“ಶಿವಭಾವ ಮತ್ತು ಯೋಗದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ”

ಸಾಣೇಹಳ್ಳಿ:

“ನಮ್ಮ ಕಣ್ಣು, ಕಿವಿ, ಮೂಗು, ನಾಲಿಗೆ, ಹೃದಯ ಸೇರಿದಂತೆ ಬುದ್ಧಿ ಮತ್ತು ಭಾವಗಳಲ್ಲೆಲ್ಲ ಶಿವಭಾವ ಅಳವಡಿಕೆಯಾಗಬೇಕು. ಶಿವಭಾವ ಎಂದರೆ ಎಲ್ಲರಿಗೂ ಒಳ್ಳೆಯದನ್ನು ಮಾಡುವುದು ಮತ್ತು ಕೆಟ್ಟ ಕೆಲಸಗಳಿಂದ ದೂರ ಇರುವುದು. ಅಂತಹ ಶಿವಭಾವ ಮತ್ತು ಯೋಗದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ” ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 12ನೆಯ ವರ್ಷದ ವಿಶ್ವಯೋಗ ದಿನಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಯೋಗ ಎಂದರೆ ಒಂದಾಗುವುದು ಅಥವಾ ಕೂಡುವುದು ಎಂದರ್ಥ. ಮೊದಲು ನಮ್ಮ ದೇಹ, ಮನಸ್ಸು ಮತ್ತು ಬುದ್ಧಿ ವಿಭಾಗವಾಗದಂತೆ ಒಂದಾಗಿ, ಅದ್ವೈತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ‘ನನ್ನ ಶರೀರವೇ ನಾನು’ ಎನ್ನುವ ಏಕತೆಯ ಭಾವ ಮೂಡಿದಾಗ ಮಾತ್ರ ಮನಸ್ಸಿನಲ್ಲಿ ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆಯಿಂದ ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಸಿಗುತ್ತದೆ.

ಮನಸ್ಸಿನ ಸ್ವಭಾವ ಅತ್ಯಂತ ಚಂಚಲವಾದದ್ದು. ಅದನ್ನು ಕೋತಿ, ಓತಿಕ್ಯಾತ ಮತ್ತು ಗಾಳಿಗೆ ಹೋಲಿಸಲಾಗುತ್ತದೆ. ಅಂತಹ ಚಂಚಲ ಮನಸ್ಸನ್ನು ನಿಯಂತ್ರಿಸುವುದೇ ಯೋಗ. ಮನುಷ್ಯನ ಪ್ರಗತಿ ಮತ್ತು ಅವನತಿ ಎರಡಕ್ಕೂ ಮನಸ್ಸೇ ಕಾರಣ. ಯಾರು ಮನಸ್ಸನ್ನು ಹತೋಟಿಯಲ್ಲಿಡುತ್ತಾರೋ, ಅವರು ತಮ್ಮ ಬದುಕನ್ನು ಹತೋಟಿಯಲ್ಲಿಡುತ್ತಾರೆ, ಅವರು ತಮ್ಮ ಬದುಕನ್ನು ನಿಯಂತ್ರಿಸಬಲ್ಲರು. ಮೃಗತ್ವದಿಂದ ದೇವತ್ವದ ಕಡೆಗೆ ಕರೆದೊಯ್ಯಲು ಯೋಗ ಪ್ರೇರಣೆಯಾಗಿದೆ.

ಕೇವಲ ದೈಹಿಕ ಅಂಗಾಂಗಗಳನ್ನು ಬಲಪಡಿಸುವುದು ಅಷ್ಟೇ ಯೋಗವಲ್ಲ; ದೇಹದ ಜೊತೆಗೆ ಮನಸ್ಸು ಮತ್ತು ಭಾವನೆಗಳನ್ನು ಹತೋಟಿಗೆ ತರಬೇಕು. ಹಸ್ತದಲ್ಲಿ ಇಷ್ಟಲಿಂಗವನ್ನಿಟ್ಟುಕೊಂಡು ಏಕಾಗ್ರತೆಯಿಂದ ನೋಡುತ್ತಾ, ಷಡಾಕ್ಷರಿ ಮಂತ್ರವನ್ನು ಅನುಸಂಧಾನ ಮಾಡುವುದೇ ಶಿವಯೋಗ. ಇದರಿಂದ ‘ನಾನೇ ದೇವರು, ದೇವರೇ ನಾನು’ ಎಂಬ ಉನ್ನತ ಭಾವ ಜಾಗೃತವಾಗುತ್ತದೆ.

