‘ಜನರಿಗೆ ಸ್ಪಂದಿಸಿ, ಯಾರನ್ನೂ ದ್ವೇಷಿಸಬೇಡಿ, ಸಂವಿಧಾನ ಓದಿ ಆಡಳಿತ ನಡೆಸಿ’

ನೂತನ ಶಾಸಕ ಸಮರ್ಥ ಮಲ್ಲಿಕಾರ್ಜುನ ಅವರಿಗೆ ಪೂಜ್ಯ ಸಾಣೇಹಳ್ಳಿ ಸ್ವಾಮೀಜಿ ಮಾರ್ಗದರ್ಶನ

ಸಾಣೇಹಳ್ಳಿ:

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಸಮರ್ಥ ಮಲ್ಲಿಕಾರ್ಜುನ ಅವರು ಶನಿವಾರ ಇಲ್ಲಿನ ಸಾಣೇಹಳ್ಳಿ ಶ್ರೀಮಠಕ್ಕೆ ಭೇಟಿ ನೀಡಿ, ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳವರ ದರ್ಶನಾಶೀರ್ವಾದ ಪಡೆದರು.

ಶಾಸಕರಿಗೆ ಮಾರ್ಗದರ್ಶನ ನೀಡಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, “ರಾಜಕಾರಣದಲ್ಲಿ ಇನ್ನು ಬೇಕಾದಷ್ಟು ಅವಕಾಶಗಳಿವೆ. ಸಂವಿಧಾನವನ್ನು ಆಳವಾಗಿ ಓದಿಕೊಂಡು, ಅದರ ಆಶಯಗಳಂತೆ ಆಡಳಿತ ನಡೆಸಿ, ಮತ ಹಾಕಿರಲಿ, ಬಿಡಲಿ ಎಲ್ಲರೂ ನಮ್ಮವರೇ ಎಂದು ಭಾವಿಸಿ ಯಾರನ್ನೂ ದ್ವೇಷಿಸದೆ ಸಮಾಜಮುಖಿ ಕೆಲಸ ಮಾಡಬೇಕು.

“ನಿಮ್ಮ ತಾತ ಶಾಮನೂರು ಶಿವಶಂಕರಪ್ಪನವರು ಅಜಾತಶತ್ರು. ಕಾಯಕ, ದಾಸೋಹ, ಇಷ್ಟಲಿಂಗ‌ ನಿಷ್ಠೆಯುಳ್ಳವರು. ಅಂತಹ ಸದ್ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಹೆಸರನ್ನು ಅಜರಾಮರವಾಗಿಸಬೇಕು.

ಸಾಮಾನ್ಯ ವ್ಯಕ್ತಿ ಫೋನ್ ಮಾಡಿದರೂ ಕರೆ ಸ್ವೀಕರಿಸಿ ಸ್ಪಂದಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಜನರ ನಂಬಿಕೆಗೆ ಅರ್ಹರಾಗುತ್ತೀರಿ.”

ಹೊನ್ನಾಳಿ ಹಾಗೂ ಭದ್ರಾವತಿ ತಾಲೂಕಿನ ಮಂಗೋಟಿ ಸೇರಿದಂತೆ ವಿವಿಧೆಡೆ ಭಾರಿ ಗಾಳಿ-ಮಳೆಗೆ ಲಕ್ಷಾಂತರ ಅಡಿಕೆ ಹಾಗೂ ಬಾಳೆ ಮರಗಳು ಧರೆಗೆ ಉರುಳಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯವನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಗಂಭೀರವಾಗಿ ಧ್ವನಿಯೆತ್ತಿ, ಹಾನಿಗೊಳಗಾದ ಪ್ರತಿ ಮರಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಶ್ರೀಗಳು ಶಾಸಕರಿಗೆ ನಿರ್ದೇಶನ ನೀಡಿದರು. ಜೊತೆಗೆ, ಸದನದ ಎಲ್ಲಾ ಕಲಾಪಗಳಲ್ಲಿ ಕಡ್ಡಾಯವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವಂತೆ ಸಲಹೆ ನೀಡಿದರು.

ಇದೇ ವೇಳೆ, ಇತ್ತೀಚೆಗೆ ದೆಹಲಿ ಭೇಟಿಯ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಸಾರ್ವಜನಿಕರ ಸಮಸ್ಯೆಯನ್ನು ಹಿರಿಯ ನಾಯಕರ ಗಮನಕ್ಕೆ ತಂದು ಯಶಸ್ವಿಯಾಗಿ ಪರಿಹರಿಸಿದ ಸಮರ್ಥ್ ಅವರ ದಕ್ಷತೆ ಹಾಗೂ ಮಾಧ್ಯಮ ಸಂದರ್ಶನಗಳಲ್ಲಿ ವಿರೋಧ ಪಕ್ಷದವರ ವಿರುದ್ಧ ವೈಯಕ್ತಿಕ ನಿಂದನೆ ಮಾಡದೆ ತೋರಿದ ಪಕ್ವ ರಾಜಕಾರಣದ ನಡಾವಳಿಯನ್ನು ಶ್ರೀಗಳು‌ ಶ್ಲಾಘಿಸಿದರು.

ಶ್ರೀಗಳ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶಾಸಕ‌ ಸಮರ್ಥ ಮಲ್ಲಿಕಾರ್ಜುನ, “ಚುನಾವಣೆಗಳಲ್ಲಿ ಸೋಲು-ಗೆಲುವಿಗಿಂತ ಜನರ ಮಧ್ಯೆ ಇದ್ದು ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ. ದಿನದ 24 ಗಂಟೆಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಪಕ್ಷಪಾತವಿಲ್ಲದೆ ಕೆಲಸ ಮಾಡಿಕೊಡಲಾಗುವುದು. ಪೊಲೀಸ್ ಠಾಣೆ ಅಥವಾ ತಹಶೀಲ್ದಾರ ಕಚೇರಿ ಸೇರಿದಂತೆ ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣ ಸ್ಪಂದಿಸುವ ಭರವಸೆ ನೀಡುತ್ತೇನೆ.

ದಾವಣಗೆರೆ ಸುತ್ತಮುತ್ತ ಇರುವ ಗಿಡಮರಗಳ ಸಮೀಕ್ಷೆ ಮಾಡಿ ಅವುಗಳನ್ನು ಸಂರಕ್ಷಣೆ ಮಾಡುವುದರ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡಲಾಗುವುದು. ನಗರ ಪ್ರದೇಶಗಳಲ್ಲಿ ಒಣಗಿದ ಅಥವಾ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಲ್ಲಿ ಅರಣ್ಯ, ತೋಟಗಾರಿಕೆ ಇಲಾಖೆ ಹಾಗೂ ಬೆಸ್ಕಾಂ ನಡುವೆ ಸಮನ್ವಯದ ಕೊರತೆಯಿದೆ. ಈ ಜವಾಬ್ದಾರಿಯನ್ನು ಯಾವುದಾದರೂ ಒಂದು ನಿರ್ದಿಷ್ಟ ಇಲಾಖೆಗೆ ವಹಿಸುವಂತೆ ಸದನದಲ್ಲಿ ಒತ್ತಾಯಿಸಲಾಗುವುದು.

ಉದ್ಯೋಗ ಖಾತರಿ ಯೋಜನೆಯ ನಿಧಿಯನ್ನು ಅಡಿಕೆ ಸಸಿ ನಾಟಿ ಹಾಗೂ ತೋಟದ ಅಭಿವೃದ್ಧಿಗೆ ಬಳಸಿಕೊಂಡು ಮಲೆನಾಡು ಮತ್ತು ಅರೆ ಮಲೆನಾಡು ಭಾಗದ ರೈತರಿಗೆ ಅನುಕೂಲ ಮಾಡಿಕೊಡಲು ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆ ತರಲು ಒತ್ತಾಯಿಸಲಾಗುವುದು.

ಕ್ಷೇತ್ರದ ಪ್ರಮುಖ ಕೆರೆಗಳಾದ ಬೇತೂರು ಹಾಗೂ ರಾಂಪುರ ಕೆರೆಗಳ ಸ್ವಚ್ಛತೆ, ಗೇಟ್ ದುರಸ್ತಿ ಹಾಗೂ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಮುದೇಗೌಡ್ರು ಗಿರೀಶ, ಪ್ರಮುಖ ಮುಖಂಡರುಗಳಾದ ಉಮೇಶ್, ಆಸಿಕ್ ಜೈನ್, ಎರಗುಂಟೆ ವೀರೇಶ, ಗ್ಯಾರೇಹಳ್ಳಿ ಮಂಜು ಮತ್ತು ನರೇಂದ್ರ ಎರಗುಂಟೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *