ಮದ್ದೂರಿನಲ್ಲಿ ಬಸವ ಪುತ್ಥಳಿ ಸ್ಥಾಪಿಸಲು ತಾವಾಗಿಯೇ ಮುಂದೆ ಬಂದ ಶಾಸಕ ಉದಯ್

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಜಯಂತಿ ಆಚರಣೆ: ಜೆಎಲ್ಎಂ ಘಟಕ ಉದ್ಘಾಟನೆ

ಮದ್ದೂರು:

ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ನಗರದ ಕೊಲ್ಲಿ ವೃತ್ತದಲ್ಲಿ ನಿರ್ಮಾಣ ಮಾಡಲು ನಗರಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು, ಮುಂದಿನ ವರ್ಷ ಬಸವಣ್ಣನವರ ಜಯಂತಿಯಂದು ಲೋಕಾರ್ಪಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ಭರವಸೆ ವ್ಯಕ್ತಪಡಿಸಿದರು.

ನಗರದ ಶ್ರೀರಾಮ ಮಂದಿರ ಪಾರ್ಕ್ ಬಳಿ ಭಾನುವಾರ ನಡೆದ ವಿಶ್ವಗುರು ಬಸವೇಶ್ವರ ಜಯಂತೋತ್ಸವ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಿ ಎಂದು ಯಾರೂ ನನಗೆ ಅರ್ಜಿ ನೀಡಿರಲಿಲ್ಲ. ಆದರೂ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗಮನಿಸಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಪ್ರತಿನಿತ್ಯ ಜನರಿಗೆ ಅವರ ದರ್ಶನವಾಗಬೇಕು ಎಂಬ ಸುದುದ್ದೇಶದಿಂದ ಪುತ್ಥಳಿ ನಿರ್ಮಾಣ ಮಾಡುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಜಗಜ್ಯೋತಿ ಬಸವಣ್ಣನವರು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರ ವಚನಗಳು, ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕೆಂದು ಶಾಸಕ ಕೆ.ಎಂ. ಉದಯ್ ಅಭಿಪ್ರಾಯಪಟ್ಟರು.

12 ನೇ ಶತಮಾನದಲ್ಲಿ ಇದ್ದಂತಹ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಬಸವಣ್ಣನವರು ಚಾಲನೆ ನೀಡಿದರು. ಆದರೆ, 900 ವರ್ಷಗಳಾದರೂ ಅಂದಿನ ಸಮಸ್ಯೆಗಳು ಇಂದಿಗೂ ಕಾಣುತ್ತಿವೆ. ಅಂದರೆ ಬಸವಣ್ಣನವರ ವಚನಗಳನ್ನು ನಾವು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ ಎಂಬ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಬಸವಾದಿ ಶರಣರು ವಿದ್ಯೆ, ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿ ಸಮಾನತೆ ಹಾಗೂ ಸಮಾಜ ಸುಧಾರಣೆಗೆ ಶ್ರಮಿಸಿದವರು. ಎಲ್ಲಾ ಕಾಯಕಗಳನ್ನು ಪೂಜೆಗೆ ಸಮಾನ ಎನ್ನುವ ಕಲ್ಪನೆಯನ್ನು ತಂದವರು. ಶರಣರು ಸಮಾಜದಲ್ಲಿನ ನೋವನ್ನು ಉಂಡವರು. ವಚನಗಳು ಅವರ ಹಿಂದಿನ ಆಶಯಗಳನ್ನು ನಾವು ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ ಮಾತನಾಡಿ, ಬಸವಣ್ಣನವರು ನಾಡಿಗೆ ನೀಡಿದ ಕೊಡುಗೆಗಳು ಅಭೂತ ಪೂರ್ವವಾಗಿದೆ. ಮನುಷ್ಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಯಾವುದೇ ಸೇವೆ ಮಾಡಿದಾಗ ಅದು ಸಮಾಜಕ್ಕೆ ನೆರವಾಗಲಿದೆ. ಬಸವಣ್ಣನವರು ಕೈಗೊಂಡ ಸಮಾಜ ಸುಧಾರಣೆಯಿಂದಾಗಿ ಅವರು ಇಂದಿಗೂ ಪ್ರಸ್ತುತರಾಗಿದ್ದಾರೆ.

ಇಂತಹ ಮಹಾತ್ಮರ ಸ್ಮರಣೆ ಬದುಕಿಗೆ ಹೊಸ ಚೈತನ್ಯವನ್ನುಂಟು ಮಾಡುತ್ತದೆ. ಮಹನೀಯರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಕೆ.ಎಂ. ಉದಯ್ ಅವರು ಬಸವಣ್ಣ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದ್ದು, ಇದರ ಜತೆಗೆ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದರು.

ಪಾಂಡವಪುರದ ಬೇಬಿಬೆಟ್ಟದ ಶ್ರೀರಾಮ ಯೋಗೀಶ್ವರ ಮಠದ ಪರಮಪೂಜ್ಯ ಶ್ರೀ ಶಿವಬಸವ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಣ್ಣನವರು 12 ನೇ ಶತಮಾನದ ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಹಾಗೂ ಕನ್ನಡದ ಶ್ರೇಷ್ಠ ವಚನಕಾರರು. ಜಾತಿ, ಲಿಂಗ ತಾರತಮ್ಯ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದರು ಮಹಾನ್ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಣ್ಣನವರು 12 ನೇ ಶತಮಾತನದಲ್ಲಿ ಜನಿಸಿದವರು ನಾವು ಅವರನ್ನು 21 ನೇ ಶತಮಾನದಲ್ಲಿ ಅವರ ಸಾಧನೆ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಎಷ್ಟು ಎಂಬುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಶನ್ ಶರಣೆರೂಪ ಕುಮಾರಸ್ವಾಮಿ ಅವರಿಗೆ ಶರಣೆ ಅಕ್ಕ ಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಹಾಸಭಾದ ವತಿಯಿಂದ ಶಾಸಕ ಕೆ.ಎಂ. ಉದಯ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಉಪನ್ಯಾಸ ನೀಡಿ ವಚನ ಸಾಹಿತ್ಯದ ಮಹತ್ವವನ್ನು ವಿಶದಪಡಿಸಿದರು.

ವಚನ ಸಾಹಿತ್ಯವು ಕೇವಲ ಭಕ್ತಿಯ ಪರಂಪರೆ ಮಾತ್ರವಲ್ಲ, ಸಮಾಜದ ಎಲ್ಲಾ ಕ್ಷೇತ್ರಗಳಿಗೂ ದಾರಿದೀಪವಾಗಿರುವ ಅನುಭಾವದ ನುಡಿಗಳ ಭಂಡಾರವಾಗಿದೆ. ಹನ್ನೆರಡನೇ ಶತಮಾನದಲ್ಲಿಯೇ ಶರಣರು ಮಾನವೀಯ ಮೌಲ್ಯಗಳು, ಆರ್ಥಿಕ ಸಮಾನತೆ, ದಾಸೋಹ ಹಾಗೂ ಕಾಯಕದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದರು ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರು “ಕಾಯಕವೇ ಕೈಲಾಸ” ಮತ್ತು “ದಾಸೋಹ” ತತ್ವಗಳನ್ನು ಬಿತ್ತಿ ಸಮಾಜದಲ್ಲಿ ಆರ್ಥಿಕ ಚಿಂತನೆಗೆ ಹೊಸ ದಿಕ್ಕು ನೀಡಿದ ವಿಶ್ವದ ಮೊದಲ ಚಿಂತಕರಾಗಿದ್ದಾರೆ ಎಂದು ಹೇಳಿದರು. ದುಡಿಯುವ ಕೈಗಳಿಗೆ ಗೌರವ ಮತ್ತು ಹಂಚಿಕೊಳ್ಳುವ ಮನೋಭಾವ ಸಮಾಜದ ಸಮತೋಲನಕ್ಕೆ ಅವಶ್ಯಕವೆಂದು ಬಸವ ತತ್ವ ಸಾರುತ್ತದೆ ಎಂದರು.ಶರಣು ವಿಶ್ವ ಫೌಂಡೇಶನ್ ಅಧ್ಯಕ್ಷ ವಚನಕುಮಾರಸ್ವಾಮಿ ಅವರು ಬಸವ ನುಡಿಗಳನ್ನು ಆಡಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಜಾಗತಿಕ ಲಿಂಗಾಯುತ ಮಹಾಸಭಾ (ಜೆಎಲ್ಎಂ) ತಾಲೂಕು ಅಧ್ಯಕ್ಷ ಶಿವಾನಂದ, ಶರಣ ಸಾಹಿತ್ಯ ಪರಿಷತ್ತಿನ ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಎಂ. ಸುಬ್ರಹ್ಮಣ್ಯ, ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಉಪಾಧ್ಯಕ್ಷ ಮೈಸೂರು ಮಹಾದೇವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎಸ್. ಮಂಜುನಾಥ, ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಜೆಎಲ್ಎಂ ಕಾರ್ಯದರ್ಶಿ ಎಚ್. ಶಿವರುದ್ರಪ್ಪ, ಹಿರಿಯ ಉಪಾಧ್ಯಕ್ಷ ಮೆಣಸಗೆರೆ ಶಿವಲಿಂಗಪ್ಪ, ಗ್ರಾಮ ಸದಸ್ಯ ಮನುಕುಮಾರ್, ಎಂ. ಬಸವರಾಜು, ಎಚ್.ಕೆ. ಕೆಂಪಣ್ಣ, ಮಹದೇವಸ್ವಾಮಿ, ಮಹಾಲಿಂಗಪ್ಪ, ಕೆಂಪರಾಜು, ಮುಖಂಡ ವಿಜಯಕುಮಾರ ಇದ್ದರು. ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
1 Comment
  • ಶಾಸಕರಾದ ಕೆ.ಎಂ.ಉದಯ್ ರವರಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *