ಜನಪದ ಕಲೆ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬ: ಬಸವಲಿಂಗ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಜಾನಪದ ಸಾಂಸ್ಕೃತಿಕ ಸಂಭ್ರಮೋತ್ಸವ

ಮೊಳಕಾಲ್ಮುರು:

ಜನಪದ ಕಲೆಗಳು ನಮ್ಮ ನೆಲಮೂಲ ಸಂಸ್ಕೃತಿಯ ಪ್ರತಿಬಿಂಬ ಎಂದು ಸಿದ್ಧಯ್ಯನಕೋಟೆ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಶಾಖಾ ಮಠದ ಪೀಠಾಧ್ಯಕ್ಷ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆ, ತುಮಕೂರ್ಲಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗೌಡರಹಟ್ಟಿಯಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಸಂಭ್ರಮೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ ಬೆಳಸಬೇಕಿದೆ. ಗ್ರಾಮೀಣ ಸೊಗಡಿನ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗೆ ಕೊಡಬೇಕಿದೆ. ಜಾನಪದ ಕಲಾ ಪರಂಪರೆಗಳಾದ ಗೀಗಿಪದ, ಜಾನಪದ ಗೀತೆ, ತತ್ವಪದ, ಲಾವಣಿ, ಸೋಬಾನೆ ಪದಗಳು, ಬೀಸೋ ಕಲ್ಲಿನ ಪದಗಳು, ಕಹಳೆ, ತಮಟೆವಾದನ, ಉರುಮೆ, ಸೇರಿದಂತೆ ಹಲವು ಜನಪದ ಕಲೆಗಳು ನಮ್ಮ ಸಂಸ್ಕೃತಿ ಮತ್ತು ನಮ್ಮ ಬದುಕಿನ ಅಸ್ಮಿತೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಕಲೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸುವ ಮೂಲಕ ಕಲೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು.

ಮೊಳಕಾಲ್ಮೂರು ಪೊಲೀಸ್ ಠಾಣೆಯ ಲಕ್ಷ್ಮಣ ಮಹೇಶ ಹೊಸಪೇಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿದ್ದು, ಮನುಷ್ಯ ಒತ್ತಡದಿಂದ ಹೊರಬರಲು ಇಂತಹ ಜಾನಪದ ಕಲೆಗಳನ್ನು ಮೈಗೂಡಿಸಿಕೊಂಡು ಸಂಸ್ಕಾರವಂತರಾಗಬೇಕು, ಬಾಂಧವ್ಯವನ್ನು ಗಟ್ಟಿಗೊಳಿಸುವ ಇಂತಹ ಜಾನಪದ ಕಲೆಗಳನ್ನು ಆಸ್ವಾದಿಸಿ ಗೌರವಿಸಬೇಕು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಇಂತಹ ಗ್ರಾಮೀಣ ಸಂಸ್ಕೃತಿಯ ಕಲೆಗಳು ನಮ್ಮ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ತಿಳಿಸಿದರು.

ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ ಮಾತನಾಡಿ, ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ‘ಕಲಾವಿದರ ನಡೆ ಜನರ ಕಡೆ’ ಎನ್ನುವಂತಹ ಹಲವಾರು ವಿನೂತನ ಕಾರ್ಯಕ್ರಮಗಳನ್ನು ತಂದಿರುವುದು ಎಲ್ಲಾ ಗ್ರಾಮೀಣ ಭಾಗದ ಕಲಾವಿದರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಿ. ರಾಜಣ್ಣ, ಕೆ.ಪಿ. ಪಂಪಾಪತಿ ಸೇರಿದಂತೆ ಹಲವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ರಾಮದಾಸ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೀಳಂಗಿ ಹನುಮಂತಪ್ಪ, ಡಾ. ರಂಗಪ್ಪ, ಗೌಡ್ರು ತಿಪ್ಪೇಸ್ವಾಮಿ, ಬಸವ ಕೇಂದ್ರದ ಅಧ್ಯಕ್ಷ ಭೋಗೇಶ ಗೌಡ್ರು ಇದ್ದರು.

ಕಾರ್ಯಕ್ರಮದಲ್ಲಿ ಜಾನಪದ ಕಲಾತಂಡಗಳಾದ ಉರುಮೆ, ಕಹಳೆ, ತಮಟೆ ವಾದನ, ನಾಸಿಕ್ ಡೋಲ್, ಜಾನಪದ ಗೀತೆ, ವಚನ ಸಂಗೀತ, ಸುಗಮ ಸಂಗೀತದ ಹಲವಾರು ಕಲಾತಂಡಗಳು ಭಾಗವಹಿಸಿದ್ದವು.

ಸಂಗೀತ ಶಿಕ್ಷಕ ಕೆ.ಓ. ಶಿವಣ್ಣ, ಕಲಾವಿದರಾದ ಎಂ. ನುಂಕೇಶ್, ಮನೋಜಕುಮಾರ್, ಗುರುಶಂಕರಪ್ಪ, ಚೀಳಂಗಿ ಶಿವಕುಮಾರ ಸೇರಿದಂತೆ ಹಲವಾರು ಕಲಾವಿದರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಶಿಕ್ಷಕ, ಗಾಯಕ ಅಮುಕುಂದಿ ಗಂಗಾಧರ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *