‘ಬಸವಣ್ಣನವರಿಂದ ದಲಿತರು, ಮಹಿಳೆಯರ ಬಾಳು ಬೆಳಗಿತು’

ಬಸವ ಮೀಡಿಯಾ
ಬಸವ ಮೀಡಿಯಾ

ಹಾವೇರಿ :

ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ದಲಿತರ ಹಾಗೂ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಒಂದು ವೇಳೆ ಬಸವಣ್ಣನವರು ಬರದೇ ಹೋಗಿದ್ದಲ್ಲಿ ಇಂದಿಗೂ ಸಹ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು ಹಾಗೂ ದಲಿತರನ್ನು ಇನ್ನೂ ಅವಮಾನಕರವಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಉಪನ್ಯಾಸಕ ರೇವಣಸಿದ್ದಪ್ಪ ಹೆಗಡಾಳ ಅವರು ಹೇಳಿದರು.

ರವಿವಾರ ಬಸವ ಬಳಗದ ಹಿರಿಯ ಸದಸ್ಯ ಶಿವಯೋಗಪ್ಪ ಬೆನ್ನೂರ ಅವರ ತೋಟದ ಮನೆಯಲ್ಲಿ ಬಸವ ಬಳಗದ ವತಿಯಿಂದ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರ ಕಾರಣದಿಂದ ಇಂದು ಮಹಿಳಾ ಸ್ವಾತಂತ್ರ್ಯ ದೊರಕಿದೆ. ಆದರೆ ಜನರು ಇನ್ನೂ ಮೌಢ್ಯದಲ್ಲಿಯೇ ಬದುಕುತ್ತಿದ್ದಾರೆ. ಜ್ಯೋತಿಷ್ಯ ವಗೈರೆಗಳನ್ನು ಅವಲಂಭಿಸದೆ ‘ಬಾರದು ಬಪ್ಪುದು ಬಪ್ಪುದು ತಪ್ಪದು’ ಎಂಬ ಉಕ್ತಿಯಂತೆ ವಾಸ್ತವಿಕ ಜೀವನವನ್ನು ನಡೆಸಬೇಕೆಂದು ಕರೆಕೊಟ್ಟರು.

ಇನ್ನೊಬ್ಬ ಉಪನ್ಯಾಸಕಿ ಡಾ. ಪುಷ್ಪ ಶಲವಡಿಮಠ ಅವರು ಮಾತನಾಡುತ್ತ, ಕೆಲವು ಜನ ಬುದ್ಧಿವಂತರು ಅನುಭವ ಮಂಟಪ ಇರಲೇ ಇಲ್ಲ, ಬಸವಣ್ಣನವರು ಬರಲೇ ಇಲ್ಲ, ಯಾವುದೇ ಶರಣ ಚಳುವಳಿ ನಡೆದೇ ಇಲ್ಲ ಎಂದು ಅವ್ಯಾಹತವಾಗಿ ಶರಣ ಧರ್ಮದ ಮೇಲೆ ದಾಳಿ ಮಾಡುತ್ತಿದ್ದು ಅವರ ಹೇಳಿಕೆಗಳನ್ನು ಸಾಂಸ್ಕೃತಿಕವಾಗಿ ಖಂಡಿಸಬೇಕಾಗಿದೆ. ಅವರಿಗೆ ಬಸವಣ್ಣನವರ ವಚನಗಳ ಅರಿವನ್ನು ಮುಟ್ಟಿಸಬೇಕಾಗಿದೆ. ಹಾಗೂ ಅಂತಹವರಿಗೆ ಇತಿಹಾಸವನ್ನು ತಿಳಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ದೌರ್ಭಾಗ್ಯ.

ಶರಣತತ್ವವು ಇನ್ನೂ ಹಲವಾರು ಪ್ರದೇಶಗಳಿಗೆ ತಲುಪಿಯೇ ಇಲ್ಲ. ಅವರಿಗೂ ಸಹ ಶರಣ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಅರಿವನ್ನು ತಲುಪಿಸಬೇಕಾಗಿದೆ ಎಂದು ಹೇಳಿದರು.

ಅಮೇರಿಕಾದಲ್ಲಿ ವಾಸವಾಗಿದ್ದ ಕಡಕೋಳ ಅವರು ತಮ್ಮ ಅನುಭವ ಹಂಚಿಕೊಂಡರು.

ನಿಕಟ ಪೂರ್ವ ಅಧ್ಯಕ್ಷ ನಿಜಲಿಂಗಪ್ಪ ಕಾಳೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿ.ಜಿ.ಯಳಗೇರಿ ಅವರು, ಇಂತಹ  ಕಾರ್ಯಕ್ರಮಗಳಿಂದ ಜನರಲ್ಲಿ ಬಸವ ಪ್ರಜ್ಞೆ ಜಾಗೃತವಾಗಿದೆ. ಬಸವಾದಿ ಶರಣರ ವಚನಗಳಿಂದ ಪ್ರೇರಿಪಿತರಾಗಿದ್ದ ಜನರು ಹಲವಾರು ಮಹತ್ವದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಯುವಕರಲ್ಲಿಯೂ ಸಹ ಬಸವ ಪ್ರಜ್ಞೆ ಮೂಡುತ್ತಿದೆ. ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಶರಣರ ವಚನಗಳು ದಾರಿದೀಪವಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಬಸವೇಶ್ವರ ನಗರದಲ್ಲಿ ಬಸವ ಪುತ್ಥಳಿ ನಿರ್ಮಾಣ ಮಾಡುವುದಕ್ಕೆ ಶ್ರಮವಹಿಸಿದ ಎ.ಕೆ. ಯಮನೂರ ಅವರು, ಪತ್ರಕರ್ತರು, ಕಾವ್ಯ ದಂಪತಿಗಳು ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಶಿವಯೋಗಪ್ಪ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಿವಯೋಗಪ್ಪ ಬೆನ್ನೂರು, ಸ್ವಾಗತಿಸಿದರು ಕಾವ್ಯ ಅಂಗಡಿ ವಚನ ಗಾಯನ ಪ್ರಸ್ತುತಪಡಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಶಿವಬಸಪ್ಪ ಮುದ್ದಿ ಶರಣು ಸಮರ್ಪಿಸಿದರು. 

ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣನವರ, ಕೆ. ಎಂ. ಬಿಜಾಪುರ, ಮಠಪತಿ, ಮಾಲತೇಶ ಕರೇಮಣ್ಣವರ, ಶಿವಾನಂದ ಹೊಸಮನಿ, ಶಿವಾನಂದ ಅಂಗಡಿ, ಸಿ.ಬಿ. ಇಟಗಿ, ಕಲ್ಮನಿ, ಶಿವಯೋಗಪ್ಪ ಬೆನ್ನೂರ ಬಂಧುಗಳು, ಅನೇಕರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *