ಒಮ್ಮೆಯಾದರೂ ಬಸವ ಕಲ್ಯಾಣಕ್ಕೆ ಭೇಟಿ ನೀಡಬೇಕು: ಚನ್ನಬಸವಣ್ಣ ಲಂಗೋಟಿ

ಮೈಸೂರು :

‘ಈ ಭಾಗದವರು ಒಮ್ಮೆಯಾದರೂ ಬಸವ ಕಲ್ಯಾಣಕ್ಕೆ ಭೇಟಿ ನೀಡಬೇಕು. 800 ವರ್ಷವಾದರೂ ಅಲ್ಲಿ ಶರಣರ ಸಂಸ್ಕೃತಿ ಉಳಿದಿದೆ,’ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕ ಚನ್ನಬಸವಣ್ಣ ಲಂಗೋಟಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಶನಿವಾರ ಬಸವ ಜಯಂತಿ, ಕಾಯಕ ದಿನಾಚರಣೆ ಹಾಗೂ ಕಾಯಕಶ್ರೀ ಪ್ರಶಸ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾವು ಬೀದರ್‌ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭ, ಬಸವಣ್ಣನವರು ಮಂತ್ರಿಯಾಗಿ ಜನರ ಕಷ್ಟ ಆಲಿಸುತ್ತಿದ್ದ ‘ಪರುಷ ಕಟ್ಟೆ’ಯ ಅಭಿವೃದ್ಧಿಗೆ ಮುಂದಾದಾಗ ಅಲ್ಲಿನ ಜನ ಜಾತಿ–ಧರ್ಮ ಎನ್ನದೇ ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಟ್ಟು ನೆರವು ನೀಡಿದ್ದನ್ನು ಅವರು ನೆನೆದರು.

‘ಶರಣರು ಸಮಾಜದಲ್ಲಿನ ನೋವನ್ನು‌ ಉಂಡವರು. ವಚನಗಳು ಅವರ ಬದುಕಿನ ಪ್ರತಿರೂಪ. ಅದರ ಹಿಂದಿನ ಆಶಯಗಳನ್ನು ನಾವು ಅರಿಯಬೇಕಿದೆ. ಇನ್ನೊಬ್ಬರ ನೋವನ್ನು ತನ್ನದೆಂದು ಭಾವಿಸಿ ಒಳಗೊಳ್ಳುವುದೇ‌ ಬಸವ ಧರ್ಮ,’ ಎಂದರು.

ಬಸವಾದಿ ಶರಣರು ಕಾಯಕಕ್ಕೆ ಮಹತ್ವ ನೀಡಿದವರು. ಎಲ್ಲ ಕಾಯಕಗಳನ್ನೂ ಪೂಜೆಗೆ ಸಮಾನ ಎನ್ನುವ ಕಲ್ಪನೆಯನ್ನು ತಂದವರು. ಬಸವಣ್ಣನವರು ಮಹಾಮಾನವತಾವಾದಿ. ಬರೆದದ್ದನ್ನೆ ಬದುಕಿ, ಬದುಕಿದ್ದನ್ನೇ ಬರೆದ ಸುಜ್ಞಾನಿಯಾಗಿದ್ದರು. ಸಂಸಾರ ಬಿಡದೆ, ಸಂಸಾರ ಗೆಲ್ಲುವುದನ್ನು ಹೇಳಿಕೊಟ್ಟ ಪೂರ್ಣಪ್ರಜ್ಞೆಯ ಪರಿಶುದ್ಧ ಆತ್ಮಜ್ಞಾನಿಯಾಗಿದ್ದರು, ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದ ಕವಿ ಹಾಗೂ ನಗರದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ಪ ಹೊನ್ನಾಳಿ ಅವರು, ಲಿಂಗ ತಾರತಮ್ಯ, ಮೇಲು ಕೀಳೆಂಬ ಭೇದಭಾವಗಳ ಅಲ್ಲಗಳೆದು, ಜಾತಿ ಅಳಿದು ನೀತಿ ಬೆಳೆದವರು ಬಸವಣ್ಣನವರು ಎಂದರು.

ಕಾಯಕದಲ್ಲೇ ಕೈಲಾಸ ಕಾಣಲು ಕಲಿಸಿದವ ಬಸವಣ್ಣ, ಮಮತೆಯಿಂದ ಸಮತೆಯ ಸಮಾಜ ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ, ಪುರೋಹಿತಶಾಹಿಗಳು ಅದನ್ನು ಹಾಳು ಮಾಡಿದರು, ಕಲ್ಯಾಣ ಕಟ್ಟುವ ಬಸವಣ್ಣನ ಕನಸು ನನಸಾಗಲೇ ಇಲ್ಲ.

ಅವರ ಅನುಯಾಯಿಗಳಾದ ನಾವು, ಅವರ ಕನಸನ್ನು ನನಸು ಮಾಡಬೇಕು, ಆಗ ಅದೇ ನಿಜವಾದ ಜಯಂತಿಯಾದೀತು, ಅದನ್ನು ಬಿಟ್ಟು ಕೇವಲ ಅವರ ಭಾವಚಿತ್ರ ಇಟ್ಟು, ಹೂಮಾಲೆ ಹಾಕುವುದರಿಂದ ಪ್ರಚಾರ ಬಿಟ್ಟು ಬೇರೇನೂ ಪ್ರಯೋಜನವಾಗದು.

ಬಸವಣ್ಣನ ಭಾವಚಿತ್ರಕ್ಕೆ ನಾವು ವಾರಸುದಾರರಾಗದೆ, ಆತನ ಆಚಾರ ವಿಚಾರಗಳಿಗೆ ವಾರಸುದಾರರಾದಾಗ ಮಾತ್ರ ವಿಶ್ವಮಾನವ ಬಸವಣ್ಣನಿಗೆ ನಾವು ನಿಜವಾದ ಗೌರವ ಕೊಟ್ಟಂತಾಗುತ್ತದೆ. ಆ ಕೆಲಸ ಕ್ರಿಯೆಯ ರೂಪದಲ್ಲಿ ಮೊದಲಾಗಲಿ ಎಂದು ಹೊನ್ನಾಳಿ ಹೇಳಿದರು.

ಕಾಯಕಶ್ರೀ ಪ್ರಶಸ್ತಿಯನ್ನು ಮೈಸೂರಿನ ಸ್ನೇಹಬಿಂದು ಚಾರಿಟಬಲ್ ಟ್ರಸ್ಟ್ ನ ನಿರ್ಮಾತೃ, ಸಮಾಜ ಸೇವಕಿ, ಶುಶ್ರೂಷಕಿ ಮೇರಿ ಲೋಬೊ ಅವರಿಗೂ, ಮೈಸೂರಿನ ಬಾಲಾಜಿ ಆಟೋಟೆಕ್ ನ ಅತ್ಯುತ್ತಮ ಕಾಯಕ ಜೀವಿಯಾದ, ಕನಿಕಾದಾಸ್ ಎಸ್. ಅವರಿಗೂ ಸಮಾರಂಭದ ಸಾನ್ಯಿಧ್ಯ ವಹಿಸಿದ್ದ ಕುಂದೂರು ಮಠದ, ಪೂಜ್ಯ ಡಾ.ಶರತ್ ಚಂದ್ರ ಸ್ವಾಮಿಗಳು ಸನ್ಮಾನಿಸಿ, ಗೌರವಿಸಿ, ಪ್ರದಾನ ಮಾಡಿ, ಆಶೀರ್ವಚನ ನೀಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ, ದತ್ತಿ ದಾಸೋಹಿಗಳಾದ ಜೆ.ಪಿ. ಚಂದ್ರಧರ, ಜೆ.ಪಿ. ಸತೀಶ, ಡಾ. ಮನೋಜಕುಮಾರ, ನಿಕಟಪೂರ್ವ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶಾರದಾ ಶಿವಲಿಂಗಸ್ವಾಮಿ, ಗೊಂಡೇದಹಳ್ಳಿ ಕುಟುಂಬದ ಬಂಧುಗಳು, ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಆರಂಭದಲ್ಲಿ ಚಾಮರಾಜೇಶ್ವರಿ ಅಕ್ಕನ ಬಳಗದವರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಹೇಮಲತಾ ಪ್ರಾರ್ಥನೆ ಮಾಡಿದರು. ಸುಗಂಧಮ್ಮ ಜಯಪ್ಪ ವಚನ ಗಾಯನ ಮಾಡಿದರು. ಪರಿಷತ್ತಿನ ಸಂಚಾಲಕರಾದ ಡಾ. ಲೋಕೇಶಪ್ಪ ಹಾಗೂ ಕಾರ್ಯದರ್ಶಿಗಳಾದ ಬಿ.ಎನ್. ನಂದೀಶ್ವರ ಕಾಯಕಶ್ರೀ ಪ್ರಶಸ್ತಿ ಪುರಸ್ಕೃತರ ಪರಿಚಯಿಸಿದರೆ, ನಿರೂಪಣೆಯನ್ನು ಮಲ್ಲಿಕಾ ಮಹದೇವಸ್ವಾಮಿ ಮಾಡಿ, ಗೀತಾ ಈಶ್ವರ ಶರಣು ಸಮರ್ಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *