ಚಾಮರಾಜನಗರ:
ಸುಮಾರು 700 ವರ್ಷಗಳ ಐತಿಹಾಸಿಕ ಪರಂಪರೆ ಹೊಂದಿರುವ ಕನಕಪುರದ ಶ್ರೀ ದೇಗುಲಮಠದ ಪೀಠಾಧ್ಯಕ್ಷರಾಗಿದ್ದ ಪೂಜ್ಯ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು (84) ಅವರು ಜೂನ್ 22ರಂದು ವಯೋಸಹಜ ಅನಾರೋಗ್ಯದಿಂದ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠದ ಮುಂಭಾಗದಲ್ಲಿ ಬಸವ ಬಳಗಗಳ ಒಕ್ಕೂಟದ ವತಿಯಿಂದ ಭಕ್ತಿಪೂರ್ವಕ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಸದಸ್ಯರು ಹಾಗೂ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಎನ್ ರಿಚ್ ಮಹದೇವಸ್ವಾಮಿ ಅವರು, ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಠದ ಸೇವೆಯನ್ನು ತಲುಪಿಸಿದ ಮಹಾನ್ ಸಮಾಜಮುಖಿ ಸಂತರು ಎಂದು ಸ್ಮರಿಸಿದರು.
ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವ ಮೂಲಕ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸಿದವರು ಎಂದು ಹೇಳಿದರು. ಅವರ ಜೀವನವು ಸೇವೆ, ಸರಳತೆ ಮತ್ತು ಸಮಾನತೆಯ ಸಂದೇಶದ ಪ್ರತೀಕವಾಗಿತ್ತು ಎಂದು ನುಡಿದರು.

ನಂತರ ನುಡಿನಮನ ಸಲ್ಲಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಕೆ. ರವಿಕುಮಾರ್ ಅವರು, 1943ರ ಮೇ 20ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದಲ್ಲಿ ಜನಿಸಿದ ಶ್ರೀಗಳು ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳಿಗೆ ಬದ್ಧರಾಗಿದ್ದರು.
1970ರಲ್ಲಿ ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡು, 1977ರಲ್ಲಿ ಕನಕಪುರದ ಐತಿಹಾಸಿಕ ಶ್ರೀ ದೇಗುಲ ಮಠದ 11ನೇ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅನ್ನ, ಅಕ್ಷರ ಮತ್ತು ಅರಿವು ದಾಸೋಹದ ಮೂಲಕ ಸಮಾಜದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ ಅಪರೂಪದ ಯತಿಗಳಾಗಿದ್ದರು ಎಂದು ಹೇಳಿದರು.
ಅನಂತರ ಮಾತನಾಡಿದ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆ. ವೀರಭದ್ರಸ್ವಾಮಿ ಅವರು, ಶ್ರೀಗಳು ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುತ್ತಾ ಸಮಾಜದಲ್ಲಿ ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿದ ಮಹಾನ್ ಸಂತರು ಎಂದು ಹೇಳಿದರು. ಅವರ ಅಗಲಿಕೆಯಿಂದ ನಾಡಿನ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಜಿಲ್ಲಾಧ್ಯಕ್ಷ ಕೋಡಿಮೊಳೆ ರಾಜಶೇಖರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಟೇಶ, ಶಿವಸ್ವಾಮಿ ಹೆಗ್ಗೋಟಾರ, ಕಿಲಗೆರೆ ರತ್ನಮ್ಮ, ಮೂಡಲುಪುರ ಮಂಜೇಶ, ಅಂಬಳೆ ಚಂದ್ರಪ್ಪ, ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ವಸಂತಮ್ಮ, ಕಾವುದವಾಡಿ ಗುರು, ಹೊನ್ನಮೇಟಿ ಸುಂದರಪ್ಪ, ಬಿಸಲವಾಡಿ ಉಮೇಶ, ಬೂದಂಬಳ್ಳಿ ಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದು, ಪುಷ್ಪನಮನ ಸಲ್ಲಿಸಿ ಶ್ರೀಗಳವರ ಆದರ್ಶ ಜೀವನವನ್ನು ಸ್ಮರಿಸಿದರು.