ಮಠ ಹಾಗೂ ಶಾಲಾ-ಕಾಲೇಜುಗಳ ಆವರಣದಲ್ಲಿ ಮಕ್ಕಳು ಓಡಾಡುವ ಜಾಗದಲ್ಲಿ ಅತಿ ವೇಗವಾಗಿ ಬೈಕ್ ಚಾಲನೆ ಮಾಡುವ ಯುವಕರಿಗೆ ಸಾರ್ವಜನಿಕರು ಸೌಮ್ಯವಾಗಿ ತಿಳಿಹೇಳಿ ಎಚ್ಚರಿಸಬೇಕು. ಇದು ಕೂಡ ಒಂದು ರೀತಿಯ ಯೋಗವೇ ಆಗಿದೆ.

ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕರಿದ ಮತ್ತು ಹುರಿದ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಬೇಕು. ನಾಲಿಗೆಯ ರುಚಿಗಿಂತ ದೇಹದ ಆರೋಗ್ಯ ಮುಖ್ಯ. ಶರಣರ ವಚನಗಳಂತೆ ‘ಮಿತ ಆಹಾರವೇ’ ಆರೋಗ್ಯದ ಗುಟ್ಟು. ಬದುಕಲಿಕ್ಕಾಗಿ ಉಣ್ಣಬೇಕೇ ಹೊರತು ಉಣ್ಣಲಿಕ್ಕಾಗಿ ಬದುಕಬಾರದು ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಕಿವಿ‌ ಮಾತು‌ ಹೇಳಿದರು.

ಮಕ್ಕಳಲ್ಲಿ ಕೇವಲ ಪಠ್ಯದ ಓದಷ್ಟೇ ಮುಖ್ಯವಲ್ಲ, ಸಾರ್ವಜನಿಕ ನಡವಳಿಕೆಯ ಸಂಸ್ಕಾರ ಬೆಳೆಯಬೇಕು. ಅನ್ನವನ್ನು ಚೆಲ್ಲದೆ ಗೌರವಿಸಬೇಕು ಮತ್ತು ಎಲ್ಲೆಂದರಲ್ಲಿ ಕಸ ಹಾಕದೆ ಸ್ವಚ್ಛತೆ ಕಾಪಾಡಬೇಕು. ಬಸವಣ್ಣನವರ ವಚನದಂತೆ ನಮ್ಮ ನಡೆ-ನುಡಿ ಒಂದಾಗಬೇಕು. ಈ ಬಾರಿಯ ನಾಟಕೋತ್ಸವದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಲಾ ಒಂದೊಂದು ನಾಟಕ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.

