ಬಸವಕಲ್ಯಾಣ :
ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ 322ನೇ ಮಾಸಿಕ ಶರಣ ಸಂಗಮ ಹಾಗೂ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ವಿರಚಿತ ಶರಣಲೋಕ ಗ್ರಂಥ ಲೋಕಾರ್ಪಣೆ ಸಮಾರಂಭ ನೆರವೇರಿತು.
ಸಮಾರಂಭದ ಸಾನಿಧ್ಯ ವಹಿಸಿ, ಬಸವಾದಿ ಶರಣರ ಕುರಿತು ಅಧ್ಯಯನ ಮಾಡಬೇಕೆಂದು ಬಹಳ ದಿವಸಗಳಿಂದ ಇಚ್ಛೆಯಿತ್ತು. ಅದನ್ನು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬೋಧಿವೃಕ್ಷ ವಾರದ ಪುರವಣಿಯಲ್ಲಿ ಶರಣ ಪರಂಪರೆ ಅಂಕಣ ಬರಹ ಬರೆಯುವ ಮೂಲಕ ಸಾಕಾರವಾಯಿತ್ತೆಂದು ಸಂತೋಷದಿಂದ ಹೇಳಬಲ್ಲೆ, ಬೋಧಿವೃಕ್ಷದಲ್ಲಿ ಮೂಡಿಬಂದ 150 ಲೇಖನಗಳ ಸಂಗ್ರಹವೇ ಈ ಶರಣಲೋಕ ಕೃತಿಯಾಗಿದೆ ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ, ಪೂಜ್ಯರು ಕಾಯದ ಒತ್ತಡದಲ್ಲಿಯೂ ನಿರಂತರ ಓದು ಮತ್ತು ಬರಹ ಮಾಡುತ್ತ ಬಂದಿದ್ದಾರೆ. ಇಲ್ಲಿಯವರೆಗೆ ಅವರು ಬರೆದಿರುವ 43 ಕೃತಿಗಳು ಪ್ರಕಟವಾಗಿವೆ. ಅದರಲ್ಲಿ ವಿಶೇಷ ಕೃತಿ ಎಂದರೆ ಶರಣಲೋಕ ಕೃತಿಯಾಗಿದೆ. ಈ ಕೃತಿ ಹೊರಬರಲಿಕ್ಕೆ ದೇವಯ್ಯ ಗುತ್ತೆದಾರ ಹಾಗೂ ದಿನಪತ್ರಿಕೆಗಳು ಕಾರಣೀಭೂತವಾಗಿದೆ ಎಂದು ನುಡಿದರು.
ಗ್ರಂಥ ಲೋಕಾರ್ಪಣೆ ಮಾಡಿದ ವಿಜಯಕರ್ನಾಟಕ ಕಲಬುರಗಿ ಸ್ಥಾನಿಕ ಸಂಪಾದಕರಾದ ದೇವಯ್ಯ ಗುತ್ತೆದಾರ ಅವರು, ಪೂಜ್ಯರು ಬರೆದ ಈ ಕೃತಿ ಅತ್ಯಂತ ಮಹತ್ವದ ಕೃತಿಯಾಗಿದೆ. ಶರಣಲೋಕ ಗ್ರಂಥದ ಮೊದಲ ಓದುಗ ನಾನೇ ಆಗಿದ್ದೇನೆ. ಶರಣರ ಕುರಿತು ಇಷ್ಟೊಂದು ಸಂಖ್ಯೆಯಲ್ಲಿ ಒಂದೇ ಗ್ರಂಥದಲ್ಲಿ ಮಾಹಿತಿ ಸಿಗುವುದು ಇದೇ ಗ್ರಂಥ ಆಗಿರಬಹುದು ಎನಿಸುತ್ತದೆ.

ಇತ್ತಿಚೆಗೆ ಕರ್ನಾಟಕ ಸರಕಾರ ಅನೇಕ ಶರಣರ ಜಯಂತಿ, ಸ್ಮರಣೋತ್ಸವ ಆಚರಿಸುತ್ತಿದೆ. ಆ ಸಂದರ್ಭದಲ್ಲಿ ನಮಗೆ ಶರಣರ ಕುರಿತು ಅನೇಕರು ಮಾಹಿತಿ ಕೇಳುತ್ತಿದ್ದರು. ಆದರೆ ನಮ್ಮಲ್ಲಿ ಆ ರೀತಿಯ ಗ್ರಂಥ ಇರಲಿಲ್ಲ. ಇಂತಹ ಒಂದು ಕೊರತೆಯನ್ನು ಶರಣ ಲೋಕ ಕೃತಿ ಪೂರೈಸಿದೆ ಎಂದು ಹೇಳಲಿಕ್ಕೆ ಸಂತೋಷವಾಗುತ್ತಿದೆ.
ಬಂಡೆಪ್ಪ ಎಂ. ಶರಣರು ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಕೋಸಂಬೆ ಅವರಿಂದ ಬಸವಗುರು ಪೂಜೆ ನಡೆಯಿತು. ರಾಜು ಜುಬರೆ ಗ್ರಂಥ ಪರಿಚಯ ಮಾಡಿದರು. ಸಂಗಮೇಶ ಬಿ. ಬಿರಾದಾರ ಉಪಸ್ಥಿತರಿದ್ದರು. ಶರಣು ಬೆಣ್ಣೂರು ಅವರಿಗೆ ಸನ್ಮಾನಿಸಲಾಯಿತು. ಸವಿತಾ ಭೂರೆ ವಚನ ಗಾಯನ ಮಾಡಿದರು. ದೀಪಕ ಠಮಕೆ ನಿರೂಪಿಸಿದರು. ಶ್ರೀಮಠದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು.
