ಧಾರವಾಡ:
ಈಗಿನ ನಮ್ಮ ದೇಶವನ್ನು ಗಮನಿಸಿದರೆ ಜಾತೀಯತೆ ಮತ್ತು ಭ್ರಷ್ಟಾಚಾರ ಎಂಬ ಎರಡು ಸಮಸ್ಯೆಗಳು ತೀವ್ರವಾಗಿ ಭಾದಿಸುತ್ತಿವೆ. ಹನ್ನೆರಡನೆಯ ಶತಮಾನದ ಬಸವಣ್ಣನವರ ಕಾಲದ ಶರಣರು ಮಾಡುತ್ತಿದ್ದ ಕಾಯಕಗಳು ಜಾತಿಗಳಾಗಿ ರೂಪಾಂತರ ಹೊಂದಿ ಇಂದು ಜಾತೀಯತೆಯು ಹೆಚ್ಚಾಗಿದೆ.

ಅದರಂತೆ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳಿಂದ ತೀವ್ರ ಭ್ರಷ್ಟಾಚಾರ ಉಂಟಾಗಿ ಇಡೀ ದೇಶ ನಲುಗುತ್ತಿದೆ ಎಂದು ತೀವ್ರ ನೋವಿನಿಂದ ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ಅವರು ಹೇಳಿದರು.
ಅವರು ಧಾರವಾಡದಲ್ಲಿ ಗಣಕರಂಗ, ವಚನಸಾಹಿತ್ಯ ಮಂದಾರ ಫೌಂಡೇಶನ್ ಮತ್ತು ಕಲ್ಪತರು ಮಹಿಳಾ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಬುದ್ಧ, ಬಸವಣ್ಣ, ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಗಳಂದು ಆಯೋಜಿಸಿದ್ದ ಕವನ ಮತ್ತು ಲೇಖನ ಸ್ಪರ್ಧಾ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಮಾತನಾಡುತ್ತಿದ್ದರು.
ಎಲ್ಲಿಯವರೆಗೆ ಸಮಾಜದಲ್ಲಿ ಅಸಮಾನತೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಈ ಜಾತೀಯತೆಯು ಸಾಮಾನ್ಯರನ್ನು ತೀವ್ರ ತೊಂದರೆಯುಂಟು ಮಾಡುತ್ತದೆ. ಅದರಂತೆ ಎಲ್ಲಿಯವರೆಗೆ ಮಾರಿಕೊಂಡ ಮತದಾರ ಮತ್ತು ಅಂಥವರಿಂದ ಆಯ್ಕೆಯಾಗುವ ರಾಜಕಾರಣಿಗಳ ಸಂತತಿ ನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರ ಈ ದೇಶದಿಂದ ಹೋಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಪತರು ಮಹಿಳಾ ಸಂಘದ ಅಧ್ಯಕ್ಷೆ ಆರತಿ ಪಾಟೀಲ ಅವರು ಬುದ್ಧ, ಬಸವ, ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಂಥಹ ಮಹಾತ್ಮರು ಕಂಡ ಕನಸಿನ ಸಮತೆಯ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಪ್ರಯತ್ನಿಸೋಣ. ಸಮಾಜದ ಅನಿಷ್ಟ ಆಚರಣೆಗಳು, ಮೂಢನಂಬಿಕೆ, ಸುಶಿಕ್ಷಿತರಾದರೂ ಅಜ್ಞಾನದಿಂದ ಬಳಲುವ ಅನೇಕರನ್ನು ವಾಸ್ತವ ವಿಚಾರಗಳ ಮೂಲಕ ಸರಿದಾರಿಗೆ ತರೋಣ, ಅದಕ್ಕಾಗಿಯೇ ಲೇಖನ, ಕವನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜೇತರಿಗೆ ಪುಸ್ತಕ, ಪ್ರಮಾಣಪತ್ರ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.
ವಚನಸಾಹಿತ್ಯ ಮಂದಾರ ಫೌಂಡೇಶನ್, ತುಮಕೂರುನ ಅಧ್ಯಕ್ಷರಾದ ಡಾ. ವಿಜಯಕುಮಾರ ಕಮ್ಮಾರ ಅವರು ತಮ್ಮ ವೇದಿಕೆಯಿಂದ ಪ್ರಸಾರವಾಗುವ ಅಂತರರಾಷ್ಟ್ರೀಯ ಅಂತರ್ಜಾಲ ಉಪನ್ಯಾಸಗಳು, web site ನಲ್ಲಿ ಲೇಖನಗಳ ಪ್ರಟಕಣೆ, 20,000 ಗ್ರಂಥಗಳಿರುವ ಗ್ರಂಥಾಲಯ ಮತ್ತು TV Channel ಸ್ಥಾಪನೆ ಕುರಿತು ವಿಸ್ತೃತ ಮಾಹಿತಿ ನೀಡಿದರು.

ವೇದಿಕೆಯ ಫ್ರಕಾಶನ ವಿಭಾಗದ ಮುಖ್ಯಸ್ಥರು ಹಾಗೂ ಉಪಾಧ್ಯಕ್ಷರಾದ ಡಾ. ಪುಷ್ಪಾವತಿ ಶಲವಡಿಮಠ ಅವರು ಪುಸ್ತಕ ಪ್ರಕಾಶನದ ಕುರಿತು ಮಾಹಿತಿ ನೀಡಿದರು.
ಗಣಕರಂಗದ ಅಧ್ಯಕ್ಷರಾದ ಸಿದ್ಧರಾಮ ಹಿಪ್ಪರಗಿಯವರು 1998 ರಿಂದ ಗಣಕರಂಗ ನಡೆದುಬಂದ ಹಾದಿಯನ್ನು ವಿವರಿಸಿದರು.
ವೇದಿಕೆಯಲ್ಲಿ ಕವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕರಾದ ಡಾ. ಚಂದ್ರಶೇಖರ ರೊಟ್ಟಿಗವಾಡ, ಹಿರಿಯ ಸಾಹಿತಿ ವೈ.ಜಿ. ಭಗವತಿ, ಕೆಸಿಡಿ ಪತ್ರಿಕೋಧ್ಯಮ ಪ್ರಾಧ್ಯಾಪಕ ಡಾ. ಪ್ರಭಾಕರ ಕಾಂಬಳೆ, ಸ್ಪರ್ಧಾ ಸಂಯೋಜಕ ಗಣಪತಿ ಚಲವಾದಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬ ಡಾ. ಅಂಬೇಡಕರ ಅವರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಕಲ್ಪತರು ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಧಾ ಕಬ್ಬೂರ ನಿರೂಪಿಸಿದರು. ಸವಿತಾ ಕುಸುಗಲ್ಲ ಸ್ವಾಗತಿಸಿ, ವಂದಿಸಿದರು. ಲತಾ ಮಂಟಾ, ನವ್ಯ, ಪ್ರಿಯಾ, ತನುಜಾ ಮುಗದ, ಪ್ರತಿಭಾ, ಪಾರ್ವತಿ ಹಮ್ಮಿಗಿ, ಲಕ್ಷ್ಮೀ, ಉಮಾ ಬೆನಕಟ್ಟಿ, ಸುಮಾ ಗೌಡರ, ಮಾಧುರಿ ಕುಲಕರ್ಣಿ, ವಿಜಯಲಕ್ಷ್ಮಿ ಪಲ್ಲೇದ ಮುಂತಾದವರು ನಾಡಗೀತೆ, ಪ್ರಾರ್ಥನೆ, ಸಂವಿಧಾನ ಪೀಠಿಕೆ ವಾಚನ ಮಾಡಿ ಸಹಕರಿಸಿದರು.

ಬಸವರಾಜ ಕುಂದರಗಿ, ಅಶೋಕ ಹೊನಕೇರಿ, ಮಂಜುನಾಥ ಹಿಪ್ಪರಗಿ, ಮಲ್ಲಮ್ಮ ಕಮ್ಮಾರ, ದೀಪಾ ಪಾಟೀಲ, ಜಗದೀಶ ಮುಗಳಿ, ರುಜುವಾನ ಮಾಯಕೊಂಡ, ಸುನೀತಾ ಮೂರಶಿಳ್ಳಿ, ಹಾಲೇಶ ನಾಯಕ, ಅನುಪಮ ಪಾಟೀಲ, ಬ್ಯಾಡನೂರು ಚನ್ನಬಸವಣ್ಣ, ಇಂದಿರಾ ಮೂಟೆಬೆನ್ನೂರ, ಅರುಣಾ ಗುಜ್ಜರಿ, ರೇಣುಕಾ ಎನ್.ಪಿ, ನಾಗಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು.

ಕಾಯಕವೇ ಜಾತಿ ಯಾಗಿ ಪರಿವರ್ತನೆಗೊಂಡಿದೆ ಅದಕ್ಕೆ ಈಗ ನಾವು ಜಾತಿ ಎಂಬ ಗೋಡೆ ಒಡೆದು ಮತ್ತೆ ಕಾಯಕ ಶರಣರಾಗಿ ಪರಿವರ್ತಿಸಿ, ಶರಣರ ಆಶಯ ದಂತೆ ಮತ್ತೆ ಶರಣ ಕ್ರಾಂತಿ ಮಾಡೋಣ. ಶರಣು ಶರಣಾರ್ತಿಗಳು
ಲಿಂಗಾಯತ ಜಾತಿಯಲ್ಲೇ 99 ಉಪ ಪಂಗಡಗಳಿವೆ ಎಂದು ಹೇಳುತ್ತಾರೆ . ಲಿಂಗಾಯತ ವೀರಶೈವ , ವೀರಶೈವ,ಸಾದರು, ಬಣಜಿಗ, ಪಂಚಮಸಾಲಿ, ನೊಣಬರು,ಗೌಡರು, ಎಂದು ಭೇದ ಭಾವ ಮಾಡಿಕೋಂಡು ಬಡಿದಾಟ ಮಾಡುವುದು ನಮ್ಮ ಜಾತಿಗೆ ಶಾಪಗ್ರಸ್ತ ವಾಗಿದೆ. ಪಂಗಡಗಳು ಮದುವೆಯ ಸಂಬಂಧ ಬೆಳೆಸಲು ಒಪ್ಪಿಗೆ ಕೊಡುತ್ತಿಲ್ಲ. ಮೊದಲ ಮಠದ ಸ್ವಾಮೀಜಿಗಳು ಎಲ್ಲರನ್ನು ಒಟ್ಟಿಗೆ ಸೇರಿಸಿ ಎಂದು ಮನವಿ.