ಬಸವತತ್ವ ಪ್ರಸಾರ ಕುಗ್ಗಿಸುವ ಪ್ರಯತ್ನ ನಡೆಯುತ್ತಿವೆ: ಡಾ. ಶಶಿಕಾಂತ ಪಟ್ಟಣ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ:

ಇತ್ತೀಚಿನ ದಿನಗಳಲ್ಲಿ ವಚನ ಚಳುವಳಿ, ಬಸವತತ್ವ ಪ್ರಸಾರ ಕುಗ್ಗಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಸಾಹಿತಿ ಡಾ. ಶಶಿಕಾಂತ ಪಟ್ಟಣ ಅವರು ವಿಷಾಧ ವ್ಯಕ್ತಪಡಿಸಿದರು.

ಡಾ. ಫ.ಗು. ಹಳಕಟ್ಟಿ ಸಭಾಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಈಚೆಗೆ ನಡೆದ ವಾರದ ಉಪನ್ಯಾಸ ಹಾಗೂ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಗಳು ಒತ್ತಾಯಪೂರ್ವಕವಾಗಿ ಲಿಂಗಾಯತರ ಹೆಗಲ ಮೇಲೆ ವೈದಿಕರನ್ನು ಹೇರಿಕೆ ಮಾಡಿದರೆ, ಹಂಪಿ ಕನ್ನಡ ವಿವಿ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನದ ಪ್ರಾಧ್ಯಾಪಕ ಪ್ರೊ. ವಾಸುದೇವ ಬಡಿಗೇರ ಅವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ ಎಂದೆನ್ನುತ್ತಾ, ಕಕ್ಕಯ್ಯ, ಕೆಂಭಾವಿ ಬೋಗಣ್ಣ, ಮಾದಾರ ಚೆನ್ನಯ್ಯ ಕುಂಬಾರ ಗುಂಡಯ್ಯ ಮುಂತಾದ ಅನೇಕ ಶರಣರನ್ನು ಬಸವಪೂರ್ವ ಯುಗದ ಶರಣರು ಎಂದು ಸುಳ್ಳು ಸಂಶೋಧನೆ ಮಾಡಿದ್ದಾರೆ ಎಂದರು.

ಇಂತಹ ಪ್ರಚಲಿತ ವಿದ್ಯಮಾನಗಳು ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮಾರಕವಾಗಿವೆ. ಇಂತಹ ಸಂಶೋಧಕರ ವಿರುದ್ಧ ಪ್ರತಿಭಟನೆ ಮಾಡಬೇಕೆಂದು ಕರೆ ಕೊಟ್ಟರು.

ಇವತ್ತು ಲಿಂಗಾಯತ ಧರ್ಮ ಮಾನ್ಯತೆಗಾಗಿ ಮಠ ಮತ್ತು ರಾಜಕಾರಣಿಗಳ ಬೆನ್ನುಹತ್ತದೆ ತಮ್ಮ ಸ್ವಂತ ಬಲದಿಂದ ಅಧ್ಯಯನಶೀಲರಾಗಿ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು. ಕನ್ನಡಿಗರಿಗೆ ಲಿಂಗಾಯತರಿಗೆ ಬಸವಣ್ಣನವರ ವಚನಗಳು ಇನ್ನೂ ಪಚನವಾಗಿಲ್ಲ ಎಂದು ನೋವು ವ್ಯಕ್ತ ಪಡಿಸಿದರು.

ಈ ಹಿಂದೆ ಧರ್ಮಕಾರಣ ಕಾದಂಬರಿ ಮತ್ತು ಅನೇಕ ವಿವಾದಾಸ್ಪದ ಸಾಹಿತ್ಯ ಕೃತಿಗಳ ವಿರುದ್ಧ ಹೋರಾಟ ಮಾಡಿದ ಲಿಂಗಾಯತ ಸಂಘಟನೆ ಮತ್ತೊಮ್ಮೆ ತಾನು ಮುಂದಾಳತ್ವವನ್ನು ವಹಿಸಿಕೊಳ್ಳಬೇಕೆಂದು ವಿನಂತಿಸಿದರು.

ಶಂಕರ ಗುಡಸ, ಸದಾಶಿವ ದೇವರಮನಿ, ಅಕ್ಕಮಹಾದೇವಿ ತೆಗ್ಗಿ ಮುಂತಾದವರು ಸಹ ಮಾತನಾಡಿದರು.

ಸಭೆಯಲ್ಲಿ ಶಶಿಭೂಷಣ ಪಾಟಿಲ, ಸುರೇಶ ನರಗುಂದ, ಆನಂದ ಕರ್ಕಿ, ಸುನೀಲ ಸಾಣಿಕೊಪ್ಪ ಮತ್ತಿತರರು ಮತ್ತು ಬೇಸಿಗೆಯ ಶಿಬಿರದ ಶಿಬಿರಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *