ಹಣದ ಬದಲು ತತ್ತ್ವಾಧಾರಿತ ರಾಜಕಾರಣವನ್ನು ಮತದಾರರು ಬೆಂಬಲಿಸಬೇಕಿದೆ.
ಸಾಣೇಹಳ್ಳಿ
ಗ್ರೀಕ್ ತತ್ತ್ವಜ್ಞಾನಿ ಪ್ಲೇಟೋ ‘ದಿ ರಿಪಬ್ಲಿಕ್’ಕೃತಿಯಲ್ಲಿ ಆದರ್ಶ ರಾಜ್ಯದ ಕಲ್ಪನೆಯನ್ನು ವಿವರಿಸಿದ್ದಾನೆ. ‘ತತ್ತ್ವಜ್ಞಾನಿ ಅರಸ’ನಾಗಬೇಕು ಎನ್ನುವುದು ಪ್ಲೇಟೋ ಅಭಿಪ್ರಾಯ. ಆಳುವವರಿಗೆ ಭೌತಿಕ ಸಂಪತ್ತಿನ ವ್ಯಾಮೋಹ, ಸ್ವಾರ್ಥ ಇರಬಾರದು. ಎಲ್ಲಿಯವರೆಗೆ ತತ್ತ್ವಜ್ಞಾನಿಗಳು ರಾಜರಾಗುವುದಿಲ್ಲವೋ ಅಥವಾ ರಾಜರು ತತ್ತ್ವಜ್ಞಾನಿಗಳಾಗುವುದಿಲ್ಲ ವೋ ಅಲ್ಲಿಯವರೆಗೆ ದೇಶದ ಸಂಕಷ್ಟಗಳಿಗೆ ಮುಕ್ತಿ ಇಲ್ಲ ಎನ್ನುವ ಪ್ಲೇಟೋ ಮಾತು ಇಂದು ಸತ್ಯವಾಗಿದೆ.
ರಾಜಕೀಯ ಶಕ್ತಿ ಮತ್ತು ಹಣಬಲ ಒಂದಾದಾಗ ಪ್ರಜಾಪ್ರಭುತ್ವದ ಮೂಲ ಆಶಯಗಳು ಮಣ್ಣುಪಾಲಾಗುತ್ತವೆ. ಆಳುವವರಿಗೆ ಸ್ವಂತ ಆಸ್ತಿ ಅಥವಾ ಕುಟುಂಬ ಇರಬಾರದು; ಅಧಿಕಾರ ಇರುವವರ ಕೈಯಲ್ಲಿ ಹಣ ಇರಬಾರದು ಹಾಗೂ ಹಣ ಇರುವವರ ಕೈಯಲ್ಲಿ ಅಧಿಕಾರ ಇರಬಾರದು ಎನ್ನುವುದು ಪ್ಲೇಟೋನ ವಿಚಾರಧಾರೆ. ಆ ಆಶಯಗಳಿಗೆ ವಿರುದ್ಧವಾದ ವಾತಾವರಣ ಈಗಿದೆ.
ಈಗ ಹಣಬಲ ಮತ್ತು ರಾಜಕೀಯ ಶಕ್ತಿ ಒಂದೇ ನಾಣ್ಯದ ಎರಡು ಮುಖಗಳಂತಾಗಿವೆ.
ಚುನಾವಣೆ ಎಂದರೆ ಕೋಟ್ಯಂತರ ರೂಪಾಯಿ ಬಂಡವಾಳದ ಉದ್ಯಮವಾಗಿದೆ. ಪ್ರಾಮಾಣಿಕ, ವಿದ್ಯಾವಂತ ಮತ್ತು ಜನಸೇವೆಯ ಗುರಿ ಹೊಂದಿರುವ ಸಾಮಾನ್ಯ ವ್ಯಕ್ತಿ ಪ್ರಸ್ತುತ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ.
ರಾಜಕಾರಣಿಗಳು ಚುನಾವಣೆಯಲ್ಲಿ ಗೆಲ್ಲಲು ಬಂಡವಾಳಶಾಹಿಗಳಿಂದ ಹಣ ಪಡೆಯುತ್ತಾರೆ. ಗೆದ್ದನಂತರ ಆ ಬಂಡವಾಳಶಾಹಿಗಳ ಹಿತಾಸಕ್ತಿಗೆ ಅನುಗುಣವಾಗಿ ನೀತಿ-ನಿಯಮಗಳನ್ನು ರೂಪಿಸುತ್ತಾರೆ. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಕ್ರಿಯೆ. ಆಮಿಷ ಪೂರೈಸಿ ಅಧಿಕಾರಕ್ಕೆ ಬರುವವರು ಜನರ ಕಲ್ಯಾಣಕ್ಕಿಂತ ತಾವು ಹೂಡಿದ ಬಂಡವಾಳಕ್ಕೆ ಬಡ್ಡಿಸಮೇತ ಲಾಭ ಪಡೆಯಲು ಹವಣಿಸುತ್ತಿರುತ್ತಾರೆ.
ಇಂಥ ದುರಂತವನ್ನು ಬದಲಾಯಿಸುವ ಶಕ್ತಿ ಇರುವುದು ಮತದಾರರಲ್ಲಿ ಮಾತ್ರ. ಅವರು ಜಾಗೃತರಾಗದಿದ್ದರೆ ಪ್ರಜಾಪ್ರಭುತ್ವ ಉಳ್ಳವರ ಪ್ರಭುತ್ವವಾಗುತ್ತದೆ. ಮತದಾರರು ಹಣ, ಜಾತಿ, ಧರ್ಮ ಇತ್ಯಾದಿ ಪರಿಗಣಿಸದೆ ಅಭ್ಯರ್ಥಿಯ ಚಾರಿತ್ರ್ಯ, ವಿದ್ಯಾರ್ಹತೆ, ಸಮಾಜಸೇವೆಯ ಹಿನ್ನೆಲೆ ಮೊದಲಾದವುಗಳನ್ನು ಗಮನಿಸಿ ಅರ್ಹರಿಗೆ ಮತ ಚಲಾಯಿಸುವ ವಿವೇಕಿಗಳಾಗಬೇಕು.
ಪ್ರಸ್ತುತ ಗ್ರಾಮ ಪಂಚಾಯಿತಿಯಿಂದ ಲೋಕಸಭಾ ಚುನಾವಣೆಯವರೆಗೆ ಸ್ಪರ್ಧಿಸುವ ಬಹುತೇಕರು ತಾವು ಕೋಟ್ಯಧಿಪತಿಗಳು ಎಂದು ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳುತ್ತಾರೆ.
ಒಬ್ಬ ಪ್ರಾಮಾಣಿಕ ಶಿಕ್ಷಕ, ವಕೀಲ, ವೈದ್ಯ, ಅಧಿಕಾರಿ, ಪ್ರಗತಿಪರ ಕೃಷಿಕ ಅಥವಾ ಜನರ ನೋವಿಗೆ ಸ್ಪಂದಿಸುವ ಸಮಾಜ ಸೇವಕನಿಗೆ ಹಣದ ತೂಕವಿಲ್ಲದ ಕಾರಣ, ಪಕ್ಷಗಳ ಟಿಕೆಟ್‌ನಿಂದಲೇ ವಂಚಿತರಾಗುತ್ತಾರೆ. ಪ್ರಜಾಪ್ರಭುತ್ವ ‘ಧನಿಕರ ಕ್ಲಬ್’ ಎನ್ನುವಂತಾಗಿದೆ. ಈ ಬೆಳವಣಿಗೆ ದೇಶದ ದುರಂತವೂ ಹೌದು, ಪ್ರಜಾಪ್ರಭುತ್ವದ ದುರಂತವೂ ಹೌದು.
ನಕಾರಾತ್ಮಕ ಉದಾಹರಣೆಗಳನ್ನೇ ನೋಡಬೇಕಾಗಿಲ್ಲ. ಪ್ಲೇಟೋ ಕಂಡ ಕನಸಿನಂತೆ ಆಡಳಿತ ನಡೆಸಿದವರೂ ಹಿಂದೆ ಇದ್ದರು; ಇಂದೂ ಬೆರಳೆಣಿಕೆಯಲ್ಲಿದ್ದಾರೆ. ಉರುಗ್ವೆಯ ಮಾಜಿ ಅಧ್ಯಕ್ಷ ಜೋಸ್ ಮುಜಿಕಾ ಅವರನ್ನು ಜಗತ್ತಿನ ಅತ್ಯಂತ ಬಡ ಅಧ್ಯಕ್ಷ ಎನ್ನಲಾಗುತ್ತಿತ್ತು. ಅವರು ತಮ್ಮ ವೇತನದ ಶೇ 90ರಷ್ಟನ್ನು ಬಡವರಿಗಾಗಿ ದಾನ ಮಾಡುತ್ತಿದ್ದರಂತೆ. ತಮ್ಮ ಹಳೆಯ ಕಾರಿನಲ್ಲೇ ಓಡಾಡುತ್ತಿದ್ದರಂತೆ. ಅವರ ಕೈಯಲ್ಲಿ ಅಧಿಕಾರವಿತ್ತೇ ಹೊರತು ಹಣದ ವ್ಯಾಮೋಹವಲ್ಲ. ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಉನ್ನತ ಅಧಿಕಾರದಲ್ಲಿದ್ದರೂ ತಮ್ಮ ವೈಯಕ್ತಿಕ ಆಸ್ತಿಯನ್ನು ಹೆಚ್ಚಿಸಿಕೊಳ್ಳದೆ ಸೇವೆ ಮತ್ತು ನೈತಿಕತೆಯನ್ನು ಆಡಳಿತದ ಬಂಡವಾಳ ಮಾಡಿಕೊಂಡಿದ್ದನ್ನು ನಾವು ಎಂದಿಗೂ ಮರೆಯುವಂತಿಲ್ಲ.
ಕರ್ನಾಟಕದ ರಾಜಕೀಯ ಸಿಂಹಾವಲೋಕನ ಮಾಡಿದರೆ ಹಣಬಲವನ್ನು ನಗಣ್ಯವಾಗಿಸಿ ನೈತಿಕತೆ, ಸಾಮಾಜಿಕ ಪ್ರಗತಿಯ ಬದ್ಧತೆಯನ್ನೇ ಬಂಡವಾಳ ಮಾಡಿಕೊಂಡವರ ಉದಾಹರಣೆಗಳು ಸಿಗುತ್ತವೆ. ಅತ್ಯಲ್ಪ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಕಡಿದಾಳು ಮಂಜಪ್ಪನವರು ಸೃಷ್ಟಿಸಿದ ನೈತಿಕತೆಯ ಇತಿಹಾಸ ಮರೆಯುವಂತಹದ್ದಲ್ಲ. ಅವರು ಅಧಿಕಾರದಿಂದ ಇಳಿದಾಗ ಸ್ವಂತ ಮನೆ ಅಥವಾ ಕಾರನ್ನು ಹೊಂದಿರಲಿಲ್ಲ. ರಾಜಕೀಯ ಅಧಿಕಾರವನ್ನು ಜನಸೇವೆಯ ತಪಸ್ಸಾಗಿಸಿಕೊಂಡ ತಾತ್ತ್ವಿಕ ನಾಯಕರವರು. ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು ಶರಾವತಿ ಬೃಹತ್ ನೀರಾವರಿ ಯೋಜನೆಯನ್ನು ಜಾರಿಗೆ ತಂದ ಜನನಾಯಕ. ಅಧಿಕಾರದಿಂದ ಇಳಿದಾಗ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಹಣವೂ ಇರದೆ, ಕೊನೆಗಾಲದಲ್ಲಿ ಚಿಕಿತ್ಸೆಗೂ ಪರದಾಡುವಂತಹ ಸ್ಥಿತಿ ಅವರದಾಗಿತ್ತು.
ಸಾಮಾಜಿಕ ನ್ಯಾಯದ ಹರಿಕಾರರೆಂದೇ ಪ್ರಖ್ಯಾತರಾಗಿರುವ ದೇವರಾಜ ಅರಸು ಅವರು ‘ಉಳುವವನೇ ಭೂಮಿಯ ಒಡೆಯ’ ಎಂದು ಘೋಷಿಸಿ ಶೋಷಿತ ವರ್ಗಗಳಿಗೆ ರಾಜಕೀಯ ಶಕ್ತಿ ನೀಡಿದವರು. ಭ್ರಷ್ಟಾಚಾರರಹಿತ ಆಡಳಿತ, ದಕ್ಷತೆ ಮತ್ತು ಕಠಿಣ ನಿರ್ಧಾರಗಳಿಗೆ ಮತ್ತೊಂದು ಹೆಸರು ವೀರೇಂದ್ರ ಪಾಟೀಲ. ಆಡಳಿತದಲ್ಲಿ ಶಿಸ್ತು, ಪಾರದರ್ಶಕತೆ ತರಲು ಅವರು ಯಾರೊಂದಿಗೂ ರಾಜಿಯಾಗುತ್ತಿರಲಿಲ್ಲ. ರಾಜಕೀಯ ಶಕ್ತಿಗೆ ನೈತಿಕತೆಯ ಶಿಸ್ತು ಮುಖ್ಯ ಎಂದು ತೋರಿಸಿಕೊಟ್ಟವರು.
ನಾಯಕರ ಪ್ರಾಮಾಣಿಕತೆ ಸಹಜ ನಡವಳಿಕೆಯಾದಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ. ಆರ್ಥಿಕ ಬಂಡವಾಳವಿಲ್ಲದ ಬದಲು ಪ್ರತಿಭೆ, ಕನಸು ಹಾಗೂ ಜನಪರ ಕಾಳಜಿಗಳನ್ನು ನಂಬಿಕೊಂಡಿರುವ ವಿವಿಧ ಕ್ಷೇತ್ರಗಳ ಯುವಜನರನ್ನು ಅಧಿಕಾರದ ಗದ್ದುಗೆಯ ಮೇಲೆ ಕೂರಿಸುವ ಸಂಕಲ್ಪವನ್ನು ಮತದಾರರು ಮಾಡಬೇಕು. ಆಗ ಸರ್ವೋದಯದ ಸಾಧ್ಯತೆ, ಕಲ್ಯಾಣ ರಾಜ್ಯದ ಕನಸು ತೆರೆದುಕೊಳ್ಳುತ್ತದೆ.
