ಅಣ್ಣಿಗೇರಿ:
ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನೀನು ಒಳ್ಳೆಯ ನಾಗರಿಕನಲ್ಲ, ಮಠ ಹಿಡಿದು ಕೂಡು ಎಂದು ಛೀಮಾರಿ ಹಾಕಿಸಿಕೊಂಡ ಮಹಾರಾಷ್ಟ್ರ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ದುರುದ್ದೇಶದಿಂದ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜ್ಯದಲ್ಲಿ ಲಿಂಗಾಯತ ಧರ್ಮ ಹಾಗೂ ಧರ್ಮೀಯರ ಮೇಲೆ ಮಾಡುವ ದಾಳಿಯಿಂದ ಅಶಾಂತಿ ಉಂಟಾಗುತ್ತಿದ್ದು ಸರಕಾರ ಈ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟಣದ ‘ಸಮಾನತೆಗಾಗಿ ನಾವು’ ಒಕ್ಕೂಟ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಒಕ್ಕೂಟದ ಪ್ರಮುಖರಾದ ಪ್ರೊ ಎಸ್. ಎಸ್. ಹರ್ಲಾಪೂರ ಹಾಗೂ ವೀರೇಶ ಶಾನುಭೋಗರ ಮತ್ತಿತರರು, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡುವ ವಿಚಾರಗಳು ಸಂವಿಧಾನ ವಿರೋಧಿ ಹಾಗೂ ಬಸವಾದಿ ಶರಣರ ತತ್ವಕ್ಕೆ ವಿರುದ್ಧವಾಗಿವೆ. ಜನರಿಗೆ ತಪ್ಪು ಸಂದೇಶ ನೀಡಿ ಅವರನ್ನು ಪ್ರಚೋದನೆಗೊಳಿಸುವ ಮೂಲಕ ಅಶಾಂತಿಗೆ ಕಾರಣರಾಗುತ್ತಿದ್ದಾರೆ ಎಂದಿದ್ದಾರೆ.
ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ ಅದೊಂದು ಧರ್ಮವಲ್ಲ ಎಂದು ಸುಪ್ರೀಂ ಕೋರ್ಟ್ ಹಲವಾರು ಬಾರಿ ಸ್ಪಷ್ಟಪಡಿಸಿದೆ. ಹಿಂದೂ ಧರ್ಮ ಎನ್ನುವುದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ಶ್ರೇಣೀಕೃತ ವ್ಯವಸ್ಥೆಯನ್ನು ಹೊಂದಿದ್ದು ಅದನ್ನೇ ಈಗ ಕನ್ನೇರಿ ಸ್ವಾಮಿ ಪ್ರತಿಪಾದಿವುದು ಸಂವಿಧಾನ ಹಾಗೂ ಶರಣತತ್ವ ಹೇಳಿದ ಸಮಾನತೆ ಹಾಗೂ ಸ್ವಾತಂತ್ರ್ಯಕ್ಕೆ ವಿರುದ್ಧವಾದ ನಡೆಯಾಗಿದೆ ಎಂದು ಹೇಳಿದ್ದಾರೆ.
ಅಷ್ಟಾಗಿಯೂ ಕೂಡ ಇವರು ಹಿಂದೂ ಸಮಾವೇಶ ಮಾಡಲಿಕ್ಕೆ ಲಿಂಗಾಯತ ಧರ್ಮೀಯರ ಯಾವ ತಕರಾರೂ ಇಲ್ಲ. ಆದರೆ ಅದಕ್ಕೆ ಬಸವಾದಿ ಶರಣರ ಹೆಸರನ್ನು ಬಳಸಿಕೊಳ್ಳುವುದಕ್ಕೆ ಲಿಂಗಾಯತರನ್ನು ಮತ್ತೆ ಶೂದ್ರತನದ ತಳ್ಳುವುದಕ್ಕೆ ತೀವ್ರ ವಿರೋಧವಿದೆ. ಲಿಂಗಾಯತ ಧರ್ಮಿಯರ ವಿರುದ್ಧ ಲಿಂಗಾಯತರನ್ನೇ ಎತ್ತಿ ಕಟ್ಟಿ ಗಲಭೆ ಹುಟ್ಟಿಸುವ ಸಂಚು ಇದರಲ್ಲಿ ಅಡಗಿದೆ ಎಂದಿದ್ದಾರೆ.
ದೇಶದ ಎಲ್ಲಾ ಜನರು ಶಾಂತಿ, ಸುಖ, ನೆಮ್ಮದಿಯಿಂದ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್, ಕುವೆಂಪು ವಿಚಾರಧಾರೆಗೆ ಅನುಗುಣವಾಗಿ ರಚನೆಯಾದ ಸಂವಿಧಾನದ ಅಡಿಯಲ್ಲಿ ಬದುಕುತ್ತಿದ್ದು, ಅದನ್ನು ಅಳಿಸಿ ಮತ್ತೆ ಬ್ರಾಹ್ಮಣೇತರರನ್ನು ಪಶುಗಳಂತೆ ಕೀಳಾಗಿ ಕಾಣುವ ಹಳೆಯ ದಿನಮಾನಗಳಿಗೆ ಒಯ್ಯುವ ವ್ಯವಸ್ಥೆ ಇವರನ್ನು ಹಿಡಿದುಕೊಂಡು ಆಟವಾಡುತ್ತಿದೆ ಎನ್ನುವುದು ಯಾರಿಗೂ ಅರಿಯದ ವಿಷಯವೇನಲ್ಲ.
ಇದಕ್ಕೆ ಬುದ್ಧ ಬಸವ ಅಂಬೇಡ್ಕರ ಸಂಘಟನೆಗಳು ಎಂದೂ ಅವಕಾಶ ಕೊಡುವುದಿಲ್ಲ. ಇದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದ ಅವರು ಕನ್ಹೇರಿ ಸ್ವಾಮಿಯನ್ನು ಕರ್ನಾಟಕದಿಂದಲೇ ನಿಷೇಧಿಸಬೇಕು ಎಂದು ಹನುಮಂತಪ್ಪ ಡಬರಿ, ಬಿ.ಆರ್. ದಿವಟರ, ಶಶಿಧರ ಹರ್ಲಾಪೂರ, ಎನ್. ಬಿ. ಬೀರಣ್ಣವರ, ಕಿರಣ ಬೂದಿಹಾಳ ಮುಂತಾದವರು ಒತ್ತಾಯಿಸಿದ್ದಾರೆ.