ಶಾಲಾ ಶಿಕ್ಷಣದಲ್ಲಿ ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ನಾಟಕ, ಸಂಗೀತ, ಕ್ರೀಡೆಯೊಂದಿಗೆ ಯೋಗ ಅತ್ಯಗತ್ಯ. ಬಸವಣ್ಣನವರ “ಬರಬರ ಭಕ್ತಿ ಅರೆಯಾಯಿತು…” ಎಂಬಂತೆ ನಮ್ಮ ಶ್ರದ್ಧೆ ದಿನೇ ದಿನೇ ಕಡಿಮೆಯಾಗಬಾರದು. ಜಂಕ್ ಫುಡ್‌ಗಳನ್ನು ನಿಷೇಧಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಮುಖ್ಯ ಶಿಕ್ಷಕ ಕೆ.ಆರ್. ಬಸವರಾಜ ಮಾತನಾಡಿ, ಯೋಗವು ಕೇವಲ ಅಂಗಸಾಧನೆಯಲ್ಲ, ಅದು ಉತ್ತಮ ವ್ಯಕ್ತಿತ್ವ ರೂಪಿಸುವ ಶ್ರೇಷ್ಠ ಮಾರ್ಗ. ವಿದ್ಯಾರ್ಥಿಗಳು ಧಾನ್ಯ ಮತ್ತು ಯೋಗದಿಂದ ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು. ಕುರ್ಕುರೆಯಂತಹ ಜಂಕ್ ಫುಡ್ ಬಿಟ್ಟು ಮುದ್ದೆಯಂತಹ ಪೌಷ್ಟಿಕ ಆಹಾರ ಉಣ್ಣಬೇಕು. ಹಾಗೂ ಹೆಣ್ಣುಮಕ್ಕಳು ಸಾಕಷ್ಟು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಯೋಗ ಶಿಕ್ಷಕ ದೇವೇಂದ್ರಪ್ಪ ಬಿ.ಸಿ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮಗಳನ್ನು ಒಂದುಗೂಡಿಸುವ ಶಕ್ತಿ. ಹಳೆಯ ಕಾಲದ ಕಾಯಕದಲ್ಲೇ ಯೋಗದ ಲಾಭವಿತ್ತು, ಆದರೆ ಇಂದಿನ ಟಿವಿ ಸಂಸ್ಕೃತಿಯ ಆಲಸ್ಯವನ್ನು ಯೋಗದಿಂದ ಮಾತ್ರ ಓಡಿಸಲು ಸಾಧ್ಯ. ಶಿಬಿರದಲ್ಲಿ ಮಕ್ಕಳಿಗೆ ‘ಶಿವಾಯನಮಃ’ ಮಂತ್ರದೊಂದಿಗೆ ಶಿವಯೋಗದ ವಿಧಾನವನ್ನು ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿಕೊಡಲಾಯಿತು.

ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಇಂದು ವಿಶ್ವಸಂಸ್ಥೆಯು ಯೋಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ. ಇಂದಿನ ಜಾಗತಿಕ ಅಶಾಂತಿಗೆ ‘ವಸುಧೈವ ಕುಟುಂಬಕಂ’ ಭಾವನೆ ಮೂಡಿಸಲು ಯೋಗ ಸಹಕಾರಿ. ವಿದ್ಯಾರ್ಥಿಗಳು ನಿಯಮ ಒಳಗೊಂಡ ‘ಅಷ್ಟಾಂಗ ಯೋಗ’ದ ಮಜಲುಗಳನ್ನು ಅಳವಡಿಸಿಕೊಂಡು, ನೆನಪಿನ ಶಕ್ತಿ ಹೆಚ್ಚಿಸಲು ದಿನಕ್ಕೆ 10 ನಿಮಿಷ ಧ್ಯಾನ ಮಾಡಬೇಕು ಎಂದು ಶಿಕ್ಷಕ ವಿರೂಪಾಕ್ಷಪ್ಪ (ಅಣ್ಣಿಗೆರೆ)ತಿಳಿಸಿದರು.

ಮುಖ್ಯ ಶಿಕ್ಷಕ ಬಿ.ಎಸ್. ಶಿವಕುಮಾರ ಮಾತನಾಡಿ, ಪ್ರತಿನಿತ್ಯ ಯೋಗದ ಜೊತೆಗೆ ಶಿವಯೋಗ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಕಳೆದ ಒಂದು ದಶಕದಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಯಾಗಿ ಸಾಣೇಹಳ್ಳಿಯಲ್ಲಿ ಈ ಒಂದು ವಾರದ ಧ್ಯಾನ, ಮೌನ ಹಾಗೂ ಪ್ರಾರ್ಥನೆಯ ವಿಶೇಷ ಯೋಗ ಶಿಬಿರವನ್ನು ಮುನ್ನಡೆಸಿಕೊಂಡು ಬಂದಿರುವ ಅಣ್ಣಿಗೇರೆಯ ದೇವೇಂದ್ರಪ್ಪ ಹಾಗೂ ವಿರೂಪಾಕ್ಷಪ್ಪ ಅವರ ಸೇವೆ ಸ್ಮರಣೀಯ ಎಂದರು.

ವೇದಿಕೆಯ ಮೇಲೆ ಮುಖ್ಯ ಶಿಕ್ಷಕಿ ಶಿಲ್ಪ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ವಿಶ್ವ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿದರು. ಶಿಕ್ಷಕಿ ಶೋಭ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *