ಪುರೋಹಿತರನ್ನು ಧಿಕ್ಕರಿಸಿದ ತತ್ವವೇ ಇಷ್ಟಲಿಂಗ ಶಿವಯೋಗ: ಡಾ ಮಂಜುನಾಥ

ಮಾಯಕೊಂಡ:

ದೇವಾಲಯ ಸಂಸ್ಕೃತಿಯನ್ನು ಧಿಕ್ಕರಿಸಿ ದೇಹಾಲಯ ಸಂಸ್ಕೃತಿ ಹುಟ್ಟುಹಾಕಿದವರು ಬಸವಣ್ಣನವರು. ಪೂಜಾರಿ, ಪುರೋಹಿತರನ್ನು ಧಿಕ್ಕರಿಸಿದ ತತ್ವವೇ ಇಷ್ಟಲಿಂಗ ಶಿವಯೋಗ ಎಂದು ಉಪನ್ಯಾಸಕರಾದ ಡಾ. ಮಂಜುನಾಥ ಹಾಲೇಕಲ್ಲು ತಿಳಿಸಿದರು.

ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ಹಾಗೂ ಹೆಚ್. ರಾಂಪುರ ಗ್ರಾಮದ ಸಹಯೋಗದಲ್ಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಬಸವೋತ್ಸವ’ ಕಾರ್ಯಕ್ರಮದಲ್ಲಿ ಅನುಭಾವ ನೀಡಿದರು.

ಮುಂದುವರಿದು ಮಾತನಾಡಿದ ಅವರು, ಇಷ್ಟಲಿಂಗ ಕೇವಲ ಪೂಜೆಯ ವಸ್ತುವಲ್ಲ. ತ್ರಾಟಕ ಯೋಗದ ಮೂಲಕ ನಮ್ಮೊಳಗಿನ ದೇವರನ್ನು ಕಾಣಬಹುದು ಎಂದು ತಿಳಿಸಿದರು.

ಜಗತ್ತಿನಲ್ಲಿ ಸತ್ಯದ ಮೇಲೆ ನಿಂತಿರುವ ಅತ್ಯಂತ ವೈಜ್ಞಾನಿಕ ಧರ್ಮ ಲಿಂಗಾಯತ ಧರ್ಮವು ಬಸವಣ್ಣನವರ ಕೊಟ್ಟ ಕೊಡುಗೆ.

ಹುಟ್ಟಿದ ಪ್ರತಿ ಮಗುವಿಗೂ ಹಕ್ಕು ಸಿಗಬೇಕು ಎಂದು ಮಾನವ ಹಕ್ಕುಗಳ ಆಯೋಗದ ಉದ್ದೇಶ.  ಆದರೆ ಬಸವಣ್ಣನವರು ಅದನ್ನು ಹನ್ನೆರಡನೆಯ ಶತಮಾನದಲ್ಲಿಯೇ ಸಾಧ್ಯವಾಗಿಸಿದ್ದಾರೆ. ದನಿ ಇಲ್ಲದವರಿಗೆ ದನಿಯಾಗಿ ತುಳಿತಕ್ಕೆ ಒಳಗಾದವರಿಗೆ ಆಸರೆಯಾದವರು ಬಸವಣ್ಣನವರು.

ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಗಳನ್ನು ಖಂಡಿಸಿ ದಯವೇ ಧರ್ಮದ ಮೂಲ ಎಂದು ಸಾರಿದರು. ಕಾಯಕ ತತ್ವದ ಮೇಲೆ ನಿಂತಿರುವ ಜಗತ್ತಿನ ಏಕೈಕ ಧರ್ಮ ಲಿಂಗಾಯತ ಧರ್ಮ. ಎಲ್ಲಾ ಕಾಯಕಗಳಿಗೂ ಗೌರವ ತಂದು ಕೊಟ್ಟವರು. ಹನ್ನೆರಡು ಸಾವಿರ ಪನ್ನಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡಿದವರು ಬಸವಣ್ಣನವರು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶರಣ ಮುರುಗೇಶಣ್ಣ ಹೆದ್ನೆ ಅವರು, ಹೆಣ್ಣು ಹೊನ್ನು ಮಣ್ಣು ಮಾಯೆಯಲ್ಲ ಎಂದು ಶರಣರು ತಿಳಿಸಿದ್ದಾರೆ. ಕಲ್ಲು, ಮಣ್ಣು, ಕಟ್ಟಿಗೆ ದೇವರಲ್ಲ ನಮ್ಮೊಳಗೇ ದೇವರನ್ನು ಕಾಣುವ ವಿಧಾನವನ್ನ ಶರಣರು ನಮಗೆ ಕೊಟ್ಟಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಬಸವ ದಳದ ವೀಣಾ ಮಂಜುನಾಥ ಅವರು ಮಾತನಾಡಿ, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಜೊತೆಗೆ ಇದ್ದವರೇ ಇಂದು ಬಸವಣ್ಣನವರ ಕಾರ್ಯಕ್ರಮ ಮಾಡುತ್ತಿದ್ದಾರೆ. ವಿಭೂತಿ ಧಾರಣೆ ಅತ್ಯಂತ ಪವಿತ್ರ ಕಾರ್ಯ ಅದನ್ನು ಯಾರೂ ಬಿಡಬಾರದು ಎಂದು ತಿಳಿಸಿದರು.

ಗೌರವ ಉಪಸ್ಥಿತರಿದ್ದ ಶರಣ ಶಾಮನೂರು ಲಿಂಗರಾಜ ಅವರು ಮಾತನಾಡಿ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಎಂ.ಬಿ. ಪಾಟೇಲರ ಪ್ರಮಾಣ ವಚನಕ್ಕೆ ಅಡ್ಡಿ ಪಡಿಸಿದ ರಾಜ್ಯಪಾಲರ ಕ್ರಮ ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಿಂದು ಅವರು, ಲಿಂಗಾಯತ ಅಂದರೆ ಅದು ಜಾತಿ ಅಲ್ಲ. ಎಲ್ಲಾ ತಳವರ್ಗದ ಜನರೂ ಲಿಂಗಾಯತರು.

ತಳಸಮುದಾಯಗಳಿಗೆ ಮಹಿಳೆಯರಿಗೆ ಗೌರವ ತಂದುಕೊಟ್ಟವರು ವಿಶ್ವಗುರು ಬಸವಣ್ಣನವರು ಎಂದರು.

ಉಪಸ್ಥಿತರಿದ್ದ ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು ಅವರು ಮಾತನಾಡಿ, ಈ ಬಸವ ಜಯಂತಿ ಆಚರಣೆ ಯಶಸ್ವಿ ಆಗಬೇಕು ಎಂದರೆ ನಿಮ್ಮ ಜೀವನದಲ್ಲಿ ನೀವು ಪಾಲಿಸುತ್ತಿರುವ ಒಂದೇ ಒಂದು ಮೂಢನಂಬಿಕೆಗಳನ್ನು ಬಿಟ್ಟರೆ ಅದು ಬಸವಣ್ಣನವರಿಗೆ ನೀವು ಕೊಡುವ ಗೌರವ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆವರಗೆರೆ ರುದ್ರಮುನಿ ಅವರು ಮಾತನಾಡಿ, ಬಸವಾದಿ ಶರಣರು ಕೃಷಿ ಕಾಯಕಕ್ಕೆ ಬಹಳ ಗೌರವ ತಂದು ಕೊಟ್ಟವರು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರುದ್ರೇಗೌಡ ಗೋಪನಾಳ್ ಅವರು, ಜನಿವಾರ ಕಿತ್ತು ಬಿಸಾಡಿದ ಬಸವಣ್ಣನವರಿಗೆ ಪುನಃ ಜನಿವಾರ ತೊಡಿಸುವ ಹುನ್ನಾರ ನಡೆಯುತ್ತಿದೆ. ಆದರೆ ಬಸವಾಭಿಮಾನಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ನೋವು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಬಸವ ಕಲಾಲೋಕದವರು ವಚನ ಗೀತೆ ಹಾಡಿದರು. ಶಿವಮೂರ್ತಯ್ಯ ಟಿ.ಎಂ. ನಿರೂಪಿಸಿದರು.  ಅತ್ತಿಗೆರೆ ನಾಗರಾಜ ಸ್ವಾಗತ ಮಾಡಿದರು. ಕಡ್ಲೆಬಾಳು ಪ್ರಕಾಶ ಶರಣು ಸಮರ್ಪಣೆ ಮಾಡಿದರು.

ಸಮಾರಂಭದಲ್ಲಿ ಗ್ರಾಮದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು. ಕೊನೆಯಲ್ಲಿ ಎಲ್ಲರಿಗೂ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು