ನಂಜನಗೂಡು :
ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಗ್ರಾಮದ ಗೌಡಕೆ ಋಷಬೇಂದ್ರಪ್ಪ, ಬಸವ ಬಳಗ ಹಾಗೂ ವಿಶ್ವ ಬಸವ ಸೇನೆಯ ಸದಸ್ಯರಾದ ಮಹದೇವಸ್ವಾಮಿ ಹಾಗೂ ಸ್ನೇಹಿತರು ವಿಶ್ವ ಬಸವ ಸೇನೆಯ ಗೌರವಾಧ್ಯಕ್ಷರಾದ ಗುರುಸ್ವಾಮೀಜಿ ಮತ್ತಿತರರು ಸೇರಿದಂತೆ ಜಯಂತಿ ನೇತೃತ್ವ ವಹಿಸಿದ್ದರು.

ಮೆರವಣಿಗೆಗೆ ನವಿಲೂರು ಮಠದ ಪೂಜ್ಯ ಚನ್ನಬಸವ ಸ್ವಾಮೀಜಿ ಅವರು ಬಸವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮುಖಾಂತರ ಚಾಲನೆ ನೀಡಿದರು. ಶ್ರೀರಂಗಪಟ್ಟಣ ತಾಲೂಕಿನ ಬೇಬಿಬೆಟ್ಟದ ಸ್ವಾಮೀಜಿ, ಕಸುವಿನಹಳ್ಳಿ ಪಟ್ಟದ ಮಠ ಶಿವಕುಮಾರಸ್ವಾಮೀಜಿ, ಹಲ್ಲರೆ ಗುರುಮಲ್ಲೇಶ್ವರ ಪಟ್ಟದ ಮಠದ ಬಸವಣ್ಣ ಸ್ವಾಮೀಜಿ, ಭುಜಗಯ್ಯನಹುಂಡಿ ಗುರುಮಲ್ಲೇಶ್ವರ ಮಠದ ಶ್ರೀಗಳು ಮತ್ತು ಹಲವಾರು ಮಠದ ಸ್ವಾಮೀಜಿಗಳು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ನಂದಿಕಂಬ ಜನಪದ ಕಲಾತಂಡಗಳು ಪ್ರದರ್ಶನದ ಮೆರಗು ನೀಡಿದವು. ದಾವಣಗೆರೆಯ ಕಲಾ ಬಳಗದ ವಿಶೇಷವಾದ ನೃತ್ಯ ತಂಡವು ಎಲ್ಲರನ್ನು ಆಕರ್ಷಿಸಿದವು.
ವಿಶೇಷತೆ :
ಗ್ರಾಮದ ಪ್ರತಿ ಮನೆಯ ಮೇಲೆ ಬಸವಧ್ವಜ ಕಟ್ಟಲಾಗಿದ್ದು, ವಿಶೇಷ ಕಳೆ ತಂದಿತ್ತು ಮತ್ತು 50 ಅಡಿ ಉದ್ದದ ಕಂಬ ನೆಟ್ಟು ಅದರ ಮೇಲೆ ದೊಡ್ಡದಾದ ಬಸವಧ್ವಜ ಹಾರಾಡಿಸಲಾಯಿತು. ಹಾಗೂ ಊರಿನ ತುಂಬ ಬಸವಾದಿ ಶರಣರು, ಸ್ವಾಮೀಜಿಗಳ ಭಾವಚಿತ್ರಗಳು ರಾರಾಜಿಸುತಿದ್ದವು.

ಎರಡು ವರ್ಷಗಳ ಹಿಂದೆ ಅಕ್ಕಮಹಾದೇವಿ ತಾಯಿ ನಗರವೆಂದು ಹೆಸರಿಟ್ಟಿದ್ದ ಬಡಾವಣೆಯ ಎರಡು ರಸ್ತೆಗಳಿಗೆ ನೀಲಾಂಬಿಕೆ ಮಾರ್ಗ ಮತ್ತು ಅಕ್ಕನಾಗಲಾಂಬಿಕೆ ಮಾರ್ಗವೆಂದು ನಾಮಕರಣ ಮಾಡಲಾಯಿತು. ಈ ಉತ್ತಮ ಬೆಳವಣಿಗೆಯು ಗ್ರಾಮದ ಗುರುಸ್ವಾಮೀಜಿ ಅವರು ಮತ್ತು ಸಿದ್ಧಗಂಗಾ ಪ್ರಿಂಟ್ಸ್ ಮಾಲೀಕರಾದ ಮಹದೇವಸ್ವಾಮಿ ಬಳಗದವರು ಉಪಸ್ಥಿತಿಯಲ್ಲಿ ನಡೆಯಿತು.

ಸರ್ವಜ್ಞರ ವಚನದ ಸಂದೇಶದಂತೆ ಎಲ್ಲೆಲ್ಲೂ ಬಸವಧ್ವಜದ ಹಾರಾಟಗಳು ವಿಜೃಂಭಣೆ ಕಂಡುಬಂತು. ಪುಟಾಣಿ ಮಕ್ಕಳು ಶರಣರ ವೇಷ ಧರಿಸಿದ್ದು ಗ್ರಾಮದ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮವು ಊರಿನ ಪಂಚಾಯತ ಸದಸ್ಯರು, ಹಿರಿಯರು, ಗೌಡಿಕೆಯವರು ಹಾಗೂ ಗ್ರಾಮದ ಯುವ ಸಮುದಾಯ ಮತ್ತು ಗ್ರಾಮಸ್ಥರ ಸಹಕಾರದಿಂದ ಬಸವ ಜಯಂತಿ ಆಚರಣೆ ಯಶಸ್ವಿಯಾಗಿ ನಡೆಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
