ಗುಳೇದಗುಡ್ಡ:
ಮನೆಯನಲ್ಲಿ ಮಹಾಮನೆ ಕಾರ್ಯಕ್ರಮವು ಶನಿವಾರ, ಬಸವ ಕೇಂದ್ರದ ವತಿಯಿಂದ ರವೀಂದ್ರ ಎಂ. ಪಟ್ಟಣಶೆಟ್ಟಿ ಅವರ ಮನೆಯಲ್ಲಿ ನಡೆಯಿತು.
ಅಂದು ಬಸವ ತಂದೆಯವರ ಈ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು.
ಪಂಡಿತನಾಗಲಿ, ಮೂರ್ಖನಾಗಲಿ, ಸಂಚಿತಕರ್ಮ ಉಂಡಲ್ಲದೆ ಬಿಡದು?
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದೆಂದು ಶ್ರುತಿ ಸಾರುತ್ತೈದಾವೆ, ನೋಡಾ;
ತಾನಾವಲೋಕದೊಳಗಿದ್ದಡೆಯೂ ಬಿಡದು,
ಕರ್ಮಫಲಗೂಡಿ ಕೂಡಲಸಂಗಮದೇವಂಗೆ ಆತ್ಮ ನೈವೇದ್ಯವ ಮಾಡಿದವನೆ ಧನ್ಯ.
ಪ್ರೊ.ಶ್ರೀಕಾಂತ ಗಡೇದ ಅವರು ವಚನದ ಚಿಂತನಾನುಭಾವದಲ್ಲಿ ತೊಡಗಿ, ವಚನಕಾರ ಧರ್ಮಪಿತ ಬಸವಣ್ಣನವರು ಅಂದು ಮೇಲು-ಕೀಳು ಶುಭ-ಅಶುಭ ಎಂಬುದನ್ನು ಕಿತ್ತೆಸೆದು ಹಡಪದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದಲ್ಲದೆ ಅಂಗೈ ಮೇಲೆ ಲಿಂಗವನ್ನು ಕೊಟ್ಟು, ಮೌಢ್ಯ ನಿವಾರಿಸಿ, ಎಲ್ಲರನ್ನೂ ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಮಾನರಾಗಿ ಕಂಡರು.

ಈ ಮೇಲು-ಕೀಳು ಮೊದಲಾದ ಅಸಮಾನತೆಗೆ ಕರ್ಮ ಸಿದ್ದಾಂತವೇ ಕಾರಣ. ಸಂಚಿತ ಕರ್ಮವಾಗಲಿ, ಪ್ರಾರಬ್ಧ ಕರ್ಮವಾಗಲಿ, ಅನುಭವಿಸಿಯೇ ತೀರಬೇಕು ಎಂಬ ವೈದಿಕರ ಮಾತನ್ನು ಕೇಳಲಾಗದು. ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಕೂಡಲಸಂಗಮನಿಗೆ ಅರ್ಪಿಸಿದಲ್ಲಿ ಆತ ಮಹಾದೇವನೇ ಆಗುತ್ತಾನೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕರಾದ ವಸಂತ ಚೌಹಾಣ ಅವರು ಮಾತನಾಡುತ್ತಾ, ವ್ಯಕ್ತಿಯನ್ನು ಮಾನಸಿಕವಾಗಿ ಯೋಚಿಸಲು ಶೋಷಣೆಗೆ ಒಡಪಡಿಸಲೆಂದೆ ಕರ್ಮ ಸಿದ್ದಾಂತವನ್ನು ಪ್ರತಿಪಾದಿಸಿದಂತಿದೆ. ಹಿಂದಿನ ಜನ್ಮ ಮುಂದಿನ ಜನ್ಮವೆಂದು ಜನರನ್ನು ಬೆದರಿಸಿ, ಸಂಕಷ್ಟ ಪರಿಹರಿಸುವ ನೆಪದಲ್ಲಿ, ಉತ್ತಮ ಕರ್ಮವೆಂದು ಹೋಮ ಹವನ ಯಜ್ಞಗಳ ಹೆಸರಿನಲ್ಲಿ ಹಣವನ್ನು ಕೀಳುವುದೇ ಕೆಲವರ ಉದ್ಯೋಗವಾಗಿದೆ. ಅದಕ್ಕಾಗಿಯೇ ಶರಣರು ಕರ್ಮ ಸಿದ್ದಾಂತಕ್ಕೆ ಬದಲಾಗಿ ಕಾಯಕ ಸಿದ್ಧಾಂತವನ್ನು ತಂದರು ಎಂದು ಪ್ರತಿಪಾದಿಸಿದರು.

ಈ ವಚನದ ಚಿಂತನೆಗೆ ತೊಡಗಿದ ಶರಣ ಮಹಾಲಿಂಗಪ್ಪ ಕರನಂದಿಯವರು ನಮ್ಮ ಯಾವುದೇ ಕರ್ಮವಿರಲಿ ಅವುಗಳನ್ನು ಕೂಡಲಸಂಗಮದೇವನಿಗೆ ಅರ್ಪಿಸಬೇಕು ಕರ್ಮ ಫಲಗಳೆಲ್ಲ ಲಿಂಗಯ್ಯನಿಗೆ ಸಮರ್ಪಿತವಾಗಬೇಕು. ಮಾಡುವ ಕಾರ್ಯಗಳೆಲ್ಲ ಕಾಯಕಗಳಾಗಿ ಬಂದುದೆಲ್ಲವನ್ನು ದಾಸೋಹಕ್ಕೆ ತೊಡಗಿಸಿ ಮುಕ್ತರಾಗಬೇಕು. ಇಲ್ಲಿಯ ಸುಖ ದುಃಖಕ್ಕೆ ಇಂದಿನ ನಮ್ಮ ವರ್ತನೆಗಳೇ ಕಾರಣವೇ ವಿನಃ ಇನ್ನಾವುದೇ ಅದೃಷ್ಟ ಶಕ್ತಿಯ ಆಟವಲ್ಲ. ಹೀಗಾಗಿ ಶರಣರಿಗೆ ಯಾವ ಕರ್ಮಗಳು ಭಾಧಿಸುವುದಿಲ್ಲ ಎಂದು ಹೇಳಿದರು.
ಪ್ರೊ. ಸುರೇಶ ರಾಜನಾಳ ಅವರು ಮಾತನಾಡುತ್ತ, ಕರ್ಮ ಸಿದ್ದಾಂತವೆಂಬುದು ಮಾನವನ ಶಕ್ತಿಯನ್ನೇ ಕ್ಷಯಿಸಿ ಆತನ ಆತ್ಮಶಕ್ತಿಯನ್ನು ನಾಶಪಡಿಸುವಂತಹದು. ಈ ಕರ್ಮಗಳನ್ನು ನಂಬುವುದಾದರೆ ಅವು ಸ್ವರ್ಗ ಮರ್ತ್ಯ ಪಾತಾಳದಲ್ಲಿದ್ದರೂ ತಮ್ಮ ಪ್ರಭಾವವನ್ನು ಬೀರದೇ ಬಿಡುವುದಿಲ್ಲ. ಹಾಗೆಂದು ಅವಕ್ಕೆ ವಶವಾಗದೆ ಅವುಗಳನ್ನು ಕೂಡಲಸಂಗಮನಿಗೆ ಅರ್ಪಿಸುವುದು. ಈ ಕೂಡಲಸಂಗಮ ಎನ್ನುವುದೇ ಆತ್ಮ ಚೈತನ್ಯದ ಪ್ರತೀಕ. ಹಾಗಾಗಿ ಈ ರೀತಿ ಕರ್ಮಗಳನ್ನು ನಾಶಪಡಿಸಿಕೊಳ್ಳಬೇಕೆ ವಿನಹ ಅವುಗಳನ್ನ ನಂಬಿ ಹೆದರಿ ತನ್ನ ಇರುವಿಕೆಯನ್ನು ಘಾತಗೊಳಿಸಿಕೊಳ್ಳುವುದಲ್ಲ.
ಅಂಗವಾಗದೇ ಲಿಂಗವಾಗಿ ಬದುಕಬೇಕು. ಆಗಲೇ ಹಿಂದು ಮುಂದಿನ ಬಯಲ ಬದುಕನ್ನು ಬದುಕಲು ಸಾಧ್ಯವಾಗುತ್ತದೆ ಎಂದರು.
ಕೊನೆಯಲ್ಲಿ ನಿರ್ವತ್ತ ಪ್ರಾಚಾರ್ಯರಾದ ಪ್ರೊ. ಎಸ್. ಬಿ. ಬರಗುಂಡಿ ಅವರು ಮಾತನಾಡುತ್ತ, ವೈದಿಕರು ಕರ್ಮವಾದವನ್ನು ಮಂಡಿಸುತ್ತಾ, ಅವುಗಳನ್ನು ಸಂಚಿತ, ಪ್ರಾರಬ್ದ ಮತ್ತು ಆಗಮಿಕ ಕರ್ಮಗಳೆಂದು ವಿಭಾಗಿಸಿ, ಇಂದಿನ ಸ್ಥಿತಿಗೆ ಹಿಂದಿನ ಜನ್ಮದಲ್ಲಿನ ಕರ್ಮಗಳೇ ಕಾರಣವೆಂದು, ಅವನ್ನು ಸಂಚಿತವೆಂದು ಕರೆದರು.
ಇಂದು ಉಪಭೋಗಿಸುವುದೆಲ್ಲವನ್ನು ಪ್ರಾರಬ್ಧವೆಂದುˌ ಮುಂದಿನ ಜನ್ಮಕ್ಕೆ ಸಾಗುವ ಕರ್ಮಾದಿಗಳನ್ನು ಆಗಮಿಕ ಕರ್ಮವೆಂದು ಕರೆದರು. ಈ ಹಿನ್ನೆಲೆಯಲ್ಲಿ ಈ ವಚನವು ಮೇಲ್ನೋಟಕ್ಕೆ ಕರ್ಮ ತತ್ವಗಳಿಗೆ ಅಂಟಿಕೊಂಡಿದೆಯೇನೋ ಎನ್ನಿಸಿದರೂ, ಮುಂದಿನ ಸಾಲುಗಳಲ್ಲಿ ಅವುಗಳನ್ನು ನಯವಾಗಿ ತಿರಸ್ಕರಿಸುವ ರೀತಿಯಲ್ಲಿದೆ. ಸಂಚಿತ ಹಾಗೂ ಪ್ರಾರಬ್ಧಗಳನ್ನು ಓದಿಕೊಂಡು ಕೇವಲ ಅಕ್ಷರ ಪಂಡಿತನಾಗಲಿ ಅಥವಾ ಜಡನಾದˌ ಮಂದಮತಿಯಾದ ಮೂರ್ಖನು ಭೋಗಿಸಲಿಕ್ಕೇಬೇಕು ಎಂಬುದನ್ನು ಕೇವಲ ವೇದ ಆಗಮಗಳು ಹೇಳುತ್ತವೆ ಎಂದು ಬಸವಣ್ಣನವರು ಹೇಳುತ್ತಾˌ ಜ್ಞಾನಿಗಳಾದವರು ಇದನ್ನು ಒಪ್ಪುವುದಿಲ್ಲ ಎಂಬ ಸೂಚನೆ ಇದೆ.
ಅವೈದಿಕರಾದ ಶರಣರು ಈ ಕರ್ಮಸಿದ್ದಾಂತವನ್ನು ಒಪ್ಪಲಾರರು. ತಮ್ಮ ಬದುಕು ತಮ್ಮ ಕಾಯಕ ದಾಸೋಹ ಮತ್ತು ಅನುಭಾವದ ಅರಿವಿನ ನಿಲುವಿನಲ್ಲಿ ನಿಂತಿದೆಯೇ ವಿನಹ ಯಾವುದೇ ಜನ್ಮಾಂತರದ ಕರ್ಮದ ಮೇಲಲ್ಲ ಎಂಬುದು ಅವರ ನಿಲುವಾಗಿದೆ.
ಇಂದಿನ ಭೋಗವನ್ನು ಇಂದೇ ಕೈಯ ಮೇಲೆ ಉಣ್ಣುವದಾಗಿದೆ. ಹಿಂದಿನ ಜನ್ಮದ ಕರ್ಮಾದಿಗಳೇ ನಮ್ಮ ಇಂದಿನ ಇರುವಿಕೆಗೆ ಕಾರಣವೆಂದಾದರೆ ಯಾರೂ ಯಾವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ.
ತನ್ನ ಅರಿವಿನ ಕುರುಹಾದ ಕೂಡಲಸಂಗಯ್ಯನಿಗೆ ತನ್ನೆಲ್ಲ ಕಾರ್ಯಗಳನ್ನು ಅವುಗಳ ಫಲಗಳನ್ನು ಅರ್ಪಿಸಿ, ತಾನು ಲಿಂಗವೇ ಆದಾಗ ಯಾವ ಜನನ ಮರಣಗಳ ಬಾಧೆಯೂ ಇಲ್ಲ. ಎಲ್ಲರೂ ಲಿಂಗ ಸ್ವರೂಪಿಗಳೇ ಆಗಿ ಬ್ರಹ್ಮಾಂಡವೇ ಮಹಾಲಿಂಗವಾಗುತ್ತದೆ. ಕಾರಣ ಕರ್ಮ ಸಿದ್ದಾಂತವೆಂಬ ಮೌಢ್ಯಕ್ಕೆ ಒಳಗಾಗದೆ ತನ್ನರಿವೇ ತನಗೆ ಗುರುವಾಗಿ ಅರಿವಿನ ಜನ್ಮವನ್ನು ಬದುಕಬೇಕೆಂಬುದು ಇಲ್ಲಿನ ವಚನದ ಸಾರವಾಗಿದೆ ಎಂದು ಬರಗುಂಡಿಯವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀದೇವಿ ಶೇಖಾ ಹಾಗೂ ಪ್ರೊ. ಕಲ್ಯಾಣಿ ಅವರು ವಚನ ಪ್ರಾರ್ಥನೆ ಮಾಡಿದರು. ಕುಮಾರಿ ಲಕ್ಷ್ಮಿ ನಾಯನೇಗಲಿ ವಚನವನ್ನು ಹೇಳಿದರು. ಕಾರ್ಯಕ್ರಮದಲ್ಲಿ ಬಸಲಿಂಗಯ್ಯ ಕಂಬಾಳಿಮಠ, ಸಂಗಣ್ಣ ಪಟ್ಟಣಶೆಟ್ಟಿ, ರಾಚಣ್ಣ ಕೆರೂರ, ಪುತ್ರಪ್ಪ ಬೀಳಗಿ, ಬಸವರಾಜ ಖಂಡಿ, ಚಂದ್ರಶೇಖರ ತೆಗ್ಗಿ, ಗೀತಾ ತಿಪ್ಪಾ, ದಾಕ್ಷಾಯಿಣಿ ತೆಗ್ಗಿ, ಮಹಾನಂದ ನಾಯನೇಗಲಿ, ಶಾರದ ನಾಯನೇಗಲಿ, ಸುರೇಖಾ ಗೆದ್ದಲಮರಿ, ರಾಜು ಕಡೆಬಾಗಿಲ, ರಾಚಪ್ಪ ಎಂಡಿಗೇರಿ, ವಿಶಾಲಾಕ್ಷಿ ಗಾಳಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ, ಮಹೇಂದ್ರಕರ, ಶಿರೂರ ಸರ್, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ರವೀಂದ್ರ ಪಟ್ಟಣಶೆಟ್ಟಿ ಅವರು ಶರಣು ಸಮರ್ಪಣೆಗೈದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
