28ರಂದು ಬಸವಕಲ್ಯಾಣಕ್ಕೆ ನಾಡಿನ ಬಸವಭಕ್ತರು ಆಗಮಿಸಲು ಕರೆ
ಭಾಲ್ಕಿ:
ಪಟ್ಟಣದ ಶ್ರೀ ಚನ್ನಬಸವ ಆಶ್ರಮದಲ್ಲಿ ಸೋಮವಾರ 123ನೆಯ ಮಾಸಿಕ ಶರಣ ಸಂಗಮ ಕಾರ್ಯಕ್ರಮ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸಮಾನತೆಯ ಆಧಾರದ ಮೇಲೆ ಲಿಂಗಾಯತವೆಂಬ ವಿನೂತನ ಧರ್ಮ ಸ್ಥಾಪಿಸಿದರು. ವಚನಗಳ ಮೂಲಕ ಧರ್ಮ ಸಿದ್ಧಾಂತವನ್ನು ಬೋಧಿಸಿದರು. ಏಕದೇವೋಪಾಸನೆ, ಕಾಯಕ-ದಾಸೋಹ, ಸಮಾನತೆ, ದಯೆ, ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮೌಲ್ಯಗಳನ್ನು ನೀಡಿದರು.
ಬಸವಾದಿ ಶರಣರು ಮಾಡಿರುವ ಕಲ್ಯಾಣ ಕ್ರಾಂತಿ ಸಮಾನತೆಗಾಗಿ ನಡೆದ ಜಗತ್ತಿನ ಅಪರೂಪದ ಕ್ರಾಂತಿಯಾಗಿದೆ. ಆದರೆ ಕೆಲವರು ಇದನ್ನೆ ಪ್ರಶ್ನಿಸುವ ಮೂಲಕ ಬಸವಾದಿ ಶರಣರನ್ನು ಅವಮಾನಿಸುವ ಕಾರ್ಯ ಮಾಡುತ್ತಿದ್ದಾರೆ. ಬಸವಭಕ್ತರು ಹಾಗೂ ಬಸವತತ್ವ ಪ್ರಸಾರಕರನ್ನು ಬಸವ ತಾಲಿಬಾನಿಗಳು ಎಂದು ಹಾಗೂ ಅವಾಚ್ಯ ಶಬ್ದಗಳಿಂದ ಹೀಯಾಳಿಸುವ ಕೆಲಸ ಕೊಲ್ಲಾಪುರದ ಕನ್ನೇರಿ ಮಠದ ಶ್ರೀಗಳು ಮಾಡುತ್ತಿರುವುದು ಖಂಡನೀಯವಾದದ್ದು.
ಅವರು ಬಸವ ಸಿದ್ಧಾಂತದ ಕುರಿತು ಹಾಗೂ ಬಸವತತ್ವ ಪ್ರಸಾರಕರ ಕುರಿತು ಹಸಿಸುಳ್ಳು ಮಾತನಾಡುವ ಮೂಲಕ ಶರಣತತ್ವಕ್ಕೆ ಅಪಚಾರ ಮಾಡುತ್ತಿದ್ದಾರೆ. ಬಸವಣ್ಣನವರು ಹೇಳಿದ ‘ಹುಸಿಯ ನುಡಿಯಬೇಡ’ ಎಂಬ ವಚನವನ್ನು ಮರೆತು ಲಿಂಗಾಯತ ಮಠಾಧೀಶರಿಗೆ ಬಸವತತ್ವದ ಪಾಠ ಮಾಡಲು ಹೊರಟಿದ್ದಾರೆ.

ಬಸವತತ್ವಕ್ಕೆ ಅಪಚಾರ ಮಾಡುತ್ತಿರುವ ಕನ್ನೇರಿ ಶ್ರೀಗಳು ಜೂನ್ 28ರಂದು ಬಸವಕಲ್ಯಾಣಕ್ಕೆ ಪ್ರವೇಶ ನಿಷೇದಿಸಿ ನಾವೆಲ್ಲರೂ ಪ್ರತಿಭಟನೆ ಮಾಡಬೇಕಾಗಿದೆ. ಅದಕ್ಕಾಗಿ ಅಂದಿನ ದಿವಸ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಸವಕಲ್ಯಾಣಕ್ಕೆ ಆಗಮಿಸಬೇಕೆಂದು ನಾಡಿನ ಬಸವಭಕ್ತರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನೇರಿ ಶ್ರೀಗಳಿಗೆ ಬಸವಕಲ್ಯಾಣಕ್ಕೆ ಪ್ರವೇಶ ನಿಷೇದಿಸಿ ಪ್ರತಿಭಟನೆ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಡಾ. ಗಂಗಾಂಬಿಕ ಅಕ್ಕ, ಪೂಜ್ಯ ಪ್ರಭುದೇವ ಸ್ವಾಮಿಗಳು, ಪೂಜ್ಯ ಬಸವಪ್ರಭು ಸ್ವಾಮಿಗಳು, ಆಶೀರ್ವಚನ ನೀಡಿ, ಸರ್ವರೂ ಜೂನ್ 28ರಂದು ಬಸವಕಲ್ಯಾಣಕ್ಕೆ ಆಗಮಿಸಲು ತಿಳಿಸಿದರು.
ಪೂಜ್ಯ ಪ್ರಭುಲಿಂಗ ಸ್ವಾಮಿಗಳು, ಪೂಜ್ಯ ಸಿದ್ಧಬಸವ ಸ್ವಾಮಿಗಳು, ಪೂಜ್ಯ ಶಿವಬಸವ ಸ್ವಾಮಿಗಳು ಉಪಸ್ಥಿತರಿದ್ದರು.
ಪುಣೆಯ ಸಂತೋಷ ಮಲಶೆಟ್ಟಿ ಅವರಿಂದ ಬಸವಗುರುಪೂಜೆ ನೆರವೇರಿತು. ದೀಪಕ ಠಮಕೆ ನಿರೂಪಿಸಿದರು. ಶ್ರೀಮಠದ ಪ್ರಸಾದ ನಿಲಯದ ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು. ಸುಶೀಲಾಬಾಯಿ ವೈಜಿನಾಥ ಉಪ್ಪಿನ ಅವರಿಂದ ಪ್ರಸಾದ ದಾಸೋಹ ನಡೆಯಿತು.
