ಸೋಲಾಪೂರ:
ಸೋಲಾಪುರ ಅನೇಕ ಭಾಷೆಗಳಿಗೆ ಸ್ಥಾನ ನೀಡಿದೆ. ಅಷ್ಟೇ ಅಲ್ಲದೇ ಆಯಾ ಭಾಷಿಕರ ಸಂಸ್ಕೃತಿ, ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಮಾಡಿಕೊಳ್ಳಲು ಯಾವುದೇ ಅಡೆತಡೆ ಇಲ್ಲದ ಪ್ರದೇಶವೆಂದರೆ ಅದು ಸೋಲಾಪುರ ಮಾತ್ರ. ಇದು ಭಾಷೆಗಳ ಸಂಗಮ ಎಂದು ಕಾಶಿ ಪೀಠದ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲಾಪುರದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ ೧೦ನೇ ಮಹಾಮೇಳ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಸಾನಿಧ್ಯಪರ ಮಾತನಾಡಿದರು.
ಸೋಲಾಪುರದಲ್ಲಿ ವಾಸಿಸುವವರು ೩-೪ ಭಾಷೆಗಳನ್ನು ಮಾತನಾಡುತ್ತಾರೆ. ಒಂದೊಂದು ಭಾಷೆಯಲ್ಲಿ ಒಂದೊಂದು ಶಬ್ದಕ್ಕೆ ವಿಭಿನ್ನ ಅರ್ಥಗಳಿರುತ್ತವೆ. ತಮ್ಮ ಸಂಸ್ಥೆಯಿಂದ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಬಿಎಡ್ ಪದವಿ ಕಾಲೇಜುಗಳನ್ನು ನಡೆಸುತ್ತಿದ್ದೇವೆ. ಭಾಷೆ, ಗಡಿ, ಸೀಮಾರೇಖೆಗಳನ್ನು ಮೀರಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳೆಂದು ಸಹಬಾಳ್ವೆಯಿಂದ ಸೌಹಾರ್ದತೆಯಿಂದ ಕೂಡಿಬಾಳಬೇಕು.
ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿಗಳೆಂದರೆ ಅವು ಕನ್ನಡ ಭಾಷೆಯಲ್ಲಿವೆ, ಅಂಥ ಶ್ರೀಮಂತ ಭಾಷೆ ನಮ್ಮ ಕನ್ನಡ ಭಾಷೆ. ನಮ್ಮ ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು. ಹೊರನಾಡಿನಲ್ಲಿ ಕನ್ನಡ ಉಳಿಸಿ ಬೆಳೆಸಲು ಕರ್ನಾಟಕ ಸರಕಾರ ಕನ್ನಡ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ ಉಳಿಸಬೇಕೆಂದರು.
ಹೊರನಾಡ ಕನ್ನಡ ಸಂಘಗಳ ಪ್ರತಿನಿಧಿಗಳ 10ನೇ ಮಹಾಮೇಳದಲ್ಲಿ ಒಮ್ಮತದಿಂದ ಪಾಸಾದ ಈ ಕೆಳಗಿನ ಗೊತ್ತುವಳಿಗಳನ್ನು ಡಾ. ಜಿನದತ್ತ ಹಡಗಲಿ ಅವರು ಮಂಡಿಸಿದರು.
೧) ಹೊರನಾಡಿನಲ್ಲಿ ಕನ್ನಡ ಶಾಲೆಗಳಿಗೆ ಶೈಕ್ಷಣಿಕ ಪರಿಕರಗಳನ್ನು ವರ್ಷದ ಆರಂಭದಲ್ಲಿಯೇ ಪೂರೈಸಲು ಆಯಾ ಸರ್ಕಾರಗಳಿಗೆ ಆಗ್ರಹಿಸುವುದು.
೨) ಹೊರನಾಡು ಎಂಬ ತಪ್ಪು ವ್ಯಾಖ್ಯಾನದಿಂದ ಹೊರನಾಡಿನಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಅವಕಾಶ ವಂಚಿತ ಆಗುವುದನ್ನು ತಪ್ಪಿಸಲು ಆ ವಾಖ್ಯಾನವನ್ನು ತಿದ್ದುಪಡಿ ಮಾಡುವುದು.

೩) ಕರ್ನಾಟಕದ ಅಕಾಡೆಮಿ, ಪುರಸ್ಕಾರ, ಪ್ರಶಸ್ತಿಗಳಲ್ಲಿ ಸದಸ್ಯತ್ವ ನೀಡುವಲ್ಲಿ ಹೊರನಾಡ ಕನ್ನಡಿಗರನ್ನು ಪರಿಗಣಿಸಲು ಸರ್ಕಾರಕ್ಕೆ ಒತ್ತಾಯಿಸುವುದು.
೪) ಹೊರನಾಡ ಕನ್ನಡದ ಮಕ್ಕಳಿಗೆ ರಾಜ್ಯದಲ್ಲಿ ಉದ್ಯೋಗ ಹಾಗೂ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತೆ ಮಿತಿಯನ್ನು ವಿಸ್ತರಿಸಲು ಕರ್ನಾಟಕ ಸರ್ಕಾರಕ್ಕೆ ಆಗ್ರಹ.
೫) ಕನ್ನಡ, ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಶ್ರಮಿಸಿದ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಪ್ರತಿವರ್ಷ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುವುದು.
೬) ಹೊರನಾಡು ಮತ್ತು ಗಡಿನಾಡ ಕನ್ನಡಿಗರ ಅಹವಾಲುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಒಪ್ಪಿಸಬೇಕು.
ಸೋಲಾಪುರದ ಮಾಜಿ ಶಾಸಕ ವಿಶ್ವನಾಥ ಬಾಬುರಾವ ಚಾಕೋತೆ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಚಿಂತಕ ರಂಜಾನ್ ದರ್ಗಾ ಸಮಾರೋಪ ನುಡಿಗಳನ್ನಾಡಿದರು. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸೋಲಾಪುರದಲ್ಲಿ ಕನ್ನಡ ಕಟ್ಟುವಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಕನ್ನಡಪರ ಹೋರಾಟಗಾರ ಎನ್. ಎ. ವಾಲೆ, ಉದ್ಯಮಿ ಪರಮಾನಂದ ಅ. ಪಾಟೀಲ, ಹಿರಿಯ ಜಾನಪದ ಕಲಾವಿದ ಗೈಬಿಶಾ ಮಕಾನ್ದಾರ, ಕನ್ನಡ ಸಂಚಾರಿ ವಾಚನಾಲಯದ ಡಿ. ಬಿ. ಹೆಬ್ಬಾಳ್, ಕನ್ನಡ ಸಂಘಟಕ ಕೆ. ಎನ್. ಹೂಗಾರ, ಅಕ್ಬರ್ ಮುಲ್ಲಾ, ಸಂಯೋಜಕರು, ಜೇನಿನ ಹೊಳೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ.ವಿ.ವ.ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
ವೇದಿಕೆಯಲ್ಲಿ ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಮಹೇಶ ಹೊರಕೇರಿ, ಡಾ, ಧನವಂತ ಹಾಜವಗೋಳ ಇದ್ದರು.
ಸಾಂಸ್ಕೃತಿಕ ಸಂಜೆ
ನಂತರ ನಡೆದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಕಾರಟಗಿಯ ಗಿರಿಜಾಶಂಕರ ಪಾಟೀಲ ಚಾಲನೆ ನೀಡಿದರು.
ಈಶ್ವರಿ ಸಿದ್ಧರಾಮಪ್ಪ ದುಲಂಗೆ ಅವರಿಂದ ಕನ್ನಡ ಭಕ್ತಿಗೀತೆಗಳು, ಸುಹಾಸಿನಿ ಶೇಠೆ ಹಾಗೂ ತಂಡದಿಂದ ವಚನ ನೃತ್ಯ, ರಾಜಶ್ರೀ ಥಳಂಗೆ ಹಾಗೂ ತಂಡದಿಂದ ಅಕ್ಕಮಹಾದೇವಿ ನಾಟಕ, ಸೋಲಾಪುರದ ಶಂಕರಲಿಂಗ ಮಹಿಳಾ ಮಂಡಳದಿಂದ ಕೋಲಾಟ, ಶೋಭಾ ತೋರಣಗಿ ಹಾಗೂ ತಂಡದಿಂದ ಯೋಗನೃತ್ಯ, ರೇಣುಕಾ ಬಾಗಲಕೋಟಿ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸೊಗಸಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿ ಜನಮನ ತಣಿಸಿದವು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE
