸಿದ್ದರು.
