ಚಿಕ್ಕಮಗಳೂರು:
ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಕನ್ನೇರಿ ಸ್ವಾಮೀಜಿ ಅವರ ನೇತೃತ್ವದ ಸಹಜ ಕೃಷಿ ಕಾರ್ಯಕ್ರಮದಲ್ಲಿ ಧಾರ್ಮಿಕ ಸೌಹಾರ್ದತೆ ಕಾಪಾಡಲು ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವಂತೆ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಗಂಗಾಧರಪ್ಪ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಮನವಿಪತ್ರ ಸಲ್ಲಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈ ಹಿಂದೆ ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಕನ್ನೇರಿ ಸ್ವಾಮೀಜಿ ಜಗಜ್ಯೋತಿ ಬಸವಣ್ಣನವರು, ಬಸವ ತತ್ವಗಳನ್ನು ಅನುಸರಿಸುವ ನಾಯಕರು, ಬಸವಾನುಯಾಯಿಗಳ ಕುರಿತು ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಇಂತಹ ಹೇಳಿಕೆಗಳು ಲಿಂಗಾಯತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಸಮಾಜದಲ್ಲಿ ಅಸಮಾಧಾನ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿವೆ ಎಂದು ಮಹಾಸಭಾ ತಿಳಿಸಿದೆ.
ಈಗಾಗಲೇ ಇಂತಹ ವಿವಾದಾತ್ಮಕ ಹೇಳಿಕೆಗಳ ಕುರಿತು ನ್ಯಾಯಾಲಯದಿಂದ ಎಚ್ಚರಿಕೆಗಳು ಬಂದಿದ್ದರೂ ಸಹ, ಪ್ರಚೋದನಾತ್ಮಕ ಭಾಷಣ ಅವರಿಂದ ಮುಂದುವರೆದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ, ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷವಾಗಿ ಲಿಂಗಾಯತ ಧರ್ಮ, ಬಸವಣ್ಣನವರ ತತ್ವಗಳು ಹಾಗೂ ಲಿಂಗಾಯತ ಸಮುದಾಯದ ನಾಯಕರ ಕುರಿತು ಅವಹೇಳನಕಾರಿ ಅಥವಾ ವಿವಾದಾತ್ಮಕ ಹೇಳಿಕೆಗಳನ್ನು ಕಾರ್ಯಕ್ರಮದಲ್ಲಿ ನೀಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹೇಳಿಕೆಗಳಿಗೆ ಅವಕಾಶ ನೀಡದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಕುರಿತು ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಬಸವಣ್ಣನವರ ಸಮಾನತೆ, ಸಹಿಷ್ಣುತೆ ಮತ್ತು ಮಾನವೀಯತೆಯ ತತ್ವಗಳಿಗೆ ವಿರುದ್ಧವಾಗಿ ಯಾವುದೇ ಪ್ರಚೋದನಾತ್ಮಕ ಹೇಳಿಕೆಗಳು ಬರಬಾರದು.
ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಂತಿಯುತ ವಾತಾವರಣವನ್ನು ಕಾಪಾಡಬೇಕು ಎಂದು ಮಹಾಸಭಾ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಜೆಎಲ್ಎಂ ಮಹಿಳಾ ಘಟಕದ ಅಧ್ಯಕ್ಷೆ ಎಸ್. ಗಾಯತ್ರಮ್ಮ, ತರೀಕೆರೆ ತಾಲೂಕ ಅಧ್ಯಕ್ಷ ಚಂದ್ರಶೇಖರಪ್ಪ ನೆರಲಾಕೆರೆ, ಕಡೂರ ತಾಲೂಕು ಅಧ್ಯಕ್ಷ ಗಣೇಶ ಅಂಜಿ ಉಪಸ್ಥಿತರಿದ್ದರು.
