‘ವೈದಿಕರು ಬಿತ್ತುತ್ತಿದ್ದ ಮೌಢ್ಯ ಪ್ರತಿಭಟಿಸಲು ಬಸವಾದಿ ಶರಣರು ವಚನ ರಚಿಸಿದರು’

ಹೊಸಪೇಟೆ:

ಸಮಾನತೆ ವೇದಿಕೆ ವತಿಯಿಂದ ಇಲ್ಲಿನ ರೋಟರಿ ಕ್ಲಬ್‌ನಲ್ಲಿ ಈಚೆಗೆ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ ನಡೆಯಿತು.

ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣ ಚಿಂತಕ ಟಿ.ಎಚ್.ಬಸವರಾಜ್ ಅವರು ಮಾತನಾಡುತ್ತಾ, ನಮ್ಮ ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆಯು ಬಹುದೊಡ್ಡ ಸಾಮಾಜಿಕ ಪಿಡುಗಾಗಿದೆ. ಕಾರಣ ವೈದಿಕರು ಶತಶತಮಾನಗಳ ಕಾಲ ದೇವರು ಧರ್ಮದ ಹೆಸರಿನಲ್ಲಿ ಮೌಢ್ಯ, ಅಂಧಕಾರವನ್ನು ಬಿತ್ತಿ ಈ ನಾಡಿನ ಜನಸಾಮಾನ್ಯರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ, ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯತೆಯನ್ನು ಸೃಷ್ಟಿ ಮಾಡಿದ್ದರು.

ಇದನ್ನು ಪ್ರತಿಭಟಿಸಿ ಸಮಾನತೆ ತರುವುದಕ್ಕಾಗಿ ಬುದ್ಧನಿಂದ ಉದಯಿಸಿದ ಧರ್ಮವೇ ಬೌದ್ಧ ಧರ್ಮ. ನಂತರದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನವರು ಈ ನಾಡಿನ ತಳ ಸಮುದಾಯದ ಜನರನ್ನು ಒಂದುಗೂಡಿಸಿಕೊಂಡು ಅನುಭವ ಮಂಟಪದಲ್ಲಿ ಪ್ರಥಮ ಬಾರಿಗೆ ನಾಡಿನ ಸಾಮಾನ್ಯ ಜನರಿಗೆ ಕನ್ನಡದಲ್ಲಿ ಮೊದಲ ಬಾರಿಗೆ ಶಿಕ್ಷಣವನ್ನ ನೀಡಿದರು. ಇದರ ಫಲವಾಗಿ ಬೌದ್ಧಿಕ ಜ್ಞಾನದ ವಚನ ಸಾಹಿತ್ಯ ಸೃಷ್ಟಿಯಾಯಿತು, ಇಂದು ೨೩ ಸಾವಿರಕ್ಕೂ ಹೆಚ್ಚು ವಚನಗಳು ಲಭಿಸಿವೆ.

ಈ ವಚನ ಸಾಹಿತ್ಯ ಎಂದು ಬತ್ತದ ಬಾವಿ ಇದ್ದಂತೆ, ಇವು ಕನ್ನಡಿಗರ ಅಸ್ಮಿತೆಯಾಗಿದೆ. ಬಸವಣ್ಣನವರು ಈ ಕಾರಣಕ್ಕಾಗಿ ಈ ನಾಡಿನ ಕನ್ನಡದ ಮೊದಲ ಶಿಕ್ಷಕರಾಗಿದ್ದಾರೆ. ಬಸವಣ್ಣನವರು ಸಮಸಮಾಜ ನಿರ್ಮಾಣಕ್ಕೆ ಪ್ರಮುಖವಾಗಿ ಶ್ರಮಿಸಿದ್ದಾರೆ.

ಜಾತೀಯತೆಯನ್ನು ಹೋಗಲಾಡಿಸುವುದಕ್ಕೆ ಅಪ್ಪನು ನಮ್ಮ ಮಾದರ ಚೆನ್ನಯ್ಯ, ಬಪ್ಪನು ನಮ್ಮ ಡೋಹಾರ ಕಕ್ಕಯ್ಯ, ಚಿಕ್ಕಯ್ಯನೆ ನಮ್ಮಯ್ಯ, ಕಾಣಯ್ಯ: ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯ, ಎನ್ನನ್ನೇತಕ್ಕರಿಯಿರಿ ಕೂಡಲಸಂಗಮದೇವ ಎಂದರು.

ಹೀಗೆ ಹೇಳುವುದರ ಮೂಲಕ ಸಮಾನತೆ ತರಲು ಪ್ರಯತ್ನಿಸಿದರು. ನಂತರ ಬುದ್ಧ ಮತ್ತು ಬಸವಣ್ಣನವರ ವಾರಸುದಾರರಾಗಿ ಸಮಾನತೆ ಪ್ರತಿಪಾದನೆ ಮಾಡಿದವರು ಬಾಬಾಸಾಹೇಬ್ ಅಂಬೇಡ್ಕರ್ ಅವರು.

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಬುದ್ಧ ಮತ್ತು ಬಸವಣ್ಣನವರ ಸಮಸಮಾಜದ ಆಶಯಗಳನ್ನು ಒಳಗೊಂಡಿದೆ. ಆದ್ದರಿಂದ ನಾವುಗಳೆಲ್ಲರೂ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಧೇಯವನ್ನು ಹೊಂದಿರುವ ಈ ಸಂವಿಧಾನವನ್ನು ರಕ್ಷಿಸಿ ಅದಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮತ್ತೊಬ್ಬ ಪ್ರಗತಿಪರ ಚಿಂತಕರಾದ ಬಿ. ಪೀರಬಾಷ ಮಾತನಾಡಿ, ಇಂದು ರಾಜಕಾರಣಕ್ಕಾಗಿ ಜಾತಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಅಂತವರ ಬಗ್ಗೆ ಅರಿತುಕೊಂಡು ಅಂತರ ಕಾಪಾಡಿಕೊಳ್ಳುವುದು ಅವಶ್ಯಕ, ಜನಸಾಮಾನ್ಯರು ಜಾಗೃತರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿ.ಆರ್. ಭರತಕುಮಾರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ವೇಳೆ ಸಮಾನತೆ ವೇದಿಕೆಯ ಸಂಚಾಲಕರಾದ ಎನ್. ವೆಂಕಟೇಶ, ನಗರಸಭೆ ಅಧ್ಯಕ್ಷ ಎನ್. ರೂಪೇಶ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಗೋಸಲ ಭರಮಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್. ಮಾವಿನಹಳ್ಳಿ ಬಸವರಾಜ, ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *